ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಶುರು, 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ವೀಕ್ಷಕರ ನೇಮಕ, ಯಾರು ಎಲ್ಲಿಗೆ ವಿವರ ಇಲ್ಲಿದೆ-bengaluru news congress appoints 28 observers for selecting potential candidates lok sabha elections news in kannada uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಶುರು, 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ವೀಕ್ಷಕರ ನೇಮಕ, ಯಾರು ಎಲ್ಲಿಗೆ ವಿವರ ಇಲ್ಲಿದೆ

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಶುರು, 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ವೀಕ್ಷಕರ ನೇಮಕ, ಯಾರು ಎಲ್ಲಿಗೆ ವಿವರ ಇಲ್ಲಿದೆ

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ತಯಾರಿ ಶುರುಮಾಡಿದ್ದು, 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ವೀಕ್ಷಕರನ್ನು ನೇಮಕ ಮಾಡಿದೆ. ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದು, ಪ್ರತಿ ಕ್ಷೇತ್ರದಲ್ಲೂ 2 ಅಥವಾ 3 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ. ಈ ಕುರಿತು ವಿವರ ನೀಡಿದ್ದಾರೆ ಎಚ್.ಮಾರುತಿ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ (ಸಾಂದರ್ಭಿಕ ಚಿತ್ರ)
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ (ಸಾಂದರ್ಭಿಕ ಚಿತ್ರ)

ವಿಧಾನಸಭಾ ಚುನಾವಣೆಯ ಭರ್ಜರಿ ಗೆಲುವು ಮತ್ತು 5 ಗ್ಯಾರಂಟಿಗಳ ಜಾರಿಯ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದೆ. ಮೊದಲ ಹೆಜ್ಜೆಯಾಗಿ ಎಲ್ಲ 28 ಕ್ಷೇತ್ರಗಳಿಗೆ ಸಚಿವರುಗಳನ್ನು ವೀಕ್ಷರನ್ನಾಗಿ ನೇಮಿಸಿದೆ.

ಎಲ್ಲ ಸಚಿವರಿಗೂ ಸ್ವಂತ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಬೇರೆ ಜಿಲ್ಲೆಯ ಉಸ್ತುವಾರಿ ನೀಡಿರುವುದು ಮತ್ತೊಂದು ವಿಶೇಷ. ತಮಗೆ ವಹಿಸಿರುವ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳ ಪ್ರವಾಸ ಕೈಗೊಂಡು ಜಿಲ್ಲಾ ಸಮಿತಿಯೊಂದಿಗೆ ಚರ್ಚಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಅಧ್ಯಕ್ಷರಿಗೆ ನೀಡುವುದು ಇವರ ಕರ್ತವ್ಯವಾಗಿರುತ್ತದೆ. ಸಾಮಾನ್ಯವಾಗಿ ಇವರು ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಲು ಒತ್ತು ನೀಡುತ್ತಾರೆ. ಯುವ, ಮಹಿಳಾ, ಕಾರ್ಮಿಕ, ರೈತ ಮೊದಲಾದ ವಿಭಾಗಗಳ ಪದಾಧಿಕಾರಿಗಳ ಅಭಿಪ್ರಾಯವನ್ನು ಪಡೆಯುತ್ತಾರೆ. ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ರವಾನಿಸುತ್ತಾರೆ.

ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಈಗಾಗಲೇ ಸಂಭವನೀಯ ಅಭ್ಯರ್ಥಿಗಳು ತಯಾರಿಯಲ್ಲಿ ತೊಡಗಿದ್ದಾರೆ. ವಿಧಾನಸಬೆಯ ಗೆಲುವು ಇವರ ಉತ್ಸಾಹವನ್ನು ಹೆಚ್ಚಿಸಿದೆ. ವೇಳಾಪಟ್ಟಿಯನ್ನು ಹಾಕಿಕೊಂಡು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಲ್ಲ ಏಳೆಂಟು ವಿಧಾನಭಾ ಕ್ಷೇತ್ರಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕಾರ್ಯಕರ್ತರ ಭೇಟಿ ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ. ಧಾರ್ಮಿಕ, ಜಾತ್ರೆ, ಗಣೇಶೋತ್ಸವ, ಸ್ವಾತಂತ್ರ್ಯ ದಿನಾಚರಣೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ವಿಧಾನಭಾ ಚುನಾವಣೆಯಲ್ಲೂ ಎಲ್ಲರಿಗಿಂತ ಮುಂಚಿತವಾಗಿ ಪ್ರಚಾರ ಆರಂಭಿಸಿದ್ದು ಕಾಂಗ್ರೆಸ್. ಕನಿಷ್ಠ ಆರು ತಿಂಗಳು ಮುಂಚಿತವಾಗಿ ಅಭ್ಯರ್ಥಿಗಳ ಆಯ್ಕೆಯನ್ನು ಆಖೈರುಗೊಳಿಸಬೇಕು ಎನ್ನುವುದು ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಇರಾದೆ ಎಂದು ಸಚಿವರೊಬ್ಬರು ಹೇಳುತ್ತಾರೆ.

ಗರಿಷ್ಠ ಮಟ್ಟದಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಹೈಕಮಾಂಡ್‌ಗೆ ಮತ್ತಷ್ಟು ಹತ್ತಿರವಾಗಬೆಕು ಎನ್ನುವುದು ಅವರ ಅಭಿಮತವಾಗಿದೆ. ಪಕ್ಷಕ್ಕಾಗಿ ತನು ಮನ ಧನ ಅರ್ಪಿಸುವಲ್ಲಿ ಡಿಕೆಶಿ ಒಂದು ಹೆಜ್ಜೆ ಮುಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಸಂಪನ್ಮೂಲವನ್ನು ಒದಗಿಸುವ ಜವಾಬ್ದಾರಿ ಅವರದ್ದೇ ಎಂದು ಸಚಿವರೊಬ್ಬರು ಹೇಳುತ್ತಾರೆ.

ಎರಡು ಅಥವಾ ಮೂರು ಹೆಸರು ಶಿಫಾರಸ್ಸು

ಟಿಕೆಟ್ ಹಂಚಿಕೆಯನ್ನು ಹೈಕಮಾಂಡ್ ಘೋಷಿಸುವುದು ವಾಡಿಕೆ. ಒಂದೇ ಹೆಸರನ್ನು ಸೂಚಿಸಿದರೆ ಭಿನ್ನಮತಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂಬ ಕಾರಣಕ್ಕೆ ಬಹುತೇಕ ಎಲ್ಲ ಕ್ಷೇತ್ರಗಳಿಂದ ಎರಡು ಅಥವಾ ಮೂರು ಹೆಸರುಗಳನ್ನು ಶಿಫಾರಸ್ಸು ಮಾಡಲಾಗುತ್ತದೆ. ಯಾರೊಂದಿಗೂ ಮುನಿಸು ಇರುವುದಿಲ್ಲ. ಕಾಂಗ್ರೆಸ್‌ನಲ್ಲೂ ಬಣ ರಾಜಕೀಯ ಇಲ್ಲದಿಲ್ಲ.

ಮುಖ್ಯಮಂತ್ರಿ ಬಣ ಮತ್ತು ಉಪಮುಖ್ಯಮಂತ್ರಿ ಬಣ ಎಂಬ ಎರಡು ಗುಂಪುಗಳಿರುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಅವರವರ ತವರು ಕ್ಷೇತ್ರ ಮತ್ತು ಅಕ್ಕಪಕ್ಕದ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಕ್ಷೇತ್ರಗಳಲ್ಲಿ ಇಬ್ಬರ ಬಣಕ್ಕೂ ಸೇರಿದ ಅಭ್ಯರ್ಥಿಗಳ ಹೆಸರನ್ನು ಶಿಫಾರಸ್ಸು ಮಾಡಲೇಬೇಕು. ಅದರಲ್ಲೂ ಇವರಿಬ್ಬರು ಹೇಳಿದ ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿ ಇರಲೇಬೇಕಲ್ಲವೇ ಎಂದು ಮತ್ತೊಬ್ಬ ಸಚಿವರು ಹೇಳುತ್ತಾರೆ.

ಜಿಲ್ಲಾ ಕಚೇರಿಗಳಲ್ಲಿ ಕುಳಿತು ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುವುದಕ್ಕಿಂತ ತಳಮಟ್ಟದಲ್ಲಿ ಪ್ರವಾಸ ಕೈಗೊಂಡಾಗ ವಾಸ್ತವ ಅರಿವಿಗೆ ಬರುತ್ತದೆ. ಯಾರು ಅಭ್ಯರ್ಥಿಯಾದರೆ ಗೆಲುವು ಸುಲಭ ಎನ್ನುವುದು ತಿಳಿದು ಬರುತ್ತದೆ. ಎರಡು ಮೂರು ಬಣಗಳಿದ್ದಾಗ ಒಮ್ಮೊಮ್ಮೆ ಗಲಾಟೆಯಾಗಿ ಕುರ್ಚಿ ಟೇಬಲ್‌ಗಳಿಂದ ಹೊಡೆದಾಡುವ ಸನ್ನಿವೇಶಗಳೂ ಎದುರಾಗುತ್ತವೆ.

ಐದು ಗ್ಯಾರಂಟಿಗಳ ಬೆಂಬಲದಿAದ ಗೆಲುವು ಸುಲಭ ಅಲ್ಲ ಎನ್ನುವುದು ನಿಧಾನವಾಗಿ ವರಿಷ್ಠರಿಗೆ ಅರ್ಥವಾಗುತ್ತಿದೆ. ಕಾವೇರಿ ವಿವಾದ ಕಾಂಗ್ರೆಸ್ ಕೈ ಸುಡುತ್ತಿದೆ. ವರುಣನ ಅವಕೃಪೆ ಹೀಗೆಯೇ ಮುಂದುವರೆದರೆ ಹಳೇ ಮೈಸೂರು ಭಾಗದಲ್ಲಿ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ. ಈ ವಿಷಯವನ್ನು ಜೆಡಿಎಸ್ ಮತ್ತು ಬಿಜೆಪಿ ಬಳಸಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ.

ಕಾಂಗ್ರೆಸ್ ಪಕ್ಷವನ್ನು ಮಣಿಸಲೇಬೇಕು ಎಂಬ ಕಾರಣಕ್ಕೆ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಬಹುತೇಕ ಅಂತಿಮಗೊಂಡಿದೆ. ಸೀಟು ಹಂಚಿಕೆ ಅಂತಹ ಕಷ್ಟವೇನಲ್ಲ. ತನ್ನ ಗೆಲುವು ಅಸಾಧ್ಯ ಎನ್ನುವ ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿ ಹಿಂದೇಟು ಹಾಕುವುದಿಲ್ಲ. ಜೆಡಿಎಸ್ ಒಂದು ಕ್ಷೇತ್ರವನ್ನು ಹೆಚ್ಚಿಗೆ ಗೆದ್ದರೂ ಚಿಂತೆ ಇಲ್ಲ. ಆದರೆ ಕಾಂಗ್ರೆಸ್‌ಗೆ ಮಾತ್ರ ಬಿಟ್ಟುಕೊಡಬಾರದು ಎನ್ನುವುದು ಬಿಜೆಪಿ ಇಂಗಿತವಾಗಿದೆ.

ಯಾವ ಕ್ಷೇತ್ರಕ್ಕೆ ಯಾವ ಸಚಿವರು ವೀಕ್ಷಕರು

ಬಾಗಲಕೋಟೆ (ಪ್ರಿಯಾಂಕ್ ಖರ್ಗೆ), ಬೆಂಗಳೂರು ಕೇಂದ್ರ (ಎನ್.ಎಸ್.ಬೋಸರಾಜು), ಬೆಂಗಳೂರು ಉತ್ತರ (ಡಾ.ಜಿ.ಪರಮೇಶ್ವರ), ಬೆಂಗಳೂರು ಗ್ರಾಮಾಂತರ (ಕೆ.ವೆಂಕಟೇಶ್), ಬೆಂಗಳೂರು ದಕ್ಷಿಣ (ಶರಣ ಪ್ರಕಾಶ ಪಾಟೀಲ್), ಬೆಳಗಾವಿ (ಶಿವರಾಜ್ ತಂಗಡಗಿ), ಗುಲ್ಬರ್ಗಾ (ನಾಗೇಂದ್ರ), ಬೀದರ್ (ಸಂತೋಷ್ ಲಾಡ್), ವಿಜಯಪುರ (ಸತೀಶ್ ಜಾರಕಿಹೊಳಿ), ಚಾಮರಾಜನಗರ (ದಿನೇಶ್ ಗುಂಡೂರಾವ್), ಚಿಕ್ಕಬಳ್ಳಾಪುರ (ಜಮೀರ್ ಅಹಮದ್ ಖಾನ್), ಚಿಕ್ಕೋಡಿ (ಡಿ.ಸುಧಾಕರ್), ಚಿತ್ರದುರ್ಗ (ಡಾ.ಹೆಚ್.ಸಿ.ಮಹದೇವಪ್ಪ), ದಕ್ಷಿಣ ಕನ್ನಡ (ಮಧು ಬಂಗಾರಪ್ಪ), ದಾವಣಗೆರೆ (ಈಶ್ವರ ಖಂಡ್ರೆ), ಧಾರವಾಡ (ಲಕ್ಷ್ಮೀ ಹೆಬ್ಬಾಳ್ಕರ್), ಬಳ್ಳಾರಿ (ಚೆಲುವರಾಯಸ್ವಾಮಿ), ಹಾವೇರಿ (ಎಸ್.ಎಸ್.ಮಲ್ಲಿಕಾರ್ಜುನ), ಕೋಲಾರ (ರಾಮಲಿಂಗಾರೆಡ್ಡಿ), ಕೊಪ್ಪಳ (ಆರ್.ಬಿ.ತಿಮ್ಮಾಪುರ), ಮಂಡ್ಯ (ಡಾ.ಎ.ಸಿ.ಸುಧಾಕರ್), ಮೈಸೂರು (ಭೈರತಿ ಸುರೇಶ್), ರಾಯಚೂರು (ಕೆ.ಎಚ್.ಮುನಿಯಪ್ಪ), ಶಿವಮೊಗ್ಗ (ಕೆ.ಎನ್.ರಾಜಣ್ಣ), ತುಮಕೂರು (ಕೃಷ್ಣ ಭೈರೇಗೌಡ), ಉಡುಪಿ-ಚಿಕ್ಕಮಗಳೂರು (ಮಂಕಾಳ ವೈದ್ಯ), ಉತ್ತರ ಕನ್ನಡ (ಎಚ್.ಕೆ.ಪಾಟೀಲ್).

ಸಚಿವರಾದ ಎಂ ಬಿ ಪಾಟೀಲ್, ಕೆ ಜೆ ಜಾರ್ಜ್, ರಹೀಂ ಖಾನ್ ಮತ್ತು ಶರಣಬಸಪ್ಪ ದರ್ಶನಾಪುರ ಇವರಿಗೆ ಯಾವುದೇ ಜಿಲ್ಲೆಗಳ ಉಸ್ತುವಾರಿ ನೀಡಿಲ್ಲ

mysore-dasara_Entry_Point