ಕನ್ನಡ ಸುದ್ದಿ  /  ಕರ್ನಾಟಕ  /  Bengaluru Property: ಕೋರಮಂಗಲ ತುಂಬಾ ದುಬಾರಿ ಕಣ್ರೀ; ಚದರಡಿಗೆ 70 ಸಾವಿರ ರೂನಂತೆ 10 ಸಾವಿರ ಸ್ಕ್ವೇರ್‌ಫೀಟ್‌ ಭೂಮಿ ಖರೀದಿಸಿದ್ರು ಅಜಿತ್‌

Bengaluru Property: ಕೋರಮಂಗಲ ತುಂಬಾ ದುಬಾರಿ ಕಣ್ರೀ; ಚದರಡಿಗೆ 70 ಸಾವಿರ ರೂನಂತೆ 10 ಸಾವಿರ ಸ್ಕ್ವೇರ್‌ಫೀಟ್‌ ಭೂಮಿ ಖರೀದಿಸಿದ್ರು ಅಜಿತ್‌

Expensive Localities in Bengaluru: ಬೆಂಗಳೂರಿನಲ್ಲಿ ಮನೆ, ಕಚೇರಿ ನಿರ್ಮಾಣಕ್ಕೆ ಭೂಮಿ ಖರೀದಿಸಲು ಕೆಲವೊಂದು ಪ್ರದೇಶಗಳು ತುಂಬಾ ದುಬಾರಿಯಾಗಿ ಪರಿಣಮಿಸಿವೆ. ಕೋರಮಂಗಲದಲ್ಲಿ1 ಚದರಡಿ ಭೂಮಿಗೆ 70 ಸಾವಿರ ರೂಪಾಯಿಯಂತೆ ಒಟ್ಟು 10 ಸಾವಿರ ಚದರಡಿ ಭೂಮಿಯನ್ನು ಅಜಿತ್‌ ಐಸಾಕ್‌ ಖರೀದಿಸಿದ್ದಾರೆ. (ವರದಿ: ಎಚ್‌. ಮಾರುತಿ)

ಚದರಡಿಗೆ 70 ಸಾವಿರ ರೂನಂತೆ 10 ಸಾವಿರ ಸ್ಕ್ವೇರ್‌ಫೀಟ್‌ ಭೂಮಿ ಖರೀದಿಸಿದ ಅಜಿತ್‌ ಐಸಾಕ್‌
ಚದರಡಿಗೆ 70 ಸಾವಿರ ರೂನಂತೆ 10 ಸಾವಿರ ಸ್ಕ್ವೇರ್‌ಫೀಟ್‌ ಭೂಮಿ ಖರೀದಿಸಿದ ಅಜಿತ್‌ ಐಸಾಕ್‌

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ದುಬಾರಿ ಪ್ರದೇಶ ಎಂದರೆ ಸದಾಶಿವ ನಗರ ಎನ್ನುವ ಕಾಲ ಒಂದಿತ್ತು. ಇಲ್ಲಿ ಸಚಿವರು ಶಾಸಕರು ಖ್ಯಾತ ಉದ್ಯಮಿಗಳು ವಾಸಿಸುವ ಪ್ರದೇಶ ಎಂಬ ಕಾರಣಕ್ಕೆ ಇಲ್ಲಿ ನಿವೇಶನದ ಬೆಲೆ ಹೆಚ್ಚು. ಆದರೆ ಈಗ ಕಾಲ ಬದಲಾಗಿದೆ. ಇಲ್ಲಿಗಿಂತಲೂ ಉತ್ತಮ ಸೌಕರ್ಯ ಸವಲತ್ತುಗಳನ್ನು ಹೊಂದಿರುವ ಅತ್ಯಾಧುನಿಕ ಏರಿಯಾಗಳನ್ನು ಉದ್ಯಾನ ನಗರಿಯಲ್ಲಿ ಕಾಣಬಹುದು ಇದೀಗ ಕೋರಮಂಗಲದಲ್ಲಿ ಚದರ ಅಡಿ ಜಾಗದ ಬೆಲೆ ಕೇಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಬೆಲೆಗೆ ಮಾರಾಟವಾದ ದಾಖಲೆ ನಿರ್ಮಾಣವಾಗಿದೆ. ಬೆಂಗಳೂರಿನ ಹಳೆಯ ಪ್ರದೇಶಗಳಿಗಿಂತ ಕೋರಮಂಗಲ ದುಬಾರಿ ಪ್ರದೇಶವಾಗಿ ಹೊರಹೊಮ್ಮಿದೆ.

ಟ್ರೆಂಡಿಂಗ್​ ಸುದ್ದಿ

ಖ್ಯಾತ ಬಿಸ್ನೆಸ್‌ ಕನ್ಸಲ್ಟೆನ್ಸಿ ಸಂಸ್ಥೆ ಕ್ವೆಸ್‌ ಕಾರ್ಪ್‌ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಅಜಿತ್‌ ಐಸಾಕ್‌ ಅವರು ಇಲ್ಲಿ 10 ಸಾವಿರ ಚದರಡಿ ನಿವೇಶನವನ್ನು ಖರೀದಿಸಿದ್ದಾರೆ. ಪ್ರತಿ ಚದರ ಅಡಿಗೆ ರೂ. 70,300 ರಂತೆ ಒಟ್ಟು 67.5 ಕೋಟಿ ರೂಪಾಯಿ ಪಾವತಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಇಲ್ಲಿಯವರೆಗಿನ ಇದು ಅತ್ಯಂತ ದುಬಾರಿ ಖರೀದಿ ವ್ಯವಹಾರ ಎಂದು ಭಾವಿಸಲಾಗಿದೆ.

ಕೋರಮಂಗಲ 3ನೇ ಬ್ಲಾಕ್‌ನಲ್ಲಿ, ಅರವಿಂದ ಹಾಗೂ ಗೀತಾ ರೆಡ್ಡಿ ದಂಪತಿಗಳಿಂದ ಅಜಿತ್‌ ಅವರು ಈ ನಿವೇಶನವನ್ನು ಖರೀದಿಸಿದ್ದಾರೆ. ಕಳೆದ ವಾರ ಈ ನಿವೇಶನ ನೊಂದಣಿಯಾಗಿದ್ದು, ಮಾರಾಟ ಪ್ರಕ್ರಿಯೆ ಪೂರ್ಣಗೊಂಡಿದೆ. ಅಜಿತ್‌ ಅವರು ಈ ನಿವೇಶನದಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಚದುರ ಅಡಿ ಭೂಮಿ ಬೆಲೆಯೇ ರೂ. 70,300. ಇನ್ನು ಅಪಾರ್ಟ್ ಮೆಂಟ್ ನ ಬೆಲೆ ಎಷ್ಟಿರಬಹುದು ಎಂದು ಊಹಿಸುವುದು ಕಷ್ಟ. ಒಂದು ವೇಳೆ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿ ಮಾರಾಟಕ್ಕೆ ಇಟ್ಟರೆ ಚದುರ ಅಡಿ 4-5 ಲಕ್ಷಕ್ಕೆ ಮಾರಾಟವಾದರೂ ಅಚ್ಚರಿ ಪಡಬೇಕಿಲ್ಲ. ಮಾರಾಟಗಾರರು ಮತ್ತು ಖರೀದಿದಾರರ ನಡುವೆ ಕೊಲಿಯರ್ಸ್‌ ಎಂಬ ಕನ್ಸಲ್ ಟೆನ್ಸಿ ಸಂಸ್ಥೆ ಕೊಂಡಿಯಾಗಿ ಕೆಲಸ ಮಾಡಿತ್ತು.

ಕೋರಮಂಗಲದಲ್ಲಿ ಭೂಮಿ ದುಬಾರಿ ಬೆಲೆಗೆ ಮಾರಾಟ ವಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ದುಪ್ಪಟ್ಟು ಬೆಲೆ ತೆತ್ತು ಭೂಮಿ, ನಿವೇಶನ, ಅಪಾರ್ಟ್ ಮೆಂಟ್ ಮತ್ತು ಮನೆಗಳನ್ನು ಮಾರಾಟ ಮಾಡಿರುವ ಉದಾಹರಣೆಗಳಿವೆ.

ಕೋರಮಂಗಲದ ಇದೇ ಬ್ಲಾಕ್‌ನಲ್ಲಿ ಕೆಲವು ವರ್ಷಗಳ ಹಿಂದೆ ಟಿವಿಎಸ್‌ ಮೋಟಾರ್ಸ್‌ ಸಂಸ್ಥೆಯು ಚದರ ಅಡಿಗೆ ರೂ. 68,597ರಂತೆ 9,488 ಚದರ ಅಡಿ ವಿಸ್ತೀರ್ಣದ ನಿವೇಶನವೊಂದನ್ನು ಖರೀದಿ ಮಾಡಿತ್ತು. ಇದು ಬೆಂಗಳೂರಿನಲ್ಲಿ ನಡೆದ ಅತ್ಯಂತ ದುಬಾರಿ ಆಸ್ತಿ ವ್ಯವಹಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಕೋರಮಂಗಲ 3ನೇ ಬ್ಲಾಕ್‌ ಬಿಲಿಯನೇರ್ಸ್‌ ಸ್ಟ್ರೀಟ್‌ ಎಂದೂ ಖ್ಯಾತಿ ಪಡೆದಿದೆ. ಇಲ್ಲಿ ದೇಶದ ಖ್ಯಾತ ಉದ್ದಿಮೆದಾರರು ಮತ್ತು ಶ್ರೀಮಂತರು ವಾಸಿಸುವ ಬಡಾವಣೆ ಎಂಬ ಖ್ಯಾತಿಗೆ ಭಾಜನವಾಗಿದೆ.

ಇನ್ಫೊಸಿಸ್‌ ಸಹಸಂಸ್ಥಾಪಕರಾದ ನಂದನ್‌ ನಿಲೇಕಣಿ ಮತ್ತು ಕ್ರಿಸ್‌ ಗೋಪಾಲಕೃಷ್ಣನ್‌, ನಾರಾಯಣ ಆಸ್ಪತ್ರೆಯ ಡಾ.ದೇವಿ ಪ್ರಸಾದ್‌ ಶೆಟ್ಟಿ, ಕೆndra ಸಚಿವ ರಾಜೀವ್‌ ಚಂದ್ರಶೇಖರ್‌, ಫ್ಲಿಪ್‌ಕಾರ್ಟ್‌ ಸಹಸಂಸ್ಥಾಪಕ ಸಚಿನ್‌ ಬನ್ಸಾಲ್‌, ಬಾಗ್ಮನೆ ಡೆವಲಪರ್ಸ್‌ ಮಾಲೀಕ ರಾಜಾ ಬಾಗ್ಮನೆ ಈ ರಸ್ತೆಯ ನಿವಾಸಿಗಳು.

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ನಿವೇಶನ ಗಳಿಗೆ ಬೇಡಿಕೆ ಇದ್ದೇ ಇದೆ. ಉತ್ತಮ ಪರಿಸರದಲ್ಲಿ ಆಸ್ತಿಗಳ ಖರೀದಿಗೆ ಭಾರತೀಯರಲ್ಲಿ ಒಲವು ಹೆಚ್ಚುತ್ತಿದೆ. ಆದರೆ ಬೇಡಿಕೆಗೆ ತಕ್ಕಂತೆ ಭೂಮಿ ಲಭ್ಯವಿಲ್ಲ ಎಂದು ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿಗಳು ಅಭಿಪ್ರಾಯಪಡುತ್ತಾರೆ. ಕೋವಿಡ್ ನಂತರ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಏರುಗತಿಯಲ್ಲಿ ಬೆಳೆಯುತ್ತಿದೆ. ಆಸ್ತಿಗಳ ಬೆಲೆಯೂ ವೃದ್ಧಿಸಿದೆ ಎನ್ನುವುದು ಮಧ್ಯವರ್ತಿ ಸಂಸ್ಥೆಗಳ ಅಭಿಪ್ರಾಯವಾಗಿದೆ.

ವರದಿ: ಎಚ್‌. ಮಾರುತಿ

IPL_Entry_Point