ಮದ್ಯ ಪ್ರಿಯರೇ ಗಮನಿಸಿ; ಪರಿಷತ್ ಮತದಾನ, ಲೋಕಸಭಾ ಫಲಿತಾಂಶ ಎಫೆಕ್ಟ್; ಜೂನ್ ಮೊದಲ ವಾರದ 5 ದಿನ ಬೆಂಗಳೂರಿನಲ್ಲಿ ಎಣ್ಣೆ ಸಿಗೋದಿಲ್ಲ
ವಿಧಾನ ಪರಿಷತ್ ಚುನಾವಣೆ ಹಾಗೂ ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಜೂನ್ ತಿಂಗಳ ಮೊದಲ 5 ದಿನ ಬೆಂಗಳೂರಿನಲ್ಲಿ ಎಣ್ಣೆ ಸಿಗೋದಿಲ್ಲ.

ಬೆಂಗಳೂರು: ಜೂನ್ ಮೊದಲ ವಾರ ಮದ್ಯಪ್ರಿಯರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಇಡೀ ವಾರ ಬೆಂಗಳೂರಿನಲ್ಲಿ ಒಂದು ಹನಿ ಮದ್ಯ ಸಿಗುವುದಿಲ್ಲ. ವಿಧಾನ ಪರಿಷತ್ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಮತ ಎಣಿಕೆ ಇರುವುದರಿಂದ ಜೂನ್ 1 ರಿಂದ 4, ಮತ್ತು 6 ರಂದು ಮದ್ಯ ಮಾರಾಟವನ್ನು ನಿಷೇಧಿಸಿ ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಬಾರ್ ಮತ್ತು ರೆಸ್ಟೋರೆಂಟ್‌ಗಳು ಆಲ್ಕೊಹಾಲ್ ಹೊರತುಪಡಿಸಿ ಉಳಿದಂತೆ ಗ್ರಾಹಕರಿಗೆ ಆಹಾರವನ್ನು ಸರಬರಾಜು ಮಾಡಬಹುದಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಜೂನ್ 1 ರಂದು ಮಧ್ಯಾಹ್ನ 1 ಗಂಟೆಯಿಂದ ಜೂನ್ 4 ರ ಮಧ್ಯ ರಾತ್ರಿ 12 ವರೆಗೆ ಮದ್ಯವನ್ನು ಮಾರಾಟ ಅಥವಾ ಪೂರೈಕೆ ಮಾಡುವಂತಿಲ್ಲ. 5 ರಂದು ಎಂದಿನಂತೆ ಮದ್ಯ ಮಾರಾಟಕ್ಕೆ ಅವಕಾಶವಿದ್ದು, ಜೂನ್ 6 ರಂದು ಮತ್ತೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂನ್ 3 ರಂದು ನಡೆಯಲಿದೆ. ಜೂನ್ 4 ರಂದು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ವಿಧಾನ ಪರಿಷತ್ತಿನ ಚುನಾವಣೆಯ ಫಲಿತಾಂಶ ಜೂನ್ 6 ರಂದು ಪ್ರಕಟವಾಗಲಿದೆ.
ಈ ಹಿನ್ನೆಲೆಯಲ್ಲಿ ಚುನಾವಣೆಯು ಮುಕ್ತ, ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಸುವ ಸಲುವಾಗಿ ಮತದಾನ ಮುಗಿಯುವ ಅವಧಿಯ ಹಿಂದಿನ 48 ಗಂಟೆಗಳು ಮತ್ತು ಮತ ಎಣಿಕೆ ದಿನದಂದು ಮದ್ಯ ಮಾರಾಟವನ್ನು ನಿಷೇಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ. ದಯಾನಂದ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಗಟು ಅಥವಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮದ್ಯ, ಹಾನಿಕಾರಕ ಪದಾರ್ಥಗಳು, ಇತರೆ ಯಾವುದೇ ಮಾದಕ ವಸ್ತುಗಳ ಬಳಕೆ, ಮಾರಾಟ ಮತ್ತು ಸಂಗ್ರಹಣೆಯನ್ನು ನಿಷೇಧಿಸಲಾಗಿದೆ. ಆದರೆ ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಲ್ಲಿ ಆಹಾರ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
ವಾರಾಂತ್ಯದ ದಿನವೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲದೇ ಇರುವುದರಿಂದ ಗ್ರಾಹಕರು ಈಗಿನಿಂದಲೇ ಮದ್ಯ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳಲು ಮುಂದಾಗಿದ್ದಾರೆ. ಎಂಆರ್‌ಪಿ ಔಟ್‌ಲೆಟ್‌ಗಳು ಸೇರಿದಂತೆ ಮದ್ಯದಂಗಡಿಗಳಲ್ಲಿ ಖರೀದಿ ಜೋರಾಗಿದೆ. ಈ ದಿನಗಳನ್ನು ಶುಷ್ಕ ದಿನಗಳು ಎಂದು ಕರೆಯಲಾಗಿದೆ.
ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಜೂನ್ 3 ರಂದು ಮತದಾನ ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತ ಚಲಾಯಿಸಬಹುದಾಗಿದೆ. ಜೂನ್ 6 ರಂದು ಮತಗಳ ಎಣಿಕೆ ನಡೆಯಲಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
