ಕ್ರಿಕೆಟ್ ಪ್ರಿಯರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್; ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳ ದಿನ ರಾತ್ರಿ 11.30 ವರೆಗೆ ಮೆಟ್ರೊ ಸಂಚಾರ
ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ದಿನ ನಮ್ಮ ಮೆಟ್ರೋ ಸೇವೆ ರಾತ್ರಿ 11.30ರವರೆಗೆ ವಿಸ್ತರಿಸಲಾಗಿದೆ. ರಿಟರ್ನ್ ಪೇಪರ್ ಟಿಕೆಟ್ ಕೂಡ ಲಭ್ಯವಿರಲಿದೆ.
ಬೆಂಗಳೂರು: ಐಪಿಎಲ್ (IPL) ಕ್ರಿಕೆಟ್ ಪ್ರಿಯರಿಗೆ ನಮ್ಮ ಮೆಟ್ರೋ (Namma Metro) ಸಿಹಿ ಸುದ್ದಿ ನೀಡಿದೆ. ಐಪಿಎಲ್ ಪಂದ್ಯ ನಡೆಯುವ ಏಪ್ರಿಲ್ 15 ರಿಂದ ಮೇ 18 ರವರೆಗೆ ನಮ್ಮ ಮೆಟ್ರೊ ರಾತ್ರಿ 11.30 ವರೆಗೆ ಸಂಚರಿಸಲಿದೆ. ಹಾಗಾಗಿ ಮನೆ ತಲುಪುವುದು ಹೇಗೆ ಎಂಬ ಚಿಂತೆ ಇಲ್ಲದೆ ನಿಶ್ಚಿಂತೆಯಿಂದ ಕ್ರಿಕೆಟ್ ನೋಡಬಹುದು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳು ನಡೆಯುವ ದಿನಗಳಂದು ನಮ್ಮ ಮೆಟ್ರೊ ಸಂಚಾರದ ಅವಧಿಯನ್ನು ರಾತ್ರಿ ಅರ್ಧ ಗಂಟೆ ವಿಸ್ತರಿಸಿ ಬಿಎಂಆರ್‌ಸಿಎಲ್ ಆದೇಶ ಹೊರಡಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 15, ಮೇ 4, 12 ಮತ್ತು ಮೇ 18ರಂದು ಐಪಿಎಲ್ ಪಂದ್ಯಗಳು ನಡೆಯಲಿವೆ. ಪಂದ್ಯ ನಡೆಯುವ ಎಲ್ಲ ದಿನಗಳಂದು ರಾತ್ರಿ 11.30ಕ್ಕೆ ಮೆಟ್ರೊ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಗಳ ನಾಲ್ಕು ಟರ್ಮಿನಲ್‌ಗಳಿಂದ ಕೊನೆಯ ಮೆಟ್ರೊ ರೈಲುಗಳು ಸಂಚಾರ ಆರಂಭಿಸಲಿವೆ.
ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ನಾಲ್ಕು ಟರ್ಮಿನಲ್‌ಗಳ ಕಡೆಗೆ ರಾತ್ರಿ 12ಕ್ಕೆ ಅಂತಿಮ ರೈಲುಗಳು ಹೊರಡಲಿವೆ. ಒಂದು ವೇಳೆ ಪಂದ್ಯ ಮುಗಿಯುವುದು ತಡವಾದರೆ ಮೆಜೆಸ್ಟಿಕ್ ನಿಂದ ಹೊರಡುವ ಕೊನೆಯ ರೈಲಿನ ಅವಧಿಯನ್ನು ರಾತ್ರಿ 12.15 ರವರೆಗೂ ವಿಸ್ತರಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಮೊದಲೇ ಲಭ್ಯ
ಸಾಮಾನ್ಯ ದಿನಗಳಂದು ಕೊನೆಯ ರೈಲುಗಳು ನಾಲ್ಕು ಟರ್ಮಿನಲ್‌ಗಳಿಂದ ರಾತ್ರಿ 11ಕ್ಕೆ ಹಾಗೂ ಮೆಜೆಸ್ಟಿಕ್‌ನಿಂದ ರಾತ್ರಿ 11.30ಕ್ಕೆ ಇತರೆ ಟರ್ಮಿನಲ್‌ಗಳ ಕಡೆಗೆ ಪ್ರಯಾಣ ಆರಂಭಿಸುತ್ತಿದ್ದವು. ಪಂದ್ಯ ನಡೆಯುವ ಎಲ್ಲ ದಿನಗಳಂದು ಎಲ್ಲಾ ಮೆಟ್ರೊ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ರಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ರೂ. 50ಕ್ಕೆ ಮಾರಾಟ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಆದರೆ ಷರತ್ತು ಇರುತ್ತದೆ ಎಂಬುದನ್ನು ಮರೆಯಬಾರದು.
ಟಿಕೆಟ್ ಖರೀದಿ ಮಾಡಿದ ದಿನದಂದು ಎಂ.ಜಿ. ರಸ್ತೆ ಮೆಟ್ರೊ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಯಾವುದೇ ನಿಲ್ದಾಣಕ್ಕೆ ಒಂದು ಬಾರಿ ಚಲಿಸಲು ರಾತ್ರಿ 8 ರಿಂದ ಮಾತ್ರ ಅವಕಾಶ ಇರುತ್ತದೆ. ಪಾಸ್ ರೀತಿಯಲ್ಲಿ ಪದೇ ಪದೇ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಕ್ಯೂಆರ್ ಕೋಡ್ ಟಿಕೆಟ್, ಸ್ಮಾರ್ಟ್ ಕಾರ್ಡ್ ಮತ್ತು ಎನ್‌ಸಿಎಂಸಿ ಕಾರ್ಡ್ ಬಳಸಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳಪೆ ಪ್ರದರ್ಶನ; ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದ ಆರ್‌ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2024ರ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ್ದು, ಆಡಿರುವ 6 ಪಂದ್ಯಗಳ ಪೈಕಿ ಕೇವಲ 1 ರಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಏಪ್ರಿಲ್ 11 ರಂದು ಮುಂಬೈನ ವಾಂಖೆಡೆಯಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಬ್ಯಾಂಟರ್‌ಗಳ ಸವಾಲಿನ ಮೊತ್ತ ಪೇರಿಸುತ್ತಿದ್ದರೂ ಅದನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಬೌಲರ್‌ಗಳು ವಿಫಲರಾಗುತ್ತಿರುವದು ಆರ್‌ಸಿಬಿಯ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ.
ಮಾಜಿ ಕ್ಯಾಪ್ಟನ್, ಹಾಲಿ ಬ್ಯಾಟರ್ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಪ್ರಮುಖವಾಗಿ ಮ್ಯಾಕ್ಸ್‌ವೆಲ್ ಪದೇ ಪದೇ ಬ್ಯಾಟಿಂಗ್‌ನಲ್ಲಿ ವಿಫಲವಾಗುತ್ತಿದ್ದಾರೆ. ಪ್ರಮುಖವಾಗಿ ಬದಲಾವಣೆಗಳನ್ನು ಮಾಡಿದರೂ ನಿರೀಕ್ಷಿತ ಪ್ರದರ್ಶನ ಮತ್ತು ಫಲಿತಾಂಶ ಫಾಫ್ ಡುಪ್ಲೆಸಿಸ್ ಪಡೆಗೆ ಸಿಗುತ್ತಿಲ್ಲ. ಆರ್‌ಸಿಬಿಯ ಮುಂದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 15 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿದೆ.