ಕನ್ನಡ ಸುದ್ದಿ  /  Karnataka  /  Bengaluru News Crime 75 Lakh Worth Diamond Ring Stolen From Joyalukkas Showroom Police Hunting For Thief Mrt

ಬೆಂಗಳೂರಿನ ಜೋಯಾಲುಕ್ಕಾಸ್ ಶೋ ರೂಂನಲ್ಲಿ 75 ಲಕ್ಷದ ವಜ್ರದ ಉಂಗುರ ಕಳವು; ಖರೀದಿ ನೆಪದಲ್ಲಿ ಬಂದಿದ್ದ ಗಡ್ಡಧಾರಿಗಾಗಿ ಪೊಲೀಸರ ಹುಡುಕಾಟ

ಜೋಯಾಲುಕ್ಕಾಸ್ ಶೋ ರೂಂನಲ್ಲಿ ವಜ್ರದ ಉಂಗುರ ಕಳವು ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖರೀದಿ ನೆಪದಲ್ಲಿ ಶೋರೂಂಗೆ ಬಂದು ನಕಲಿ ಇಟ್ಟು ಅಸಲಿ ವಜ್ರ ಕದ್ದಿರುವ ಗಡ್ಡಧಾರಿ ವೃದ್ಧನಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರಿನ ಜೋಯಾಲುಕ್ಕಾಸ್ ಶೋ ರೂಂನಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರ ಕಳ್ಳತನವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ. (ಫೋಟೊ-ಫೈಲ್)
ಬೆಂಗಳೂರಿನ ಜೋಯಾಲುಕ್ಕಾಸ್ ಶೋ ರೂಂನಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರ ಕಳ್ಳತನವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ. (ಫೋಟೊ-ಫೈಲ್)

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳನೊರ್ವ ವಜ್ರದ ಉಂಗುರವನ್ನು ಕದ್ದು ಪರಾರಿಯಾಗಿರುವ ಘಟನೆ ನಗರದ ಜೋಯಾಲುಕ್ಕಾಸ್ ಶೋ ರೂಂವೊಂದರಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಫೆಬ್ರವರಿ 18 ರಂದು ಬೆಂಗಳೂರು ಕೇಂದ್ರದ ಜೋಯಾಲುಕ್ಕಾಸ್ ಜ್ಯೂಯಲ್ಲರಿ ಶೋ ರೂಂ ನಲ್ಲಿ 75 ಲಕ್ಷ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರ ಕಳುವಾಗಿದೆ. ಫೆಬ್ರವರಿ 20 ರಂದು ಶೋ ರೂಂ ವ್ಯವಸ್ಥಾಪಕ ಶಿಬಿನ್ ವಿ ಎಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಂತರಿಕ ತಪಾಸಣೆ ನಡೆಸಿದಾಗ ನಕಲಿ ವಜ್ರದ ಉಂಗುರವಿರಿಸಿ ಅಸಲಿ ವಜ್ರದ ಉಂಗುರವನ್ನು ಕಳವು ಮಾಡಲಾಗಿದೆ.

ಶೋ ರೂಂನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಗಡ್ಡಧಾರಿ ಹಿರಿಯ ನಾಗರಿಕರೊಬ್ಬರು ಗ್ರಾಹಕರ ಸೋಗಿನಲ್ಲಿ ಜ್ಯುವೆಲರಿ ಶೋರೂಂಗೆ ಭೇಟಿ ನೀಡಿ ವಜ್ರದ ಉಂಗುರ ಖರೀದಿ ಮಾಡುವ ಹಾಗೆ ನಟಿಸಿ ಹಲವಾರು ಉಂಗುರಗಳನ್ನು ನೋಡಿದ್ದಾರೆ. ಆದರೆ ಅವರು ಯಾವುದೇ ವಜ್ರಾಭರಣ ಖರೀದಿ ಮಾಡಿಲ್ಲ. ಅಂತಿಮವಾಗಿ ಈ ಹಿರಿಯ ನಾಗರಿಕ ವಜ್ರದ ಉಂಗುರವನ್ನು ಕಳವು ಮಾಡಿದ್ದಾರೆ ಎಂದು ಮಳಿಗೆಯ ಸಿಬ್ಬಂದಿ ನಿರ್ಣಯಕ್ಕೆ ಬಂದಿದ್ದಾರೆ. ಈ ಶಂಕಿತ ವ್ಯಕ್ತಿ ಜೋಯಾಲುಕ್ಕಾಸ್ ನ ಇತರೆ ಎರಡು ಜ್ಯೂಯಲ್ಲರಿ ಶೋ ರೂಂಗಳಿಗೂ ಭೇಟಿ ನೀಡಿರುವುದು ತಿಳಿದು ಬಂದಿದೆ.

ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ ಈ ಶಂಕಿತ ವ್ಯಕ್ತಿ ಫೆ.18 ರಂದು ಸಂಜೆ 6 ಗಂಟೆಗೆ ಭೇಟಿ ನೀಡಿದ್ದಾರೆ. ಮಳಿಗೆಯ ಸಿಬ್ಬಂದಿಯಲ್ಲಿ ಒಬ್ಬರಾದ ಜಿಮ್ಮಿ ರಾಯ್ ಎಂಬುವರು ಗಡ್ಡದಾರಿ ಹಿರಿಯ ನಾಗರಿಕನಿಗೆ ವಜ್ರದ ಉಂಗುರಗಳನ್ನು ತೋರಿಸಿದ್ದಾರೆ. ಈ ಉಂಗುರಗಳಿಗೆ ಬದಲಾಗಿ ಬೇರೆ ವಜ್ರದ ಉಂಗುರಗಳನ್ನು ತೋರಿಸುವಂತೆ ಕೇಳಿದ್ದಾರೆ. ಆಗ ಈ ಉದ್ಯೋಗಿ ಬೇರೆ ಉಂಗುರಗಳನ್ನು ತೆಗೆಯಲು ತಿರುಗಿದಾಗ ಈ ಶಂಕಿತ ವ್ಯಕ್ತಿ ನಕಲಿ ವಜ್ರದ ಉಂಗುರವಿರಿಸಿ ಅಸಲಿ ಉಂಗುರವನ್ನು ಕಳವು ಮಾಡಿದ್ದಾರೆ.

ನಂತರ ಉದ್ಯೋಗಿ, ಗ್ರಾಹಕ ಸೋಗಿನ ವ್ಯಕ್ತಿಯ ಆಧಾರ್ ಅಥವಾ ಯಾವುದಾದರೂ ಗುರುತಿನ ಚೀಟಿ ತೋರಿಸುವಂತೆ ಕೇಳಿದ್ದಾರೆ. ಆದರೆ ಗಡ್ಡಧಾರಿ ವ್ಯಕ್ತಿ ಯಾವುದೇ ಉಂಗುರ ಇಷ್ಟ ಆಗಲಿಲ್ಲ ಎಂದು ಶೋ ರೂಂನಿಂದ ತೆರಳಿದ್ದಾರೆ. ಶೋ ರೂಂನಲ್ಲಿ ಆಂತರಿಕ ಪರಿಶೀಲನೆ ನಡೆಸಿದಾಗ ಈ ಕಳವು ನಡೆದಿರುವುದು ಮರುದಿನ ಫೆ. 19ರಂದು ಗೊತ್ತಾಗಿದೆ. ಅಸಲಿಗೆ ಬದಲಾಗಿ ನಕಲಿ ವಜ್ರದ ಉಂಗುರ ಇರುವುದು ಬೆಳಕಿಗೆ ಬಂದಿದೆ.

ಇದೇ ವ್ಯಕ್ತಿ ಬೇರೆ ಯಾವುದಾದರೂ ಮಳಿಗೆಗೆ ಬಂದಿರಬಹುದೇ ಎಂದೂ ಪರಿಶೀಲನೆ ನಡೆಸಿದಾಗ ಶಾಕ್ ಆಗುವಂತಹ ಮಾಹಿತಿ ಬೆಳಕಿಗೆ ಬಂದಿದೆ ಇದೇ ವ್ಯಕ್ತಿ ಫೆ.17 ರಂದು ಮಾರತ್‌ಹಳ್ಳಿಯ ಶೋ ರೂಂಗೆ ಸಂಜೆ 5.30 ರ ಸುಮಾರಿಗೆ ಭೇಟಿ ನೀಡಿರುವುದು ಪತ್ತೆಯಾಗಿದೆ. ಫೆ.18 ರಂದು ಕಮ್ಮನಹಳ್ಳಿ ಶೋ ರೂಂಗೆ ಮಧ್ಯಾಹ್ನ 2 ಗಂಟೆಗೆ ಭೇಟಿ ನೀಡಿದ್ದಾನೆ. ಈ ಎರಡೂ ಶೋ ರೂಂ ಗಳಲ್ಲಿ ಭಾರಿ ಬೆಲೆ ಬಾಳುವ ವಜ್ರದ ಉಂಗುರ ಇರುವುದಿಲ್ಲ. ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಮದ್ಯಕ್ಕೆ ಹಣ ನೀಡಲು ನಿರಾಕರಣೆ, ವೃದ್ಧನ ಕೊಂದ ಬಾಲಕರು

ಮದ್ಯ ಕುಡಿಯಲು ಹಣ ನೀಡಲಿಲ್ಲವೆಂಬ ಕಾರಣಕ್ಕೆ ವೃದ್ಧರೊಬ್ಬರನ್ನು ಕೊಲೆ ಮಾಡಿದ್ದ ಆರೋಪದಡಿಯಲ್ಲಿ ಇಬ್ಬರು ಬಾಲಕರನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 70 ವರ್ಷ ವಯಸ್ಸಿನ ವೃದ್ಧನನ್ನು ಗುರುವಾರ (ಫೆಬ್ರವರಿ 22) ತಡರಾತ್ರಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹಣಕ್ಕಾಗಿ ಕೃತ್ಯ ಎಸಗಿದ್ದ ಬಾಲಕರನ್ನು ವಶಕ್ಕೆ ಪಡೆದಿದ್ದು ಬಾಲ ನ್ಯಾಯ ಮಂಡಳಿ ಎದುರು ಹಾಜರು ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಮೃತ ವೃದ್ಧನ ಗುರುತು ಪತ್ತೆಯಾಗಿಲ್ಲ. ಈತ ಚಿಂದಿ ಆಯುವುದರ ಜೊತೆಗೆ ಭಿಕ್ಷೆಯನ್ನೂ ಬೇಡುತ್ತಿದ್ದರು. ರಾತ್ರಿ ವೇಳೆ ಸಾರ್ವಜನಿಕ ಸ್ಥಳ ಹಾಗೂ ಇತರ ಖಾಲಿ ಜಾಗಗಳಲ್ಲಿ ಮಲಗುತ್ತಿದ್ದರು. ತಮ್ಮ ಖರ್ಚಿಗೆ ಆಗುವಷ್ಟು ಹಣ ಅವರ ಬಳಿ ಸದಾ ಇರುತ್ತಿತ್ತು. ಅವರು ಹಣ ಎಣಿಸುತ್ತಿದ್ದದ್ದನ್ನು ಈ ಬಾಲಕರು ಹಲವು ಬಾರಿ ಗಮನಿಸಿದ್ದರು. ಗುರುವಾರ ರಾತ್ರಿ ಈ ಬಾಲಕರಿಬ್ಬರು ವೃದ್ಧನ ಬಳಿ ಹೋಗಿ ಮದ್ಯ ಕುಡಿಯಲು ಹಣ ಕೇಳಿದ್ದರು. ಹಣ ನೀಡಲು ವೃದ್ಧ ನಿರಾಕರಿಸಿದ್ದಾರೆ. ಇದೇ ವಿಚಾರಕ್ಕೆ ಜಗಳ ಆರಂಭವಾಗಿತ್ತು. ಬಾಲಕರು ವೃದ್ಧನ ತಲೆಗೆ ಹೊಡೆದಿದ್ದರಿಂದ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಕೃತ್ಯದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮರುದಿನ ಬೆಳಗ್ಗೆ ಮೃತದೇಹ ನೋಡಿದ್ದ ಸ್ಥಳೀಯರು ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

ವಿಭಾಗ