ಕಾರ್ಖಾನೆಯಲ್ಲಿ ನೀರಿನ ಸಂಪ್ ಸ್ವಚ್ಛ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರ ಸಾವು, ಆರು ಮಂದಿ ಬಂಧನ; ಬೆಂಗಳೂರಿನಲ್ಲಿ ಘಟನೆ
ಕಾರ್ಖಾನೆಯೊಂದರಲ್ಲಿ ನೀರಿನ ಸಂಪ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆಯಲ್ಲಿ ಎಚ್‌ಆರ್ ಮ್ಯಾನೇಜರ್ ಸೇರಿದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಕಾರ್ಖಾನೆಯೊಂದರಲ್ಲಿ ನೀರಿನ ಸಂಪ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಕಂಪನಿಯ ಎಚ್‌ಆರ್ ಮ್ಯಾನೇಜರ್ ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಮೃತರನ್ನು ತಮಿಳುನಾಡು ಮೂಲದ ಶಶಿಕುಮಾರ್ (51) ಹಾಗೂ ಆಂಧ್ರಪ್ರದೇಶದ ಆನಂದ್ ರಾಜ್ (41) ಎಂದು ಗುರುತಿಸಲಾಗಿದೆ.
ಘಟನೆಯ ಬಗ್ಗೆ ಮಾತನಾಡಿರುವ ಸಬ್‌ಇನ್ಸ್‌ಪೆಕ್ಟರ್ ವಿಶಾಲಾಕ್ಷಿ ಬಿ. ʼಶನಿವಾರ ಮಧ್ಯಾಹ್ನ 2.30 ರಿಂದ 3ರ ನಡುವೆ ಈ ಘಟನೆ ಸಂಭವಿಸಿದೆ. ಶಾಹಿ ಗಾರ್ಮೆಂಟ್ ಎಕ್ಸ್‌ಪೋರ್ಟರ್ಸ್ ಲಿಮಿಟೆಡ್ ಎಂದು ಕಂಪನಿಯಲ್ಲಿ ನಡೆದಿರುವ ಘಟನೆ ಇದಾಗಿದೆʼ ಎಂದಿದ್ದಾರೆ.
ಮೂಲಗಳ ಪ್ರಕಾರ ಇಬ್ಬರು ಕಾರ್ಮಿಕರನ್ನು 10 ಅಡಿ ಆಳದ ಸಂಪ್ ಅನ್ನು ಸ್ವಚ್ಛಗೊಳಿಸಲು ಹೇಳಲಾಗಿತ್ತು. ಅವರು ಸಂಪ್‌ಗೆ ಇಳಿದಾಗ ಉಸಿರಾಡಲು ಕಷ್ಟವಾಗಿ ಸಾವನ್ನಪ್ಪಿದ್ದಾರೆ.
ʼಸಂಪ್ ಕ್ಲೀನಿಂಗ್ ಕೆಮಿಕಲ್‌ಗಳ ಜೊತೆ ಸಂಪ್‌ಗೆ ಒಳಗೆ ಪ್ರವೇಶಿಸಿದ ಇಬ್ಬರೂ ಸಂಪ್‌ನಲ್ಲೇ ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದರು. ಇದನ್ನು ಗಮನಿಸಿ ಇತರ ಕಾರ್ಮಿಕರು ಅವರನ್ನು ಹೊರ ತೆಗೆದು ಹತ್ತಿರದ ಆಸ್ಪತ್ರೆಗೆ ಕರೆದ್ಯೊಯುತ್ತಾರೆ. ಆದರೆ ಅಷ್ಟರಲ್ಲೇ ಇಬ್ಬರೂ ಮೃತಪಟ್ಟಿದ್ದರು. ಸಂಪ್ ಕ್ಲೀನಿಂಗ್‌ಗೆ ಬಳಸಿದ ರಾಸಾಯನಿಕಗಳಿಂದ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆʼ ಎಂದು ಅಧಿಕಾರಿಯೊಬ್ಬರು ಹೇಳಿದರು.
ಈ ಘಟನೆ ಸಂಬಂಧ ಎಚ್‌ಆರ್ ಮ್ಯಾನೇಜರ್ ಸೇರಿದಂತೆ 6 ಮಂದಿ ಅಧಿಕಾರಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಐ ವಿಶಾಲಾಕ್ಷಿ ತಿಳಿಸಿದ್ದಾರೆ.
'ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಭಾನುವಾರ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅವರು ಹೇಳಿದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಮತ್ತು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ನಂತರ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಶವಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಿಶಾಲಾಕ್ಷಿ ಹೇಳಿದ್ದಾರೆ.