ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಪೊಲೀಸ್ ವಶಕ್ಕೆ, ಬೆಂಗಳೂರಿನ ರೇಣುಕಾಸ್ವಾಮಿ ಹತ್ಯೆ ಪ್ರಕರಣ, ಪೂರ್ಣ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಪೊಲೀಸ್ ವಶಕ್ಕೆ, ಬೆಂಗಳೂರಿನ ರೇಣುಕಾಸ್ವಾಮಿ ಹತ್ಯೆ ಪ್ರಕರಣ, ಪೂರ್ಣ ವಿವರ ಇಲ್ಲಿದೆ

ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಪೊಲೀಸ್ ವಶಕ್ಕೆ, ಬೆಂಗಳೂರಿನ ರೇಣುಕಾಸ್ವಾಮಿ ಹತ್ಯೆ ಪ್ರಕರಣ, ಪೂರ್ಣ ವಿವರ ಇಲ್ಲಿದೆ

ಬೆಂಗಳೂರಿನ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧಿಸಿ ಪೊಲೀಸರು ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರನ್ನು ವಶಕ್ಕೆ ಪಡೆದಿದ್ದಾರೆ. ರೇಣುಕಾಸ್ವಾಮಿ ಕೊಲೆ ಹೇಗಾಯಿತು ಮತ್ತು ಇತರೆ ಸಂಪೂರ್ಣ ವಿವರ ಇಲ್ಲಿದೆ.

ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಬಂಧನ, ಬೆಂಗಳೂರಿನ ರೇಣುಕಾಸ್ವಾಮಿ ಹತ್ಯೆ ಪ್ರಕರಣ
ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಬಂಧನ, ಬೆಂಗಳೂರಿನ ರೇಣುಕಾಸ್ವಾಮಿ ಹತ್ಯೆ ಪ್ರಕರಣ

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಬೆಂಗಳೂರಿನ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು, ದರ್ಶನ್ ತೂಗುದೀಪ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು ಸದ್ಯ ಮೈಸೂರಿನಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.

ಮೈಸೂರಿನಲ್ಲಿ ತೂಗುದೀಪ ದರ್ಶನ್ ಅವರು ಇರುವುದನ್ನು ಖಚಿತಪಡಿಸಿಕೊಂಡು ಬೆಂಗಳೂರು ಪೊಲೀಸರು ಅಲ್ಲಿಗೆ ತೆರಳಿ, ಬಂಧಿಸಿದ್ದಾರೆ. ದರ್ಶನ್ ಗೆಳತಿ ಪವಿತ್ರ ಗೌಡ ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಕೆಟ್ಟ, ಅಶ್ಲೀಲ ಕಾಮೆಂಟ್ ಹಾಕುತ್ತಿದ್ದುದೇ ರೇಣುಕಾ ಸ್ವಾಮಿ ಕೊಲೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯ ವೇಳೆ ಬಹಿರಂಗವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿ ಅವರ ಆತ್ಮಹತ್ಯೆ ಪ್ರಕರಣ, ತನಿಖೆ ಬಳಿಕ ಅದು ಕೊಲೆ ಎಂಬುದು ದೃಢಪಟ್ಟ ಕಾರಣ ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿತ್ತು. ಈ ಪ್ರಕರಣದಲ್ಲಿ ಇದುವರೆಗೆ 10 ಜನರ ಬಂಧನವಾಗಿದೆ.

ಈ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಸುದ್ದಿಗೋಷ್ಠಿ ನಡೆಸಿ, ರೇಣುಕಾಸ್ವಾಮಿ (33) ಹತ್ಯೆ ಪ್ರಕರಣದಲ್ಲಿ 10ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದರ್ಶನ್ ಅವರನ್ನೂ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಕಾಮಾಕ್ಷಿ ಪಾಳ್ಯದಲ್ಲಿ ಮೋರಿ ಸಮೀಪ ಗುರುತುಪತ್ತೆಯಾಗದ ಶವ ಪತ್ತೆ

ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಮೋರಿ ಸಮೀಪ ನಾಯಿಗಳು ಕಿತ್ತಾಡುತ್ತಿದ್ದ ಅನಾಥ ಶವ ಜೂನ್ 9 ರಂದು ಬೆಳಗ್ಗೆ ಪತ್ತೆಯಾಗಿತ್ತು. ಕಾಮಾಕ್ಷಿ ಪಾಳ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಬಳಿಕ 30 ರಿಂದ 35 ವರ್ಷದೊಳಗಿನ ವ್ಯಕ್ತಿಯ ಶವವನ್ನು ಮಹಜರು ನಡೆಸಲು ಕಳುಹಿಸಿದರು.

ಕಾಮಾಕ್ಷಿಪಾಳ್ಯದ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ಸೆಕ್ಯೂರಿಟಿ ರಾಮ್‌ ದೌರ್ ಜಿ ಅವರು ಭಾನುವಾರ ಬೆಳಗ್ಗೆ 112ಕ್ಕೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ವಿಷಯ ತಿಳಿಸಿದ್ದರು. ಅವರಿಂದಲೇ ದೂರು ದಾಖಲಿಸಿಕೊಂಡ ಪೊಲೀಸರು, ತನಿಖೆ ಶುರುಮಾಡಿದರು. ಆರಂಭದಲ್ಲಿ ಅವರಿಗೆ ಶವದ ಗುರುತುಪತ್ತೆಯಾಗಲಿಲ್ಲ. ಆರಂಭದಲ್ಲಿ ಅಸಹಜ ಸಾವು ಎಂದು ದಾಖಲಿಸಿ, ಆತ್ಮಹತ್ಯೆ ಎಂದು ಅನುಮಾನಿಸಲಾಗಿತ್ತು. ಬಳಿಕ ಅದು ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವವರು ಎಂಬುದು ದೃಢಪಟ್ಟಿದೆ.

ಈ ಕೇಸ್‌ ಆತ್ಮಹತ್ಯೆ ಅಲ್ಲ, ಕೊಲೆ ಎಂಬುದು ದೃಢಪಟ್ಟ ಕೂಡಲೇ, ಗಿರಿನಗರ ಮೂಲದ ಮೂವರು ತಾವೇ ಈ ಕೃತ್ಯವೆಸಗಿದ್ದಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಶರಣಾದ ಮೂವರು ಆರೋಪಿಗಳು, ಹಣಕಾಸಿನ ಕಾರಣಕ್ಕೆ ವ್ಯಕ್ತಿಯ ಜೊತೆಗೆ ವೈಷಮ್ಯ ಇತ್ತು. ಇದು ಅತಿರೇಕಕ್ಕೆ ಹೋದ ಕಾರಣ ಕೊಲೆ ಮಾಡಲಾಗಿದೆ ಎಂದು ಆರಂಭಿಕ ವಿಚಾರಣೆ ವೇಳೆ ಹೇಳಿದ್ದರು. ಆದರೆ ವಿಚಾರಣೆ ಬಿಗಿಗೊಳಿಸಿದಾಗ, ಇನ್ನಷ್ಟು ವಿಚಾರಗಳು ಬಹಿರಂಗವಾದವು.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಹೇಗಾಯಿತು?

ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತ ದರ್ಶನ್ ತೂಗುದೀಪ ಅವರ ಗೆಳತಿ ಪವಿತ್ರ ಗೌಡ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್, ಫೋಟೋ, ವಿಡಿಯೋ ಮತ್ತು ಕೆಟ್ಟ ಕಾಮೆಂಟ್ ಮಾಡುತ್ತಿದ್ದ. ಕಳೆದ ಒಂದು ತಿಂಗಳಿಂದ ಈ ರೀತಿ ಆಗುತ್ತಿದ್ದ ಕಾರಣ ಪವಿತ್ರ ಗೌಡ ಈ ವಿಚಾರವನ್ನು ದರ್ಶನ್ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.

ದರ್ಶನ್ ಮನೆಯಿಂದ ಯಾರೋ ಒಬ್ಬರು ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ರಾಘವೇಂದ್ರ ಎಂಬುವವರಿಗೆ ಕರೆ ಮಾಡಿ, ರೇಣುಕಾಸ್ವಾಮಿ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೆ ಬೆಂಗಳೂರಿಗೆ ಕರೆ ತರುವಂತೆ ಸೂಚಿಸಿದ್ದರು ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರೇಣುಕಾ ಸ್ವಾಮಿಯನ್ನು ಜೂನ್ 8ರಂದು ಸಂಜೆ ಬೆಂಗಳೂರಿಗೆ ಕರೆತಂದು ವಿನಯ್ ಎಂಬುವವರ ಕಾರ್‌ಶೆಡ್‌ನಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಅಲ್ಲಿ ನಾಲ್ಕು ಜನ ಹಲ್ಲೆ ಮಾಡುತ್ತಿದ್ದ ವೇಳೆ, ನಟ ದರ್ಶನ್ ಕೂಡ ಸ್ಥಳದಲ್ಲಿದ್ದರು. ಅವರ ಸೂಚನೆ ಮೇರೆಗೆ ಈ ಕೃತ್ಯ ಎಸಗಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ.

Whats_app_banner