ನವರಾತ್ರಿ ಹಿನ್ನೆಲೆ ಗಗನಮುಖಿಯಾದ ಹೂ ಹಣ್ಣು, ತರಕಾರಿ ಬೆಲೆ; ಗ್ರಾಹಕರ ಜೇಬಿಗೆ ಹೊರೆ, ವ್ಯಾಪಾರಿಗಳು ಖುಷ್
ನವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ತರಕಾರಿ, ಹಣ್ಣು ಮತ್ತು ಹೂವಿನ ಬೆಲೆ ಗಗನಕ್ಕೆ ಏರಿದೆ. ಗಣೇಶ ಹಬ್ಬದಿಂದಲೂ ತರಕಾರಿ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಈ ಏರಿಕೆ ಗ್ರಾಹಕನ ಜೇಬಿಗೆ ಹೊರೆಯಾದರೆ, ವ್ಯಾಪಾರಿಗಳು ಖುಷ್ ಆಗಿದ್ದಾರೆ.
Navaratri 2024: ನವರಾತ್ರಿ ಹಬ್ಬ ಆರಂಭವಾಗಿದ್ದು, ಹೂ ಹಣ್ಣು, ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಜಿಗಿಯುತ್ತಿದೆ. ಗೌರಿ ಗಣೇಶ ಹಬ್ಬದ ನಂತರ ಹೂಗಳ ಬೆಲೆ ಇಳಿಕೆಯಾಗಿತ್ತು. ಇದೀಗ ಬೆಲೆ ಮತ್ತೆ ಗಗನಮುಖಿಯಾಗಿದೆ. ಅದರಲ್ಲೂ ಹಬ್ಬ ಬಂದರಂತೂ ಹೂಗಳ ಬೆಲೆ ಏರಿಕೆ ಸಾಮಾನ್ಯವಾಗಿದೆ. ಮೊಳದ ಲೆಕ್ಕದಲ್ಲಿ ತೆಗೆದುಕೊಂಡರೂ ಅಷ್ಟೇ, ಕೆಜಿ ಲೆಕ್ಕದಲ್ಲಿ ತೆಗೆದುಕೊಂಡರೂ ಅಷ್ಟೇ, ಬೆಲೆ ಮಾತ್ರ ಕಡಿಮೆ ಇಲ್ಲವೇ ಇಲ್ಲ. ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ಉತಮ ಇಳುವರಿಯೂ ಬಂದಿದೆ. ಹಾಗಾಗಿ ಬೆಳೆಗಾರರು ಮತ್ತು ವ್ಯಾಪಾರಿಗಳ ಮುಖದಲ್ಲಿ ಸಂತಸ ಅರಳಿದೆ. ಆದರೆ ಗ್ರಾಹಕರ ಜೇಬಿಗೆ ಹೊರೆಯಾಗುವುದರಲ್ಲಿ ಸಂದೇಹವಿಲ್ಲ.
ಹೂವಿನ ಬೆಲೆ ಹೇಗಿದೆ?
ಮಲ್ಲಿಗೆ ಹೂ ಮಾರು ಒಂದಕ್ಕೆ 300-350 ರೂ ನಿಗದಿಯಾಗಿದ್ದರೆ ಸೇವಂತಿಗೆ ಮಾರಿಗೆ 100-150 ರೂ.ಗೆ ಏರಿಕೆಯಾಗಿದೆ.. ಗುಲಾಬಿ ಕೆಜಿಗೆ ೩೦೦ ರೂ.ಗೆ ಏರಿಕೆಯಾಗಿದೆ. ಕೆಜಿ ಲೆಕ್ಕದಲ್ಲಿ ಸೇವಂತಿಗೆ-300; ಕಾಕಡ-500; ಕನಕಾಂಬರ-900; ಗುಲಾಬಿ-250; ಸುಗಂಧರಾಜ-60 ರೂಗಳಿಗೆ ಮಾರಾಟವಾಗುತ್ತಿದೆ. ಇದು ನಿನ್ನೆ ಮತ್ತು ಇಂದಿನ ಬೆಲೆಯಾಗಿದ್ದು, ಮುಂದೆ ಬೆಲೆ ಏರುತ್ತಲೇ ಹೋಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.
ದುಬಾರಿಯಾದ ಹಣ್ಣುಗಳು
ಹಣ್ಣುಗಳ ಬೆಲೆ ಕಡಿಮೆ ಏನಿಲ್ಲ. ಅಂಗಡಿಗಳಲ್ಲಿ ದರಪಟ್ಟಿ ನೋಡಿದರೆ ಬರಿಗೈಯಲ್ಲಿ ಹಿಂತಿರುಗಿ ಬರುವ ಪರಿಸ್ಥಿತಿ ಇದೆ. ಮಧ್ಯಮ ವರ್ಗದ ಜನರಂತೂ ಖರೀದಿಗೆ ಹತ್ತು ಬಾರಿ ಯೋಚಿಸುವಂತಾಗಿದೆ. ದಾಳಿಂಬೆ ಕೆಜಿಗೆ 360 ರೂ ಇದ್ದು, 400 ರೂ ತಲುಪಲಿದೆ ಎಂದು ಹಣ್ಣಿನ ವ್ಯಾಪಾರಿಗಳೇ ಹೇಳುತ್ತಾರೆ. ಸೇಬು ಕೆಜಿಗೆ 280-300 ರೂ ಗೆ ನಿಗದಿಯಾಗಿದೆ. ಸಾಮಾನ್ಯ ಸೇಬಿನ ಬೆಲೆ 200 ರೂ. ಆಸುಪಾಸಿನಲ್ಲಿದೆ. ಸೀತಾಫಲದ ಬೆಲೆ 160 ರೂ, ಬಾಳೆಹಣ್ಣಿನ ಬೆಲೆ 120 ರೂ.ಗೆ ಮಾರಾಟವಾಗುತ್ತಿದೆ. ತೆಂಗಿನ ಕಾಯಿ ಬೆಲೆ ಗಾತ್ರದ ಮೇಲೆ ನಿಗದಿಯಾಗಿದ್ದು, ಉತ್ತಮ ಕಾಯಿಯ ಬೆಲೆ 35 ರೂ.ಗೆ ಮಾರಾಟವಾಗುತ್ತಿದೆ. ಬಿಡಿ ಬಾಳೆಎಲೆ ಒಂದಕ್ಕೆ 10 ರೂ.ಗೆ ಮಾರಲಾಗುತ್ತಿದೆ.
ಹೂ ಮತ್ತು ಹಣ್ಣು ಹಬ್ಬದ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತದೆ. ಆದರೆ ತರಕಾರಿ ದಿನನಿತ್ಯದ ಅಡುಗೆಗೆ ಅನಿವಾರ್ಯವಾಗಿದ್ದು, ಗೌರಿ ಹಬ್ಬದ ದಿನದಿಂದಲೂ ಏರಿಕೆಯಾಗುತ್ತಲೇ ಬಂದಿದೆ. ಆಷಾಢದಲ್ಲೂ ತರಕಾರಿ ಬೆಲೆ ಕಡಿಮೆಯಾಗಲಿಲ್ಲ.
ಕೆಜಿ ದರದಲ್ಲಿ ತರಕಾರಿ ಬೆಲೆ ಹೀಗಿದೆ
ಟೊಮೆಟೊ-50; ಕ್ಯಾರೆಟ್-100; ಬೆಂಡೆಕಾಯಿ-50; ಈರುಳ್ಳಿ-80; ಆಲೂಗೆಡ್ಡ-45; ಬೀಟ್ ರೂಟ್- 80; ಬೀನ್ಸ್ ನಾಟಿ-120; ಹಾಗಲಕಾಯಿ-60; ಪಡುವಲಕಾಯಿ-40; ಬದನೆಕಾಯಿ-45; ಕೋಸು-40; ಕ್ಯಾಪ್ಸಿಕಂ-80; ಸೌತೆಕಾಯಿ-40; ನುಗ್ಗೆಕಾಯಿ-60; ಮೆಣಸಿನಕಾಯಿ-200.
ವರದಿ: ಮಾರುತಿ ಎಚ್