ಅಪಘಾತ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಹಿಂಜರಿದ ಪೊಲೀಸರು; ಇಲಾಖಾ ತನಿಖೆಗೆ ಆದೇಶ -Video
ಬೆಂಗಳೂರಿನಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಯ್ಸಳ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ವ್ಯಾಪಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬೆನ್ನಲ್ಲೇ ಹೊಯ್ಸಳ ಸಿಬ್ಬಂದಿಯ ನಿರ್ಲಕ್ಷ್ಯ ವಿರುದ್ಧ ಇಲಾಖಾ ತನಖಗೆ ಆದೇಶ ಹೊರಬಿದ್ದಿದೆ.

ಬೆಂಗಳೂರು: ನಗರ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಿವೇಣಿ ರಸ್ತೆಯಲ್ಲಿ ನಡೆದ ಅಫಘಾತ ಪ್ರಕರಣ ಸಂಬಂಧ, ಹೊಯ್ಸಳ ವಾಹನ ಸಿಬ್ಬಂದಿ ವಿರುದ್ಧ ತನಿಖೆಗೆ ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಆದೇಶಿಸಿದ್ದಾರೆ. ಜುಲೈ 15ರ ತಡರಾತ್ರಿ ತ್ರಿವೇಣಿ ರಸ್ತೆಯಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಸ್ಥಳಕ್ಕೆ ಹೊಯ್ಸಳ ವಾಹನ ಸಿಬ್ಬಂದಿ ಬಂದಿದ್ದರು. ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸದೆ, ಆಟೋ ಅಥವಾ ಆಂಬುಲೆನ್ಸ್ ಬರುವಿಕೆಗಾಗಿ ಸಿಬ್ಬಂದಿ ಕಾದಿದ್ದಾರೆ. ಎಮರ್ಜೆನ್ಸಿ ಹೊರತಾಗಿಯೂ ಪೊಲೀಸರು ನಿರ್ಲಕ್ಯ ತೋರಿದ ಆರೋಪ ವ್ಯಕ್ತವಾಗಿದೆ. ಹೀಗಾಗಿ ಇಲಾಖಾ ತನಿಖೆಗೆ ಉತ್ತರ ವಿಭಾಗ ಡಿಸಿಪಿ ಅಡಾವತ್ ಆದೇಶಿಸಿದ್ದಾರೆ.
ಅಪಘಾತದಿಂದ ವ್ಯಕ್ತಿಯ ಕಿವಿಯ ಭಾಗದಲ್ಲಿ ರಕ್ತ ಸುರಿಯುತ್ತಿತ್ತು. ಈ ವೇಳೆ ಹೊಯ್ಸಳ ವಾಹನದ ಮೂವರು ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಇದ್ದರೂ, ಅಪಘಾತಕ್ಕೊಳಗಾದ ವ್ಯಕ್ತಿಯ ಸಹಾಯಕ್ಕೆ ಮುಂದಾಗಿರಲಿಲ್ಲ. ಪೊಲೀಸರ ನಿರ್ಲಕ್ಷ್ಯವನ್ನು ಅಲ್ಲಿದ್ದವರು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಎಷ್ಟೇ ಕೇಳಿಕೊಂಡರೂ ಪೊಲೀಸರು ತಮ್ಮ ಹೊಯ್ಸಳ ವಾಹನದಲ್ಲಿ ಗಾಯಾಳುವನ್ನು ಕರೆದೊಯ್ಯಲು ಸಿದ್ಧರಿರಲಿಲ್ಲ. ಬದಲಿಗೆ ಆಟೋ ಬರುತ್ತಿಲ್ಲ ಎಂದು ಸಬೂಬು ಹೇಳಿದ್ದಾರೆ. ಹೀಗಾಗಿ ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿಯೇ ಖಾಸಗಿ ಕಾರಿನಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಘಟನೆ ಬಳಿಕ ವಿಡಿಯೋ ವೈರಲ್ ಆಗಿದೆ. ತುರ್ತು ಪರಿಸ್ಥಿತಿ ಇದ್ದರೂ, ಸರ್ಕಾರಿ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗದ ಸಿಬ್ಬಂದಿ ವಿರುದ್ಧ ಇಲಾಖೆ ತನಿಖೆಗೆ ಮುಂದಾಗಿದೆ. ಘಟನೆ ಸಂಬಂಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ದೃಶ್ಯ ಇಲ್ಲಿದೆ
ಸ್ಥಳದಲ್ಲಿ ಮೂವರು ಪೊಲೀಸರಿದ್ದರೂ, ವ್ಯಕ್ತಿಯ ಮನವಿಗೆ ಸ್ಪಂದಿಸಿಲ್ಲ. ಆಂಬುಲೆನ್ಸ್‌ಗೆ ಕಾಯುವ ಬದಲು ಹೊಯ್ಸಳ ವಾಹನದಲ್ಲಿ ಕರೆದುಕೊಂಡು ಹೋಗಿ ಎಂದರೂ ಕೇಳಲಿಲ್ಲ. ಹೊಯ್ಸಳ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಆಗುವುದಿಲ್ಲ. ಯಾವುದಾದರೂ ಆಟೋ ಬಂದರೆ ಕಳಿಸಿಕೊಡುತ್ತೇವೆ ಎಂದು ನಿರ್ಲಕ್ಷ್ಯದ ಮಾತುಗಳನ್ನು ಆಡಿದ್ದಾರೆ. ಇದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಇದೀಗ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
