ಬೆಂಗಳೂರು ವಾಣಿಜ್ಯೋದ್ಯಮಗಳ ಕನ್ನಡ ನಾಮಫಲಕ ಅಳವಡಿಕೆಯ ಗಡುವು 2 ವಾರ ವಿಸ್ತರಣೆ; ಡಿಸಿಎಂ ಡಿಕೆ ಶಿವ ಕುಮಾರ್‌ ಘೋಷಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ವಾಣಿಜ್ಯೋದ್ಯಮಗಳ ಕನ್ನಡ ನಾಮಫಲಕ ಅಳವಡಿಕೆಯ ಗಡುವು 2 ವಾರ ವಿಸ್ತರಣೆ; ಡಿಸಿಎಂ ಡಿಕೆ ಶಿವ ಕುಮಾರ್‌ ಘೋಷಣೆ

ಬೆಂಗಳೂರು ವಾಣಿಜ್ಯೋದ್ಯಮಗಳ ಕನ್ನಡ ನಾಮಫಲಕ ಅಳವಡಿಕೆಯ ಗಡುವು 2 ವಾರ ವಿಸ್ತರಣೆ; ಡಿಸಿಎಂ ಡಿಕೆ ಶಿವ ಕುಮಾರ್‌ ಘೋಷಣೆ

ಬೆಂಗಳೂರಿನಲ್ಲಿ ವಾಣಿಜ್ಯೋದ್ಯಮಗಳು ಶೇ 60 ಕನ್ನಡ ಭಾಷೆಯ ನಾಮಫಲಕ ಅಳವಡಿಸುವುದಕ್ಕೆ ಇರುವ ಗಡುವು ಒಂದು ದಿನ ವಿಸ್ತರಿಸಿರುವುದಾಗಿ ಬಿಬಿಎಂಪಿ ಘೋಷಿಸಿತ್ತು. ಆದರೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈಗ ಈ ಗಡುವನ್ನು ಇನ್ನೂ ಎರಡು ವಾರ ವಿಸ್ತರಿಸಿದ್ದಾರೆ.

ಬೆಂಗಳೂರು ವ್ಯಾಪ್ತಿಯಲ್ಲಿ ವಾಣಿಜ್ಯೋದ್ಯಮಗಳು ಕನ್ನಡ ನಾಮಫಲಕ ಅಳವಡಿಸುತ್ತಿರುವುದು (ಎಡ ಚಿತ್ರ), ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಬಲಚಿತ್ರ)
ಬೆಂಗಳೂರು ವ್ಯಾಪ್ತಿಯಲ್ಲಿ ವಾಣಿಜ್ಯೋದ್ಯಮಗಳು ಕನ್ನಡ ನಾಮಫಲಕ ಅಳವಡಿಸುತ್ತಿರುವುದು (ಎಡ ಚಿತ್ರ), ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಬಲಚಿತ್ರ)

ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ವಾಣಿಜ್ಯೋದ್ಯಮಗಳ ನಾಮಫಲಕಗಳಲ್ಲಿ ಶೇ 60 ಕನ್ನಡ ಭಾಷೆ ಬಳಸುವುದಕ್ಕೆ ನಿಗದಿ ಪಡಿಸಿದ್ದ ಗಡುವು ನಿನ್ನೆ (ಫೆ.28) ಮುಗಿದಿತ್ತಾದರೂ, ಒಂದು ದಿನ ವಿಸ್ತರಿಸಿರುವುದಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದರು. ಈಗ ವಾಣಿಜ್ಯೋದ್ಯಮಿಗಳ ಹಿತ ಗಮನದಲ್ಲಿರಿಸಿಕೊಂಡು ಅವರು ಕಾಲಾವಕಾಶ ಕೇಳಿದ್ದರಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಂದಿಸಿದ್ದಾರೆ.

ಕನ್ನಡ ನಾಮಫಲಕ ಅಳವಡಿಕೆ ಸಂಬಂಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಟ್ವೀಟ್ ಮಾಡಿದ್ದು, “ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದಕಡೆ ಶೇ.60ರಷ್ಟು‌ ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಿ, ಈಗಾಗಲೇ ನೀಡಲಾಗಿದ್ದ ಗಡುವನ್ನು 2 ವಾರಗಳ‌ ಕಾಲ ವಿಸ್ತರಿಸಲಾಗಿದೆ." ಎಂದು ಘೋಷಿಸಿದ್ದಾರೆ.

ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಹಾಗಾಗಿ ನಮ್ಮ ಹೃದಯದ ಭಾಷೆಯನ್ನು ಎತ್ತಿ‌ಹಿಡಿಯುವುದು ಅತಿ ಮುಖ್ಯ. 2 ವಾರಗಳ‌ ನಂತರ ಎಲ್ಲರೂ ಕಾನೂನು ಪಾಲನೆ ಮಾಡುತ್ತಾರೆ‌ ಎಂದು ನಿರೀಕ್ಷಿಸಿದ್ದೇನೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಟ್ವೀಟ್

ಬೆಂಗಳೂರಿನಲ್ಲಿ ಯಾವೆಲ್ಲ ಸಂಸ್ಥೆಗಳು ಕನ್ನಡ ನಾಮಫಲಕ ಅಳವಡಿಸಬೇಕು

ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮ, ಟ್ರಸ್ಟ್‌, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನೋರಂಜನಾ ಕೇಂದ್ರ ಮತ್ತು ಹೋಟೆಲ್‌ ಮುಂತಾದವುಗಳ ನಾಮಫಲಕಗಳಲ್ಲಿ ಶೇಕಡ 60 ಕನ್ನಡ ಭಾಷೆ ಬಳಕೆಯನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರಿನಲ್ಲಿರುವ ವಾಣಿಜ್ಯೋದ್ಯಮಗಳಲ್ಲಿ ಅಳವಡಿಸುವ ನಾಮಫಲಕಗಳ ಮೇಲ್ಭಾಗದಲ್ಲಿ ಕನ್ನಡ ಭಾಷೆ ಇರಬೇಕು ಎಂದೂ ಬಿಬಿಎಂಪಿ ಹೇಳಿದೆ. ಇದರ ಅನುಷ್ಠಾನಕ್ಕೆ ಸಂಬಂಧಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ಫೆ.2, ಫೆ.12 ರಂದು ಅನುಷ್ಠಾನಕ್ಕೆ ಸಂಬಂಧಿಸಿದ ಸಭೆ ನಡೆಯಿತು. ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾಣಿಜ್ಯೋದ್ಯಮಗಳಿಗೆ ನಾಮಫಲಕಗಳಲ್ಲಿ ಶೇ 60 ಕನ್ನಡ ಭಾಷೆ ಬಳಸುವುದಕ್ಕೆ ಫೆ.28ರ ಗಡುವು ನೀಡಿ ಜಾಗೃತಿ ಮೂಡಿಸಲಾಯಿತು ಎಂದು ಬಿಬಿಎಪಿ ತಿಳಿಸಿದೆ.

ಈ ಗಡುವು ನಿನ್ನೆ ಮುಗಿದಿತ್ತಾದರೂ, ಬಿಬಿಎಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಇಂದು ಒಂದು ದಿನ ಹೆಚ್ಚುವರಿ ಗಡುವು ನೀಡಿದ್ದರು.

" ಕನ್ನಡ ನಾಮಫಲಕ ಅಳವಡಿಸಿಕೊಳ್ಳಲು ಸಾಧ್ಯವಾಗದವರು ಇದಕ್ಕಾಗಿ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಈಗಾಗಲೇ ಶೇ 60 ಕನ್ನಡ ನಾಮಫಲಕ ಅಳವಡಿಕೆಯ ಕುರಿತಂತೆ ಆದೇಶ ಹೊರಡಿಸಲಾಗಿದ್ದರೂ ಒಂದು ದಿನದ ಮಟ್ಟಿಗೆ ಕಾಲಾವಕಾಶದ ವಿಸ್ತರಣೆ ಮಾಡಲಾಗಿದೆ. ನಿಯಮ ಪಾಲಿಸದೇ ಇದ್ದರೆ, ಅಂತಹ ವಾಣಿಜ್ಯೋದ್ಯಮ ಮಳಿಗೆಗಳ ವ್ಯಾಪಾರ ಪರವಾನಗಿ ಅಮಾನತುಗೊಳಿಸಲಾಗುತ್ತದೆ. ಅದೇ ರೀತಿ ದಂಡವನ್ನೂ ವಿಧಿಸಲಾಗುತ್ತದೆ" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner