ಬೆಂಗಳೂರು ವಾಣಿಜ್ಯೋದ್ಯಮ ನಾಮಫಲಕಗಳಲ್ಲಿ ಶೇ 60 ಕನ್ನಡ ಬಳಕೆಗೆ ಬಿಬಿಎಂಪಿ ಕೊಟ್ಟ ಗಡುವು ಇಂದು ಕೊನೆ; ಮುಂದೇನಾಗಲಿದೆ
ಬೆಂಗಳೂರಿನ ವಾಣಿಜ್ಯೋದ್ಯಮಗಳ ನಾಮಫಲಕಗಳಲ್ಲಿ ಶೇ 60 ಕನ್ನಡ ಭಾಷೆ ಬಳಸಬೇಕು ಎಂಬ ನಿಯಮ ಪಾಲನೆಗೆ ನೀಡಿದ್ದ ಗಡುವು ನಿನ್ನೆ (ಫೆ.28) ಕೊನೆಯಾಗಿತ್ತಾದರೂ, ಒಂದು ದಿನ ವಿಸ್ತರಿಸಿರುವುದಾಗಿ ಬಿಬಿಎಂಪಿ ತಿಳಿಸಿದೆ. ಈ ನಿಯಮ ಪಾಲಿಸದೇ ಇರುವ ವಾಣಿಜ್ಯೋದ್ಯಮಗಳು ಬಹಳಷ್ಟಿವೆ. ಹೀಗಾಗಿ ಮುಂದೇನಾಗಲಿದೆ. ಈ ವರದಿ ಗಮನಿಸಿ.
ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ವಾಣಿಜ್ಯೋದ್ಯಮಗಳ ನಾಮಫಲಕಗಳಲ್ಲಿ ಶೇ 60 ಕನ್ನಡ ಭಾಷೆ ಬಳಸುವುದಕ್ಕೆ ನಿಗದಿ ಪಡಿಸಿದ್ದ ಗಡುವು ನಿನ್ನೆ (ಫೆ.28) ಮುಗಿದಿದೆ. ಆದಾಗ್ಯೂ, ಈ ಗಡುವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸುವುದಾಗಿ ಬಿಬಿಎಂಪಿ ತಿಳಿಸಿದೆ. ಈ ಕಡ್ಡಾಯ ನಿಯಮ ಪಾಲಿಸದ ಅಂಗಡಿಗಳ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಠಿಣ ಕ್ರಮ ಕೈಗೊಳ್ಳಲಿದೆ. ಈ ಕುರಿತು ಜಾಗೃತಿ ಮೂಡಿಸಿ, ಅಧಿಸೂಚನೆಯನ್ನೂ ಹೊರಡಿಸಿದೆ.
ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮ, ಟ್ರಸ್ಟ್, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನೋರಂಜನಾ ಕೇಂದ್ರ ಮತ್ತು ಹೋಟೆಲ್ ಮುಂತಾದವುಗಳ ನಾಮಫಲಕಗಳಲ್ಲಿ ಶೇಕಡ 60 ಕನ್ನಡ ಭಾಷೆ ಬಳಕೆಯನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಅಧಿಸೂಚನೆ ಹೊರಡಿಸಿದೆ. ಅಲ್ಲದೆ, ನಾಮಫಲಕಗಳ ಮೇಲ್ಭಾಗದಲ್ಲಿ ಕನ್ನಡ ಭಾಷೆ ಇರಬೇಕು ಎಂದೂ ನಿರ್ದೇಶಿಸಲಾಗಿದೆ. ಈ ಸಂಬಂಧ ವಿಶೇಷ ರಾಜ್ಯಪತ್ರಿಕೆಯನ್ನೂ ಸರ್ಕಾರ ಪ್ರಕಟಿಸಿದೆ.
ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ಫೆ.2, ಫೆ.12 ರಂದು ಅನುಷ್ಠಾನಕ್ಕೆ ಸಂಬಂಧಿಸಿದ ಸಭೆ ನಡೆಯಿತು. ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾಣಿಜ್ಯೋದ್ಯಮಗಳಿಗೆ ನಾಮಫಲಕಗಳಲ್ಲಿ ಶೇ 60 ಕನ್ನಡ ಭಾಷೆ ಬಳಸುವುದಕ್ಕೆ ಫೆ.28ರ ಗಡುವು ನೀಡಿ ಜಾಗೃತಿ ಮೂಡಿಸಲಾಯಿತು ಎಂದು ಬಿಬಿಎಪಿ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯ 55187 ವಾಣಿಜ್ಯೋದ್ಯಮಕ್ಕೆ ನೋಟಿಸ್
ನಾಮಫಲಕಗಳಲ್ಲಿ ಶೇ 60 ಕನ್ನಡ ಭಾಷೆ ಬಳಕೆ ನಿಯಮ ಪಾಲನೆ ಸಂಬಂಧ ಬಿಬಿಎಂಪಿ ವ್ಯಾಪ್ತಿಯಲ್ಲಿ 55187 ವಾಣಿಜ್ಯ ಮಳಿಗೆ/ಉದ್ದಿಮೆಗಳಿಗೆ ಪಾಲಿಕೆ ನೋಟಿಸ್ ನೀಡಿತ್ತು. ಫೆ.28 ರೊಳಗೆ ನಾಮಫಲಕಗಳನ್ನು ಬದಲಾಯಿಸುವಂತೆ ಸೂಚಿಸಿತ್ತು.
ಇದರಂತೆ, ಫೆ.28ರ ದತ್ತಾಂಶವನ್ನು ಬಿಡುಗಡೆ ಮಾಡಿರುವ ಬಿಬಿಎಂಪಿ, 52,134 ವಾಣಿಜ್ಯ ಉದ್ದಿಮೆಗಳು ತಮ್ಮ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಬಳಸಿವೆ. ಇನ್ನುಳಿದಂತೆ 3044 ಮಳಿಗೆಗಳು ಇನ್ನೂ ಅಳವಡಿಸಿಲ್ಲ ಎಂದು ಹೇಳಿದ್ದು, ದತ್ತಾಂಶ ಬಿಡುಗಡೆ ಮಾಡಿದೆ. ನಿಗದಿತ ಗಡುವನ್ನು ಒಂದು ದಿನ ವಿಸ್ತರಣೆ ಮಾಡಿದ್ದರಿಂದ ಈ ಮಳಿಗೆಗಳಿಗೆ ಶೇ 60 ಕನ್ನಡ ಭಾಷೆ ಬಳಸಿದ ನಾಮಫಲಕ ಅಳವಡಿಸುವುದಕ್ಕೆ ಇಂದು ಒಂದು ದಿನ ಕಾಲಾವಕಾಶ ಸಿಕ್ಕಿದೆ.
" ಕನ್ನಡ ನಾಮಫಲಕ ಅಳವಡಿಸಿಕೊಳ್ಳಲು ಸಾಧ್ಯವಾಗದವರು ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಈಗಾಗಲೇ ಶೇ 60 ಕನ್ನಡ ನಾಮಫಲಕ ಅಳವಡಿಕೆಯ ಕುರಿತಂತೆ ಆದೇಶ ಹೊರಡಿಸಲಾಗಿದ್ದರೂ ಒಂದು ದಿನದ ಮಟ್ಟಿಗೆ ಕಾಲಾವಕಾಶದ ವಿಸ್ತರಣೆ ಮಾಡಲಾಗಿದೆ. ನಿಯಮ ಪಾಲಿಸದೇ ಇದ್ದರೆ ವ್ಯಾಪಾರ ಪರವಾನಗಿ ಅಮಾನತುಗೊಳಿಸಲಾಗುತ್ತದೆ. ಅದೇ ರೀತಿ ದಂಡವನ್ನೂ ವಿಧಿಸಲಾಗುತ್ತದೆ" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಾಮಫಲಕಗಳಲ್ಲಿ ಶೇ 60 ಕನ್ನಡ ಬಳಕೆಗೆ ಬಿಬಿಎಂಪಿ ಕೊಟ್ಟ ಗಡುವು ಒಂದು ದಿನ ವಿಸ್ತರಣೆ; ಮುಂದೇನಾಗಲಿದೆ
ನಾಮಫಲಕಗಳಲ್ಲಿ ಶೇ 60 ಕನ್ನಡ ಬಳಕೆಗೆ ನಿಗದಿ ಮಾಡಿದ್ದ ಗಡುವು ನಿನ್ನೆ (ಫೆ.28) ಮುಗಿದರೂ, ಒಂದು ದಿನ (ಫೆ.29) ವಿಸ್ತರಣೆಯಾಗಿದೆ. ಹೀಗಾಗಿ ಇಂದಿನ ಬಳಿಕ ನಿಯಮ ಪಾಲಿಸದ ವಾಣಿಜ್ಯೋದ್ಯಮಗಳ ಮೇಲೆ ಅಗತ್ಯ ಕ್ರಮ ಜರುಗಿಸುವುದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.
ಈ ನಿರ್ದೇಶನಾನುಸಾರ, ಪಾಲಿಕೆಯ ವ್ಯಾಪ್ತಿಯಲ್ಲಿರುವ ವಾಣಿಜ್ಯೋದ್ಯಮಗಳ ನಾಮಫಲಕಗಳಲ್ಲಿ ಶೇ 60 ಕನ್ನಡ ಭಾಷೆಯನ್ನು ಪ್ರದರ್ಶಿಸದೇ ಇರುವ ವಾಣಿಜ್ಯ ಉದ್ದಿಮೆಗಳಿಗೆ ನೀಡಿದ ಉದ್ದಿಮೆ ಪರವಾನಗಿ ಅಮಾನತುಗೊಳಿಸಲಾಗುತ್ತದೆ. ಅಂತಹ ವಾಣಿಜ್ಯೋದ್ಯಮಗಳಿಗೆ ಬೀಗಮುದ್ರೆ ಹಾಕಲು ಸೂಚಿಸಿರುವುದಾಗಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)