ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಸಾವಿನ ಸಂಖ್ಯೆ: ಆದರೂ ಭರ್ತಿಯಾಗುತ್ತೆ ಹಾಸಿಗೆಗಳು
Bengaluru govt hospitals: ಬೆಂಗಳೂರಿನ ಈ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವಿನ ಸಂಖ್ಯೆ ಅಧಿಕ; ಅದರಲ್ಲೂ ಈ ಆಸ್ಪತ್ರೆಯಲ್ಲಿ ಪ್ರತಿದಿನ 16 ಮಂದಿ ಅಸುನೀಗುತ್ತಾರೆ; ಆದರೂ ಇಲ್ಲಿನ ಹಾಸಿಗೆಗಳು ಶೇಕಡಾ ನೂರರಷ್ಟು ಭರ್ತಿ; ಕಾರಣಗಳಾದರೂ ಏನು? (ವರದಿ: ಎಚ್.ಮಾರುತಿ)
ಬೆಂಗಳೂರು: ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿ ಲಭ್ಯವಾಗುತ್ತಿರುವ ಚಿಕಿತ್ಸೆಯ ಗುಣಮಟ್ಟ ಕುರಿತು ಆತಂಕ ಎದುರಾಗಿದೆ. ಆದರೆ ಆಸ್ಪತ್ರೆಗಳ ವೈದ್ಯರು ಈ ದೂರನ್ನು ಒಪ್ಪಿಕೊಳ್ಳುತ್ತಿಲ್ಲ. ರೋಗಿಗಳನ್ನು ತಡವಾಗಿ ಆಸ್ಪತ್ರೆಗೆ ಕರೆತರುತ್ತಿರುವುದರಿಂದ ಸಾವುಗಳು ಸಂಭವಿಸುತ್ತಿವೆ ಎಂದು ಹೇಳುತ್ತಾರೆ.
ವಿಕ್ಟೋರಿಯಾ ಆಸ್ಪತ್ರೆ ಬೆಂಗಳೂರಿನ ಪುರಾತನ ಆಸ್ಪತ್ರೆಗಳಲ್ಲಿ ಒಂದಾಗಿದೆ. ಈ ಆಸ್ಪತ್ರೆಯಲ್ಲಿ ಪ್ರತಿ ಒಂದೂವರೆ ಗಂಟೆಗೆ ಅಥವಾ 90 ನಿಮಿಷಗಳಿಗೆ ಒಂದರಂತೆ ಒಂದು ಸಾವು ಸಂಭವಿಸುತ್ತಿದೆ. ಈ ಆಸ್ಪತ್ರೆಯಲ್ಲಿ ಪ್ರತಿ ತಿಂಗಳಿಗೆ 28,500 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. 2023ರ ಜನವರಿಯಿಂದ ನವಂಬರ್ ವರೆಗೆ ಈ ಆಸ್ಪತ್ರೆಯಲ್ಲಿ 5,521 ರೋಗಿಗಳು ಜೀವ ಕಳೆದುಕೊಂಡಿದ್ದಾರೆ. ಪ್ರತಿ ತಿಂಗಳ ಸರಾಸರಿಯನ್ನು ತೆಗೆದುಕೊಂಡರೆ ತಿಂಗಳಿಗೆ 502 ಸಾವುಗಳು ಸಂಭವಿಸಿವೆ. ದಿನವೊಂದಕ್ಕೆ 16 ಮಂದಿ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ರಾಜ್ಯ ರಾಜಧಾನಿಯ ಇತರ ಪ್ರಮುಖ ಆಸ್ಪತ್ರೆಗಳಾದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗಳಲ್ಲಿ 965 ಸಾವುಗಳು ಸಂಭವಿಸಿವೆ. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ 380 ಸಾವುಗಳು ದಾಖಲಾಗಿವೆ. ಬೌರಿಂಗ್ ನಲ್ಲಿ ಪ್ರತಿದಿನ 2 ಮತ್ತು ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಒಂದು ಸಾವು ಸಂಭವಿಸುತ್ತಿದೆ. ವಿಕ್ಟೊರಿಯಾ ಸುಸಜ್ಜತ ವೈದ್ಯಕೀಯ ಉಪಕರಣಗಳನ್ನು ಹೊಂದಿರುವ ಆಸ್ಪತ್ರೆ. ಕೋವಿಡ್ ಸಂದರ್ಭದಲ್ಲಿ ಈ ಆಸ್ಪತ್ರೆ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಈ ಆಸ್ಪತ್ರೆಗೆ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ರೋಗಿಗಳು ಆಗಮಿಸುತ್ತಾರೆ.
ಅಷ್ಟೇ ಏಕೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದಲೂ ರೋಗಿಗಳು ಚಿಕಿತ್ಸೆಗೆ ಆಗಮಿಸುತಾರೆ. 901 ಬೆಡ್ಗಳುಳ್ಳ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೇ.95 ರಷ್ಟು ಬೆಡ್ಗಳು ವರ್ಷವಿಡೀ ಭರ್ತಿಯಾಗಿರುತ್ತವೆ. ಈ ಆಸ್ಪತ್ರೆಗೆ ಆಗಮಿಸುವ ರೋಗಿಗಳು ಬಡ ಮತ್ತು ಮಧ್ಯಮ ವರ್ಗದ ಜನರಾಗಿರುತ್ತಾರೆ.
ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸುವ ಸಾವುಗಳನ್ನು ವಿಮರ್ಶಿಸುವುದಾದರೆ ರೋಗಿಯನ್ನು ಕರೆತಂದ 48 ಗಂಟೆಗಳ ಒಳಗಾಗಿ ಮೃತಪಡುವ ಸಾಧ್ಯತೆಗಳೇ ಹೆಚ್ಚು ಎಂದು ತಿಳಿದು ಬಂದಿದೆ. 2023ರ ಮೊದಲ 11 ತಿಂಗಳಲ್ಲಿ ಆಸ್ಪತ್ರೆಗೆ ಕರೆತಂದ 48 ಗಂಟೆಗಳೊಳಗಾಗಿ 3,378 ರೋಗಿಗಳು ಅಸುನೀಗಿದ್ದಾರೆ. 5,413 ರೋಗಿಗಳು 48 ಗಂಟೆಗಳ ನಂತರ ಮರಣ ಹೊಂದಿದ್ದಾರೆ. ಸರಾಸರಿ ವಯೋಮಾನವನ್ನು ನೋಡುವುದಾದರೆ 50 ವರ್ಷಕ್ಕಿಂತ ಹೆಚ್ಚು ವಯಸ್ಸಿನ 3,126 ಮಂದಿ ಮೃತಪಟ್ಟಿದ್ದಾರೆ.
ಸಕಾರಿ ಆಸ್ಪತ್ರೆಗಳಲ್ಲಿ ರೋಗಿಯು ಯಾವುದೇ ಸ್ಥಿತಿಯಲಿದ್ದರೂ ಚಿಕಿತ್ಸೆ ನೀಡದೆ ಕಳುಹಿಸಲು ಅವಕಾಶಗಳಿಲ್ಲ. ಅನೇಕ ರೋಗಿಗಳು ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ವೆಚ್ಚವನ್ನು ಭರಿಸಲಾಗದೆ ನಂತರ ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸುತ್ತಾರೆ. ಈ ಹಂತದಲ್ಲಿ ರೋಗಿಯ ಆರೋಗ್ಯ ಮತ್ತಷ್ಟು ಮತ್ತಷ್ಟು ಹದಗೆಟ್ಟಿರುತ್ತದೆ. ಸಾವಿನ ಸಂಖ್ಯೆ ಹೆಚ್ಚಲು ಇದೂ ಒಂದು ಕಾರಣ ಎನ್ನುತ್ತಾರೆ ವೈದ್ಯರು.
ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ವರ್ಷವಿಡೀ ಶೇ.100ರಷ್ಟು ಭರ್ತಿಯಾಗಿರುತ್ತದೆ. ಈ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಮಕ್ಕಳ ಆರೋಗ್ಯ ಬಹುತೇಕ ಹದಗೆಟ್ಟಿರುತ್ತದೆ. ಆದರೂ ಶಕ್ತಿ ಮೀರಿ ಚಿಕಿತ್ಸೆ ನೀಡುತ್ತಿದ್ದು, ಸಾವಿನ ಪ್ರಮಾಣ ಶೇ.2ರಿಂದ 3ರಷ್ಟು ಮಾತ್ರ ಇದೆ ಎಂದು ಅಲ್ಲಿನ ನಿರ್ದೇಶಕ ಡಾ.ಸಂಜಯ್ ಹೇಳುತ್ತಾರೆ.
ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸುವ ಬಹುತೇಕ ರೋಗಿಗಳು ಅಪಘಾತಗಳಿಗೆ ಒಳಗಾಗಿರುತ್ತಾರೆ. 2022ರಲ್ಲಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗಳಲ್ಲಿ 939 ರೋಗಿಗಳು ಮೃತಪಟ್ಟಿದ್ದರೆ, 2023ರಲ್ಲಿ 965ಕ್ಕೆ ಹೆಚ್ಚಳವಾಗಿದೆ. ಈ ಎರಡೂ ಆಸ್ಪತ್ರೆಗಳಲ್ಲಿ 2023ರಲ್ಲಿ ಪ್ರತಿ ತಿಂಗಳೂ 15 ಸಾವಿರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿರುವುದು ಕಂಡು ಬಂದಿದೆ.
ವರದಿ: ಎಚ್.ಮಾರುತಿ