ಬೆಂಗಳೂರು ನಗರದಲ್ಲಿ ಮುಂಗಾರು ಮಳೆ ಶುರುವಾದರೂ ಟ್ಯಾಂಕರ್ ನೀರು ಅವಲಂಬನೆ ತಪ್ಪಿಲ್ಲ, ದರವೂ ಗಗನಮುಖಿ
ಬೆಂಗಳೂರು ನಗರದಲ್ಲಿ ಮುಂಗಾರು ಮಳೆ ಶುರುವಾದರೂ ಟ್ಯಾಂಕರ್ ನೀರು ಅವಲಂಬನೆ ತಪ್ಪಿಲ್ಲ. ಅನೇಕ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿಲ್ಲ. ಅಲ್ಲೆಲ್ಲ ಜನರು ವಾಟರ್ ಟ್ಯಾಂಕರ್ ಅನ್ನೇ ಅವಲಂಬಿಸಿದ್ದು, ಅವುಗಳ ದರವೂ ಗಗನಮುಖಿಯಾಗಿದೆ.
ಬೆಂಗಳೂರು: ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಆರಂಭವಾಗಿದೆ. ಆದರೂ ಬೆಂಗಳೂರಿನಲ್ಲಿರುವ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಸುಧಾರಿಸಿಲ್ಲ. ಹೀಗಾಗಿ ಟ್ಯಾಂಕರ್‌ಗಳ ನೀರು ಅವಲಂಬಿಸುವುದರಿಂದ ಮುಕ್ತಿ ಸಿಕ್ಕಿಲ್ಲ. ಟ್ಯಾಂಕರ್ ನೀರು ದರವೂ ಇಳಿಕೆಯಾಗಿಲ್ಲ ಎಂದು ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್‌ಗಳ ಸದಸ್ಯರು ಮತ್ತು ನಗರದ ಹೊರವಲಯದಲ್ಲಿರುವ ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿ ವಾಸಿಸುವವರು ಹೇಳುತ್ತಿದ್ದಾರೆ.
ಸರ್ಕಾರದ ನಿಗದಿತ ಮಿತಿಗಿಂತ ಹೆಚ್ಚಿನ ಬೆಲೆ ಈಗ ಚಾಲ್ತಿಯಲ್ಲಿದೆ. ಬೇಸಿಗೆ ಅವಧಿಗೆ ಎಂದು ಸರ್ಕಾರ ನಿಗದಿಪಡಿಸಿದ ಬೆಲೆ. ಅದು ಈಗ ಮುಂಗಾರು ಮಳೆ ಬಂದ ಮೇಲೆ ಅನ್ವಯವಾಗುವುದಿಲ್ಲ ಎಂದು ಟ್ಯಾಂಕರ್‌ನವರು ಹೇಳುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.
ಇಂದಿರಾನಗರ, ಶಾಂತಿನಗರ, ಜಯನಗರ ಮತ್ತು ಬನಶಂಕರಿ ಪ್ರದೇಶಗಳಲ್ಲಿ ಈಗಲೂ ನೀರಿನ ಸಮಸ್ಯೆ ಬೇಸಿಗೆಯಂತೆಯೇ ಸಂಕಷ್ಟದಲ್ಲಿದೆ. ಪೂರ್ವ ಬೆಂಗಳೂರಿನ ವೈಟ್‌ಫೀಲ್ಡ್ ಮತ್ತು ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯಂತಹ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿಲ್ಲ. ನೀರಿನ ಟ್ಯಾಂಕರ್ ಅನ್ನೇ ಜನ ನೆಚ್ಚಿಕೊಂಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಬೆಂಗಳೂರು ಜಲ ಸಂಕಷ್ಟ; ವೈಟ್‌ಫೀಲ್ಡ್‌ನಲ್ಲಿ1,200 ಲೀಟರ್‌ಗೆ 1800 ರೂಪಾಯಿ
ಕಾವೇರಿ ನೀರು ಇಲ್ಲದೇ ಇರುವ ಅನೇಕ ಬಡಾವಣೆಗಳು ಬೆಂಗಳೂರಿನಲ್ಲಿದ್ದು, ಅಲ್ಲಿ ಎಲ್ಲರೂ ನೀರಿಗಾಗಿ ವಾಟರ್ ಟ್ಯಾಂಕರ್ ಅನ್ನೇ ಅವಲಂಬಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ಟ್ಯಾಂಕರ್‌ನಲ್ಲಿ ತರುವ 1200 ಲೀಟರ್ ನೀರಿಗೆ 1800 ರೂಪಾಯಿಯನ್ನು ವಸೂಲಿ ಮಾಡಲಾಗುತ್ತಿದೆ. ಇದು ಬಿಡಬ್ಲ್ಯುಎಸ್‌ಎಸ್‌ಬಿ ನಿಗದಿ ಪಡಿಸಿರುವ ದರಕ್ಕೆ ಹೋಲಿಸಿದರೆ ದುಪ್ಪಟ್ಟು ಎಂದು ಸ್ಥಳೀಯರು ಹೇಳಿದ್ದಾಗಿ ವರದಿ ವಿವರಿಸಿದೆ.
ವರ್ತೂರು ಕೆರೆಯ ಪುನಶ್ಚೇತನ ಮಾಡುವ ಪ್ರಯತ್ನ ಜಾರಿಯಲ್ಲಿದ್ದರೂ, ಅದರಿಂದ ತತ್‌ಕ್ಷಣಕ್ಕೆ ಅಂತರ್ಜಲ ಮಟ್ಟ ಸುಧಾರಣೆ ಆಗಿಲ್ಲ. ಇದಕ್ಕೆ ಸಮಯ ಬೇಕು. ಹೀಗಾಗಿ ಬೋರ್‌ವೆಲ್‌ನಲ್ಲೂ ನೀರಿಲ್ಲ. ಇಲ್ಲಿನವರಿಗೆ ಟ್ಯಾಂಕರ್ ನೀರೇ ಆಶ್ರಯ ಎಂಬುದನ್ನು ವರದಿ ಉಲ್ಲೇಖಿಸಿದೆ.
ಇನ್ನು ಕನಕಪುರ ರಸ್ತೆಯ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ದಿನಕ್ಕೆ 50 ಟ್ಯಾಂಕರ್ ನೀರು ಬೇಕು. ತತ್‌ಕ್ಷಣಕ್ಕೆ ನೀರು ಬೇಕು ಎಂದಾರೆ ಅವರು ವಿಧಿಸುವ 1,800 ರೂಪಾಯಿಗೂ ಹೆಚ್ಚು ದರವನ್ನು ಪಾವತಿಸಬೇಕು. ಇದು ಕೆಲವು ಸಲ 200 ರೂಪಾಯಿಯಿಂದ 500 ರೂಪಾಯಿ ಹೆಚ್ಚಾಗಿರುತ್ತದೆ ಎಂಬುದನ್ನು ಅಪಾರ್ಟ್‌ಮೆಂಟ್ ನಿವಾಸಿಗಳು ಹೇಳುತ್ತಾರೆ.
ವಾಟರ್ ಟ್ಯಾಂಕರ್‌ಗಳ ನೀರು ಪೂರೈಕೆಗೆ ಏಕರೂಪದ ದರ ಇಲ್ಲ
ವಾಟರ್ ಟ್ಯಾಂಕರ್‌ಗಳ ನೀರು ಪೂರೈಕೆಗೆ ಏಕರೂಪದ ದರ ಇಲ್ಲ. ಇದು ಯಾವ ಪ್ರದೇಶ ಮತ್ತು ಎಷ್ಟು ದೂರಕ್ಕೆ ನೀರು ಪೂರೈಸಲಾಗುತ್ತದೆ ಎಂಬುದರ ಮೇಲೆ ನಿಗದಿಯಾಗುತ್ತದೆ. ಕಲ್ಯಾಣನಗರದಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ 4000 ಲೀಟರ್ ನೀರು 700 ರೂಪಾಯಿಗೆ, 7000 ಲೀಟರ್ ನೀರು 1,200 ರೂಪಾಯಿಗೆ ಪೂರೈಸಲಾಗುತ್ತದೆ. ವೈಟ್‌ಫೀಲ್ಡ್‌ನಲ್ಲಿ 5,500 ಲೀಟರ್ ನೀರು 1200 ರೂಪಾಯಿಗೆ ಪೂರೈಸಲಾಗುತ್ತಿದೆ ಎಂಬುದನ್ನು ವರದಿ ಉಲ್ಲೇಖಿಸಿದೆ.
5 ಕಿಮೀ ವ್ಯಾಪ್ತಿಯಲ್ಲಿ 12000 ಲೀಟರ್ ನೀರು ಪೂರೈಸಿದರೆ ನೀರಿನ ಟ್ಯಾಂಕರ್‌ಗಳ ಬೆಲೆ 1000 ರೂಪಾಯಿ, 6000 ಲೀಟರ್ ನೀರು 600 ರೂಪಾಯಿಗಿಂತ ಹೆಚ್ಚಿಲ್ಲ. 5-10 ಕಿಮೀ ಒಳಗೆ 12000 ಲೀಟರ್ ದೂರ: ರೂ 1200 6000 ಲೀಟರ್ ನೀರಿಗೆ 750 ರೂಪಾಯಿ ಮಿತಿಯನ್ನು ಬೆಂಗಳೂರು ಜಲ ಮಂಡಳಿ ನಿಗದಿ ಮಾಡಿತ್ತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.