ಬೆಂಗಳೂರಲ್ಲಿ ಆಪರೇಷನ್ ಡೈಮಂಡ್ ಚಾಕೊಲೇಟ್ ಯಶಸ್ವಿ: 8 ಕೋಟಿ ರೂ. ಮೌಲ್ಯದ ವಜ್ರ ವಶ, ಚಿಕ್ಕಬಳ್ಳಾಪುರದ ಇಬ್ಬರು ಅರೆಸ್ಟ್
ದುಬೈಗೆ ಕಳ್ಳ ಸಾಗಾಣೆ ಮಾಡುತ್ತಿದ್ದ 8 ಕೋಟಿ ರೂ ಮೌಲ್ಯದ ಡೈಮಂಡ್ ಅನ್ನು ಬೆಂಗಳೂರು ಏರ್ಪೋರ್ಟ್ನಲ್ಲಿ ವಶಪಡಿಸಿಕೊಂಡು ಚಿಕ್ಕಬಳ್ಳಾಪುರದ ಇಬ್ಬರನ್ನು ಬಂಧಿಸಲಾಗಿದೆ. ಹೈದರಾಬಾದ್ನಲ್ಲೂ ಈ ಜೋಡಿಯ ಸಹವರ್ತಿಗಳಿಂದ 6 ಕೋಟಿ ರೂ. ಮೌಲ್ಯದ ವಜ್ರ ವಶಪಡಿಸಿಕೊಳ್ಳಲಾಗಿದೆ. ಏಕ ಕಾಲದ ಕಾರ್ಯಾಚರಣೆಯ ರಹಸ್ಯ ಏನು? (ವರದಿ: ಎಚ್ ಮಾರುತಿ)
ಬೆಂಗಳೂರಿನಿಂದ ದುಬೈಗೆ ಕಳ್ಳ ಸಾಗಾಣೆ ಮಾಡಲಾಗುತ್ತಿದ್ದ ಸುಮಾರು 8 ಕೋಟಿ ರೂಪಾಯಿ ಮೌಲ್ಯದ ಡೈಮಂಡ್ ಅನ್ನು ಪತ್ತೆ ಹಚ್ಚುವಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇಬ್ಬರು ವ್ಯಕ್ತಿಗಳು ಈ ಡೈಮಂಡ್ ಅನ್ನು ದುಬೈಗೆ ಕಳ್ಳ ಸಾಗಾಣೆ ಮಾಡಲು ಸಂಚು ರೂಪಿಸಿದ್ದರು.
ಇವರು ನೈಸರ್ಗಿಕ ಮತ್ತು ಪ್ರಯೋಗಾಲಯಗಳಲ್ಲಿ ತಯಾರಿಸಲಾದ ಡೈಮಂಡ್ ಅನ್ನು ದುಬೈಗೆ ಕಳ್ಳ ಸಾಗಾಣೆ ಮಾಡಲು ಪ್ರಯತ್ನ ನಡೆಸಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದಲ್ಲಿ ದುಬೈಗೆ ಪ್ರಯಾಣ ಮಾಡಲು ಸಿದ್ದತೆ ನಡೆಸಿದ್ದರು. ಆರೋಪಿಗಳು ಚಿಕ್ಕಬಳ್ಳಾಪುರ ಮೂಲದದವರಾಗಿದ್ದು, 36 ಮತ್ತು 37 ವರ್ಷದ ಪುರುಷರು ಎಂದು ತಿಳಿದು ಬಂದಿದೆ.
ಡೈಮಂಡ್ ಅನ್ನು ಚಾಕೊಲೇಟ್ ಪ್ಯಾಕೆಟ್ಗಳ ಒಳಗಿಟ್ಟು ಸೂಟ್ ಕೇಸ್ನ ಒಳಗೆ ಬಚ್ಚಿಡಲಾಗಿತ್ತು. ಇವು ಮೇಲ್ನೋಟಕ್ಕೆ ಚಾಕೊಲೇಟ್ ಪ್ಯಾಕೆಟ್ಗಳಂತೆ ಕಂಡು ಬರುತ್ತಿದ್ದವು. ಇಬ್ಬರು ವ್ಯಕ್ತಿಗಳು ಡೈಮಂಡ್ ಅನ್ನು ದುಬೈಗೆ ಕಳ್ಳ ಸಾಗಾಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಡಿಆರ್ಐ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಹದ್ದಿನ ಕಣ್ಣಿಟ್ಟಿದ್ದರು. ಇವರಿಬ್ಬರನ್ನು ವಿಮಾನ ಹತ್ತುವುದಕ್ಕೂ ಮುನ್ನವೇ ಬಂಧಿಸಲಾಗಿದೆ.
ತನಿಖೆಯ ವೇಳೆಯಲ್ಲಿ ಇವರು 7.7 ಕೋಟಿ ರೂ ಮೌಲ್ಯದ ಡೈಮಂಡ್ ಅನ್ನು ಕಳ್ಳ ಸಾಗಾಣೆ ಮಾಡುತ್ತಿರುವುದು ಪತ್ತೆಯಾಗಿದೆ. ಇವರ ಸೂಟ್ ಕೇಸ್ ಆಗಲೇ ವಿಮಾನವನ್ನು ಏರಿತ್ತು. ಅಧಿಕಾರಿಗಳು ಮತ್ತೆ ಇವರ ಸೂಟ್ ಕೇಸ್ ಗಳನ್ನು ವಾಪಸ್ ತರಿಸಿ ತಪಾಸಣೆ ನಡೆಸಿದ್ದಾರೆ. ಚಾಕೊಲೇಟ್ ಪಾಕೆಟ್ಗಳ ಒಳಗೆ ಇವುಗಳನ್ನು ಅಡಗಿಸಿಡಲಾಗಿತ್ತು. ಇವರು ಕಳ್ಳ ಸಾಗಾಣೆ ಮಾಡುತ್ತಿದ್ದ ಡೈಮಂಡ್ ತೂಕ 8053 ಕ್ಯಾರೆಟ್ ಎಂದು ಗೊತ್ತಾಗಿದೆ. ಜೊತೆಗೆ ಈ ಕಳ್ಳ ಸಾಗಾಣೆದಾರರಿಂದ 4.62 ಲಕ್ಷ ರೂ. ಮೌಲ್ಯದ ಡಾಲರ್ ಮತ್ತು ದುಬೈ ಕರೆನ್ಸಿಯಾದ ದಿರ್ಹಮ್ಸ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ತನಿಖೆಯ ಸಂದರ್ಭದಲ್ಲಿ ಇವರು ಈ ಡೈಮಂಡ್ ಅನ್ನು ಪ್ರಯೋಗಾಲಯಗಳಲ್ಲಿ ತಯಾರಿಸಲಾಗಿದೆ. ಇವುಗಳನ್ನು ಮುಂಬೈನ ಡೀಲರ್ಗಳಿಂದ ಪಡೆದುಕೊಂಡಿದ್ದು, ದುಬೈಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಜೋಡಿ ನೀಡಿದ ಮಾಹಿತಿಯನ್ನಾಧರಿಸಿ ಮತ್ತಿಬ್ಬರು ಕಳ್ಳ ಸಾಗಣೆದಾರರನ್ನು ಹೈದರಾಬಾದ್ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇವರಿಂದ 6.03 ಕೋಟಿ ರೂ. ಬೆಲೆ ಬಾಳುವ ಡೈಮಂಡ್ ಮತ್ತು ಅಮೆರಿಕಾದ ಡಾಲರ್ ಸೇರಿದಂತೆ 9.83 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.
ಇವರಿಂದ ವಶಪಡಿಸಿಕೊಳ್ಳಲಾದ ಡೈಮಂಡ್ಗಳ ತೂಕ 5,569 ಕ್ಯಾರೆಟ್ ಎಂದು ತಿಳಿದು ಬಂದಿದೆ. ಇವರೂ ಸಹ ಚಾಕೊಲೇಟ್ ಪಾಕೆ್ಗಳಲ್ಲಿ ಡೈಮಂಡ್ಗಳನ್ನು ಅಡಗಿಸಿಟ್ಟಿದ್ದರು. ಈ ಕಾರ್ಯಾಚರಣೆಯನ್ನು ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಏಕಕಾಲಕ್ಕೆ ನಡೆಸಿರುವುದು ವಿಶೇಷವಾಗಿದೆ.
ವರದಿ: ಎಚ್ ಮಾರುತಿ