Karnataka Drought: ಕರ್ನಾಟಕದಲ್ಲಿ ಬರ ಪರಿಸ್ಥಿತಿ ಹಿನ್ನಲೆ ಟಾಸ್ಕ್ ಫೋರ್ಸ್‌ಗಳಿಗೆ ಕುಡಿಯುವ ನೀರು, ಮೇವಿನ ನಿರ್ವಹಣೆ ಹೊಣೆ, 5 ಪಾಯಿಂಟ್ಸ್
ಕರ್ನಾಟಕದ ನೈಸರ್ಗಿಕ ವಿಕೋಪಗಳ ನಿರ್ವಣೆ ಪರಾಮರ್ಶೆಗೆ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವಿನ ನಿರ್ವಹಣೆಯ ಜವಾಬ್ದಾರಿಯನ್ನು ಶಾಸಕರ ಅಧ್ಯಕ್ಷತೆಯ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್‌ಗಳಿಗೆ ವಹಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವಿನ ನಿರ್ವಹಣೆಯ ಜವಾಬ್ದಾರಿಯನ್ನು ಶಾಸಕರ ಅಧ್ಯಕ್ಷತೆಯ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್‌ಗಳಿಗೆ ವಹಿಸಲು ಸಚಿವ ಸಂಪುಟದ ಉಪ ಸಮಿತಿ ತೀರ್ಮಾನಿಸಿದೆ .
ವಿಧಾನ ಸೌಧದಲ್ಲಿರುವ ಸಚಿವ ಸಂಪುಟದ ಉಪ ಸಮಿತಿ ಕೊಠಡಿಯಲ್ಲಿ ಗುರುವಾರ (ನ.16) ನಡೆದ ನೈಸರ್ಗಿಕ ವಿಕೋಪಗಳ ನಿರ್ವಣೆ ಪರಾಮರ್ಶೆಗೆ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿಯಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸಹಕಾರ ಸಚಿವ ಕೆ.ಎನ್ ರಾಜಣ್ಣ ಭಾಗವಹಿಸಿ ಹಲವು ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬರ ಮತ್ತು ಮೇವು ನಿರ್ವಹಣೆಗೆ 5 ಅಂಶದ ನಿರ್ಣಯ ಮತ್ತು ಸೂಚನೆ
1. ಪ್ರತಿ ತಾಲೂಕಿನಲ್ಲಿ ಟಾಸ್ಕ್ ಫೋರ್ಸ್ ಕುಡಿಯುವ ನೀರಿನ ಕೊರತೆ ಇರುವ ಗ್ರಾಮಗಳನ್ನು ಗುರುತಿಸಿ ಟ್ಯಾಂಕರ್ ಅಥವಾ ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದು ಯಾವುದೇ ಲೋಪಗಳಾಗದಂತೆ ನೀರು ಪೂರೈಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
2. ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ 783 ಕೋಟಿ ರೂಪಾಯಿ ಅನುದಾನವನ್ನು ಬರ ನಿರ್ವಹಣೆಗೆ ಜವಾಬ್ದಾರಿಯುತವಾಗಿ ಬಳಸಲು ನಿರ್ದೇಶನ ನೀಡಲು ಸಮಿತಿ ತೀರ್ಮಾನಿಸಿತು.
3. ಪ್ರಿವೆಂಟಿವ್ ಸೋಯಿಂಗ್ ಇನ್ವೋಕ್ ಅಡಿಯಲ್ಲಿ ಬೆಳೆ ಹಾನಿಗೊಳಗಾದ ರೈತರ ಖಾತೆಗೆ 230 ಕೋಟಿ ರೂಪಾಯಿ ವಿಮೆ ಪಾವತಿ ಪ್ರಕ್ರಿಯೆ ಪ್ರಾರಂಭಿಸಿದ್ದು ತಕ್ಷಣ ರೈತರ ಖಾತೆಗೆ ಹಣ ಜಮೆ ಮಾಡಲು ವಿಮಾ ಕಂಪನಿಗಳಿಗೆ ಸೂಚಿಸಲು ಕೃಷಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
4. ಕೃಷಿ ,ತೋಟಗಾರಿಕೆ , ರೇಷ್ಮೆ ಯಲ್ಲಿ ನೀರಿನ ಮಿತ ಬಳಕೆ ಉತ್ತೇಜಿಸಲು ಹನಿ ನೀರಾವರಿ ಸಹಾಯಧನಕ್ಕೆ 800 ಹೆಚ್ಚುವರಿ ಅನುದಾನ ಕೋರಲು ಪ್ರಸ್ತಾವನೆ ಸಲ್ಲಿಸಲು ಸಹ ಸಚಿವ ಸಂಪುಟ ಉಪ ಸಮಿತಿಯ ತೀರ್ಮಾನಿಸಿತು.
5. ಫ್ರೂಟ್ಸ್ ಐ ಡಿಯಲ್ಲಿ ಬೆಳೆ ವಿವರಗಳ ಜೊತೆಗೆ ಎಲ್ಲ ಆರ್.ಟಿ.ಸಿ ಗಳ ಪ್ರಕಾರ ರೈತರ ಸಂಪೂರ್ಣ ಜಮೀನಿನ ವಿವರಗಳನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲು ಒಂದು ವಾರದ ವಿಶೇಷ ಅಭಿಯಾನ ನಡೆಸಲು ಸಮಿತಿಯು ಕಂದಾಯ, ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿತು.