ಮದ್ಯ ಕುಡಿದು ಬಸ್ ಚಾಲನೆ ಆರೋಪ; 2,762 ಖಾಸಗಿ ಬಸ್‌ಗಳ ತಪಾಸಣೆ ಸೇರಿ ಪ್ರಮುಖ ಅಪರಾಧ ಪ್ರಕರಣಗಳ ವಿವರ ಇಲ್ಲಿದೆ
Bengaluru Crime News: ಬೆಂಗಳೂರಿನಲ್ಲಿ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ 12 ಖಾಸಗಿ ಬಸ್ ಚಾಲಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಬೆಂಗಳೂರು: ಮದ್ಯ ಕುಡಿದು ಚಾಲನೆ ಮಾಡುತ್ತಿದ್ದ 12 ಖಾಸಗಿ ಬಸ್ ಚಾಲಕರ ವಿರುದ್ಧ ಬೆಂಗಳೂರಿನ ಸಂಚಾರ ಪೊಲೀಸರು ಪ್ರಕರಣ (Bengaluru Crime News) ದಾಖಲಿಸಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಶನಿವಾರ ತಡರಾತ್ರಿವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, 2,762 ಖಾಸಗಿ ಬಸ್‌ಗಳ ಚಾಲಕರನ್ನು ತಪಾಸಣೆ ನಡೆಸಿದ್ದಾರೆ.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ದೂರದ ಪ್ರಯಾಣ ಮಾಡುವ ಖಾಸಗಿ ಬಸ್‌ಗಳ ಚಾಲಕರು ಮದ್ಯ ಕುಡಿದು ಬಸ್ ಚಾಲನೆ ಮಾಡುತ್ತಿದ್ದಾರೆ. ಇದರಿಂದ ಪ್ರಯಾಣ ಬೆಳೆಸಲು ಆತಂಕ ಉಂಟಾಗಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಚಾಲಕರು ಕುಡಿದು ಬಸ್ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿತ್ತು. ಹೀಗಾಗಿ, ವಿಶೇಷ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಲ್ಕೊಮೀಟರ್ ಬಳಸಿ ಪ್ರತಿಯೊಬ್ಬ ಚಾಲಕರ ತಪಾಸಣೆ ನಡೆಸಲಾಯಿತು. ಈ ಪೈಕಿ 12 ಚಾಲಕರು ಮದ್ಯ ಕುಡಿದಿರುವುದು ಪತ್ತೆಯಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿ, ಬಸ್‌ಗಳನ್ನು ಜಪ್ತಿ ಮಾಡಲಾಗಿದೆ. ಬಸ್ ಮಾಲೀಕರಿಗೂ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
14 ದ್ವಿಚಕ್ರ ವಾಹನ, 13 ಕ್ಯಾಬ್ ಹಾಗೂ 4 ಆಟೊ ಸೇರಿದಂತೆ 31 ವಾಹನ ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮದ್ಯ ಕುಡಿದು ಚಾಲನೆ ಮಾಡುತ್ತಿದ್ದ ಈ ಚಾಲಕರಿಗೆ ನೋಟಿಸ್ ನೀಡಲಾಗಿದ್ದು, ಈ ಎಲ್ಲ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರೌಡಿ ಹತ್ಯೆಗೆ ಜೈಲಿನಿಂದಲೇ ಸುಪಾರಿ
ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ರೌಡಿ ಸತೀಶ್ ಅಲಿಯಾಸ್ ಮಿಲ್ಟ್ರಿ ಹತ್ಯೆಗೆ ಜೈಲಿನಿಂದಲೇ ಸುಪಾರಿ ನೀಡಿರುವಾ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪೊಲೀಸರ ತನಿಖೆಯಿಂದ ಈ ಮಾಹಿತಿ ತಿಳಿದು ಬಂದಿದೆ. ಮಾಯಾ ಬಜಾರ್ ನಿವಾಸಿ ಸತೀಶ್‌ನನ್ನು ಜನವರಿ 24ರಂದು ಆತನ ಮನೆಗೆ ನುಗ್ಗಿ ಹತ್ಯೆ ಮಾಡಲಾಗಿತ್ತು. ಆರೋಪಿಗಳಾದ ಸುನೀಲ್ ಜೇಮ್ಸ್, ಕ್ಲೇಮೆಂಟ್, ಪ್ರಶಾಂತ್ ಹಾಗೂ ಧನುಷ್‌ನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಸತೀಶ್ ಹಾಗೂ ಇನ್ನೊಬ್ಬ ರೌಡಿ ಶಿವಕುಮಾರ್ ಅಲಿಯಾಸ್ ಬಬ್ಲಿ ನಡುವೆ ಹಳೆಯ ದ್ವೇಷವಿತ್ತು. ಕೊಲೆಯ ಹಿಂದೆ ಶಿವಕುಮಾರ್ ಕೈವಾಡವಿರುವ ಅನುಮಾನವಿತ್ತು. ಬಂಧಿಸಲಾಗಿದ್ದ ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಶಿವಕುಮಾರ್ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎಂದು ಗೊತ್ತಾಗಿದೆ.
ಪ್ರಕರಣವೊಂದರಲ್ಲಿ ರೌಡಿ ಶಿವಕುಮಾರ್ ಜೈಲು ಸೇರಿದ್ದ. ಜೈಲಿನಲ್ಲಿದ್ದುಕೊಂಡೇ ಸತೀಶ್‌ನನ್ನು ಕೊಲೆ ಮಾಡಲು ಮೂರು ತಿಂಗಳಿನಿಂದ ಸಂಚು ರೂಪಿಸುತ್ತಿದ್ದ. ಇದಕ್ಕಾಗಿ ತನ್ನ ಸಹಚರರಿಗೆ ರೂಪಾಯಿ 30 ಲಕ್ಷಕ್ಕೆ ಸುಪಾರಿ ನೀಡಿದ್ದ. ಶಿವಕುಮಾರ್ ನಿರ್ದೇಶನದಂತೆ ಆರೋಪಿಗಳು ಮನೆಗೆ ನುಗ್ಗಿ ಸತೀಶ್‌ನನ್ನು ಕೊಂದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಂಕಿ ಅವಘಡ, ಮೂವರು ಕಾರ್ಮಿಕರ ಸಾವು
ಬೆಂಗಳೂರಿನ ಕೆಂಗೇರಿ ಸಮೀಪ ಇರುವ ರಾಮಸಂದ್ರದಲ್ಲಿರುವ ಸುಗಂಧ ದ್ರವ್ಯ ತಯಾರಿಕೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮೂವರು ಕಾರ್ಮಿಕರು ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ. ಸುಗಂಧ ದ್ರವ್ಯ ತಯಾರಿಸಲು ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು. ಇದೇ ರಾಸಾಯನಿಕಗಳನ್ನು ಡ್ರಂಗಳಲ್ಲಿ ತುಂಬಿಡಲಾಗಿತ್ತು. ಭಾನುವಾರ ರಾಸಾಯನಿಕ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ. ಆಗ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಐವರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantimes.com).
ವಿಭಾಗ