ಕನ್ನಡ ಸುದ್ದಿ  /  Karnataka  /  Bengaluru News Engineering Graduate Arrested For Stealing Laptops From Paying Guests And Other Crime News Mrt

Bengaluru Crime: ಬೆಂಗಳೂರು ಪೇಯಿಂಗ್ ಗೆಸ್ಟ್‌ಗಳಲ್ಲಿ ಲ್ಯಾಪ್‌ಟಾಪ್‌ ಕಳವು ಮಾಡುತ್ತಿದ್ದ ಇಂಜಿನಿಯರಿಂಗ್ ಪದವೀಧರೆಯ ಬಂಧನ

Bengaluru Crime: ಬೆಂಗಳೂರಿನ ವಿವಿಧ ಪ್ರದೇಶಗಳ ಪೇಯಿಂಗ್ ಗೆಸ್ಟ್‌ಗಳಲ್ಲಿ ಲ್ಯಾಪ್‌ಟಾಪ್‌ ಕಳವು ಮಾಡುತ್ತಿದ್ದ ಇಂಜಿನಿಯರಿಂಗ್ ಪದವೀಧರೆಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ರೈಲು ಪ್ರಯಾಣಿಕರ ಪ್ರಜ್ಞೆ ತಪ್ಪಿಸಿ ಕಳ್ಳತನ ಮಾಡುತ್ತಿದ್ದು ಮೂವರು ಅಂತಾರಾಜ್ಯ ಕಳ್ಳರ ಬಂಧನವಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ
ಬೆಂಗಳೂರು ಅಪರಾಧ ಸುದ್ದಿ

ಬೆಂಗಳೂರಿನ ಪೇಯಿಂಗ್ ಗೆಸ್ಟ್‌ಹೌಸ್‌ಗಳಲ್ಲಿ (ಬೆಂಗಳೂರು ಪಿಜಿಗಳಲ್ಲಿ) ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ಇಂಜಿನಿಯರಿಂಗ್ ಪದವೀಧರೆ ಜಶು ಅಗರವಾಲ್ ಎಂಬುವರನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಈಕೆ ಕಳೆದ ಮೂರು ವರ್ಷಗಳಿಂದ ಕಳವು ಮಾಡುತ್ತಿದ್ದು, 10 ಲಕ್ಷ ರೂಪಾಯಿ ಮೌಲ್ಯದ 24 ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ ಮೂಲದ ಈಕೆ ಇಂಜಿನಿಯರಿಂಗ್ ಪದವೀಧರೆ. ಶಿಕ್ಷಣ ಪಡೆಯುತ್ತಿದ್ದಂತೆ ಈಕೆ ಮುಂಬೈನ ನೊಯ್ಡಾದ ಬ್ಯಾಂಕ್‌ ಒಂದರಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಕಡಿಮೆ ಸಂಬಳ ಎಂಬ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ನೀಡಿ ನಂತರ ಬೆಂಗಳೂರಿಗೆ ಆಗಮಿಸಿದ್ದಾರೆ. ಉದ್ಯೋಗದ ಹುಡುಕಾಟ ನಡೆಸಿದ ಈಕೆ ಬೆಂಗಳೂರಿಗೆ ವಿಮಾನದಲ್ಲಿ ಬಂದು ಹೋಗಿ ಮಾಡುತ್ತಿದ್ದರು. ಹತ್ತಾರು ಕಂಪನಿಗಳಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೂ ಎಲ್ಲಿಯೂ ಕೆಲಸ ಸಿಕ್ಕಿರುವುದಿಲ್ಲ. ಬೆಂಗಳೂರಿಗೆ ಬಂದಾಗಲೆಲ್ಲಾ ಈಕೆ ವೈಟ್ ಫೀಲ್ಡ್, ಬೆಳ್ಳಂದೂರು, ಮಹದೇವಪುರ ಪ್ರದೇಶದ ಪೇಯಿಂಗ್ ಗೆಸ್ಟ್ ಹೌಸ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಇದೇ ಕಟ್ಟಡಗಳಲ್ಲಿರುವ ಇತರ ಮಹಿಳೆಯರು ತಿಂಡಿ, ಊಟ ಮತ್ತಿತರ ಕೆಲಸಗಳ ಮೇಲೆ ಹೊರ ಹೋದಾಗ ಅವರ ಕೊಠಡಿಗಳಿಗೆ ನುಗ್ಗಿ ಲ್ಯಾಪ್‌ಟಾಪ್ ಕದಿಯುತ್ತಿದ್ದರು.

ಕಳವು ಮಾಡಿದ ಲ್ಯಾಪ್‌ಟಾಪ್‌ಗಳನ್ನು ಲ್ಯಾಪ್‌ಟಾಪ್ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಹೀಗೆ ಗಳಿಸಿದ ಹಣದಿಂದ ಜೀವನ ನಡೆಸುತ್ತಿದ್ದರು. ಆರೋಪಿ ಜಶು ಇತ್ತೀಚೆಗೆ ಮತ್ತೆ ಬೆಂಗಳೂರಿಗೆ ಆಗಮಿಸಿದಾಗ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲು ಪ್ರಯಾಣಿಕರ ಪ್ರಜ್ಞೆ ತಪ್ಪಿಸಿ ಕಳ್ಳತನ, ಮೂವರ ಬಂಧನ

ರೈಲು ಪ್ರಯಾಣದಲ್ಲಿ ಮತ್ತು ಬರಿಸುವ ಔಷಧಿ ಬೆರಸಿರುವ ಬಾದಾಮಿ ಹಾಲು ಕುಡಿಸಿ ಕಳ್ಳತನ ಮಾಡುತ್ತಿದ್ದ ಮೂವರು ಖತರ್‌ನಾಕ್ ಕಳ್ಳರನ್ನು ಬಂಧಿಸುವಲ್ಲಿ ಬೆಂಗಳೂರು ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಲ್ಕತ ಮೂಲದ 55 ವರ್ಷದ ಶೌಕತ್ ಆಲಿ ಮತ್ತು51 ವರ್ಷದ ಸತ್ತಾರ್ ಆಲಿಯಾಸ್ ಅಜಾದ್ ಹಾಗೂ ಉತ್ತರ ಪ್ರದೇಶ ಮೂಲದ 58 ವರ್ಷದ ಮೊಹಮ್ಮದ್ ಅವದ್ ಬಂಧಿತ ಆರೋಪಿಗಳು. ಆಲಿ ಮತ್ತು ಸತ್ತಾರ ಸಂಬಂಧಿಕರೂ ಹೌದು.

ಅರಸೀಕೆರೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಪ್ರಕರಣದ ತನಿಖೆ ನಡೆಸಿದ ಬೆಂಗಳೂರು ರೈಲ್ವೇ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಇವರಿಂದ 150 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೇ ಎಸ್.ಪಿ. ಸೌಮ್ಯಲತಾ ತಿಳಿಸಿದ್ದಾರೆ. ಇದೊಂದು ಅಂತಾರಾಜ್ಯ ತಂಡವಾಗಿದ್ದು ಹಲವಾರು ರಾಜ್ಯಗಳಲ್ಲಿ ಕಳ್ಳತನ ಮಾಡಿರುವ ಅನುಮಾನಗಳಿವೆ ಎಂದೂ ಅವರು ಶಂಕಿಸಿದ್ದಾರೆ.

ರಾಜಸ್ಥಾನದ ವೃದ್ದ ದಂಪತಿ ಜೋದ್ ಪುರದಿಂದ ಬೆಂಗಳೂರಿಗೆ 2023 ಡಿಸೆಂಬರ್ 16ರಂದು ಪ್ರಯಾಣಿಸುತ್ತಿದ್ದರು. ಇದೇ ರೈಲನ್ನು ಹತ್ತಿದ್ದ ಮೂವರು ಆರೋಪಿಗಳು ಇವರನ್ನು ಪರಿಚಯಿಸಿಕೊಂಡಿದ್ದರು. ಅವರ ಜೊತೆ ತುಂಬಾ ಸಲುಗೆಯಿಂದಿದ್ದು, ಅವರಿಗೆ ಸಹಾಯ ಮಾಡುವ

ರೀತಿಯಲ್ಲಿ ನಟಿಸಿದ್ದರು. ಈ ಆರೋಪಿಗಳು ಅವರಿಗೆ ಮತ್ತು ಬರಿಸುವ ಔಷಧಿ ಬೆರೆಸಿದ ಬಾದಾಮಿ ಹಾಲನ್ನು ಕುಡಿಸಿದ್ದರು. ಹಾಲು ಕುಡಿದ ದಂಪತಿ ಪ್ರಜ್ಞೆ ತಪ್ಪಿದಾಗ ಅವರ ಬಳಿಯಿದ್ದ 20 ಸಾವಿರ ರೂ. ನಗದು ಮತ್ತು 120 ಗ್ರಾಂ ಚಿನ್ನವನ್ನು ದೋಚಿದ್ದರು. ಈ ಸಂಬಂಧ ವೃದ್ಧ ದಂಪತಿ ಅರಸಿಕೆರೆಯಲ್ಲಿ ದೂರು ನೀಡಿದ್ದರು.

ಈ ಆರೋಪಿಗಳು ಉತ್ತರ ಭಾರತದಿಂದ ದಕ್ಷಿಣದ ರಾಜ್ಯಗಳಿಗೆ ಪದೇಪದೇ ಸಂಚರಿಸುತ್ತಿದ್ದರು. ತತ್ಕಾಲ್ ಮೂಲಕ ಟಿಕೆಟ್ ಕಾಯ್ದಿರಿಸುತ್ತಿದ್ದ ಆರೋಪಿಗಳು ನಕಲಿ ದಾಖಲೆ ಬಳಸಿ ಖರೀದಿಸಿದ್ದ ಮೊಬೈಲ್ ನಂಬರ್ ಮತ್ತು ನಕಲಿ ಆಧಾರ್ ನೀಡುತ್ತಿದ್ದರು. ರೈಲಿನಲ್ಲಿ ಪ್ರಯಾಣ ಮಾಡುವಾಗ ಯಾರ ಬಳಿ ನಗದು ಮತ್ತು ಚಿನ್ನಾಭರಣಗಳಿವೆ ಎಂದು ತಿಳಿದುಕೊಂಡು ಅವರ ವಿಶ್ವಾಸ ಗಳಿಸುತ್ತಿದ್ದರು. ನಂತರ ಅವರಿಗೆ ಮತ್ತು ಬರಿಸುವ ಬಾದಾಮಿ ಹಾಲು ನೀಡಿ ಅವರಿಗೆ ಪ್ರಜ್ಞೆ ಬರಿಸುತ್ತಿದ್ದರು. ನಂತರ ಕಳ್ಳತನ ಮಾಡಿ ಮುಂದಿನ ನಿಲ್ದಾಣದಲ್ಲಿ ಇಳಿದು ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

IPL_Entry_Point