ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಬಾಗಿಲು ಅಳವಡಿಸಲು ಬಿಎಂಆರ್‌ಸಿಎಲ್ ತೀರ್ಮಾನ; ಪ್ರಯಾಣಿಕರ ಒತ್ತಡದ ನಂತರ ನಿರ್ಧಾರ
Bengaluru Metro News; ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಬಾಗಿಲು ಅಳವಡಿಸಲು ಬಿಎಂಆರ್‌ಸಿಎಲ್ ತೀರ್ಮಾನ ತೆಗೆದುಕೊಂಡಿದೆ. ಪ್ರಯಾಣಿಕರ ಒತ್ತಡದ ನಂತರ ನಿರ್ಧಾರ ಪ್ರಕಟವಾಗಿದ್ದು, ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಈ ಬಾಗಿಲು ಸದ್ಯಕ್ಕಿಲ್ಲ. ಈ ನಡುವೆ ಪ್ರಯಾಣ ದರ ಹೆಚ್ಚಳಕ್ಕೆ BMRCL ಚಿಂತನೆ ನಡೆಸಿದೆ. (ವರದಿ-ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ನಮ್ಮ ಮೆಟ್ರೋ ಹಳಿಗಳ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಬೆಂಗಳೂರು ಮೆಟ್ರೋ ರೈಲ್ವೇ ಕಾರ್ಪೋರೇಷನ್ ನಿಗಮ ಲಿ.(ಬಿಎಂಆರ್ ಸಿಎಲ್) ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ( ಪಿಎಸ್ ಡಿ)ಗಳನ್ನು ಅಳವಡಿಸಲು ಮುಂದಾಗಿದೆ.
ನಮ್ಮ ಮೆಟ್ರೋದ ಹೊಸ ಮಾರ್ಗಗಳಲ್ಲಿ ಈ ಪಿಎಸ್ ಡಿ ಗಳನ್ನು ಅಳವಡಿಸಲು ಖಾಸಗಿ ಕಂಪನಿಯೊಂದು 152 ಕೋಟಿ ರೂ.ಗಳಿಗೆ ಟೆಂಡರ್ ಪಡೆದುಕೊಂಡಿದೆ. ಹೊಸ ಮಾರ್ಗಗಳ ಜೊತೆಗೆ ಗುಲಾಬಿ ಮಾರ್ಗದ ಗೊಟ್ಟಿಗೆರೆಯಿಂದ ನಾಗಾವಾರ ನಿಲ್ದಾಣ ಹಾಗೂ ನೀಲಿ ಮಾರ್ಗದ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಪಿಎಸ್‌ಡಿಗಳನ್ನು ಅಳವಡಿಸಲಾಗುತ್ತದೆ.
ಹಳೆಯ ನಮ್ಮ ಮೆಟ್ರೋ ಮಾರ್ಗಗಳಲ್ಲಿಯೂ ಪಿಎಸ್‌ಡಿಗಳನ್ನು ಅಳವಡಿಸಲು ಸಾರ್ವಜನಿಕರಿಂದ ಬೇಡಿಕೆ ಹೆಚ್ಚುತ್ತಿದೆ. ನಮ್ಮ ಮೆಟ್ರೋ ಮಾರ್ಗದ ಎಲ್ಲ ನಿಲ್ದಾಣಗಳಲ್ಲೂ ಪಿಎಸ್‌ಡಿಗಳನ್ನು ಅಳವಡಿಸಲು ಅಂದಾಜು 700-800 ಕೋಟಿ ರೂ.ಗಳ ಅವಶ್ಯಕತೆ ಇದೆ. ಈ ವೆಚ್ಚವನ್ನು ಭರಿಸಲು ಮೆಟ್ರೋ ಪ್ರಯಾಣದ ಟಿಕೆಟ್ ದರಗಳನ್ನು ಹೆಚ್ಚಿಸಲು ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ ಎಂದೂ ತಿಳಿದು ಬಂದಿದೆ.
ನಮ್ಮ ಮೆಟ್ರೋ ಅಧಿಕಾರಿಯೊಬ್ಬರ ಪ್ರಕಾರ ಪ್ರತಿಯೊಂದು ನಿಲ್ದಾಣಕ್ಕೆ ಪಿಎಸ್ ಡಿ ಅಳವಡಿಸಲು ಕನಿಷ್ಠ 8-10 ಕೋಟಿ ರೂ.ವೆಚ್ಚವಾಗುತ್ತದೆ..ಈಗಾಗಲೇ ಕಾರ್ಯಾಚರಣೆಯಲ್ಲಿರುವ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಪಿಎಸ್‌ಡಿ ಅಳವಡಿಸಲು 800 ಕೋಟಿ ರೂ.ಗಳು ಬೇಕಾಗುತ್ತದೆ. ಟಿಕೆಟ್ ದರ ಹೆಚ್ಚಳ ಮಾಡಲುವ ನಿರ್ಧಾರಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಪಿಎಸ್‌ಡಿ ಅಳವಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನ ಪಡೆಯಬೇಕೇ ಹೊರತು ಟಿಕೆಟ್ ದರ ಹೆಚ್ಚಿಸಿ ದಿನ ನಿತ್ಯ ಪ್ರಯಾಣಿಸುವ ಸಾರ್ವಜನಿಕರ ಮೇಲೆ ಹೊರೆ ಹೇರಬಾರದು ಎಂದು ಆಗ್ರಹಪಡಿಸುತ್ತಾರೆ.
ಪಿಎಸ್‌ಡಿ ಬಾಗಿಲು ಹೇಗೆ ಸುರಕ್ಷಿತ?
ಹಳಿಗಳ ಮೇಲೆ ಯಾರೂ ನುಗ್ಗದಂತೆ ಪ್ಲಾಟ್ ಫಾರ್ಮ್ ಗಳಲ್ಲಿ ಪಿಎಸ್‌ಡಿಗಳನ್ನು ಅಳವಡಿಸಲಾಗುತ್ತದೆ. ರೈಲು ಬಂದ ನಂತರ ಪಿಎಸ್‌ಡಿ ಬಾಗಿಲುಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತವೆ. ಪ್ರಯಾಣಿಕರು ಇಳಿದು, ಹತ್ತಿದ ನಂತರ ಬಾಗಿಲು ಮುಚ್ಚಿಕೊಳ್ಳುತ್ತವೆ. ಜಪಾನ್ ಮೂಲದ ಈ ತಂತ್ರಜ್ಞಾನವನ್ನು ಹಲವಾರು ದೇಶಗಳು ಅಳವಡಿಸಿಕೊಂಡಿವೆ. ಭಾರತದಲ್ಲಿಯೂ ದೆಹಲಿ, ಚೆನ್ನೈ ಮತ್ತು ಮುಂಬೈ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್ ಡಿ ಬಾಗಿಲುಗಳನ್ನು ಅಳವಡಿಸಲಾಗಿದೆ.
ಕೇವಲ ಆಯ್ದ ನಿಲ್ದಾಣಗಳಲ್ಲಿ ಪಿಎಸ್ ಡಿ ಅಳವಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕಡ್ಡಾಯವಾಗಿ ಎಲ್ಲ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸಬೇಕು ಎಂದು ಪ್ರಯಾಣಿಕರೊಬ್ಬರು ಆಗ್ರಹಪಡಿಸುತ್ತಾರೆ. ಈಗಾಗಲೇ ಕಾರ್ಯಾರಂಭ ಮಾಡುತ್ತಿರುವ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಪಿಎಸ್‌ಡಿ ಅಳವಡಿಸುವುದು ಕಷ್ಟ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ವಾದಿಸುತ್ತಾರೆ.
ಪ್ರಯಾಣಿಕರ ಒತ್ತಡಕ್ಕೆ ಮಣಿದ ಬಿಎಂಆರ್‌ಸಿಎಲ್
ಸಾರ್ವಜನಿಕರಿಂದ ಒತ್ತಡ ಹೆಚ್ಚಾದ ನಂತರ ಈ ಮಾರ್ಗಗಳಲ್ಲಿಯೂ ಅಳವಡಿಸಲು ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೆಟ್ರೋ ನಿಲ್ದಾಣಗಳಲ್ಲಿ ರೈಲಿಗಾಗಿ ಕಾಯುವಾಗ ಕೆಲವು ಪ್ರಯಾಣಿಕರು ಉದ್ದೇಶಪೂರ್ವಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಹಳಿಗಳ ಮೇಲೆ ಜಿಗಿಯುತ್ತಾರೆ. ಇನ್ನೂ ಕೆಲವರು ತಮ್ಮ ಬೇಜವಬ್ಧಾರಿಯಿಂದ ಮೊಬೈಲ್ ಅಥವಾ ಯಾವುದೇ ವಸ್ತು ಹಳಿಗಳ ಮೇಲೆ ಬಿದ್ದಾಗ ಧುಮುಕುತ್ತಾರೆ. ಒಮ್ಮೊಮ್ಮೆ ಮಕ್ಕಳು ಆಟವಾಡುತ್ತ ಹಳಿಗಳ ಮೇಲೆ ಬಿದ್ದಿರುವ ಉದಾಹರಣೆಗಳೂ ಉಂಟು. ಈ ಎಲ್ಲ ಕಾರಣಗಳಿಗಾಗಿ ಪಿಎಸ್‌ಡಿ ಬಾಗಿಲುಗಳನ್ನು ಅಳವಡಿಸಲು ಪ್ರಯಾಣಿಕರು ಆಗ್ರಹಪಡಿಸುತ್ತಲೇ ಬಂದಿದ್ದರು.
(ವರದಿ-ಎಚ್.ಮಾರುತಿ, ಬೆಂಗಳೂರು)