ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: 24 ವರ್ಷದ ಅಸಾಮಾನ್ಯ ವಂಚಕನಿಗೆ ದುಡ್ಡು ಇಲ್ದೇ ಇದ್ರೂ ಸ್ಟಾರ್ ಹೋಟೆಲ್‌ ವಾಸ, ಬಿಎಂಡಬ್ಲ್ಯು ಕಾರು ಬೇಕಂತೆ

Bengaluru Crime: 24 ವರ್ಷದ ಅಸಾಮಾನ್ಯ ವಂಚಕನಿಗೆ ದುಡ್ಡು ಇಲ್ದೇ ಇದ್ರೂ ಸ್ಟಾರ್ ಹೋಟೆಲ್‌ ವಾಸ, ಬಿಎಂಡಬ್ಲ್ಯು ಕಾರು ಬೇಕಂತೆ

ಬೆಂಗಳೂರಲ್ಲಿ 24 ವರ್ಷದ ಅಸಾಮಾನ್ಯ ವಂಚಕನಿಗೆ ದುಡ್ಡು ಇಲ್ದೇ ಇದ್ರೂ ಸ್ಟಾರ್ ಹೋಟೆಲ್‌ ವಾಸ, ಬಿಎಂಡಬ್ಲ್ಯು ಕಾರು ಬೇಕು ಎನ್ನುತ್ತ ಸೆರೆಮನೆ ಸೇರಿದ ಘಟನೆ ನಡೆದಿದೆ. ಪ್ರತ್ಯೇಕ ಪ್ರಕರಣ ಒಂದರಲ್ಲಿ, ಸಹೋದ್ಯೋಗಿ ಜೊತೆ ಮಾತನಾಡಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ಪತಿಯ ವಿರುದ್ದ ಪತ್ನಿ ದೂರು ನೀಡಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ
ಬೆಂಗಳೂರು ಅಪರಾಧ ಸುದ್ದಿ

ಬೆಂಗಳೂರು: ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಮೂಲಕ ಹಣ ಪಾವತಿಸಿದ ನಕಲಿ ರಶೀದಿ ತೋರಿಸಿ ಬೆಂಗಳೂರಿನ ಪಂಚತಾರಾ ಹೋಟೆಲ್‌ವೊಂದರ ಸಿಬ್ಬಂದಿಯನ್ನು ವಂಚಿಸಿದ್ದ ಆರೋಪದ ಮೇಲೆ ಬೋರಾಡ ಸುನೀಲ್‌ ಎಂಬಾತನನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆಂಧ್ರಪ್ರದೇಶ ವಿಶಾಖಪಟ್ಟಣದ ಸುನೀಲ್ (24 ವರ್ಷ) ವಿರುದ್ಧ ಹೋಟೆಲ್‌ ವ್ಯವಸ್ಥಾಪಕರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಸುನೀಲ್‌ನನ್ನು ಬಂಧಿಸಿದ್ದಾರೆ.

ಈತ ಒಮ್ಮೊಮ್ಮೆ ಮಿಲಿಟರಿ ಅಧಿಕಾರಿಯೆಂದು ಕೆಲವೊಮ್ಮೆ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಹಲವರನ್ನು ವಂಚಿಸಿದ್ದಾನೆ. ಈ ಎಲ್ಲ ಆರೋಪಗಳನ್ನು ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುನಿಲ್ ವಂಚಿಸಿದ್ದು ಹೀಗೆ

ಆನ್‌ಲೈನ್ ಮೂಲಕ ಪಂಚತಾರಾ ಹೋಟೆಲ್‌ನ ಕೊಠಡಿಯನ್ನು ಮಾರ್ಚ್ 31ರಂದು ಆರೋಪಿ ಬುಕ್ ಮಾಡಿದ್ದ. ಹೋಟೆಲ್‌ಗೆ ಕರೆ ಮಾಡಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಆಗಮಿಸಲು ಬಿಎಂಡಬ್ಲ್ಯು ಕಾರು ಕಳುಹಿಸಲು ಕೇಳಿದ್ದ. ಆತನ ಬೇಡಿಕೆಗೆ ಒಪ್ಪಿ ವಿಮಾನ ನಿಲ್ದಾಣಕ್ಕೆ ಕಾರು ಕಳುಹಿಸಲಾಗಿತ್ತು ಎಂದು ಹೋಟೆಲ್ ವ್ಯವಸ್ಥಾಪಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೊಠಡಿಯ ಕೀ ಕೊಡುವುದಕ್ಕೂ ಮುನ್ನ ಹಣ ಪಾವತಿ ಮಾಡುವಂತೆ ಕೇಳಿದಾಗ ಯುಪಿಐ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ 17,346 ರೂಪಾಯಿ ‍ಪಾವತಿ ಮಾಡಿರುವ ನಕಲಿ ರಶೀದಿ ತೋರಿಸಿದ್ದ. ಹಣ ಬಂದಿಲ್ಲ ಎಂದು ಹೋಟೆಲ್ ಸಿಬ್ಬಂದಿ ಹೇಳಿದಾಗ ತಾಂತ್ರಿಕ ಸಮಸ್ಯೆಯಿದ್ದು ನಿಧಾನವಾಗಿ ತಲುಪಲಿದೆ ಎಂದೂ ಆರೋಪಿ ನಂಬಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸ್ವಲ್ಪ ಸಮಯದ ನಂತರ ಸುನೀಲ್ ಬೆಂಗಳೂರಿನಲ್ಲಿ ಓಡಾಡಲು ಬಿಎಂಡಬ್ಲ್ಯು ಕಾರು ಬೇಕು ಎಂಬ ಬೇಡಿಕೆ ಇಟ್ಟಿದ್ದ. ಮತ್ತೆ ಹೋಟೆಲ್ ಸಿಬ್ಬಂದಿ ಇದೇ ಕಾರಿನ ವ್ಯವಸ್ಥೆ ಮಾಡಿದ್ದರು. ಅಲ್ಲಲ್ಲಿ ಓಡಾಡಿದ ನಂತರ ವಿಮಾನ ನಿಲ್ದಾಣಕ್ಕೆ ಬಿಡಲು ವಾಹನ ಚಾಲಕನಿಗೆ ಹೇಳಿದಾಗ ಚಾಲಕ ಒಪ್ಪದೆ ಮರಳಿ ಹೋಟೆಲ್ ಗೆ ಕರೆದುಕೊಂಡು ಬಂದಿದ್ದ.

ಕೊಠಡಿ ಹಾಗೂ ಕಾರು ಬಾಡಿಗೆಯ ಹಣ 80 ಸಾವಿರ ರೂಪಾಯಿ ಕಟ್ಟಲು ಹೇಳಿದಾಗ ಆತ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದ. ಆದರೆ, ಅದರಲ್ಲಿ ಹಣವಿರಲಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಈತನ ವಂಚನೆ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದ್ಯೋಗಿ ಜತೆ ಮಾತನಾಡಿದ್ದಕ್ಕೆ ಹಲ್ಲೆ; ಪತಿ ವಿರುದ್ದ ಪತ್ನಿ ದೂರು

ಸಹೋದ್ಯೋಗಿ ಜತೆ ಮಾತನಾಡಿದೆ ಎಂಬ ಒಂದೇ ಕಾರಣಕ್ಕೆ ನನ್ನ ಗಂಡ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜೆ.ಪಿ. ನಗರದ 5ನೇ ಹಂತದ ನಿವಾಸಿಯಾಗಿರುವ ಈ ಮಹಿಳೆ ದೂರು ನೀಡಿದ್ದಾರೆ. ವೃತ್ತಿಯಿಂದ ಆಟೊ ಚಾಲಕನಾಗಿರುವ ಈ ಮಹಿಳೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರ ಮಹಿಳೆಗೆ ಆಟೋ ಚಾಲಕನ ಜೊತೆ 2021ರಲ್ಲಿ ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ಮಹಿಳೆ, ಆಹಾರ ತಯಾರಿಕೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಸಂಬಂಧ ಆಗಾಗ್ಗೆ ಸಹದ್ಯೋಗಿಗಳ ಜೊತೆ ಮಾತನಾಡುತ್ತಿರಬೇಕಾಗುತ್ತದೆ. ಇದೇ ಕಾರಣಕ್ಕೆ ಸಿಟ್ಟಾಗಿದ್ದ ಪತಿ ನನ್ನ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದರು. ಕೆಲಸದ ವಿಚಾರಕ್ಕೆ ಇತ್ತೀಚೆಗೆ ಸಹೋದ್ಯೋಗಿಯೊಬ್ಬರು ಚರ್ಚಿಸಲು ಮನೆಗೆ ಆಗಮಿಸಿದ್ದರು. ಆಗ ಮನೆಗೆ ಮರಳಿದ ಪತಿಯು ಜೋರು ಗಲಾಟೆ ಮಾಡಿ ಚಾಕುವಿನಿಂದ ನನಗೆ ಇರಿದಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ. ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

IPL_Entry_Point