Bengaluru Crime: ನ್ಯಾಯಬೆಲೆ ಅಂಗಡಿ ಪರವಾನಗಿ ವರ್ಗಾವಣೆ, ಲಂಚ ಪಡೆದ ಇಬ್ಬರು ನೌಕರರು ಲೋಕಾಯುಕ್ತ ಬಲೆಗೆ
ಬೆಂಗಳೂರಿನ ಬನಶಂಕರಿಯ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸೊಸೈಟಿಯ ನ್ಯಾಯಬೆಲೆ ಅಂಗಡಿ ಪರವಾನಗಿ ವರ್ಗಾವಣೆ ಪ್ರಕರಣದಲ್ಲಿ ಲಂಚ ಪಡೆದ ಇಬ್ಬರು ನೌಕರರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ತಪಾಸಣೆಗೆ ಬಂದ ಮಹಿಳೆಯ ಮಾಂಗಲ್ಯ ಸರ ಕಳವು ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನ್ಯಾಯಬೆಲೆ ಅಂಗಡಿಯೊಂದರ ಪರವಾನಗಿಯ ವರ್ಗಾವಣೆ ಆದೇಶ ನೀಡಲು ರೂಪಾಯಿ 2.5 ಲಕ್ಷ ಲಂಚ ಪಡೆದ ಆರೋಪದ ಮೇಲೆ ಬೆಂಗಳೂರಿನ ಬನಶಂಕರಿಯ ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸೊಸೈಟಿಯ (ಟಿಎಪಿಸಿಎಂಎಸ್) ಕಾರ್ಯದರ್ಶಿ ಉಮೇಶ್ ಹಾಗೂ ಉತ್ತರಹಳ್ಳಿ ಮತ್ತು ಕೆಂಗೇರಿ ಹೋಬಳಿ ಆಹಾರ ನಿರೀಕ್ಷಕ ಶ್ರೀಧರ್ ಅವರನ್ನು ಲೋಕಾಯುಕ್ತ ಪೊಲೀಸರ ಬಂಧಿಸಿದ್ದಾರೆ.
ಅಬ್ದುಲ್ ಮನ್ನಾನ್ ಅವರ ಹೆಸರಿನಲ್ಲಿದ್ದ ನ್ಯಾಯಬೆಲೆ ಅಂಗಡಿಯನ್ನು ಅವರ ಪುತ್ರ ರಫೀಕ್ ಹೆಸರಿಗೆ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಹೃದ್ರೋಗಿಯಾಗಿರುವ ಕಾರಣ ಮಗನ ಹೆಸರಿಗೆ ವರ್ಗಾವಣೆ ಮಾಡಲು ಕೋರಿದ್ದರು. ನ್ಯಾಯಾಲಯ ಕೂಡ ಅವರ ಬೇಡಿಕೆಯನ್ನು ಮಾನ್ಯ ಮಾಡಿತ್ತು. ನ್ಯಾಯಾಲಯದ ಆದೇಶದಂತೆ ಪರವಾನಗಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಪರವಾನಗಿ ವರ್ಗಾವಣೆಗೆ ರೂ. 2.5 ಲಕ್ಷ ಲಂಚ ಕೊಡುವಂತೆ ಉಮೇಶ್ ಮತ್ತು ಶ್ರೀಧರ್ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ ರೂ. 1 ಲಕ್ಷ ಪಡೆದಿದ್ದರು. ಬಾಕಿ ಮೊತ್ತವನ್ನು ಉಮೇಶ್ ಬಳಿ ತಲುಪಿಸುವಂತೆ ಶ್ರೀಧರ್ ತಿಳಿಸಿದ್ದರು. ಲಂಚ ಬೇಡಿಕೆ ಕುರಿತು ಅಬ್ದುಲ್ ಮನಾನ್ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ನೀಡಿದ್ದರು.
ರಫೀಕ್ ಅವರು ಬನಶಂಕರಿ ಟಿಎಪಿಸಿಎಂಸ್ ಕಚೇರಿಗೆ ಸೋಮವಾರ ಸಂಜೆ ತೆರಳಿ, ಶ್ರೀಧರ್ ಸೂಚನೆಯಂತೆ ಉಮೇಶ್ ಅವರಿಗೆ ರೂ. 1.5 ಲಕ್ಷ ನೀಡಿದರು. ಕೂಡಲೇ ದಾಳಿಮಾಡಿದ ಲೋಕಾಯುಕ್ತ ಪೊಲೀಸರು, ಇಬ್ಬರನ್ನೂ ಬಂಧಿಸಿದರು ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕದ ಎಸ್‌ಪಿ–1 ಶ್ರೀನಾಥ್ ಜೋಶಿ ಮಾರ್ಗದರ್ಶನದಲ್ಲಿ ಮತ್ತು ಡಿವೈಎಸ್‌ಪಿಗಳಾದ ಪ್ರದೀಪ್ ಮತ್ತು ಬಸವರಾಜ್ ಮಗ್ದುಂ ಕಾರ್ಯಾಚರಣೆಯ ಮೇಲುಸ್ತುವಾರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ಮಂಜು ಬಿ.ಪಿ., ಆನಂದ್ ಎಚ್.ಎಂ., ಕೇಶವ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ತಪಾಸಣೆಗೆ ಬಂದ ಮಹಿಳೆಯ ಮಾಂಗಲ್ಯ ಸರ ಕದ್ದ ಆರೋಪಿಗಳು
ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿದ್ದು, ಈ ಸಂಬಂಧ ಬೆಂಗಳೂರಿನ ಗೋವಿಂದರಾಜನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪಟ್ಟೇಗಾರಪಾಳ್ಯದ ನಿವಾಸಿಯಾಗಿರುವ 36 ವರ್ಷದ ಮಹಿಳೆ ಕಳ್ಳತನ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೂಡಲಪಾಳ್ಯದ ಆಸ್ಪತ್ರೆಯೊಂದರ ನರ್ಸ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರ ಮಹಿಳೆಯು ಎದೆ ನೋವು ಬಂದ ಕಾರಣಕ್ಕೆ ತಪಾಸಣೆಗೆಂದು ಪತಿಯ ಜೊತೆಯಲ್ಲಿ ಆಸ್ಪತ್ರೆಗೆ ಹೋಗಿದ್ದರು. ತಪಾಸಣೆ ಮಾಡಿದ್ದ ವೈದ್ಯೆ, ಇಸಿಜಿ ಮಾಡಿಸಲು ಹೇಳಿದ್ದರು. ಆಸ್ಪತ್ರೆಯಲ್ಲಿದ್ದ ಆರೋಪಿಗಳು, ಮಹಿಳೆಯನ್ನು ಇಸಿಜಿ ಕೊಠಡಿಗೆ ಕರೆದೊಯ್ದಿದ್ದರು. ಪತಿ ಹೊರಗಡೆ ಕಾಯುತ್ತಿದ್ದರು.
ಮಹಿಳೆಯ ಕತ್ತಿನಲ್ಲಿ 2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಾಂಗಲ್ಯ ಸರವಿತ್ತು. ಇಸಿಜಿ ಮಾಡುವುದಕ್ಕೂ ಮುನ್ನ ಅದನ್ನು ತೆಗೆಯುವಂತೆ ಆರೋಪಿಗಳು ಹೇಳಿದ್ದರು. ಸರ ತೆಗೆದು ಪತಿಗೆ ನೀಡಲು ಮುಂದಾದಾಗ ಪತಿಯನ್ನು ಕೊಠಡಿಯೊಳಗೆ ಕರೆಸಲು ಆರೋಪಿಗಳು ನಿರಾಕರಿಸಿದ್ದರು. ಚಿನ್ನದ ಸರವನ್ನು ತಲೆದಿಂಬಿನ ಕೆಳಗೆ ಇರಿಸುವಂತೆ ಆರೋಪಿಗಳು ತಿಳಿಸಿದ್ದರು. ಅವರು ಹೇಳಿದಂತೆ ಮಹಿಳೆ, ದಿಂಬಿನ ಕೆಳಗೆ ಸರವನ್ನು ಇಟ್ಟದ್ದರು.
ಇಸಿಜಿ ಮುಗಿಯುತ್ತಿದ್ದಂತೆ ಆರೋಪಿಗಳು, ಅವಸರವಾಗಿ ಮಹಿಳೆಯನ್ನು ಕೊಠಡಿಯಿಂದ ಹೊರಗೆ ಕಳುಹಿಸಿದ್ದರು. ದಿಂಬಿನ ಕೆಳಗೆ ಸರ ಇಟ್ಟಿದ್ದನ್ನು ಮರೆತು ಮಹಿಳೆ, ಮನೆಗೆ ಹೋಗಿದ್ದರು. ಸ್ನಾನ ಮಾಡುವ ಸಂದರ್ಭದಲ್ಲಿ ಮಾಂಗಲ್ಯ ಸರ ಇಲ್ಲದಿರುವುದು ಗೊತ್ತಾಗಿತ್ತು. ಆಸ್ಪತ್ರೆಗೆ ಹೋಗಿ ಕೇಳಿದಾಗ, ತಮಗೆ ಏನು ಗೊತ್ತಿಲ್ಲವೆಂದು ಹೇಳಿದ್ದರು. ನಂತರ, ಮಹಿಳೆ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantime.com)