ಕರ್ನಾಟಕದಲ್ಲೇ ಕನ್ನಡಿಗರಿಗಿಲ್ಲ ಜಾಗ: ಇದು ಪಪ್ಪಾಯ ಕಥೆ ಅಲ್ಲ, ಪರಂಗಿ ಹಣ್ಣನ್ನು ಮಾರುವ ಪರನಾಡಿನವರ ಕಥೆ -ರೇಣುಕಾ ಮಂಜುನಾಥ್ ಬರಹ
ರೇಣುಕಾ ಮಂಜುನಾಥ: ಬೆಂಗಳೂರಿನಲ್ಲಿ ತಮಿಳುನಾಡಿನವರು ಎಷ್ಟು ಜನ ಇದ್ದಾರೆ ಎಂದು ಲೆಕ್ಕ ಹಾಕಲು ಹೋದರೆ ಕನ್ನಡಿಗರೇ ಕಡಿಮೆ ಸಿಗುತ್ತಾರೆ. ಇಷ್ಟಿದ್ದೂ ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಸ್ವತಂತ್ರವಾಗಿ ಬದುಕುವ ಅವಕಾಶವೇ ಇಲ್ಲ ಅಂದ್ರೆ ಹೇಗೆ?
ಬೆಂಗಳೂರಿನ ಸಿಟಿ ಮಾರುಕಟ್ಟೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತರಕಾರಿ ಮಾರುವವರ ಪೈಕಿ ಕನ್ನಡಿಗರು ಬಹಳ ಕಡಿಮೆ. ಇದೇಕೆ ಹೀಗೆ ಎನ್ನುವ ಪ್ರಶ್ನೆ ಉತ್ತರ ಹುಡುಕಲು ಯತ್ನಿಸಿದ್ದಾರೆ ಹಿರಿಯ ಬರಹಗಾರ್ತಿ ರೇಣುಕಾ ಮಂಜುನಾಥ್. ಪರಂಗಿ ಹಣ್ಣಿನ ನೆಪದಲ್ಲಿ ಆರಂಭವಾಗಿರುವ ಈ ಬರಹವು ನಿಧಾನವಾಗಿ ರೈತರು, ಸಣ್ಣ ವ್ಯಾಪಾರಿಗಳು, ಕನ್ನಡಿಗರು, ಕನ್ನಡಪರ ಸಂಘಟನೆಗಳ ಕಾರ್ಯನಿರ್ವಹಣೆಯನ್ನೂ ಪರಾಮರ್ಶಿಸುತ್ತದೆ. ರೇಣುಕಾ ಮಂಜುನಾಥ್ ಅವರ ಫೇಸ್‌ಬುಕ್ ಪೋಸ್ಟ್ ಅನ್ನು ಇಲ್ಲಿ ಯಥಾವತ್ತು ಮರುಪ್ರಕಟಿಸಲಾಗಿದೆ.
ನಮ್ಮಲ್ಲಿ ಎಷ್ಟುಮಂದಿಗೆ ಈ ವಿಷಯ ಗೊತ್ತಿದೆಯೋ ತಿಳಿಯದು. ಈ ಪರಂಗಿಹಣ್ಣು ನಮ್ಮಲ್ಲಿ ಹೇರಳವಾಗಿ ಲಭ್ಯ, ಜೊತೆಗೆ ಸಿಹಿ. ಹಾಗೇ ಅದು ಬಹಳ ಕಡಿಮೆದರದಲ್ಲಿ ಲಭ್ಯ. ಎಲ್ಲಕ್ಕಿಂತ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇಷ್ಟು ವಿಷಯ ಎಲ್ಲರಿಗೂ ಗೊತ್ತು. ಆದರೆ ಹೀಗೆ ಹಸಿರು-ಹಳದಿ ಮಿಶ್ರಿತವಾದ ಪುಟ್ಟಪುಟ್ಟ ಪರಂಗಿಹಣ್ಣುಗಳು , ಪರಂಗಿದೇಶದಲ್ಲಿ ಲಭ್ಯವಿಲ್ಲ. ಅಲ್ಲಿ ಸಿಗುವ ಗಡವಗಾತ್ರದ ಪರಂಗಿಹಣ್ಣು ಒಂದು ಆರೇಳೆಂಟು ಡಾಲರ್/ಪೌಂಡ್ಸ್‌ಗೆ ಸಿಗುತ್ತೆ. ಆ ಪಾಟಿ ಹಣತೆತ್ತು ತಂದು ಹೆಚ್ಚಿದರೆ ಒಮ್ಮೆಗೇ ಮೂರ್ನಾಲ್ಕು ಮಂದಿ ತಿಂದು ಮುಗಿಸಬೇಕು. ಬಾಯ್ಗಿಟ್ಟರೆ ಸಪ್ಪೆ ಕಹಿ. ನೋಡಲಷ್ಟೇ ಸಪಾಟಾಗಿ ಇರುತ್ತೆ! ಇನ್ನು ತೆತ್ತ ಹಣ ನೆನಪಾಗಿ ಎಸೆಯಲಾರದೆ ತಿನ್ನಲು ಪ್ರಯತ್ನಿಸಿ, ಅದು ಸಂಜೆಯವರೆಗೂ ಡೈನಿಂಗ್ ಟೇಬಲ್ ಮೇಲೇ ಇರುತ್ತೆ. ನಂತರ ಡಸ್ಟ್‌ಬಿನ್ ಪಾಲಾಗುತ್ತೆ.
ಇದು ಪಪ್ಪಾಯ ಕಥೆ ಅಲ್ಲ
ಆಗೆಲ್ಲಾ , ನನಗೆ ನಮ್ಮ ನೆಲ ನಮ್ಮ ಊರು ನಮ್ಮ ಸಮೃದ್ಧಿಯಬಗ್ಗೆ ಇನ್ನಿಲ್ಲದ ಅಭಿಮಾನ, ಜೊತೆಗೆ ಸ್ವದೇಶ ತಲುಪಿದಾಗ ತಪ್ಪದೆ ದಿನವೂ ಈ ಪಪ್ಪಾಯಿ ತಿನ್ನಬೇಕೆಂದು ಅನಿಸಿಬಿಡುತ್ತೆ! ಈಗ ಇದಕ್ಕೆ ಸುಸಮಯ. ಎಲ್ಲಿ ನೋಡಿ ಪಪ್ಪಾಯ ಹೇರಳವಾಗಿ ಬಂದಿದೆ. ನಮ್ಮ ಮನೆಯ ಬಳಿ ಇರುವ ಒಂದು ಹಣ್ಣಿನಂಗಡಿಯಲ್ಲಿ ಇದು ಕೆಜಿಗೆ 35. ನಾನಂತೂ ದಿನಕ್ಕೊಂದು ಹಣ್ಣು ಹೆಚ್ಚಿ ಸ್ವಾಹಾ ಮಾಡುತ್ತಿದ್ದೇನೆ. ಆದರೆ, ನಾನು ಹೇಳಹೊರಟ ವಿಷಯ ಮತ್ತು ನಿಮ್ಮ ಗಮನಕ್ಕೆ ಬಂದಿಲ್ಲದೇ ಇರಬಹುದಾದ ವಿಷಯ ಮತ್ತೊಂದಿದೆ.
ಆಗ ನಮ್ಮ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು ಬಿಜೆಪಿ ಜೆಡಿಎಸ್‌ನಂತೆ ಮೈತ್ರಿಯಾಗಿದ್ದವು, ಈಗ ಒಂದರೊಳಗೊಂದು ವಿಲೀನವಾಗಿವೆ! ಹಾಗಾಗಿ. ಈಗಲೂ ಮೈಸೂರುಬ್ಯಾಂಕ್ ಎಂದೇ ಕರೆಸಿಕೊಳ್ಳುವ , ಕೆಂಪೇಗೌಡ ರಸ್ತೆ ಅವಿನ್ಯೂ ರಸ್ತೆಯನ್ನು ಒಂದುಗೂಡಿಸುವ , ನಗರದ ಹೃದಯಭಾಗದಲ್ಲಿರುವ ಮೈಸೂರ್‌ಬ್ಯಾಂಕ್ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಆಗಿದೆ! ನನಗೆ ಮುಖ್ಯ ಕಛೇರಿಕೆಲಸಗಳಲ್ಲಿ ಮೊದಲು ಸೇಂಟ್ ಮಾರ್ಕ್ಸ್ ರಸ್ತೆಗೇ ಹೋಗಬೇಕಿದ್ದ ಕೆಲವು ಈಗ ಈ ಹೃದಯಭಾಗದ ಮೊದಲಿನ ಮೈಸೂರ್ ಬ್ಯಾಂಕಲ್ಲೇ ಆಗಬೇಕಿದೆ! ಹಾಗಾಗಿ, ನಾಲ್ಕೈದು ಬಾರಿ ಅಲ್ಲಿಗೆ ಎಡತಾಕಿದ್ದೇನೆ.
ಅಲ್ಲಿನ ಕೆಲಸ ಮುಗಿದಮೇಲೆ ಅವಿನ್ಯೂರಸ್ತೆಯ ಕಡೆ ಎರಡು ಹೆಜ್ಜೆ ಹಾಕಿದರೆ , ನನ್ನಿಷ್ಟದ ಒಂದು ಹಿತ್ತಾಳೆ ಅಂಗಡಿ ಇದೆ. ಅಲ್ಲೆಲ್ಲಾ ಒಂದಷ್ಟು ಕಣ್ಣಾಡಿಸಿ ಮರಳಿ ಕೆಂಪೇಗೌಡ ರಸ್ತೆಯ ಕಡೆಗೆ ಹೆಜ್ಜೆಹಾಕುವಾಗ ತರಕಾರಿಗಳ ಸಾಲುಸಾಲು ಗಾಡಿಗಳಿರುತ್ತವೆ. ಕೊಳ್ಕೊಳ್ಳಬೇಕು ಅನಿಸುವಂತಿರುತ್ತವೆ. ಇನ್ನು ಕೊಳ್ಳಲು ನಿಂತಾಗ, ಪ್ರತಿ ಗಾಡಿಯಬಳಿ ನಿಂತಿರುವ ಹೆಂಗಸರೆಲ್ಲಾ 'ತಮಿಳರು'!! ಹುಡುಕಿದರೂ ಒಬ್ಬನೇ ಒಬ್ಬ ಕನ್ನಡಿಗ ವ್ಯಾಪಾರಿ ಇಲ್ಲ! ಅಷ್ಟೂ ಮಂದಿ ತಮಿಳುನಾಡಿನವರೇ?
ಬೆಳೆ ಕನ್ನಡಿಗರದ್ದು
ಬೆಳೆಯುವವರೆಲ್ಲಾ ಕನ್ನಡದ ರೈತರು. ಮಾರುವವರು ತಮಿಳರು! ಅದೂ ನಗರದ ಹೃದಯಭಾಗದಲ್ಲಿ! ಅಷ್ಟೂ ಹೆಂಗಸರು ಹೇಗಿದ್ದಾರೆಂದರೆ ಅಹಂಕಾರವೇ ಮೈವೆತ್ತಂತೆ. ಸ್ವಲ್ಪವೂ ವಿನಯವಿಲ್ಲ. ದುಬಾರಿ ಬೆಲೆ! ಪರಂಗಿಹಣ್ಣು ಎಷ್ಟೆಂದು ಕೇಳಿದೆ, ಕೆಜಿ ಅರವತ್ತು! ಎಲ್ಲಿಂದ ತರ್ತೀಯ ಅಂದರೆ ಪಕ್ಕದ ಸಿಟಿಮಾರ್ಕೆಟ್! ಅದೂ ಅದೇ ರಸ್ತೆಯ ಕೊನೆಗಿದೆ! ನಮ್ಮ ಮನೆಗೆ ತರಬೇಕಾದರೆ ಆರೇಳು ಕಿಲೋಮೀಟರ್ ! ಇಲ್ಲಿ 35, ಅಲ್ಲಿ 60!
ಬಜಾರಿನ ತುಂಬ ತಮಿಳು ಭಾಷಿಕರು
ಹಾಗೆ ಎಲ್ಲವೂ ದುಬಾರಿ, ಜೊತೆಗೆ ಬಜಾರಿಯರೇ ಇದ್ದಾರೆ ಬಾಜಾರಿನ ತುಂಬ!ನನ್ನನ್ನು ಬಹಳ ಕಾಡಿದ್ದೆಂದರೆ. ಒಂದಷ್ಟು ತರಕಾರಿ ಕೊಂಡು, ಅಲ್ಲೇ ಇದ್ದ ಆಟೋ ಹತ್ತಿದೆ. ಆಟೋದವನ ಬಳಿ ಹರಟುವಾಗ ಅವನ ಆಟೋದಲ್ಲಿ ಮಂಜುನಾಥಸ್ವಾಮಿ, ಶಂಕರ್‌ನಾಗ್ ಫೋಟೊ ನೋಡಿ ಕನ್ನಡದವನೇ ಅಂತ ಖಚಿತವಾಗಿ, "ಏನಪ್ಪಾ ಇಲ್ಲಿ ಬರೀ ತಮಿಳರೇ ಇದ್ದಾರೆ ತರಕಾರಿ ವ್ಯಾಪಾರಕ್ಕೆ!?" ಅಂದೆ. ಅದಕ್ಕವನು "ಇವರು ಒಬ್ಬ ಕನ್ನಡಿಗನೂ ಇಲ್ಲಿ ಬಂದು ಗಾಡಿ ನಿಲ್ಲಿಸಲು ಬಿಡೋಲ್ಲ" ಅಂದ. ನಿಜಕ್ಕೂ ನನ್ನನ್ನು ಬಹಳ ಕಾಡಿದ ವಿಷಯ ಇದು!
ಮಾಲ್ ಆಫ್ ಏಷ್ಯಾ ಬಗ್ಗೆಯಷ್ಟೇ ಹೋರಾಡಿದರೆ ಸಾಕಾ?
ಅದು ಹೇಗೆ ಅಂದೆ, ಅದಕ್ಕವನು ಸಿಟಿಮಾರ್ಕೆಟ್‌ನಲ್ಲೂ ಇವರದ್ದೇ ದರ್ಬಾರ್ ಅಂದ! ಐದು ದಶಕವಾಯ್ತು, ನಾನು ಬೆಂಗಳೂರು ಸೇರಿ. ಸಿಟಿಮಾರ್ಕೆಟ್‌ಗೆ ಐದು ಬಾರಿ ಹೋಗಿದ್ದರೆಚ್ಚು! ಇಂತಹಾ ಕಹಿ ಬೆಳವಣಿಗೆಗಳೇ ನಮ್ಮರಿವಿಗೆ ಬಂದಿರುವುದಿಲ್ಲ! ಮಾಲ್ ಆಫ್ ಏಷ್ಯಾಗೆ ಅಷ್ಟು ಹೋರಾಡಿದ ಕನ್ನಡ ಸಂಘಟನೆಗಳು ನಗರದ ಮಧ್ಯಭಾಗದಲ್ಲಿ ನಮ್ಮ ಗ್ರಾಮೀಣ ಜನರೇ ನಮ್ಮ ಬೆಳೆ ಮಾರುವಂತೆ ವ್ಯವಸ್ಥೆಮಾಡಲು ಸಾಧ್ಯವಿಲ್ಲವೆ? ಅದುಹೇಗೆ ಹೀಗೆ ಆಕ್ರಮಣ ಸಾಧ್ಯ? ಗ್ರಾಮೀಣ ಯುವಕರು ಇಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲವೆ?
ಯಾಕೋ ಇದು ಬಹಳ. ಕಾಡಿದ ವಿಷಯ ಖಂಡಿತ, ಬೆಂಗಳೂರು ಮಹಾನಗರ ನಮ್ಮವರಿಗಷ್ಟೇ ಇರಬೇಕೆಂಬ ಅನಿಸಿಕೆ ಮಹಾತಪ್ಪು. ಈ ನಗರ ಮಹಾನಗರ ಅನಿಸಿಕೊಂಡಿರುವಲ್ಲಿ ಇಡೀ ದೇಶದ ಜನ ಸೇರಿರುವುದೂ ಕಾರಣ. ನಾವಷ್ಟೇ ನಗರವನ್ನು ಬೆಳೆಸಲು ಸಾಧ್ಯವಿಲ್ಲ. ಅಂತಹಾ ಮೂಲಭೂತವಾದಿಯಾಗಿ ನಾನು ಯೋಚಿಸುವುದೂ ಇಲ್ಲ.
ಆದರೆ, ನಮ್ಮವರಿಗೇ ಅವಕಾಶ ಕೊಡದಂತೆ ಈ ನೆಲಮಟ್ಟದ ಅಶಿಕ್ಷಿತ ವರ್ಗಕ್ಕೂ ಸಹಾಯವಾಗುವ ವ್ಯಾಪಾರ ವಹಿವಾಟು ನೆರೆ ರಾಜ್ಯದವರ ಪಾಲಾಗಿರುವ ಬಗ್ಗೆ ಮನಸ್ಸು ಪಿಚ್ಚೆನಿಸಿತು ಕನ್ಬಡ ಸಂಘಟನೆಗಳು ಕನ್ಬಡದ ಫಲಕಗಳಿಗೆ ಹೋರಾಡುವಷ್ಟೇ ಮುಖ್ಯ ಇದೂ ಆಗಿರುತ್ತೆ. ಈ ವಿಷಯ ಹಂಚಿಕೊಳ್ಳಬೇಕೆನಿಸಿತು. ಮಾಹಿತಿಗ್ರಹಿಕೆಯಲ್ಲಿ ತಪ್ಪಿದ್ದರೆ ಸರಿಯಾಗಿ ಗೊತ್ತಿರುವವರು ಸರಿಪಡಿಸಬಹುದು.
ಇಲ್ಲಾದರೂ ರಿಸರ್ವೇಶನ್ ಬೇಕಿದೆ
ರೇಣುಕಾ ಮಂಜುನಾಥ್ ಅವರ ಪೋಸ್ಟ್ ಸಾಕಷ್ಟು ಜನರ ಗಮನ ಸೆಳೆದಿದೆ. 156 ಕ್ಕೂ ಮಂದಿ ಲೈಕ್ ಮಾಡಿದ್ದು, 11 ಜನರು ಶೇರ್ ಮಾಡಿದ್ದಾರೆ. 53 ಮಂದಿ ಕಾಮೆಂಟ್ ಮಾಡಿದ್ದಾರೆ. ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ರಮೇಶ್ ಭಟ್ ಬಾಳಗೋಡು, ‘ನೀವು ಹೇಳಿದ್ದಕ್ಕೆ ನನ್ನದೊಂದು ವೋಟ್ ಇದೆ. ಕನ್ನಡಿಗರಿಗೆ ಇಲ್ಲಾದರೂ ರೀಸರ್ವೇಶನ್ ಸಿಗುವಂತಾಗಬೇಕು. ರಾಜಕೀಯ ಪಕ್ಷಗಳನ್ನೋ ಕನ್ನಡ ಹೋರಾಟಗಾರರನ್ನೋ ನಂಬಿದರೆ ಇದು ಆಗಲಿಕ್ಕಿಲ್ಲ ಅನ್ನಿಸುತ್ತದೆ’ ಎಂದು ಹೇಳಿದ್ದಾರೆ.
ರೇಣುಕಾ ಮಂಜುನಾಥ್ ಅವರ ಫೇಸ್‌ಬುಕ್ ಪೋಸ್ಟ್ ಇಲ್ಲಿದೆ
ವಿಭಾಗ