ಮಗಳನ್ನು ನೋಡುವ ತವಕದಿಂದ ಕಸದ ಗಾಡಿಯಲ್ಲಿ ಅಪಾರ್ಟ್‌ಮೆಂಟ್ ಪ್ರವೇಶಿಸಿದ ಅಪ್ಪ, ಕೊನೆಗೂ ಹತ್ತಿದ್ದು ಕೋರ್ಟ್ ಮೆಟ್ಟಿಲು; ಏನಿದು ಘಟನೆ?
ಮಕ್ಕಳ ಮೇಲಿನ ಪ್ರೀತಿಗೆ ಬೆಲೆ ಕಟ್ಟಲಾಗದು, ಹೆತ್ತಮಕ್ಕಳನ್ನು ನೋಡಲು ಅಪ್ಪ ಅಥವಾ ಅಮ್ಮ ಎಂತಹುದೇ ರಿಸ್ಕ್ ತೆಗೆದುಕೊಳ್ಳಲೂ ಹಿಂಜರಿಯವುದಿಲ್ಲ. ಮಗಳನ್ನು ನೋಡಲು ಈ ವ್ಯಕ್ತಿ ಅನುಸರಿಸಿದ ಮಾರ್ಗ ಎಂತಹವರ ಕಣ್ಣಂಚಿನಲ್ಲೂ ನೀರಾಡಿಸದೆ ಬಿಡದು. ಆತ ತೆಗೆದುಕೊಂಡ ರಿಸ್ಕ್‌ನಿಂದಾಗಿ ಆತ ನ್ಯಾಯಾಲಯಕ್ಕೂ ಅಲೆದಾಡಬೇಕಾಯಿತು. ಆ ನೈಜಕತೆಯ ಹೂರಣ ಇಲ್ಲಿದೆ. (ಎಚ್.ಮಾರುತಿ)
ಬೆಂಗಳೂರು: ಪತಿ ಪತ್ನಿ ಇಬ್ಬರೂ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ. ಇವರ ಪುತ್ರಿ ತಾಯಿಯೊಂದಿಗೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದಾರೆ. ತಂದೆಯು ಮಗಳನ್ನು ನೋಡುವ ಸಮಯವನ್ನು ತಾಯಿ ಬದಲಾಯಿಸಿರುತ್ತಾರೆ. ಆದರೆ ಮಗಳ ಮೇಲಿನ ಮೇಲಿನ ವಾತ್ಸಲ್ಯ ಕೇಳಬೇಕಲ್ಲ! ಮಾಜಿ ಪತ್ನಿ ನಿಗದಿಪಡಿಸಿದ ಸಮಯದವರೆಗೂ ಅಪ್ಪನಿಗೆ ಕಾಯುವ ತಾಳ್ಮೆ ಇರಲಿಲ್ಲ. ಹಾಗಾಗಿ ಆತ ಅಪಾರ್ಟ್‌ಮೆಂಟ್ ಪ್ರವೇಶಿಸಿ ಕಸದ ಗಾಡಿಯಲ್ಲಿ ಅವಿತಿಟ್ಟುಕೊಂಡು ಮಗಳನ್ನು ನೋಡುವ ಪ್ರಯತ್ನ ಮಾಡುತ್ತಾನೆ. ಇದನ್ನು ಅರಿತ ಪತ್ನಿ ಪತಿಯ ಮೇಲೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುತ್ತಾರೆ. ಆದರೆ ನ್ಯಾಯಾಲಯ ಈ ಮೊಕದ್ದಮೆಯನ್ನು ವಜಾ ಮಾಡುತ್ತದೆ.
ಮಗಳನ್ನು ನೋಡುವ ತಂದೆಯ ಕುತೂಹಲವನ್ನು ತಾಯಿ ಅತಿಕ್ರಮಣ ಪ್ರವೇಶ ಎಂದು ಬಿಂಬಿಸಿ ಪುತ್ರಿಯೊಂದಿಗೆ ಹತ್ತಿರವಾಗುವ ಕ್ರಿಮಿನಲ್ ಉದ್ದೇಶ ಹೊಂದಿದ್ದಾರೆ ಎಂದು ಆಕೆ ವಾದ ಮಂಡಿಸಿದ್ದರು.
ಏನಿದು ಪ್ರಕರಣ?
ಈ ದಂಪತಿಗಳು ದೆಹಲಿಯ ಸಾಕೇತ್ ಕೋರ್ಟ್‌ನಲ್ಲಿ 21, ಸೆ. 2020ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿರುತ್ತಾರೆ. ನಂತರ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಅಪ್ರಾಪ್ತ ವಯಸ್ಸಿನ ಪುತ್ರಿ ತಾಯಿಯ ಜೊತೆ ಇರಲು ಇಬ್ಬರೂ ಒಪ್ಪಿಗೆ ಸೂಚಿಸಿರುತ್ತಾರೆ. ಪ್ರತಿ ಶನಿವಾರ 3ರಿಂದ 5 ಗಂಟೆಯೊಳಗೆ ಮಗಳನ್ನು ಭೇಟಿ ಮಾಡಲು ನ್ಯಾಯಾಲಯ ಅವಕಾಶ ಕಲ್ಪಿಸಿರುತ್ತದೆ. ಇದೇ ಪದ್ದತಿ ಮುಂದುವರೆದಿರುತ್ತದೆ.
ಇದನ್ನೂ ಓದಿ: Bangalore Crime: ಬೆಂಗಳೂರು ವ್ಯಕ್ತಿಗೆ ಸ್ವಿಗ್ಗಿ ಹೆಸರಲ್ಲಿ ಬಂದದ್ದು 10,000 ಸಂದೇಶ: 38 ಸಾವಿರ ರೂ, ಕಡಿತ, ಆಗಿದ್ದೇನು
20, ಆಗಸ್ಟ್ 2022ರಂದು ಅಪ್ಪ ಮಗಳ ಭೇಟಿಗೆ ಆಗಮಿಸಬೇಕಾಗಿರುತ್ತದೆ. ಆದರೆ ಪತ್ನಿಯು ಮಾಜಿ ಪತಿಗೆ ಆಗಸ್ಟ್ 27ರಂದು ಮಗಳ ಭೇಟಿಗೆ ಆಗಮಿಸುವಂತೆ ಮೇಲ್ ಕಳುಹಿಸಿರುತ್ತಾರೆ. ಆದರೆ ಅಪ್ಪನ ಆಲೋಚನೆಯೇ ಬೇರೆಯಾಗಿರುತ್ತದೆ. ಮಗಳನ್ನು ಭೇಟಿ ಮಾಡುವ ಒಂದು ಅವಕಾಶವನ್ನು ಕಳೆದುಕೊಳ್ಳಬೇಕಾಗಿರುತ್ತದೆ ಎಂದು ನೊಂದುಕೊಳ್ಳುತ್ತಾರೆ. ಹಾಗಾಗಿ ಮಗಳು ತಾಯಿಯೊಂದಿಗೆ ವಾಸವಾಗಿರುವ ಅಪಾರ್ಟ್‌ಮೆಂಟ್ ಬಳಿ ಆಗಮಿಸುತ್ತಾರೆ. ಅಲ್ಲಿ ಮಗಳನ್ನು ನೋಡಲು ಅವಕಾಶ ನೀಡುವಂತೆ ಮೈ ಗೇಟ್ ಆಪ್ ಮೂಲಕ ಮಾಜಿ ಪತ್ನಿಗೆ ಹಲವು ಸಂದೇಶಗಳನ್ನು ಕಳುಹಿಸುತ್ತಾರೆ. ಆದರೆ ಆಕೆ ಒಪ್ಪುವುದಿಲ್ಲ. ಮಗಳನ್ನು ಭೇಟಿ ಮಾಡಲೇಬೇಕು ಎಂಬ ಆಸೆಯಿಂದ ಕಾರನ್ನು ನಿಲ್ಲಿಸಬೇಕು ಎಂದು ಭದ್ರತಾ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿ ತಪ್ಪಿಸಿಕೊಂಡು ಅಪಾರ್ಟ್‌ಮೆಂಟ್ ಪ್ರವೇಶಿಸಿಯೇ ಬಿಡುತ್ತಾರೆ. ಭದ್ರತಾ ಸಿಬ್ಬಂದಿ ಅಟ್ಟಸಿಕೊಂಡು ಹೋದಾಗ ಮತ್ತೊಂದು ಗೇಟ್‌ನಲ್ಲಿದ್ದ
ಕಸದ ಗಾಡಿಯೊಂದನ್ನು ಹತ್ತುವ ನತದೃಷ್ಟ ಅಪ್ಪ ಅದನ್ನು ಕಾಯುವ ಕಸದ ಸಿಬ್ಬಂದಿಯ ಹಾಗೆ ನಟಿಸುತ್ತಾರೆ. ಹದಿನೈದು ದಿನಗಳ ನಂತರ ತಾಯಿಯು ಸೆ.15 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಮಗಳನ್ನು ಭೇಟಿ ಮಾಡುವ ಸಮಯವನ್ನು ಮಾಜಿ ಪತ್ನಿಯು ಪುನರ್ ನಿಗದಿಪಡಿಸಿದ್ದರಿಂದ ಮಗಳನ್ನು ನೋಡಲೇಬೇಕು ಎಂಬ ಏಕೈಕ ಕಾರಣದಿಂದ ಈ ರೀತಿ ನಡೆದುಕೊಂಡಿದ್ದೇನೆ. ಇಷ್ಟಕ್ಕೂ ನಾನು ಅಪಾರ್ಟ್‌ಮೆಂಟ್ ಪ್ರವೇಶಿಸಿದ್ದೇನೆಯೇ ಹೊರತು ಮನೆಯನ್ನು ಅಲ್ಲ ಎಂದು ಅಪ್ಪ ವಾದಿಸುತ್ತಾರೆ.
ನ್ಯಾಯಮೂರ್ತಿ ನಾಗಪ್ರಸನ್ನ ಪ್ರತಿವಾದಿಯು ನಿಗದಿಪಡಿಸಿದ ದಿನದಂದು ಮಗಳನ್ನು ನೋಡುವ ಎಲ್ಲ ಹಕ್ಕು ಹೊಂದಿದ್ದಾರೆ. ಮಗಳನ್ನು ನೋಡಲು ನ್ಯಾಯಾಲಯದ ಆದೇಶವನ್ನು ಹೊಂದಿದ್ದಾರೆ. ಆದರೆ ಮಾಜಿ ಪತ್ನಿಯು ಅವಧಿಯನ್ನು ಮುಂದಕ್ಕೆ ಹಾಕಿದ್ದಾರೆ. ಇದರಿಂದ ಮಗಳನ್ನು ನೋಡುವ ಒಂದು ಅವಕಾಶವನ್ನು ಅಪ್ಪನಿಂದ ಕಸಿದುಕೊಂಡಂತಾಗುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಮಗಳನ್ನು ನೋಡಲು ಕಸದ ಗಾಡಿಯನ್ನು ಹತ್ತಿದ್ದಾರೆ. ಇದು ಮಗಳನ್ನು ನೋಡಬೇಕೆಂಬ ಅಪ್ಪನ ಆತಂಕವನ್ನು ತೋರಿಸುತ್ತದೆ. ಆದರೆ ಮಾಜಿ ಪತ್ನಿಯು ಮಗಳನ್ನು ನೋಡಲು ಪ್ರಯತ್ನಿಸಿದ ಅಪ್ಪನ ಪ್ರಯತ್ನವನ್ನು ಕ್ರಿಮಿನಲ್ ಅಪರಾಧ ಎಂದು ಬಿಂಬಿಸಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅತ್ತ ಮಗಳು ಐ ಲವ್ ಯೂ ಅಪ್ಪ ಎಂಬ ಹಾಡನ್ನು ಗುನುಗಟ್ಟಬಹುದು.