ಬೆಂಗಳೂರು ಅಪರಾಧ ಸುದ್ದಿ; ಮಾಲೀಕರ ಮನೆಯಿಂದಲೇ 1.25 ಕಿಲೋ ಚಿನ್ನ , 2 ಕಿಲೋ ಬೆಳ್ಳಿ, 21 ಲಕ್ಷ ರೂ ಕಳವು ಮಾಡಿದ್ದ ಅಪ್ಪ, ಮಗನ ಸೆರೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಅಪರಾಧ ಸುದ್ದಿ; ಮಾಲೀಕರ ಮನೆಯಿಂದಲೇ 1.25 ಕಿಲೋ ಚಿನ್ನ , 2 ಕಿಲೋ ಬೆಳ್ಳಿ, 21 ಲಕ್ಷ ರೂ ಕಳವು ಮಾಡಿದ್ದ ಅಪ್ಪ, ಮಗನ ಸೆರೆ

ಬೆಂಗಳೂರು ಅಪರಾಧ ಸುದ್ದಿ; ಮಾಲೀಕರ ಮನೆಯಿಂದಲೇ 1.25 ಕಿಲೋ ಚಿನ್ನ , 2 ಕಿಲೋ ಬೆಳ್ಳಿ, 21 ಲಕ್ಷ ರೂ ಕಳವು ಮಾಡಿದ್ದ ಅಪ್ಪ, ಮಗನ ಸೆರೆ

ಬೆಂಗಳೂರು ಅಪರಾಧ ಸುದ್ದಿ: ಕಡಬಗೆರೆಯಲ್ಲಿ ಕೆಲಸ ಕೊಟ್ಟ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿದ ಅಪ್ಪ ಮಗನನ್ನು ಪೊಲೀಸರು ಬಂಧಿಸಿದ್ದಾರೆ. 1.25 ಕೆ.ಜಿ ಚಿನ್ನ, 2 ಕೆ.ಜಿ ಬೆಳ್ಳಿ ರೂ. 21 ಲಕ್ಷ ಕ್ಯಾಶ್ ಕದ್ದಿದ್ದ ಖತರ್ ನಾಕ್ ಜೋಡಿಯಿಂದ ಎಲ್ಲವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ವರದಿ-ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)

ಬೆಂಗಳೂರು: ಹೊರ ವಲಯದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡಬಗೆರೆಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಮಿರ್ಜಾ ಸೈಯದ್ ಬೇಗ್ ಹಾಗೂ ಆತನ ತಂದೆ ಮಿರ್ಜಾ ದಾದಾ ನೂರುದ್ದೀನ್ ಬೇಗ್ ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಬಳ್ಳಾರಿ ಮೂಲದ ಈ ಅಪ್ಪ ಮಗ ಇಬ್ಬರೂ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಇವರು ಕಡಬಗೆರೆಯಲ್ಲಿ ವಾಸವಿದ್ದರು. ಇವರು ಉದ್ಯೋಗ ಬಿಟ್ಟು ಕಳ್ಳತನಕ್ಕೆ ಇಳಿದಿದ್ದರು.

ಕಡಬಗೆರೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಇವರಿಂದ 1.25 ಕೆ.ಜಿ ಚಿನ್ನಾಭರಣ, 2 ಕೆ.ಜಿ ಬೆಳ್ಳಿ ಸಾಮಗ್ರಿ ಹಾಗೂ ರೂಪಾಯಿ 21.5 ಲಕ್ಷ ನಗದು ಹಣವನ್ನು ವಶಪಡಿಸಿ ಕೊಳ್ಳಲಾಗಿದೆ. ಕಳ್ಳತನ ಮಾಡಿದ್ದ ಅಪ್ಪ ಮಗನನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಮನೆ ಸ್ವಚ್ಛಗೊಳಿಸುತ್ತಿದ್ದವನಿಂದಲೇ ಕೃತ್ಯ

ಇವರು ಕಳ್ಳತನ ಮಾಡಿದ್ದ ಮನೆಯ ಮಾಲೀಕರು ನೆಲ ಮಹಡಿಯಲ್ಲಿ ವಾಸವಿದ್ದರು. ಮೊದಲ ಮಹಡಿಯಲ್ಲಿ ವೃದ್ಧಾಶ್ರಮ ಹಾಗೂ ಪುನವರ್ಸತಿ ಕೇಂದ್ರ ನಡೆಸುತ್ತಿದ್ದಾರೆ. ಆರೋಪಿ ಸೈಯದ್ ಬೇಗ್ ದೂರುದಾರರ ಮನೆ ಹಾಗೂ ವೃದ್ಧಾಶ್ರಮದಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದ. ದೂರುದಾರರ ವ್ಯವಹಾರವನ್ನು ಚೆನ್ನಾಗಿ ಅರಿತಿದ್ದ. ಇವರು ಆಸ್ತಿ ಖರೀದಿಸಲು ಹಣವನ್ನು ಮನೆಯಲ್ಲಿ ತಂದಿಟ್ಟಿದ್ದರು. ಈ ವಿಷಯವನ್ನು ಆರೋಪಿ ಸೈಯದ್ ಬೇಗ್ ತಿಳಿದುಕೊಂಡಿದ್ದ.

ಈ ಹಣವನ್ನು ಕಳ್ಳತನ ಮಾಡಲು ತಂದೆಗೆ ಹೇಳಿದ್ದ. ಇಬ್ಬರೂ ಸೇರಿ ಸಂಚು ರೂಪಿಸಿದ್ದರು. ಯುಗಾದಿ ಹಬ್ಬದ ದಿನದಂದು ದೂರುದಾರರು ಕುಟುಂಬದ ಸದಸ್ಯರೊಂದಿಗೆ ಬೇರೆ ಕಡೆ ಹೋಗಿದ್ದರು. ಈ ಅವಕಾಶವನ್ನು ಬಳಸಿಕೊಂಡಿದ್ದ ಅಪ್ಪ ಮಗ ಇಬ್ಬರೂ ಮನೆಗೆ ನುಗ್ಗಿ ಚಿನ್ನಾಭರಣ , ವಜ್ರ ಮತ್ತು ನಗದು ಹಣವನ್ನು ಕದ್ದುಕೊಂಡು ಪರಾರಿಯಾಗಿದ್ದರು.

ತಾವೇ ಕಳ್ಳತನ ಮಾಡಿರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಸಿಗಬಾರದೆಂದು ಆರೋಪಿಗಳು, ಮನೆಯ ತುಂಬಾ ಖಾರದ ಪುಡಿಯನ್ನು ಚೆಲ್ಲಿರುತ್ತಾರೆ. ಹಬ್ಬ ಮುಗಿಸಿಕೊಂಡು ಮನೆಗೆ ಮರಳಿದ ದೂರುದಾರರಿಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಆಗ ಪೊಲೀಸರಿಗೆ ದೂರು ನೀಡಿದ್ದಾರೆ.

ಸೈಯದ್ ಬೇಗ್ ನ ಅಪ್ಪ ದಾದಾ ನೂರುದ್ದೀನ್ ಬೇಗ್ ಮೊದಲು ಆಟೊ ಓಡಿಸುತ್ತಿದ್ದ. ಜೊತೆಗೆ ಆರೋಗ್ಯ ಸರಿ ಇರಲಿಲ್ಲ. ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ಸಾಲವನ್ನು ಮಾಡಿಕೊಂಡಿದ್ದರು. ಸಾಲವನ್ನು ತೀರಿಸಿ ಉಳಿದ ಹಣದಲ್ಲಿ ಐಷಾರಾಮಿ ಜೀವನ ನಡೆಸಬಹುದು ಎಂದು ಲೆಕ್ಕಾಚಾರ ಹಾಕಿ ಕಳ್ಳತನ ಮಾಡಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಟರ್ ಟ್ಯಾಂಕರ್ ಬೈಕ್ ಅಪಘಾತದಲ್ಲಿ ಹಿಂಬದಿ ಸವಾರ ಬಲಿ

ಬೆಂಗಳೂರಿಂದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ವಾಟರ್ ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ 32 ವರ್ಷದ ಆರ್. ಹರೀಶ್ ಮೃತಪಟ್ಟಿದ್ದಾರೆ.

ಅಂದ್ರಹಳ್ಳಿಯ ಹರೀಶ್ ವೃತ್ತಿಯಿಂದ ಆಟೊ ಚಾಲಕ. ಸ್ನೇಹಿತ ಸುಚೀತ್ ಜೊತೆ ತಡರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುಚೀತ್ ಬೈಕ್ ಚಲಾಯಿಸುತ್ತಿದ್ದರೆ ಹಿಂಬದಿಯಲ್ಲಿ ಹರೀಶ್ ಕುಳಿತಿದ್ದರು. ಮಾಗಡಿ ಮುಖ್ಯರಸ್ತೆಯಿಂದ ಹೊಸಹಳ್ಳಿಗೆ ಸಂಪರ್ಕ ಕಲ್ಪಿಸುವ ತುಂಗಾನಗರ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಇದೇ ರಸ್ತೆಯಲ್ಲಿ ಎದುರಿಗೆ ಬಂದ ವಾಟರ್ ಟ್ಯಾಂಕರ್, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತಕ್ಕೆ ಬೈಕ್ ಪಲ್ಟಿ ಹೊಡೆದಿತ್ತು. ಹಿಂಬದಿ ಸವಾರ ಹರೀಶ್ ನೀರಿನ ಟ್ಯಾಂಕರ್‌ ಅಡಿ ಹೋಗಿ ಬಿದ್ದಿದ್ದರು.

ಅತೀ ವೇಗವಾಗಿ ಸಾಗುತ್ತಿದ್ದ ಟ್ಯಾಂಕರ್, ಹರೀಶ್‌ ಅವರ ಮೇಲೆ ಹರಿದು ಅವರನ್ನು ಒಂದಿಷ್ಟು ದೂರ ಉಜ್ಜಿಕೊಂಡು ಹೋಗಿತ್ತು. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆ ವೇಳೆಗೆ ಹರೀಶ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಅಪಾಯದಿಂದ ಪಾರಾಗಿರುವ ಸುಚಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶ್ರೀ ಕೃಷ್ಣ ವಾಟರ್ ಟ್ಯಾಂಕರ್ ಚಾಲಕನ ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಗೊತ್ತಾಗಿದೆ. ಈ ಸಂಬಂಧ ಹರೀಶ್ ಪತ್ನಿ ದೂರು ನೀಡಿದ್ದಾರೆ. ಅಪಘಾತದ ಬಳಿಕ ಟ್ಯಾಂಕರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಶ್ರೀ ಕೃಷ್ಣ ವಾಟರ್ ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ-ಎಚ್. ಮಾರುತಿ, ಬೆಂಗಳೂರು)

Whats_app_banner