Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆವರಿಸಿದ ದಟ್ಟ ಮಂಜು, ವಿಮಾನಯಾನ ವಿಳಂಬ
Bengaluru Airport News: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್) ಜನವರಿ 2ರಂದು ಹಲವು ವಿಮಾನಗಳ ಹಾರಾಟ ವಿಳಂಬವಾಗಿದೆ. ಆಕಾಶದಲ್ಲಿ ದಟ್ಟ ಮಂಜು ಕವಿದು ಗೋಚರ ಕಡಿಮೆಯಾಗಿರುವುದರಿಂದ ಬೆಳಗ್ಗೆ 5.19 ಗಂಟೆಯಿಂದ 7.40 ಗಂಟೆಗಳ ನಡುವೆ ಸಾಕಷ್ಟು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಬಿಐಎಎಲ್ ತಿಳಿಸಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಚಳಿ ಮತ್ತು ಮಂಜು ಹೆಚ್ಚಾಗಿದ್ದು, ಇದು ವಿಮಾನ ಹಾರಾಟದ ಮೇಲೂ ಪರಿಣಾಮ ಬೀರಿದೆ. ಗುರುವಾರ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಎಂಟು ವಿಮಾನಗಳ ಹಾರಾಟ ವಿಳಂಬವಾಗಿದೆ. ವಾತಾವರಣದಲ್ಲಿ ದಟ್ಟವಾದ ಮಂಜು ಕವಿದು ಗೋಚರ ಕಡಿಮೆಯಾದ ಕಾರಣ ಹಲವು ವಿಮಾನಗಳ ಪ್ರಯಾಣ ಸಮಯದಲ್ಲಿ ಏರುಪೇರಾಗಿದೆ.
“ಬೆಳಗ್ಗೆ 5:19 ಗಂಟೆಯಿಂದ 7:40 ಗಂಟೆಯವರೆಗೆ 50 ಮೀಟರ್‌ಗಳಷ್ಟು ಕಡಿಮೆ ಗೋಚರತೆ ಇತ್ತು. ಇದು ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ” ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಅಧಿಕಾರಿಗಳು ಹೇಳಿದ್ದಾರೆ.
ಫುಕೆಟ್ (ಥೈಲಾಂಡ್) ಮತ್ತು ದುಬೈಗೆ ಹೋಗಬೇಕಿದ್ದ ಎರಡು ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ ಒಟ್ಟು ಎಂಟು ವಿಮಾನಗಳ ಹಾರಾಟ ಸುಮಾರು 15 ನಿಮಿಷಗಳಿಗಿಂತಲೂ ಹೆಚ್ಚು ತಡವಾಗಿದೆ ಎಂದು ಬಿಐಎಎಲ್ ವಕ್ತಾರರು ತಿಳಿಸಿದ್ದಾರೆ. ಚೆನ್ನೈ, ಗೋವಾ, ಪುಣೆ ಮತ್ತು ನಾಗ್ಪುರಕ್ಕೆ ದೇಶೀಯ ವಿಮಾನಗಳ ಪ್ರಯಾಣ ಕೂಡ ವಿಳಂಬವಾಗಿದೆ.
2020ರ ಡಿಸೆಂಬರ್ ತಿಂಗಳಲ್ಲಿ ನವೀಕೃತ ಬೆಂಗಳೂರು ವಿಮಾನ ನಿಲ್ದಾಣದ ದಕ್ಷಿಣ ರನ್‌ವೇಯನ್ನು CAT-IIIB ಯಾನಕ್ಕಾಗಿ ಅಪ್‌ಗ್ರೇಡ್ ಮಾಡಲಾಗಿತ್ತು. ನ್ಯಾವಿಗೇಷನ್ ಸಿಸ್ಟಮ್‌ಗೆ ಕಡಿಮೆ ಗೋಚರತೆ ಇರುವ ಪರಿಸ್ಥಿತಿಯಲ್ಲಿಯೂ ವಿಮಾನ ಇಳಿಸಲು ಇದರಿಂದ ಸಾಧ್ಯವಾಗಿತ್ತು. ಆದರೆ, ಉತ್ತರದ ರನ್‌ವೇ CAT-I ಆಗಿದ್ದು, ಅಪ್‌ಗ್ರೇಡ್ ಕೆಲಸ ನಡೆಯಬೇಕಿದೆ. ರನ್‌ವೇ ಗೋಚರತೆ ಉತ್ತಮಗೊಂಡರೆ ಈ ರೀತಿ ವಿಮಾನಗಳ ಹಾರಾಟ ವಿಳಂಬವಾಗುವುದು ತಪ್ಪುತ್ತದೆ.