ಕನ್ನಡ ಸುದ್ದಿ  /  Karnataka  /  Bengaluru News From April 2 Supply Of Treated Water Through Pipeline For Building Construction In City Mrt

ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಪೈಪ್‌ಲೈನ್ ಮೂಲಕ ಸಂಸ್ಕರಿಸಿದ ನೀರು ಸರಬರಾಜು; ಏಪ್ರಿಲ್ 2 ರಿಂದಲೇ ಯೋಜನೆಗೆ ಚಾಲನೆ

ಬೆಂಗಳೂರಿನಲ್ಲಿ ಇನ್ಮುಂದೆ ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರನ್ನು ಬಳಸಲು ಬಿಡಬ್ಲ್ಯೂಎಸ್ಎಸ್‌ಬಿ ಹೊಸ ಯೋಜನೆಯನ್ನು ಏಪ್ರಿಲ್ 2 ರಿಂದ ಜಾರಿಗೆ ತರುತ್ತಿದೆ. (ವರದಿ: ಎಚ್ ಮಾರುತಿ)

ಬೆಂಗಳೂರಿನಲ್ಲಿ ಏಪ್ರಿಲ್ 2 ರಿಂದ ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರು ಬಳಸಲು ಜಲಮಂಡಳಿ ಹೊಸ ಯೋಜನೆಯನ್ನು ತಂದಿದೆ.
ಬೆಂಗಳೂರಿನಲ್ಲಿ ಏಪ್ರಿಲ್ 2 ರಿಂದ ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರು ಬಳಸಲು ಜಲಮಂಡಳಿ ಹೊಸ ಯೋಜನೆಯನ್ನು ತಂದಿದೆ.

ಬೆಂಗಳೂರು: ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸಂಸ್ಕರಿಸಿದ ನೀರಿನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡೆರೇಷನ್ ಮತ್ತು ಕ್ರೆಡೈ ಜೊತೆ ಸಹಭಾಗಿತ್ವಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದೆ. ಕಟ್ಟಡಗಳ ನಿರ್ಮಾಣಕ್ಕೆ ಏಪ್ರಿಲ್ 2 ರಿಂದ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ

ಬೆಂಗಳೂರು ಅಪಾರ್ಟ್‌ಮೆಂಟ್ ಫೆಡೆರೇಷನ್ ಹಾಗೂ ಕ್ರೆಡೈ ಜೊತೆಗೆ ಈಗಾಗಲೇ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಅಪಾರ್ಟ್‌ಮೆಂಟ್‌ಗಳ ಎಸ್‌ಟಿಪಿ ಗಳಿಂದ ಶುದ್ಧೀಕರಣ ಗೊಳಿಸಲಾಗಿರುವ ಶೇಕಡಾ 50 ರಷ್ಟು ನೀರನ್ನು ಮಾರಾಟ ಮಾಡಲು ಮಾರ್ಚ್ 11 ರಂದು ಅನುಮತಿ ನೀಡಲಾಗಿದೆ. ಹಾಗೆಯೇ ಜಲಮಂಡಳಿಯ ತ್ಯಾಜ್ಯ ನೀರು ಶುದ್ಧಿಕರಣ ಘಟಕದಲ್ಲೂ ಸಂಸ್ಕರಿಸಿದ ನೀರು ಲಭ್ಯವಿದೆ. ಈ ನೀರನ್ನು ಬಳಕೆದಾರರಿಗೆ ಸಮರ್ಪಕವಾಗಿ ಪೂರೈಸುವ ಉದ್ದೇಶದಿಂದ ಈ ಸಹಭಾಗಿತ್ವಕ್ಕೆ ಮುಂದಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

500 ಮೀಟರ್‌ವರೆಗೆ ಪ್ರತ್ಯೇಕ ಪೈಪ್ ಲೈನ್

ಅಪಾರ್ಟ್‌ಮೆಂಟ್‌ನ ಮತ್ತು ಜಲಮಂಡಳಿಯ ತ್ಯಾಜ್ಯ ನೀರು ಶುದ್ಧಿಕರಣ ಘಟಕಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಕಟ್ಟಡಗಳ ಬಳಕೆಗೆ ಪ್ರತ್ಯೇಕವಾದ ಪೈಪ್‌ಲೈನ್ ಅಳವಡಿಸುವ ಮೂಲಕ ನೀರು ಸರಬರಾಜು ಮಾಡಲಾಗುವುದು. ಇದರಿಂದ ಅವರ ಅಗತ್ಯತೆಗೆ ಅನುಗುಣವಾಗಿ ನಿರಂತರವಾಗಿ ನೀರು ಪೂರೈಕೆ ಸಾಧ್ಯವಾಗಲಿದೆ ಎಂದು ಜಲಮಂಡಳಿ ಹೇಳಿದೆ.

ಕೊಳವೆ ಬಾವಿಯ ಮೇಲಿನ ಒತ್ತಡ ಕಡಿಮೆ

ಬೃಹತ್ ಕಟ್ಟಡಗಳ ನಿರ್ಮಾಣದಲ್ಲಿ ಬಹುತೇಕ ಕೊಳವೆಬಾವಿ ಮತ್ತು ಟ್ಯಾಂಕರ್ ನೀರನ್ನು ಅವಲಂಬಿಸಲಾಗಿದೆ. ಇದರಿಂದ ಅಂತರ್ಜಲದ ಮೇಲೆ ಬಹಳಷ್ಟು ಒತ್ತಡ ಹೆಚ್ಚಾಗಿದೆ. ಸಂಸ್ಕರಿಸಿದ ನೀರನ್ನು ಬಳಸಲು ಉತ್ತೇಜನ ನೀಡುವುದರಿಂದ ಅಂತರ್ಜಲ ಕುಸಿತವನ್ನು ತಡೆಗಟ್ಟಬಹುದಾಗಿದೆ ಎಂದು ಜಲಮಂಡಳಿ ಅಭಿಪ್ರಾಯಪಟ್ಟಿದೆ. ಅಪಾರ್ಟ್‌ಮೆಂಟ್‌ಗಳ ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲು ಈಗಾಗಲೇ ಅನುಮತಿ ನೀಡಲಾಗಿದೆ. ಇದೇ ರೀತಿ ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರನ್ನು ಮಾತ್ರ ಬಳಕೆ ಮಾಡಬೇಕು ಎಂದೂ ಆದೇಶಿಸಲಾಗಿದೆ.

ಸಂಸ್ಕರಿಸಿದ ನೀರಿನ ಉತ್ಪಾದಕರು ಹಾಗೂ ಗ್ರಾಹಕರನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು ಜಲಮಂಡಳಿ ಉದ್ದೇಶವಾಗಿದೆ. ತಮ್ಮ ಹೆಚ್ಚುವರಿ ನೀರನ್ನು ಸುಲಭವಾಗಿ ಮಾರಾಟ ಮಾಡಲು ಅಪಾರ್ಟ್‌ಮೆಂಟ್‌ಗಳಿಗೆ ಗ್ರಾಹಕರನ್ನು ಒದಗಿಸುವ ವೇದಿಕೆಯಾಗಿ ಇದು ಕಾರ್ಯವಹಿಸಲಿದೆ. ಇದರಿಂದ ಬಿಲ್ದರ್ ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದಿದ್ದಾರೆ.

ಏಪ್ರಿಲ್ 2 ರಿಂದ ಸಂಸ್ಕರಿಸಿದ ನೀರು ಪೂರೈಕೆ

ಸಂಸ್ಕರಿಸಿದ ನೀರಿಗಾಗಿ ಜಲಮಂಡಳಿಗೆ ಪ್ರತಿದಿನ ಮನವಿಗಳು ಬರುತ್ತಿವೆ. ಈಗಾಗಲೇ 62 ಲಕ್ಷ ಲೀಟರ್ ಸಂಸ್ಕರಿಸಿದ ನೀರಿಗೆ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಂಸ್ಕರಿಸಿದ ನೀರನ್ನು ಮಾರಾಟ ಮಾಡುವ ಮೂಲಕ ಜಲಮಂಡಳಿಗೆ ಆದಾಯವೂ ಹೆಚ್ಚಾಗಲಿದೆ. ಮಂಗಳವಾರದಿಂದ (ಏಪ್ರಿಲ್ 2) ಸಂಸ್ಕರಿಸಿದ ನೀರಿನ ಸರಬರಾಜು ಪ್ರಾರಂಭಿಸಲಾಗುವುದು ಎಂದು ಜಲಮಂಡಳಿ ತಿಳಿಸಿದೆ.

ಮೊದಲ ಹಂತದಲ್ಲಿ ಖಾಸಗಿ ಹಾಗೂ ಜಲಮಂಡಳಿ ಎಸ್‌ಟಿಪಿಗಳ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪೈಪ್‌ಲೈನ್ ಅಥವಾ ಟ್ಯಾಂಕರ್‌ಗಳ ಮೂಲಕ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲು ಚಿಂತನೆ ನಡೆಸಲಾಗಿದೆ. ಆದರೆ ಸರಬರಾಜು ಹಾಗೂ ನೀರಿನ ವೆಚ್ಚವನ್ನು ಗ್ರಾಹಕರೇ ಭರಿಸಬೇಕಿದೆ.

ಪರಿಸರ ಜಲಸ್ನೇಹಿ ಆಪ್ ಬಳಸಿ, ನೀರು ಪಡೆಯಿರಿ

ಸಂಸ್ಕರಿಸಿದ ನೀರಿನ ಬೇಡಿಕೆಗೆ ಈಗಾಗಲೇ ಮಂಡಳಿ ಪರಿಸರ ಜಲಸ್ನೇಹಿ ಎಂಬ ಆಪ್ ರಚಿಸಿದೆ. ಈ ಆಪ್ ಮೂಲಕ ಗ್ರಾಹಕರು, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಂಸ್ಕರಿಸಿದ ನೀರಿಗೆ ಬುಕಿಂಗ್ ಮಾಡಬಹುದಾಗಿದೆ. (ವರದಿ: ಎಚ್ ಮಾರುತಿ)

IPL_Entry_Point