Bengaluru News; ಗಣೇಶನ ಹಬ್ಬಕ್ಕೆ ಊರಿಗೆ ರೈಲಲ್ಲಿ ಹೋಗ್ತೀರಾ; ಬೆಳಗಾವಿ, ವಿಜಯಪುರಗಳಿಗೆ ವಿಶೇಷ ರೈಲು ಸಂಚಾರ ಪ್ರಕಟಿಸಿದ ನೈಋತ್ಯ ರೈಲ್ವೆ
Special Trains; ಗಣೇಶನ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಬೆಂಗಳೂರಿಗರು ತಮ್ಮೂರಿಗೆ ಹೊರಡಲು ಸಜ್ಜಾಗಿದ್ದಾರೆ. ಅನೇಕರು ರೈಲು ಟಿಕೆಟ್ ಬುಕ್ ಮಾಡಲಾರಂಭಿಸಿದ್ದಾರೆ. ಅಂದ ಹಾಗೆ, ಈ ಸಲ 'ಗಣೇಶನ ಹಬ್ಬಕ್ಕೆ ಊರಿಗೆ ರೈಲಲ್ಲಿ ಹೋಗ್ತೀರಾ, ಹಾಗಾದರೆ ನೈಋತ್ಯ ರೈಲ್ವೆ ಬೆಳಗಾವಿ, ವಿಜಯಪುರಗಳಿಗೆ ವಿಶೇಷ ರೈಲು ಸಂಚಾರ ಪ್ರಕಟಿಸಿದೆ ನೋಡಿ. (ವರದಿ-ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಗೌರಿ ಗಣೇಶ ಹಬ್ಬದ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಬೆಳಗಾವಿ ಮತ್ತು ವಿಜಯಪುರ ಮಾರ್ಗಗಳಲ್ಲಿ ವಿಶೇಷ ರೈಲು ಕಾರ್ಯಾಚರಣೆ ನಡೆಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಗಣೇಶ ಚತುರ್ಥಿ ಅವಧಿಯಲ್ಲಿ ಹೆಚ್ಚು ರೈಲುಗಳು ಕಾರ್ಯಾಚರಣೆ ನಡೆಸಲಿವೆ.
ಇನ್ನೊಂದೆಡೆ, ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿಗೆ ಪ್ರಾಯೋಗಿಕ ಆಧಾರದ ಮೇಲೆ ಮಲ್ಲೇಶ್ವರ ನಿಲ್ದಾಣದಲ್ಲಿ ಮೂರು ತಿಂಗಳು ಅಂದರೆ ಅಕ್ಟೋಬರ್ 22ರಿಂದ ಜನವರಿ 21ರವರೆಗೆ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಮಲ್ಲೇಶ್ವರ ನಿಲ್ದಾಣಕ್ಕೆ ಮುಂಜಾನೆ 4.34ಕ್ಕೆ ಆಗಮಿಸಿ ನಿರ್ಗಮಿಸಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು - ಬೆಳಗಾವಿ ವಿಶೇಷ ರೈಲು ಸಂಚಾರ
ಸೆಪ್ಟೆಂಬರ್ 5 ರಂದು ರಾತ್ರಿ 7.30ಕ್ಕೆ ಯಶವಂತಪುರದಿಂದ ಹೊರಡುವ ರೈಲು ಸೆಪ್ಟೆಂಬರ್ 6ರಂದು ಬೆಳಿಗ್ಗೆ 7.15ಕ್ಕೆ ಬೆಳಗಾವಿ ತಲುಪಲಿದೆ. ಅಂದು ಬೆಳಿಗ್ಗೆ 8.45ಕ್ಕೆ ಬೆಳಗಾವಿಯಿಂದ ಹೊರಡುವ ರೈಲು ರಾತ್ರಿ 8 ಗಂಟೆಗೆ ಯಶವಂತಪುರ ನಿಲ್ದಾಣ ತಲುಪಲಿದೆ. ಸೆಪ್ಟೆಂಬರ್ 6 ರಂದು ರಾತ್ರಿ 10.15ಕ್ಕೆ ಯಶವಂತಪುರದಿಂದ ಹೊರಡುವ ರೈಲು ಸೆ.7ರಂದು ಬೆಳಿಗ್ಗೆ 10.15ಕ್ಕೆ ಬೆಳಗಾವಿ ತಲುಪಲಿದೆ. ಸೆ.8ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು ಸೆಪ್ಟೆಂಬರ್ 9ರಂದು ಮುಂಜಾನೆ 4.30ಕ್ಕೆ ಯಶವಂತಪುರ ತಲುಪಲಿದೆ.
ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ಳಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲಲಿವೆ. ರೈಲಿನಲ್ಲಿ ಒಟ್ಟು 22 ಬೋಗಿಗಳಿರಲಿವೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ವಿಜಯಪುರ ವಿಶೇಷ ರೈಲು
ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ (ಎಸ್ಎಂವಿಟಿ) ಸೆಪ್ಟೆಂಬರ್ 5 ಮತ್ತು 7ರಂದು ರಾತ್ರಿ 9ಕ್ಕೆ ಹೊರಡುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 6 ಮತ್ತು 8ರಂದು ಮಧ್ಯಾಹ್ನ 2.05ಕ್ಕೆ ವಿಜಯಪುರ ತಲುಪಲಿದೆ. ಸೆ.6 ಮತ್ತು 8ರಂದು ವಿಜಯಪುರದಿಂದ ಹೊರಡುವ ರೈಲು ಸೆ.7 ಮತ್ತು ಸೆ. 9 ರಂದು ಬೆಳಿಗ್ಗೆ 11.15ಕ್ಕೆ ಎಸ್‌ಎಂವಿಟಿ ತಲುಪಲಿದೆ.
ಈ ರೈಲುಗಳು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮಂಟ್, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿವೆ. ಈ ರೈಲುಗಳಲ್ಲಿ ಒಟ್ಟು 18 ಬೋಗಿಗಳಲಿವೆ. ಮುಂಗಡ ಬುಕ್ಕಿಂಗ್ ಮತ್ತು ವೇಳಾಪಟ್ಟಿ ಮಾಹಿತಿಗಾಗಿ www.enquiry.indianrail.gov.in ಗೆ ಭೇಟಿ ನೀಡಬಹುದು. ಅಥವಾ 139ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
(ವರದಿ-ಎಚ್. ಮಾರುತಿ, ಬೆಂಗಳೂರು)