ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ ದಂಡದ ಹೆಸರಲ್ಲಿ ಹಣ ವಸೂಲಿ; ಮೃತ ಹೆಡ್‌ಕಾನ್‌ಸ್ಟೆಬಲ್‌ ಗುರುತಿನ ಚೀಟಿ ಬಳಸಿ ದಂಧೆ, ಮೂವರ ಬಂಧನ

ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ ದಂಡದ ಹೆಸರಲ್ಲಿ ಹಣ ವಸೂಲಿ; ಮೃತ ಹೆಡ್‌ಕಾನ್‌ಸ್ಟೆಬಲ್‌ ಗುರುತಿನ ಚೀಟಿ ಬಳಸಿ ದಂಧೆ, ಮೂವರ ಬಂಧನ

ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ ದಂಡದ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್‌ ಕುರಿತು ದೂರು ದಾಖಲಾಗಿತ್ತು. ತನಿಖೆ ನಡೆಸಿದಾಗ ಆರೋಪಿಗಳು ಮೃತ ಹೆಡ್‌ಕಾನ್‌ಸ್ಟೆಬಲ್‌ ಗುರುತಿನ ಚೀಟಿ ಬಳಸಿ ದಂಧೆ ಮಾಡುತ್ತಿರುವುದು ಖಚಿತವಾಗಿದೆ. ಇದರಂತೆ, ಮೂವರ ಬಂಧನವಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ ದಂಡದ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮೃತ ಹೆಡ್‌ಕಾನ್‌ಸ್ಟೆಬಲ್‌ ಗುರುತಿನ ಚೀಟಿ ಬಳಸಿ ದಂಧೆ ನಡೆಸುತ್ತಿದ್ದರು. (ಸಾಂಕೇತಿಕ ಚಿತ್ರ)
ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ ದಂಡದ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮೃತ ಹೆಡ್‌ಕಾನ್‌ಸ್ಟೆಬಲ್‌ ಗುರುತಿನ ಚೀಟಿ ಬಳಸಿ ದಂಧೆ ನಡೆಸುತ್ತಿದ್ದರು. (ಸಾಂಕೇತಿಕ ಚಿತ್ರ)

ಬೆಂಗಳೂರು: ಮೃತ ಹೆಡ್‌ಕಾನ್‌ಸ್ಟೆಬಲ್‌ವೊಬ್ಬರ ಗುರುತಿನ ಚೀಟಿಯನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಂದ ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಮಾಡುತ್ತಿದ್ದ ಕೊಲ್ಕತ್ತಾದ ಓರ್ವ ಆರೋಪಿ ಸೇರಿದಂತೆ ಮೂವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ಕೋಲ್ಕತ್ತಾದ ರಂಜನ್ ಕುಮಾರ್ ಪೋರ್ಬಿ, 30 ವರ್ಷದ ಇಸ್ಮಾಯಿಲ್ ಅಲಿ ಮತ್ತು 27 ವರ್ಷದ ಸುಭಿರ್ ಮಲ್ಲಿಕ್ ಬಂಧಿತ ಆರೋಪಿಗಳು.

ಟ್ರೆಂಡಿಂಗ್​ ಸುದ್ದಿ

ಆರೋಪಿಗಳು ವಂಚನೆಗೆ ಬಳಸಿದ್ದ ಬ್ಯಾಂಕ್ ಖಾತೆಗಳ ವಹಿವಾಟು ಸ್ಥಗಿತಗೊಳಿಸಲಾಗಿದೆ. ಮೂರು ಮೊಬೈಲ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್‌ಕಾನ್‌ಸ್ಟೆಬಲ್‌ ವೊಬ್ಬರು 2023 ರಲ್ಲಿ ಮೃತಪಟ್ಟಿದ್ದರು. ಸಾಮಾಜಿಕ ಜಾಲತಾಣವೊಂದರಲ್ಲಿ ಅಪ್‌ಲೋಡ್ ಮಾಡಿದ್ದ ಹೆಡ್ ಕಾನ್‌ಸ್ಟೆಬಲ್ ಅವರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಹೆಡ್ ಕಾನ್‌ಸ್ಟೆಬಲ್ ಅವರ ಭಾವಚಿತ್ರವನ್ನು ಮಾತ್ರ ಉಳಿಸಿಕೊಂಡು ಹೆಸರು ಬದಲಾಯಿಸಿ ಹೊಸ ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡಿದ್ದರು. ನಿಯಮ ಉಲ್ಲಂಘಿಸಿದ ಆರೋಪಿಗಳಿಗೆ ಗುರುತಿನ ಚೀಟಿ ಕಳುಹಿಸಿ ಆವರನ್ನು ನಂಬಿಸಿ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಮಾಹಿತಿ ತಿಳಿದುಕೊಂಡ ಮೃತ ಹೆಡ್‌ಕಾನ್‌ಸ್ಟೆಬಲ್ ಅವರ ಪುತ್ರಿ, ಆರೋಪಿಗಳ ವಂಚನೆ ಕುರಿತು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳು ಇದುವರೆಗೂ 100ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ. ವಂಚನೆಗೊಳಗಾದವರು ದೂರು ನೀಡುವಂತೆ ಪೊಲೀಸರು ಕೋರಿದ್ದಾರೆ.

ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿದ್ದ ರಂಜನ್‌ಕುಮಾರ್

ಪ್ರಮುಖ ಆರೋಪಿ ರಂಜನ್‌ಕುಮಾರ್, ಕೋಲ್ಕತ್ತಾದ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಮತ್ತೊಬ್ಬ ಆರೋಪಿ ಇಸ್ಮಾಯಿಲ್ ಅಲಿ, ಸೈಬರ್ ಕೆಫೆ ನಡೆಸುತ್ತಿದ್ದರೆ ಮೂರನೇ ಆರೋಪಿ ಸುಭಿರ್ ಮಲ್ಲಿಕ್, ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದ.

ರಂಜನ್‌ಕುಮಾರ್ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಹೆಚ್ಚು. ಆದ್ದರಿಂದ ಅಲ್ಲಿ ಪೊಲೀಸರ ಹೆಸರಿನಲ್ಲಿ ದಂಡ ವಸೂಲಿ ಮಾಡೋಣ ಎಂದು ಆತನೇ ಹ ಇತರೆ ಆರೋಪಿಗಳನ್ನು ಪುಸಲಾಯಿಸಿ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಬೆಂಗಳೂರಿನ ವಿವಿಧ ಏರಿಯಾಗಳಲ್ಲಿರುವ ವಾಹನಗಳ ಫೋಟೊಗಳನ್ನು ಗೂಗಲ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದರು. ಆ ವಾಹನಗಳ ನೋಂದಣಿ ಸಂಖ್ಯೆಯನ್ನು ಸಂಚಾರ ಪೊಲೀಸರ ಜಾಲತಾಣದಲ್ಲಿ ನಮೂದಿಸಿ ದಂಡದ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದರು

ದಂಡ ಬಾಕಿ ಇರುತ್ತಿದ್ದ ವಾಹನಗಳ ನೋಂದಣಿ

ಸಂಖ್ಯೆಯನ್ನು ಸಾರಿಗೆ ಇಲಾಖೆಯ ಜಾಲ ತಾಣದಲ್ಲಿ ನಮೂದಿಸುತ್ತಿದ್ದರು. ಅಂತಹ ವಾಹನಗಳ ಮಾಲೀಕರ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಸುಲಭವಾಗಿ ಲಭ್ಯವಾಗುತ್ತಿತ್ತು.

ದಂಡದ ನಕಲಿ ನೋಟಿಸ್ ಸಿದ್ಧಪಡಿಸಿ ವಾಹನಗಳ ಮಾಲೀಕರ ವಾಟ್ಸ್ ಆಪ್‌ಗೆ ಕಳುಹಿಸುತ್ತಿದ್ದರು. ಇದರ ಜೊತೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಅವರ ಗುರುತಿನ ಚೀಟಿ ಲಗತ್ತಿಸುತ್ತಿದ್ದರು. ದಂಡ ಕಟ್ಟಬೇಕಾದವರು ಅದು ನಿಜವೆಂದು ನಂಬಿ ಆರೋಪಿಗಳು ಒದಗಿಸುತ್ತಿದ್ದ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುತ್ತಿದ್ದರು. ಈ ಮೂಲಕ ಸಾರ್ವಜನಿಕರು ಮೋಸ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024