ಗೋವಾ ಗಡಿಯಲ್ಲಿ ಸಂಚಾರ ದಟ್ಟಣೆ ಕಾರಣ 4 ಗಂಟೆ ವಿಳಂಬ; ಬೆಂಗಳೂರು ತಲುಪದ ಸುಚನಾ ಸೇಠ್
ಕನ್ನಡ ಸುದ್ದಿ  /  ಕರ್ನಾಟಕ  /  ಗೋವಾ ಗಡಿಯಲ್ಲಿ ಸಂಚಾರ ದಟ್ಟಣೆ ಕಾರಣ 4 ಗಂಟೆ ವಿಳಂಬ; ಬೆಂಗಳೂರು ತಲುಪದ ಸುಚನಾ ಸೇಠ್

ಗೋವಾ ಗಡಿಯಲ್ಲಿ ಸಂಚಾರ ದಟ್ಟಣೆ ಕಾರಣ 4 ಗಂಟೆ ವಿಳಂಬ; ಬೆಂಗಳೂರು ತಲುಪದ ಸುಚನಾ ಸೇಠ್

ಎಲ್ಲವೂ ಯೋಜಿತ ರೀತಿಯಲ್ಲೇ ಆಗಿದ್ದರೆ ಸುಚನಾ ಸೇಠ್ ಪೊಲೀಸರ ಬಲೆಗೆ ಬೀಳುತ್ತಿರಲಿಲ್ಲ. ಗೋವಾ ಗಡಿಯಲ್ಲಿ ಅಪಘಾತದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು. ಹೀಗಾಗಿ ಸುಚನಾ ಪ್ರಯಾಣದಲ್ಲಿ 4 ಗಂಟೆ ವಿಳಂಬ ಸಂಭವಿಸಿತ್ತು. ಇಲ್ಲದೇ ಇದ್ದರೆ ಆಕೆ ಬೆಂಗಳೂರು ತಲುಪುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗೋವಾ ಪೊಲೀಸ್ ವಶದಲ್ಲಿರುವ ಸುಚನಾ ಸೇಠ್, (ಕಡತ ಚಿತ್ರ)
ಗೋವಾ ಪೊಲೀಸ್ ವಶದಲ್ಲಿರುವ ಸುಚನಾ ಸೇಠ್, (ಕಡತ ಚಿತ್ರ) (HT News )

ಬೆಂಗಳೂರು: ಗೋವಾದ ಗಡಿಯಲ್ಲಿ ಉಂಟಾದ ಭಾರೀ ಟ್ರಾಫಿಕ್ ಜಾಮ್ ಬೆಂಗಳೂರು ಎಐ ಸ್ಟಾರ್ಟಪ್‌ ಸಿಇಒ ಸುಚನಾ ಸೇಠ್‌ ಅವರನ್ನು ಬಂಧಿಸಲು ಪೊಲೀಸರಿಗೆ ನೆರವಾಯಿತು.

ಕ್ಯಾಂಡೋಲಿಮ್‌ನ ಸರ್ವೀಸ್‌ ಅಪಾರ್ಟ್‌ಮೆಂಟ್‌ನಲ್ಲಿ ತನ್ನ 4 ವರ್ಷದ ಮಗನನ್ನು ಕೊಂದು ಬೆಂಗಳೂರಿಗೆ ಪರಾರಿಯಾಗುತ್ತಿದ್ದ ಸುಚನಾ ಸೇಠ್‌ ಗೋವಾ ಗಡಿಯಲ್ಲಿ ಉಂಟಾದ ಸಂಚಾರ ದಟ್ಟಣೆ ಕಾರಣ ಬೆಂಗಳೂರು ತಲುಪುವುದು ವಿಳಂಬವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

“ಆಕೆ ಗೋವಾದಿಂದ ಪಲಾಯನ ಮಾಡುವ ಅದೇ ಸಂದರ್ಭದಲ್ಲಿ, ಗೋವಾ ಗಡಿಭಾಗದಲ್ಲಿ ಚೋಲಾ ಘಾಟ್‌ನಲ್ಲಿ ಅಪಘಾತದ ಕಾರಣ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಹೀಗಾಗಿ ನಾಲ್ಕು ಗಂಟೆ ಕಾಲ ಸುಚನಾ ಸೇಠ್ ಟ್ಯಾಕ್ಸಿಯಲ್ಲಿ ಅಲ್ಲೇ ಸಿಲುಕಿದ್ದಳು. ಈ ನಾಲ್ಕು ಗಂಟೆ ನಮಗೆ ವರದಾನವಾಯಿತು. ಇಲ್ಲದೇ ಇದ್ದಲ್ಲಿ ಆಕೆ ಬೆಂಗಳೂರು ತಲುಪಿ ಇನ್ನೇನಾದರೂ ಮಾಡುತ್ತಿದ್ದಳು. ಮಗುವಿನ ಮೃತದೇಹ ಸಿಗುತ್ತಿರಲಿಲ್ಲ” ಪೊಲೀಸ್ ಮೂಲಗಳು ತಿಳಿಸಿವೆ.

ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯ ನಡುವೆ ಚೋರ್ಲಾ ಘಾಟ್ ಇದೆ. ಇದು ಗೋವಾದ ಪಣಜಿಯ ಈಶಾನ್ಯಕ್ಕೆ ಮತ್ತು ಕರ್ನಾಟಕದ ಬೆಳಗಾವಿಯಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿದೆ.

ಇನ್ನೊಂದೆಡೆ, 4 ವರ್ಷದ ಮಗನಿಗೆ ಸಿರಪ್ ಕೊಟ್ಟು ಮಲಗಿಸಿದ್ದೆ. ಪ್ರಜ್ಞೆ ತಪ್ಪಿಸಲು ದಿಂಬು ಒತ್ತಿದ್ದೆ ಎಂದೆಲ್ಲ ಹೇಳಿದ್ದ ಸುಚನಾ ಸೇಠ್‌ ತನ್ನ ಹೊಸ ವರಸೆ ಮುಂದಿಟ್ಟಿದ್ದು, ನಾನು ನಿದ್ದೆಯಿಂದ ಎಚ್ಚರಾಗುವ ಮೊದಲೇ ಮಗ ಮೃತಪಟ್ಟಿದ್ದ ಎಂದು ಹೇಳಿದ್ದಾರೆ.

ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೊಠಡಿಯಲ್ಲಿ ಕೆಮ್ಮಿನ ಔಷಧದ ಬಾಟಲಿಗಳು ಸಿಕ್ಕಿವೆ. ಹೀಗಾಗಿ ಈ ಆಯಾಮದಲ್ಲಿ ತನಿಖೆ ನಡೆದಿದೆ ಎಂದು ಮೂಲಗಳು ತಿಳಿಸಿರುವುದಾಗಿ ಟಿವಿ9 ವರದಿ ಮಾಡಿದೆ.

ಹತ್ಯೆ ನಡೆಯುವ ಮೊದಲು ಮಾತನಾಡಿದ್ದ ತಂದೆ- ಮಗ: ಸುಚನಾ ಸೇಠ್ ಅವರ ಪತಿ ವೆಂಕಟರಾಮನ್‌ ಜನವರಿ 7ರಂದು ಜಕಾರ್ತಾದಿಂದ 4 ವರ್ಷದ ಮಗನ ಜೊತೆಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದರು. ಇದಾದ ಬಳಿಕ ಮಗನ ಜತೆಗೆ ಮಾತನಾಡುವುದಕ್ಕೆ ವೆಂಕಟರಾಮನ್‌ಗೆ ಸಾಧ್ಯವಾಗಿಲ್ಲ.

ಸುಚನಾ ಸೇಠ್ ಮತ್ತು ವೆಂಕಟರಾಮನ್‌ 10 ವರ್ಷಗಳ ದಾಂಪತ್ಯದ ನಂತರ 2020ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕೋರ್ಟು, ಪ್ರತಿ ಭಾನುವಾರ ತಂದೆ-ಮಗನ ಭೇಟಿಗೆ ಅವಕಾಶ ನೀಡಬೇಕು ಎಂದು ಸೂಚಿಸಿತ್ತು. ಆದರೆ ಸುಚನಾಗೆ ಇದ್ಯಾವುದೂ ಇಷ್ಟವಿರಲಿಲ್ಲ. ತನಗೆ ಜೀವನಾಂಶವಾಗಿ 2.5 ಲಕ್ಷ ರೂಪಾಯಿ ನೀಡುವಂತೆ ಸೂಚಿಸಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು. ಕೋರ್ಟ್ ತಿಂಗಳಿಗೆ 20 ಸಾವಿರ ರೂಪಾಯಿ ನೀಡುವಂತೆ ಸೂಚಿಸಿತ್ತು.

ಈ ಎಲ್ಲ ವಿದ್ಯಮಾನಗಳಿಂದ ಬೇಸತ್ತಿದ್ದ ಸುಚನಾ ಸೇಠ್‌, ಮಗುವಿನ ಕೊಲೆಗೆ ಸಂಚು ರೂಪಿಸಿರಬಹುದು. ಕೆಲವು ದಿನಗಳ ಹಿಂದೆ ಗೋವಾ ಹೋಗಿದ್ದ ಅವರು ಅಲ್ಲಿ ಮಗುವಿಗೆ ಅನಾರೋಗ್ಯವಾಗಿ ಮೃತಪಟ್ಟಿತು ಎಂದು ಬಿಂಬಿಸಲು ಯೋಜನೆ ರೂಪಿಸಿಕೊಂಡಂತಿದೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮಗುವನ್ನು ಹತ್ಯೆ ಮಾಡಿ ಬ್ಯಾಗ್‌ನಲ್ಲಿ ತುಂಬಿಸಿ ಗೋವಾದಿಂದ ಟ್ಯಾಕ್ಸಿ ಮಾಡಿಕೊಂಡು ಬೆಂಗಳೂರಿಗೆ ವಾಪಾಸ್‌ ಬರುವಾಗ ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸರು ಸುಚನಾರನ್ನು ವಶಕ್ಕೆ ತೆಗೆದುಕೊಂಡು ಗೋವಾ ಪೊಲೀಸರಿಗೆ ಒಪ್ಪಿಸಿದ್ದರು.

ಸೂಟ್‌ಕೇಸ್‌ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಗೋವಾದಲ್ಲಿ ತಂಗಿದ್ದ ಹೊಟೇಲ್‌ನ ಕೊಠಡಿಯಲ್ಲಿ ರಕ್ತದ ಕಲೆ ಕಂಡು ಸಿಬ್ಭಂದಿ ಪೊಲೀಸರಿಗೆ ತಿಳಿಸಿದ ಕಾರಣ, ಈ ಕೊಲೆ ಪ್ರಕರಣ ಬೇಗ ಬೆಳಕಿಗೆ ಬಂತು. ಹೋಟೆಲ್ ಕೊಠಡಿಯಲ್ಲಿ ಆಕೆ ತನ್ನ ಕೈಗಳ ನರ ಕತ್ತರಿಸಿ ಸಾಯಲೆತ್ನಿಸಿದ್ದ ಕಾರಣ ರಕ್ತ ನೆಲಕ್ಕೆ ಬಿದ್ದಿತ್ತು ಎಂದು ಹೇಳಲಾಗುತ್ತಿದೆ. ಸುಚನಾರನ್ನು ಗೋವಾ ನ್ಯಾಯಾಲಯ 6 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Whats_app_banner