ಕರ್ನಾಟಕದಲ್ಲಿ ಕ್ರಿಸ್‌ಮಸ್ -ವರ್ಷಾಂತ್ಯಕ್ಕೆ ಬಹುಕೋಟಿ ಮೌಲ್ಯದ ಜಿಎಸ್‌ಟಿ ವಂಚನೆ ಪತ್ತೆ, ಕಾನೂನು ಕ್ರಮ ಆರಂಭ
ಕರ್ನಾಟಕದಲ್ಲಿ ಕ್ರಿಸ್‌ಮಸ್- ವರ್ಷಾಂತ್ಯದಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು, ರೆಸಾರ್ಟ್‌ಗಳಲ್ಲಿ .150 ಕೋಟಿ ಮೌಲ್ಯದ ಜಿಎಸ್‌ಟಿ ವಂಚನೆಯನ್ನು ವಾಣಿಜ್ಯ ತೆರಿಗೆ ಇಲಾಖೆ ಪತ್ತೆಹಚ್ಚಿದ್ದು, ಕಾನೂನು ಕ್ರಮ ಆರಂಭಿಸಿದೆ.
ಬೆಂಗಳೂರು: ಕ್ರಿಸ್‌ಮಸ್ ಹಾಗೂ 2023ರ ಕೊನೆಯ ವಾರದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು, ರೆಸಾರ್ಟ್‌ಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಿಸಲು 150 ಕೋಟಿ ರೂಪಾಯಿ ಮೌಲ್ಯದ ರಹಸ್ಯ ವಹಿವಾಟು ನಡೆದಿರುವುದನ್ನು ವಾಣಿಜ್ಯ ತೆರಿಗೆ ಇಲಾಖೆ ಪತ್ತೆಮಾಡಿದೆ.
ರಾಜ್ಯದ ವಿವಿಧ ನಗರಗಳಲ್ಲಿ 242 ಹೋಟೆಲ್, ರೆಸ್ಟೋರೆಂಟ್, ಬೇಕರಿ ಮತ್ತು ರೆಸಾರ್ಟ್‌ಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗ ತಪಾಸಣೆ ನಡೆಸಿದೆ. ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಸೇವೆ ಒದಗಿಸುವ ಉದ್ಯಮಗಳಲ್ಲೂ ತಪಾಸಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ಅವಧಿಯಲ್ಲಿ ತೆರಿಗೆ ವಂಚನೆಯ ಹಲವು ಪ್ರಕರಣಗಳನ್ನು ಪತ್ತೆಮಾಡಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ. ಶಿಖಾ ಮಾಹಿತಿ ನೀಡಿದ್ದಾರೆ.
ತೆರಿಗೆ ವಂಚಿಸಿ ವಹಿವಾಟು ನಡೆಸಿರುವುದು, ಗ್ರಾಹಕರಿಂದ ಸಂಗ್ರಹಿಸಿದ ತೆರಿಗೆ ಮೊತ್ತವನ್ನು ಇಲಾಖೆಗೆ ಸಂದಾಯ ಮಾಡದಿರುವುದು, ಅಕ್ರಮವಾಗಿ ಹೂಡುವಳಿ ತೆರಿಗೆ ಪಡೆದಿರುವುದು, ತೆರಿಗೆ ದರದ ತಪ್ಪು ವರ್ಗೀಕರಣ ಮಾಡಿ ಗ್ರಾಹಕರಿಂದ ವಸೂಲಿ ಮಾಡಿರುವುದು, ಕ್ಲೌಡ್ ಸಂಗ್ರಹದಲ್ಲಿ ವಹಿವಾಟಿನ ಮಾಹಿತಿ ಬಚ್ಚಿಟ್ಟಿರುವುದು, ನಿಗದಿತ ಮಿತಿಗಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುತ್ತಿದ್ದರೂ ಜಿಎಸ್‌ಟಿ ನೋಂದಣಿ ಮಾಡಿಸದೇ ಇರುವುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕೆಲವು ವರ್ತಕರು ತೆರಿಗೆ ವಂಚಿಸಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ರಾಜ್ಯದ ವಿವಿಧ ಭಾಗಗಳ ವರ್ತಕರು ಹಲವು ಕ್ಯೂಆರ್ ಕೋಡ್‌ಗಳನ್ನು ಬಳಸಿಕೊಂಡು ಗ್ರಾಹಕರಿಂದ ಹಣ ಪಡೆಯುತ್ತಿದ್ದು, ಕೆಲವು ಕ್ಯೂಆರ್ ಕೋಡ್‌ಗಳ ಮೂಲಕ ಸಂಗ್ರಹವಾದ ಹಣದ ಮಾಹಿತಿಯನ್ನು ಮಾತ್ರ ಇಲಾಖೆಗೆ ಸಲ್ಲಿಸುತ್ತಿರುವುದನ್ನು ಇಲಾಖೆ ಪತ್ತೆ ಹಚ್ಚಿದೆ ಎಂದು ತಿಳಿದು ಬಂದಿದೆ.
ತಪಾಸಣೆಯ ಸಂದರ್ಭದಲ್ಲಿ ಲ್ಯಾಪ್‌ಟಾಪ್, ಮೊಬೈಲ್, ಡಾಟಾ ಸಂಗ್ರಹ ಸಾಧನಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ತೆರಿಗೆ ವಂಚಿಸಿರುವ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಬೇಕರಿ ಮಾಲೀಕರ ವಿರುದ್ಧ ಕಾನೂನು ಕ್ರಮದ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಪ್ರಕ್ರಿಯೆಯ ನಂತರ ಕೆಲವು ವ್ಯಾಪಾರಿಗಳು ಸ್ವಯಂಪ್ರೇರಣೆಯಿಂದ ತೆರಿಗೆ ಬಾಕಿಯನ್ನು ಪಾವತಿಸಲು ಆರಂಭಿಸಿದ್ದಾರೆ ಎಂದು ಶಿಖಾ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮೂರು ಅಪಘಾತ, 3 ಸಾವು
ಬೆಂಗಳೂರಿನ ಪೀಣ್ಯ, ಕೆಂಗೇರಿ, ಆರ್.ಟಿ.ನಗರ ಮತ್ತು ಯಶವಂತಪುರ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟು, ಒಬ್ಬರು ಗಾಯಗೊಂಡಿರುವ ಪ್ರಕರಣ ವರದಿಯಾಗಿದೆ.
ಬಿಎಂಟಿಸಿ ಬಸ್‌ನ ಹಿಂಬದಿ ಚಕ್ರ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಬೈಕ್ ಸವಾರನನ್ನು 22 ವರ್ಷದ ತಿಪಟೂರಿನ ತೇಜಸ್ ಎಂದು ಗುರುತಿಸಲಾಗಿದೆ.
ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಮೈಸೂರು ರಸ್ತೆ ಕಡೆಯಿಂದ ಉತ್ತರಹಳ್ಳಿ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಂತ್ರಿ ಅಲೈನ್ ಅಪಾರ್ಟ್‌ಮೆಂಟ್ ಮುಂಬಾಗದಲ್ಲಿ ಅಪಘಾತ ಸಂಭವಿಸಿದೆ.
ಕೆಂಗೇರಿಯ ಪಿ.ಜಿಯೊಂದರಲ್ಲಿ ನೆಲೆಸಿದ್ದ ತೇಜಸ್ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ಮಧ್ಯಾಹ್ನ ಸ್ನೇಹಿತನನ್ನು ಭೇಟಿಯಾಗಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ಬಿಎಂಟಿಸಿ ಬಸ್‌ವೊಂದು ಉತ್ತರಹಳ್ಳಿ ಕಡೆಗೆ ಸಂಚರಿಸುತ್ತಿತ್ತು. ಮಧ್ಯಾಹ್ನ ಸ್ನೇಹಿತನನ್ನು ಭೇಟಿಯಾಗಲು ಬೈಕ್‌ನಲ್ಲಿ ತೆರಳುತ್ತಿದ್ದ ತೇಜಸ್ ಬಸ್ ಅನ್ನು ಹಿಂದಿಕ್ಕಿ ಮುಂದೆ ಸಾಗಲು ಪ್ರಯತ್ನಿಸಿದಾಗ ಆಯತಪ್ಪಿ ಬಿದ್ದಿದ್ದಾರೆ. ತೇಜಸ್‌ನ ತಲೆಯ ಮೇಲೆ ಬಸ್‌ನ ಬಲಭಾಗದ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಚಾಲಕ ಸಾವು
ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕರೊಬ್ಬರು ಮೃತಪಟ್ಟಿದ್ದಾರೆ. ಆರ್.ಟಿ.ನಗರದ ರಾಜು(36) ಮೃತ ಕಾರು ಚಾಲಕ ಎಂದು ತಿಳಿದು ಬಂದಿದೆ. ರಾತ್ರಿ 8 ಗಂಟೆ ಸುಮಾರಿಗೆ ದಿಣ್ಣೂರು ಮುಖ್ಯ ರಸ್ತೆಯಲ್ಲಿ ಅಪಘಾತ ನಡೆದಿದೆ.
ರಾಜು ದಿಣ್ಣೂರು ಮುಖ್ಯರಸ್ತೆಯಲ್ಲಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಆಗ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಚಾಲಕ ರಾಜು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಅವರು ಮೃತಪಟ್ಟರು ಎಂದು ಪೊಲೀಸರು ಹೇಳಿದರು.
ಕಾರ್ಮಿಕ ಸಾವು
ಕ್ಯಾಂಟರ್ ವಾಹನದಿಂದ ಕಾರ್ಮಿಕನೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದ ಜಂಕ್ಷನ್‌ನಲ್ಲಿ ನಡೆದಿದೆ. 20 ವರ್ಷದ ರಾಜು ಸರೂಟ್ ಮೃತ ಕಾರ್ಮಿಕ ಎಂದು ತಿಳಿದು ಬಂದಿದೆ.
ಕ್ಯಾಂಟರ್ ವಾಹನಕ್ಕೆ ಸಿಮೆಂಟ್ ಪಂಪ್ ಮಾಡುವ ವಾಹನವನ್ನು ಜೋಡಿಸಿಕೊಂಡು ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಗೊರಗುಂಟೆಪಾಳ್ಯದಲ್ಲಿ ಸಿಗ್ನಲ್ ಬಿದ್ದಿದ್ದರಿಂದ ವಾಹನ ನಿಲ್ಲಿಸಲಾಗಿತ್ತು. ರಾಜು ಸರೂಟ್ ವಾಹನದಿಂದ ಇಳಿದು ಮೂತ್ರ ವಿಸರ್ಜನೆಗೆ ತೆರಳಿದ್ದರು. ಮತ್ತೆ ಬಂದು ವಾಹನವನ್ನು ಏರುವ ಸಂದರ್ಭದಲ್ಲಿ ಚಾಲಕ ನಿರ್ಲಕ್ಷ್ಯದಿಂದ ಚಲಾಯಿಸಿದ್ದರಿಂದ ಕೆಳಕ್ಕೆ ಬಿದ್ದ ಕಾರ್ಮಿಕ ರಾಜು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ
ವರದಿ: ಎಚ್. ಮಾರುತಿ