ಬೆಂಗಳೂರಲ್ಲಿ ಕಾಲ್ನಡಿಗೆಯೇ ಬೆಸ್ಟ್ ಅಂತಿದೆ ಗೂಗಲ್ ಮ್ಯಾಪ್ಸ್, 6 ಕಿಮೀ ಅಂತರದ ಪ್ರಯಾಣದ ಅವಧಿಯ ಸ್ಕ್ರೀನ್ ಶಾಟ್ ವೈರಲ್
ಬೆಂಗಳೂರು ಸಂಚಾರ ದಟ್ಟಣೆ ಯಾವಾಗ ಇದ್ದರೂ ಸುದ್ದಿಯ ಕೇಂದ್ರ ಬಿಂದು. ಹಲವರ ಅನಿಸಿಕೆಯನ್ನೇ ಬಿಂಬಿಸುವಂತೆ,ಬೆಂಗಳೂರಲ್ಲಿ ಕಾಲ್ನಡಿಗೆಯೇ ಬೆಸ್ಟ್ ಅಂತಿದೆ ಗೂಗಲ್ ಮ್ಯಾಪ್ಸ್. 6 ಕಿಮೀ ಅಂತರದ ಪ್ರಯಾಣದ ಅವಧಿಯ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಇದರ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಎಂದ ಕೂಡಲೇ ಕಣ್ಣ ಮುಂದೆ ಸಹಜವಾಗಿಯೇ ಬರುವುದು ಸಂಚಾರ ದಟ್ಟಣೆ (Bengaluru Traffic). ಇನ್ನು ಕಾರಿನಲ್ಲಿ ಸಂಚರಿಸುವುದಕ್ಕಿಂತ ಕಾಲ್ನಡಿಗೆಯಲ್ಲಿ ಹೋಗುವುದೇ ವಾಸಿ ಎಂಬ ಜನಸಾಮಾನ್ಯರ ಭಾವನೆಗೆ ಪೂರಕವಾಗಿ ಗೂಗಲ್ ಮ್ಯಾಪ್ಸ್ (Google Maps) ಕೂಡ ಅದನ್ನೆ ತೋರಿಸಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಇರುವ ದಿನಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಬೇಕಾದರೆ ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ.
ಸಂಚಾರ ದಟ್ಟಣೆಯಲ್ಲಿ ದಿನದ ಬಹುತೇಕ ಸಮಯ ಕಳೆಯುವ ಪ್ರಯಾಣಿಕರು ತಮ್ಮ ಕೆಲಸದ ಅವಧಿಯನ್ನು ಕಳೆದುಕೊಳ್ಳುತ್ತಿರುವುದು ಕೂಡ ಅಷ್ಟೇ ಸತ್ಯ. ರಾಜ್ಯ ರಾಜಧಾನಿ ಬೆಂಗಳೂರು ಉದ್ಯೋಗ ನಗರಿಯಾಗಿದ್ದು, ತನ್ನೊಡಲಿಗೆ ನಿತ್ಯವೂ ಹೊಸಬರನ್ನು ಸೇರಿಸುತ್ತಲೇ ಇದೆ. ಆದರೆ, ಅದರ ಮೂಲಸೌಕರ್ಯವು ಜನಸಂಪನ್ಮೂಲದ ಒಳಹರಿವನ್ನು ಎದುರಿಸಲು ಅಸಮರ್ಥವಾಗಿರುವುದು ಅಷ್ಟೇ ಸತ್ಯ. ಕ್ಷಿಪ್ರ ನಗರೀಕರಣ, ಕಳಪೆ ಯೋಜನೆ, ಸೀಮಿತ ಸಾರ್ವಜನಿಕ ಸಾರಿಗೆ ಆಯ್ಕೆಗಳು ಬೆಂಗಳೂರಿನ ದಟ್ಟಣೆಯ ರಸ್ತೆಗಳು ಮತ್ತು ಪೀಕ್-ಅವರ್ ಟ್ರಾಫಿಕ್‌ಗೆ ಕೆಲವು ಕಾರಣಗಳು.
ಬ್ರಿಗೇಡ್ ಮೆಟ್ರೊಪೊಲಿಸ್‌ನಿಂದ ಕೆಆರ್ ಪುರಂ ರೈಲು ನಿಲ್ದಾಣಕ್ಕೆ 6 ಕಿ.ಮೀ.; ಸಂಚಾರ ಸಮಯ ವೈರಲ್
ಆಯುಷ್ ಸಿಂಗ್ ಎಂಬುವವರು ನಿನ್ನೆ Google ನಕ್ಷೆಗಳ ಸ್ಕ್ರೀನ್‌ಶಾಟ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ, ಬ್ರಿಗೇಡ್ ಮೆಟ್ರೊಪೊಲಿಸ್‌ನಿಂದ ಕೆಆರ್ ಪುರಂ ರೈಲು ನಿಲ್ದಾಣಕ್ಕೆ ಚಾಲನೆ ಮಾಡಲು ತೆಗೆದುಕೊಳ್ಳುವ ಸಮಯ ಮತ್ತು ಸರಿಸುಮಾರು 6 ಕಿಮೀ ದೂರದಲ್ಲಿ ನಡೆಯಲು ತೆಗೆದುಕೊಳ್ಳುವ ಸಮಯವನ್ನು ತೋರಿಸುತ್ತಿದೆ.
ಅವರು ಶೇರ್ ಮಾಡಿದ್ದ ಸ್ಕ್ರೀನ್‌ಶಾಟ್ ಪ್ರಕಾರ, ಎರಡು ಸ್ಥಳಗಳ ನಡುವೆ ಕಾರು ಚಾಲನೆ ಮಾಡಲು ಒಬ್ಬ ವ್ಯಕ್ತಿಗೆ 44 ನಿಮಿಷ ಬೇಕಾಗಬಹುದು ಎಂದು ಅಂದಾಜಿಸಿದೆ. ಕಾಲ್ನಡಿಗೆಯಾದರೆ 42 ನಿಮಿಷ ಎಂಬುದನ್ನು ಅದು ತೋರಿಸಿದೆ. ಇಂಥವು ಏನಿದ್ದರೂ ಬೆಂಗಳೂರಿನಲ್ಲಿ ಮಾತ್ರ ನೋಡಬಹುದು ಎಂದು ಸ್ಕ್ರೀನ್‌ಶಾಟ್ ಹಂಚಿಕೊಳ್ಳುವಾಗ ಸಿಂಗ್ ಬರೆದುಕೊಂಡಿದ್ದಾರೆ.
ಎಕ್ಸ್‌ನಲ್ಲಿ ವೈರಲ್ ಪೋಸ್ಟ್‌ಗೆ 3.3 ಲಕ್ಷಕ್ಕೂ ಹೆಚ್ಚು ವೀಕ್ಷಣೆ; ವಿಭಿನ್ನ ಪ್ರತಿಕ್ರಿಯೆ
ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ನಿನ್ನೆ (ಜುಲೈ 25) ಬೆಳಗ್ಗೆ 9.08 ನಿಮಿಷಕ್ಕೆ ಈ ಪೋಸ್ಟ್ ಪ್ರಕಟವಾಗಿದೆ. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ 3.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ವಿಪರೀತ ಹೆಚ್ಚಳವಾಗಿದೆ ಎಂದು ಹಲವರು ಒಪ್ಪಿಕೊಂಡರೆ, ಇತರರು ಅವರ “ಬೆಂಗಳೂರಿನಲ್ಲಿ ಮಾತ್ರ” ನಿರೂಪಣೆಯನ್ನು ವಿರೋಧಿಸಿದ್ದು, “ಜಗತ್ತಿನ ಅನೇಕ ಮೆಟ್ರೋ ನಗರಗಳಲ್ಲಿ ಇದೇ ಕಥೆ” ಎಂದಿದ್ದಾರೆ. "ಮುಂಬೈ ಮತ್ತು ದೆಹಲಿ ಕೂಡ ಗರಿಷ್ಠ ಸಮಯದಲ್ಲಿ ಇದೇ ಪರಿಸ್ಥಿತಿ ಇದೆ" ಎಂದು ಮತ್ತೊಬ್ಬ ಎಕ್ಸ್ ಬಳಕೆದಾರ ಅಭಿಲಾಶ್ ಹೇಳಿದ್ದಾರೆ.
ಒಬ್ಬ ವ್ಯಕ್ತಿ ಬೆಂಗಳೂರನ್ನು "ಭಾರತದ ಸಂಚಾರ ರಾಜಧಾನಿ" ಎಂದು ಕರೆದಿದ್ದಾರೆ. ಮತ್ತೊಂದೆಡೆ, ಉಸಿರುಗಟ್ಟಿದ ರಸ್ತೆಗಳನ್ನು ತಪ್ಪಿಸಲು ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳುವಂತೆ ಇನ್ನು ಕೆಲವರು ಸಿಂಗ್ ಅವರಿಗೆ ಸಲಹೆ ನೀಡಿದ್ದಾರೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)