ಗ್ರೇಟರ್‌ ಬೆಂಗಳೂರು ಮಸೂದೆ ಮಂಡನೆ; ಹಿಗ್ಗಲಿದೆ ಬಿಬಿಎಂಪಿ ವ್ಯಾಪ್ತಿ, 10 ಪಾಲಿಕೆಗಳ ರಚನೆ ಪ್ರಸ್ತಾವನೆ
ಕನ್ನಡ ಸುದ್ದಿ  /  ಕರ್ನಾಟಕ  /  ಗ್ರೇಟರ್‌ ಬೆಂಗಳೂರು ಮಸೂದೆ ಮಂಡನೆ; ಹಿಗ್ಗಲಿದೆ ಬಿಬಿಎಂಪಿ ವ್ಯಾಪ್ತಿ, 10 ಪಾಲಿಕೆಗಳ ರಚನೆ ಪ್ರಸ್ತಾವನೆ

ಗ್ರೇಟರ್‌ ಬೆಂಗಳೂರು ಮಸೂದೆ ಮಂಡನೆ; ಹಿಗ್ಗಲಿದೆ ಬಿಬಿಎಂಪಿ ವ್ಯಾಪ್ತಿ, 10 ಪಾಲಿಕೆಗಳ ರಚನೆ ಪ್ರಸ್ತಾವನೆ

ವಿಧಾನ ಸಭೆಯಲ್ಲಿ ಗ್ರೇಟರ್‌ ಬೆಂಗಳೂರು ಮಸೂದೆ ಮಂಡನೆಯಾಗಿದೆ. ಇದು ಅಂಗೀಕಾರವಾಗಿ ಅನುಷ್ಠಾನವಾದರೆ ಬಿಬಿಎಂಪಿಯ ವ್ಯಾಪ್ತಿ ಹಿಗ್ಗಲಿದೆ. 5 ವಲಯಗಳು, 10 ಪಾಲಿಕೆಗಳ ರಚನೆಯಾಗಲಿದೆ. ಆದರೆ ಪ್ರಾಧಿಕಾರದ ಮೇಲೆ ಸರ್ಕಾರದ ನಿಯಂತ್ರಣವಿರಲಿದೆ. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವಿದ್ಯಮಾನದ ವಿವರ ಇಲ್ಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಗ್ರೇಟರ್‌ ಬೆಂಗಳೂರು ಮಸೂದೆ ಮಂಡನೆ; ಹಿಗ್ಗಲಿದೆ ಬಿಬಿಎಂಪಿ ವ್ಯಾಪ್ತಿ, 10 ಪಾಲಿಕೆಗಳ ರಚನೆ ಪ್ರಸ್ತಾವನೆ. (ಸಾಂಕೇತಿಕ ಚಿತ್ರ)
ಗ್ರೇಟರ್‌ ಬೆಂಗಳೂರು ಮಸೂದೆ ಮಂಡನೆ; ಹಿಗ್ಗಲಿದೆ ಬಿಬಿಎಂಪಿ ವ್ಯಾಪ್ತಿ, 10 ಪಾಲಿಕೆಗಳ ರಚನೆ ಪ್ರಸ್ತಾವನೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸಿ, ಬೆಂಗಳೂರು ಮಹಾ ನಗರವನ್ನು ಪುನಾರಚಿಸುವ ಗ್ರೇಟರ್‌ ಬೆಂಗಳೂರು ಆಡಳಿತಾತ್ಮಕ ಮಸೂದೆ-2024ನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಬೆಂಗಳೂರು ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ 114 ಪುಟಗಳ ಈ ಮಸೂದೆಯನ್ನು ಮಂಡಿಸಿದ್ದಾರೆ.

ವಿಸ್ತೃತ ಚರ್ಚೆ ನಡೆಸದೆ ವಿಪಕ್ಷಗಳ ಮನವೊಲಿಸದೆ ಈ ಮಸೂದೆಯನ್ನು ಅಂಗೀಕರಿಸುವುದಿಲ್ಲ ಎಂದು ಅವರು ಸದನಕ್ಕೆ ಭರವಸೆ ನೀಡಿದರು. ಈ ಸಂಬಂಧ ಶನಿವಾರ ಬೆಂಗಳೂರು ನಗರದ ಶಾಸಕರ ಸಭೆಯನ್ನು ಆಯೋಜಿಸಿರುವುದಾಗಿ ಅವರು ತಿಳಿಸಿದ್ದಾರೆ.

ಬೆಂಗಳೂರು ಆಡಳಿತ ಪುನಾರಚನೆ ಶಿಫಾರಸಿಗೆ ಸಮಿತಿ

ಬೆಂಗಳೂರು ಆಡಳಿತವನ್ನು ಪುನಾರಚಿಸಲೆಂದೇ ಸರ್ಕಾರ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ವರದಿಯನ್ನು ನೀಡಿದ್ದು, ಸಮಿತಿಯ ಎಲ್ಲ ಶಿಪಾರಸ್ಸುಗಳನ್ನು ಸರ್ಕಾರ ಸಾರಾಸಗಟಾಗಿ ಒಪ್ಪಿಕೊಳ್ಳುತ್ತದೆ ಎಂದು ನಿರೀಕ್ಷಿಸುವಂತಿಲ್ಲ.

ಸಾರ್ವಜನಿಕರ ಹೆಚ್ಚು ಪಾಲ್ಗೊಳ್ಳುವಿಕೆಯ ತಜ್ಞರ ಸಮಿತಿಯು ಮೇಯರ್‌ ಇನ್‌ ಕೌನ್ಸಿಲ್‌ ಮತ್ತು ವಾರ್ಡ್‌ ಸಮಿತಿಗಳ ವ್ಯವಸ್ಥೆಗೆ ಶಿಪಾರಸ್ಸು ಮಾಡಿದ್ದು ಸರ್ಕಾರ ಒಪ್ಪಿಕೊಂಡಿಲ್ಲ. ಯೋಜನೆಗಳನ್ನು ರೂಪಿಸುವ ಅಧಿಕಾರವನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಬಿಡಬೇಕು ಎಂದು ಸಮಿತಿ ಮಾಡಿದ್ದ ಶಿಫಾರಸನ್ನೂ ಸರ್ಕಾರ ಒಪ್ಪಿಕೊಂಡಿಲ್ಲ. ಹಣಕಾಸಿನ ಅಧಿಕಾರ ಮತ್ತು ಯೋಜನೆಗಳನ್ನು ರೂಪಿಸುವ ಅಧಿಕಾರವನ್ನು ಉಳಿಸಿಕೊಳ್ಳಲು ಸರ್ಕಾರವೇ ಬಯಸಿದೆ. ಗ್ರೇಟರ್‌ ಬೆಂಗಳೂರು, ಪಾಲಿಕೆ ಮತ್ತು ವಾರ್ಡ್‌ ಸಮಿತಿ ಸೇರಿ ಮೂರು ಹಂತದ ಆಡಳಿತ ವ್ಯವಸ್ಥೆ ಇರಲಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ; 6 ಮುಖ್ಯ ಅಂಶ

1) ಬೆಂಗಳೂರಿನ ವ್ಯಾಪ್ತಿಯನ್ನು ವಿಸ್ತರಿಸಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಕ್ಷೇತ್ರಗಳನ್ನು ಸೇರಿಸಿ ತಲಾ 10 ಲಕ್ಷ ಜನಸಂಖ್ಯೆಗೆ ಒಂದರಂತೆ 10 ಪಾಲಿಕೆಗಳನ್ನು ರಚಿಸಲಿದೆ. ಪ್ರತಿ ಪಾಲಿಕೆಗೂ ಪ್ರತ್ಯೇಕ ಮೇಯರ್‌ ಮತ್ತು ಡೆಪ್ಯುಟಿ ಮೇಯರ್‌ ಇರಲಿದ್ದು, ಇವರ ಅವದಿ 5 ವರ್ಷಗಳಾಗಿರುತ್ತವೆ. ಪ್ರತಿ ಪಾಲಿಕೆಯಲ್ಲೂ 50ರಿಂದ 200 ಕಾರ್ಪೋರೇಟರ್‌ ಗಳಿರಲಿದ್ದು, ಶೇ.10ರಷ್ಟು ಸದಸ್ಯರನ್ನು ಸರ್ಕಾರ ನಾಮಕರಣ ಮಾಡಲಿದೆ.

2) ಈ ಎಲ್ಲ ಪಾಲಿಕೆಗಳ ಮೇಲೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಇರಲಿದೆ. ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಪದ ನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಬೆಂಗಳೂರು ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ರಾಜ್ಯ ಸಚಿವ ಸಂಪುಟದ ಗೃಹ, ಸಾರಿಗೆ ಮತ್ತು ಇಂಧನ ಖಾತೆಗಳ ಸಚಿವರು ಸದಸ್ಯರಾಗಿರುತ್ತಾರೆ. ಮುಖ್ಯ ಆಯುಕ್ತರು, ಮೇಯರ್‌ ಗಳು, ಪ್ರತಿ

3) ಪಾಲಿಕೆಯಿಂದ ಇಬ್ಬರು ಸದಸ್ಯರು, ಬಿಎಂಎಲ್‌ ಟಿಎ, ಬೆಂಗಳೂರು ನಗರ ಯೋಜನೆಯ ಮುಖ್ಯ ನಗರ ಯೋಜನಾಧಿಕಾರಿ, ಬೆಂಗಳೂರಿನ ಪ್ರಧಾನ ಎಂಜಿನಿಯರ್‌, ಅಗ್ನಿಶಾಮಕ ದಳದ ನಿರ್ದೆಶಕರು ಸದಸ್ಯರಾಗಿರುತ್ತಾರೆ. ಬಿಡಿಎ, ಜಲ ಮಂಡಲಿ ಬಿಎಂಆರ್‌ ಸಿಎಲ್‌, ಘನ ತ್ಯಾಜ್ಯ ನಿರ್ವಹಣಾ ಮಂಡಲಿ, ಬೆಸ್ಕಾಂ, ಬಿಎಂಟಿಸಿ, ಬೆಂಗಳೂರು ಪೊಲೀಸ್‌ ಆಯುಕ್ತರೂ ಸದಸ್ಯರಾಗಿರುತ್ತಾರೆ. ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಎಲ್ಲ ಕ್ಷೇತ್ರಗಳ ಶಾಸಕರು ಕಾಯಂ ಆಹ್ವಾನಿತರಾಗಿರುತ್ತಾರೆ.

4) ಎಲ್ಲ ಪಾಲಿಕೆಗಳ ಶಿಪಾರಸ್ಸುಗಳ ಅನ್ವಯ ಪ್ರಾಧಿಕಾರವು ತೆರಿಗೆ ದರ, ಸೆಸ್‌, ಶುಲ್ಕ ಮತ್ತು ಬಳಕೆದಾರರ ಶುಲ್ಕವನ್ನು ಪ್ರತಿ ವರ್ಷ ನಿಗದಿಪಡಿಸಲಿದೆ. ಪ್ರಮುಖ ಯೋಜನೆಗಳ ರಚನೆ ಮತ್ತು ಕಾರ್ಯಗತಗೊಳಿಸುವ ಜವಬ್ಧಾರಿ ಪ್ರಾಧಿಕಾರದ ಹೊಣೆಯಾಗಿದ್ದು, ಅನುದಾನದ ಹಂಚಿಕೆಯ ಅಧಿಕಾರವನ್ನೂ ಪ್ರಾಧಿಕಾರವೇ ಉಳಿಸಿಕೊಂಡಿದೆ.

5) ಬಿಬಿಎಂಪಿ, ಬಿಎಂಆರ್‌ ಡಿಎ ವ್ಯಾಪ್ತಿಯ ಹೊಸಕೋಟೆ, ನೆಲಮಂಗಲ, ಆನೇಕಲ್‌ ದೇವನಹಳ್ಳಿ, ದೊಡ್ಡಬಳ್ಳಾಪುರ, ಬಿಡದಿ, ಎಲೆಕ್ಟ್ರಾನಿಕ್ಸ್‌ ಸಿಟಿ ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಸೇರಲಿವೆ. ಪ್ರಸ್ತುತ ಬಿಬಿಎಂಪಿ ವ್ಯಾಪ್ತಿ 708 ಚ.ಕಿಮೀ ವಿಸ್ತೀರ್ಣವಿದ್ದು, ಪ್ರಾಧಿಕಾರದ ವ್ಯಾಪ್ತಿ 1400 ಚ.ಕಿಮೀ.ಗೆ ಹಿಗ್ಗಲಿದೆ.

6) ಪ್ರಾಧಿಕಾರದ ಅಡಿಯಲ್ಲಿ ರಚನೆಯಾಗುವ ಎಲ್ಲ ಪಾಲಿಕೆಗಳ ಚುನಾವಣೆಗಳಲ್ಲಿ ಶೇ.50ರಷ್ಟು ಸ್ಥಾನಗಳನ್ನು ಎಸ್‌ ಸಿ, ಎಸ್‌ ಟಿ, ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಿಡಲು ಶಿಫಾರಸ್ಸು ಮಾಡಿದೆ. ಗೇಟರ್‌ ಬೆಂಗಳೂರು ಸುರಕ್ಷತೆಗಾಗಿ ಪ್ರತ್ಯೇಕ ಭದ್ರತಾ ಕಾರ್ಯಪಡೆಯನ್ನು ರಚಿಸಲು ವಿದೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಈ ಪಡೆಯು ಪಾಲಿಕೆಗಳ ಆಸ್ತಿ ರಕ್ಷಣೆ, ಆದಾಯ ಸೋರಿಕೆ ನಿಯಂತ್ರಣ ಮತ್ತು ಬೈಲಾ ಉಲ್ಲಂಘನೆ ನಡೆಯದಂತೆ ನಿಗಾ ವಹಿಸಲಿದೆ.

ಒಟ್ಟಾರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವೂ ಸರ್ಕಾರದ ಹಿಡಿತದಲ್ಲೇ ಇರುತ್ತದೆ. ಮಸೂದೆಯ ಅಂಶಗಳನ್ನು ನೋಡಿದರೆ ಅಧಿಕಾರ ವಿಕೇಂದ್ರೀಕರಣಕ್ಕಿಂತ ಅಧಿಕಾರ ಕೇಂದ್ರೀಕೃತವಾಗುವ ಸಂಭವವೇ ಹೆಚ್ಚು. ಪಾಲಿಕೆ ತೆಗೆದುಕೊಳ್ಳುವ ನಿರ್ಧಾರಗಳನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಹಕ್ಕು ಸರ್ಕಾರಕ್ಕಿದೆ. ಪಾಲಿಕೆಯನ್ನು ವಜಾಗೊಳಿಸುವ ಅಧಿಕಾರ, ವಜಾಗೊಂಡ ಪಾಲಿಕೆಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅಧಿಕಾರ, ಪಾಲಿಕೆಯ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸರ್ಕಾರವೇ ಉಳಿಸಿಕೊಂಡಿದೆ.

(ವರದಿ- ಎಚ್ ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner