Groping Incident: ಬೆಂಗಳೂರು ಮಾಲ್‌ನಲ್ಲಿ ಯುವತಿಯರ ಜತೆಗೆ ಅಸಭ್ಯ ವರ್ತನೆ ತೋರಿದ 61 ವರ್ಷದ ವ್ಯಕ್ತಿ ಕೋರ್ಟ್‌ಗೆ ಶರಣು
ಬೆಂಗಳೂರಿನ ಲುಲು ಮಾಲ್‌ನಲ್ಲಿ ಯುವತಿಯರ ಜತೆಗೆ ಅಸಭ್ಯವಾಗಿ ವರ್ತಿಸಿದ್ದ 61 ವರ್ಷದ ವ್ಯಕ್ತಿ ನ್ಯಾಯಾಲಯಕ್ಕೆ ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವ್ಯಕ್ತಿಯ ಕೃತ್ಯದ ವಿಡಿಯೋ ವೈರಲ್ ಆಗಿತ್ತು.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಮಾಲ್‌ವೊಂದರಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಮಹಿಳೆಯರ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ವಿಡಿಯೋ ಎರಡು ದಿನಗಳ ಹಿಂದೆ ವೈರಲ್ ಆಗಿತ್ತು. ಇದಾದ ಬಳಿಕ ನಾಪತ್ತೆಯಾಗಿದ್ದ ವ್ಯಕ್ತಿ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಯುವತಿಯರಿಗೆ ಶಾರೀರಿಕವಾಗಿ ಕಿರುಕುಳ ನೀಡಿದ್ದ ವ್ಯಕ್ತಿಯ ನಡೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಟೀಕೆಗೆ ಒಳಗಾಗಿತ್ತು. ನೆಟ್ಟಿಗರು ಆ ವ್ಯಕ್ತಿಯ ಬಂಧನಕ್ಕೆ ಒತ್ತಾಯಿಸಿದ್ದರು.
ನ್ಯಾಯಾಲಯಕ್ಕೆ ಶರಣಾದ ವ್ಯಕ್ತಿಯನ್ನು ಅಶ್ವತ್ಥ ನಾರಾಯಣ ಎಂದು ಗುರುತಿಸಲಾಗಿದೆ. ವಯಸ್ಸು 61. ಬಸವೇಶ್ವರ ನಗರದ ನಿವಾಸಿ. ದಾಸರಹಳ್ಳಿಯ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಕೆಲಸ ಮಾಡಿ ನಿವೃತ್ತರಾದ ವ್ಯಕ್ತಿ ಎಂದು ದ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬೆಂಗಳೂರಿನ ಲುಲು ಮಾಲ್‌ನಲ್ಲಿ ನಡೆದ ಘಟನೆ
ಬೆಂಗಳೂರಿನ ಲುಲು ಮಾಲ್‌ನಲ್ಲಿ ಸುತ್ತಾಡುತ್ತಿದ್ದ ಅಶ್ವತ್ಥ ನಾರಾಯಣ (61) ಅಲ್ಲಿದ್ದ ಯುವತಿಯರ ಜತೆ ಅಸಭ್ಯ ವರ್ತನೆ ತೋರುತ್ತ, ಮುಟ್ಟಬಾರದ ಜಾಗ ಮುಟ್ಟಿ ಕಿರುಕುಳ ನೀಡಿದ ವಿಡಿಯೋ ವೈರಲ್ ಆಗಿತ್ತು. ಈ ವಿದ್ಯಮಾನ ಮಾಲ್‌ನಲ್ಲಿ ಕೆಲಕಾಲ ಗೊಂದಲ ಸೃಷ್ಟಿಸಿತ್ತು. ಬಳಿಕ ಲುಲು ಮಾಲ್ ಆಡಳಿತ ಈ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿತ್ತು.
ಲುಲು ಮಾಲ್‌ನಲ್ಲಿ ಇತ್ತೀಚೆಗೆ ಈ ಘಟನೆ ನಡೆದಿತ್ತು. ಗುರುವಾರ ದೂರು ದಾಖಲಾದ ಬಳಿಕ ವೀಡಿಯೊದಲ್ಲಿ ಆರೋಪಿಯ ನಿವಾಸವನ್ನು ಪತ್ತೆಹಚ್ಚಿದ್ದೇವೆ. ಆದರೆ ಆ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದ. ವಿಡಿಯೋದಲ್ಲಿದ್ದ ವ್ಯಕ್ತಿ ಮುಖ್ಯೋಪಾಧ್ಯಾಯನಾಗಿ ಕೆಲಸ ಮಾಡಿ 8 ತಿಂಗಳ ಹಿಂದೆ ನಿವೃತ್ತನಾಗಿದ್ದ. ಅವರ ಮನೆಗೆ ಬೀಗ ಹಾಕಲಾಗಿದೆ. ಆದರೆ ಶುಕ್ರವಾರ ಸಂಜೆ 5 ಗಂಟೆಗೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಿದ್ಧಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾಗಿ ವರದಿ ಹೇಳಿದೆ.
ವಿಡಿಯೋದಲ್ಲಿರುವ ದೃಶ್ಯದ ಪ್ರಕಾರ, ಈ ವ್ಯಕ್ತಿ ಉದ್ದೇಶ ಪೂರ್ವಕವಾಗಿ ಮಹಿಳೆಯ ಸಮೀಪ ಹೋಗಿ ಅವರ ಮೇಲೆ ಬೀಳಲು ಪ್ರಯತ್ನಿಸಿದ್ದು ಕಂಡುಬಂದಿತ್ತು. ಬಳಿಕ ಆ ಮಹಿಳೆಯ ಸಮೀಪದಿಂದ ದೂರ ಹೋಗಿರುವ ದೃಶ್ಯ ಕಂಡುಬಂದಿದೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಮಾಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.