ಕನ್ನಡ ಸುದ್ದಿ  /  Karnataka  /  Bengaluru News Groundwater Has Fallen In This Taluk Reasons Why Extreme Water Shortage Here Mrt

ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂತರ್ಜಲ ಕುಸಿದಿರುವುದು ಈ ತಾಲೂಕಿನಲ್ಲೇ; ಐಟಿ ಕಂಪನಿಗಳಿಗೆ ಆಶ್ರಯ ನೀಡಿರುವ ಇಲ್ಲಿ ನೀರಿಗೆ ವಿಪರೀತ ಕೊರತೆ ಏಕೆ?

Bengaluru Water Crisis: ಬೆಂಗಳೂರು ಪೂರ್ವ ತಾಲೂಕಿನಲ್ಲಿ ಅತಿ ಹೆಚ್ಚು ಅಂತರ್ಜಲ ಕುಸಿದಿದೆ. ಐಟಿ ಕಂಪನಿಗಳಿಗೆ ಆಶ್ರಯ ನೀಡಿದ್ದರೂ ನೀರಿಗೆ ಮಾತ್ರ ವಿಪರೀತ ಕೊರತೆ ಏಕೆ ಎಂಬುದನ್ನ ತಿಳಿಯೋಣ. (ವರದಿ: ಎಚ್‌ ಮಾರುತಿ)

ಬೆಂಗಳೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರಿನ ಕ್ಯಾನ್ ತೆಗೆದುಕೊಂಡು ಹೋಗುತ್ತಿರುವ ಬಾಲಕ. ನಗರದಲ್ಲಿ ಕೆಲವು ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದೆ.
ಬೆಂಗಳೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರಿನ ಕ್ಯಾನ್ ತೆಗೆದುಕೊಂಡು ಹೋಗುತ್ತಿರುವ ಬಾಲಕ. ನಗರದಲ್ಲಿ ಕೆಲವು ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದೆ. (PTI)

ಬೆಂಗಳೂರು: ಕಳೆದೊಂದು ತಿಂಗಳಿನಿಂದ ರಾಜ್ಯ ರಾಜಧಾನಿ ಉದ್ಯಾನ ನಗರಿ ಬೆಂಗಳೂರು ನೀರಿನ ಸಮಸ್ಯೆ (Bengaluru Water Crisis) ತೀವ್ರಗೊಂಡಿದೆ. ಮಳೆಯ ಕೊರತೆ ಮತ್ತು ಅಂತರ್ಜಲ ಮಟ್ಟ ಕುಸಿದಿರುವುದು ಈ ಸಮಸ್ಯೆಯ ಮೂಲ ಕಾರಣ ಎನ್ನುವುದು ಅರಿವಿಗೆ ಬರತೊಡಗಿದೆ. ಆದರೂ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರು ಜಲಮಂಡಳಿ ಪ್ರಯತ್ನ ನಡೆಸುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರತೊಡಗಿದೆ. ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಹಳ್ಳಿಗಳಲ್ಲಿ ಮಾತ್ರ ನೀರಿನ ಸಮಸ್ಯೆ ಇನ್ನೂ ಕಾಡುತ್ತಲೇ ಇದೆ. ಅದರಲ್ಲೂ ಬೆಂಗಳೂರು ಪೂರ್ವ ತಾಲೂಕು ಗಂಭೀರವಾದ ನೀರಿನ ಸಮಸ್ಯೆ ಎದುರಿಸುತ್ತಿರುವುದು ಗಮನ ಸೆಳೆದಿದೆ. ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ ಈ ಬೇಸಿಗೆಯಲ್ಲಿ ರಾಜಧಾನಿಯಲ್ಲಿ ಅಂತರ್ಜಲ ಕುಸಿತದಿಂದ ಬೆಂಗಳೂರು ಪೂರ್ವ ತಾಲ್ಲೂಕು ಗಂಭೀರವಾದ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಬೆಂಗಳೂರು ಉತ್ತರ ತಾಲೂಕು ಕಡಿಮೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ.

ಬೆಂಗಳೂರಿನಲ್ಲಿ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಆಶ್ರಯ ನೀಡಿರುವುದೇ ಬೆಂಗಳೂರು ಪೂರ್ವ ತಾಲೂಕು. ಆದರೆ ಈ ಭಾಗದಲಿಯೇ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಡಿಸೆಂಬರ್, ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಈ ಭಾಗದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ಅಂತರ್ಜಲ ಮಟ್ಟ ಕುಸಿಯುತ್ತಾ ಹೋಗಿರುವುದು ಕಂಡು ಬಂದಿದೆ ಎಂದು ಪ್ರಾಧಿಕಾರ ಖುದ್ಧು ಪ್ರಾಧಿಕಾರವೇ ಒಪ್ಪಿಕೊಂಡಿದೆ.

ಒಂದು ದಶಕದ ಸರಾಸರಿಯನ್ನು ತೆಗೆದುಕೊಂಡರೆ 2014-2023ರ ಅವಧಿಯಲ್ಲಿ ಬೇಸಗೆಯ ತಿಂಗಳುಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಾ ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ. ಫೆಬ್ರವರಿಯಲ್ಲಿ 9.28 ಮೀಟರ್‌ಗಳಷ್ಟು ಕುಸಿದಿದ್ದರೆ, ಜನವರಿಯಲ್ಲಿ 5.81 ಮೀಟರ್‌ಗಳಷ್ಟು, ಡಿಸೆಂಬರ್‌ನಲ್ಲಿ 5.81 ಮೀಟರ್‌ಗಳಷ್ಟು ಅಂತರ್ಜಲ ಮಟ್ಟ ಕುಸಿದಿದೆ. ಈ ಹತ್ತು ವರ್ಷಗಳ ಬೇಸಿಗೆ ಅವಧಿಯಲ್ಲಿ ಸರಾಸರಿ ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಸರಾಸರಿ 5.52 ಮೀಟರ್‌ಗಳಷ್ಟು ಅಂತರ್ಜಲ ಕುಸಿದಿದೆ.

ಅವೈಜ್ಞಾನಿಕವಾಗಿ ಬೆಳೆಯುತ್ತಿದೆಯಾ ಪೂರ್ವ ತಾಲೂಕು?

ಐಟಿ ಕಂಪನಿಗಳಿಗೆ ನೆಲೆಯನ್ನು ಕೊಟ್ಟಿದ್ದರೂ ಬೆಂಗಳೂರು ಪೂರ್ವ ತಾಲೂಕಿನ ಬಹುತೇಕ ಪ್ರದೇಶಗಳಿಗೆ ಕಾವೇರಿ ನೀರು ಸರಬರಾಜು ವ್ಯವಸ್ಥೆ ಇಲ್ಲ. ಪೂರ್ವ ತಾಲೂಕು ಅವೈಜ್ಞಾನಿಕವಾಗಿ ಬೆಳೆಯುತ್ತಿದ್ದು, ಲೆಕ್ಕಕ್ಕೆ ಸಿಗದಷ್ಟು ನಿಯಂತ್ರಣವೇ ಇಲ್ಲದಷ್ಟು ಬೋರ್‌ವೆಲ್‌ಗಳಿವೆ. ಎಲ್ಲಿ ನೋಡಿದರೂ ಗಗನಚುಂಬಿ ಕಟ್ಟಡಗಳೇ ಕಂಡು ಬರುತ್ತಿವೆ. ಬೃಹತ್ ಕಂಪನಿಗಳು ತಲೆ ಎತ್ತುತ್ತಿವೆ. ಈ ಭಾಗದಲ್ಲಿ ಜನಸಂಖ್ಯೆಯೂ ಹೆಚ್ಚುತ್ತಿದೆ.

ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಂತರ್ಜಲ ಕುಸಿಯುತ್ತಾ ಹೋಗಿದೆ ಎಂದು ಈ ಭಾಗದ ನಿವಾಸಿಗಳು ಅಭಿಪ್ರಾಯಪಡುತ್ತಾರೆ. ದಶಕದ ಸರಾಸರಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಆನೇಕಲ್ ಮತ್ತು ಯಲಹಂಕ ತಾಲೂಕುಗಳಲ್ಲೂ 6 ಮೀಟರ್‌ಗಳಷ್ಟು ಅಂತರ್ಜಲ ಕುಸಿದಿದೆ. ಆದರೆ ಬೆಂಗಳೂರು ಉತ್ತರ ತಾಲೂಕು ಉತ್ತಮ ಸ್ಥಾನದಲ್ಲಿದೆ. ಇಲ್ಲಿ ದಶಕದ ಸರಾಸರಿಗೆ ಹೋಲಿಸಿದರೆ ಈ ತಾಲೂಕಿನಲ್ಲಿ ಡಿಸೆಂಬರ್‌ನಲ್ಲಿ 0.02 ಮೀಟರ್, ಜನವರಿಯಲ್ಲಿ 2.62 ಮೀಟರ್ ಮತ್ತು ಫೆಬ್ರವರಿ ತಿಂಗಳಲ್ಲಿ 0.35 ಮೀಟರ್‌ನಷ್ಟು ಅಂತರ್ಜಲ ಕುಸಿದಿದೆ.

ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಪರಿಸ್ಥಿತಿ ಆಶಾದಾಯಕವಾಗಿದೆ. ದಶಕದ ಫೆಬ್ರವರಿ ತಿಂಗಳ ಸರಾಸರಿಗೆ ಹೋಲಿಸಿದರೆ ಈ ಫೆಬ್ರವರಿ ತಿಂಗಳಲ್ಲಿ 6.15 ಮೀಟರ್‌ನಷ್ಟು ಅಂತರ್ಜಲ ಕುಸಿದಿದೆ. ಜನವರಿಯಲ್ಲಿ 1.38 ಮೀಟರ್, ಮತ್ತು ಡಿಸೆಂಬರ್ ತಿಂಗಳಲ್ಲಿ 0.74 ಮೀಟರ್ ನಷ್ಟು ಅಂತರ್ಜಲ ಕುಸಿದಿದೆ. ಅಂತರ್ಜಲ ಹೆಚ್ಚಿಸುವುದು ಸರ್ಕಾರದ ಜವಾಬ್ಧಾರಿ ಮಾತ್ರ ಅಲ್ಲ. ಸಾರ್ವಜನಿಕರ ಜವಬ್ಧಾರಿಯೂ ಇದೆ ಎನ್ನುವುದನ್ನು ಮನಗಾಣಬೇಕು. ಪ್ರತಿಯೊಬ್ಬ ನಾಗರೀಕನೂ ನೀರು ಉಳಿತಾಯ ಮಾಡಬೇಕು, ಮನೆ ಕಟ್ಟುವುದಾದರೆ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು. ಹನಿ ಹನಿ ಗೂಡಿದರೆ ಹಳ್ಳ ಎಂಬ ನಾಣ್ಣುಡಿಯನ್ನು ನೆನಪು ಮಾಡಿಕೊಳ್ಳುತ್ತಿರಬೇಕು.