ಗೃಹಲಕ್ಷ್ಮಿ ಯೋಜನೆ ನೋಂದಣಿ ತಾತ್ಕಾಲಿಕ ಸ್ಥಗಿತ ವದಂತಿ, ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಸ್ಪಷ್ಟೀಕರಣ; ತೆರೆಮರೆ ಕಥೆ ಇದು
ಕನ್ನಡ ಸುದ್ದಿ  /  ಕರ್ನಾಟಕ  /  ಗೃಹಲಕ್ಷ್ಮಿ ಯೋಜನೆ ನೋಂದಣಿ ತಾತ್ಕಾಲಿಕ ಸ್ಥಗಿತ ವದಂತಿ, ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಸ್ಪಷ್ಟೀಕರಣ; ತೆರೆಮರೆ ಕಥೆ ಇದು

ಗೃಹಲಕ್ಷ್ಮಿ ಯೋಜನೆ ನೋಂದಣಿ ತಾತ್ಕಾಲಿಕ ಸ್ಥಗಿತ ವದಂತಿ, ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಸ್ಪಷ್ಟೀಕರಣ; ತೆರೆಮರೆ ಕಥೆ ಇದು

ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಗಿತವಾಗಿರುವ ಸುದ್ದಿ ಹಬ್ಬಿದ್ದು ಹೇಗೆ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ಸ್ಪಷ್ಟೀಕರಣ ಕೊಡಬೇಕಾಗಿ ಬಂದ ಪ್ರಸಂಗವೇನು. ಇಲ್ಲಿದೆ ಪೂರ್ಣ ಮಾಹಿತಿ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಮಹಿಳಾ ಮತ್ತು ಕಲ್ಯಾಣ ಇಲಾಖೆ ಡಿಲೀಟ್ ಮಾಡಿದ ಟ್ವೀಟ್‌
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಮಹಿಳಾ ಮತ್ತು ಕಲ್ಯಾಣ ಇಲಾಖೆ ಡಿಲೀಟ್ ಮಾಡಿದ ಟ್ವೀಟ್‌

ಬೆಂಗಳೂರು: ಕರ್ನಾಟಕದ ಮಹಿಳೆಯರಲ್ಲಿ ಸಂಚಲನ ಮೂಡಿಸಿದ್ದ ಗೃಹಲಕ್ಷ್ಮಿ ಯೋಜನೆಯ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತವಾಗಿರುವುದಾಗಿ ಇಂದು (ಸೆ.7) ವ್ಯಾಪಕ ಸುದ್ದಿ ಹಬ್ಬಿತ್ತು. ಇದರ ಬೆನ್ನಿಗೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ಸ್ಪಷ್ಟೀಕರಣ ನೀಡಬೇಕಾಗಿ ಬಂತು. ಈ ರೀತಿ ವದಂತಿ ಹಬ್ಬುವುದಕ್ಕೆ ಏನು ಕಾರಣ, ಸಚಿವರು ಸ್ಪಷ್ಟೀಕರಣ ನೀಡಬೇಕಾಗಿ ಬಂದ ಪ್ರಸಂಗವೇನು ಇಲ್ಲಿದೆ ಸಂಪೂರ್ಣ ಮಾಹಿತಿ.

ಸದ್ಯದ ಅಂಕಿ ಅಂಶ ಪ್ರಕಾರ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಂಖ್ಯೆ 1.28 ಕೋಟಿ. ಈ ಪೈಕಿ 1.13 ಕೋಟಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನುಳಿದ 15 ಲಕ್ಷ ಫಲಾನುಭವಿಗಳಿಗೆ ಕೆವೈಸಿ ಸಮಸ್ಯೆ ಆಗಿದ್ದು, 8 ಲಕ್ಷ ಮಹಿಳೆಯರು ತಾಂತ್ರಿಕ ತೊಂದರೆ ಕಾರಣ ನೋಂದಣಿ ಮಾಡಿಸಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ನಡುವೆ, ಇಂದು (ಸೆ.7) ಬೆಳಗ್ಗೆ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಮಾಡಿದ ಟ್ವೀಟ್‌ ಬಹುಬೇಗ ವೈರಲ್ ಆಯಿತು.

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಟ್ವೀಟ್‌ನಲ್ಲಿ ಏನಿತ್ತು

“ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿತ ಫಲಾನುಭವಿಗಳ ಖಾತೆಗೆ 2000 ರೂಪಾಯಿ ಜಮಾಗೊಳಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗದೇ ಇರಲಿ ಎಂದು ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಶೀಘ್ರವೇ ನೋಂದಣಿ ಪುನರಾರಂಭಗೊಳ್ಳಲಿದೆ” ಎಂಬ ಉಲ್ಲೇಖದೊಂದಿಗೆ ಇಮೇಜ್‌ ಒಂದನ್ನು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಎಕ್ಸ್‌ ಖಾತೆಯಲ್ಲಿ ಶೇರ್ ಮಾಡಿತ್ತು. ಇದರಲ್ಲಿ, ಸಿಎಂಆಫ್ ಕರ್ನಾಟಕ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ಟ್ಯಾಗ್ ಮಾಡಲಾಗಿತ್ತು.

ಈ ಟ್ವೀಟ್‌ ಕಾರಣ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಗಿತವಾಗಿರುವ ಸುದ್ದಿ ಹರಡಿತ್ತು. ಈ ಟ್ವೀಟ್ ಒಂದು ಗಂಟೆಗೂ ಹೆಚ್ಚು ಕಾಲ ಇತ್ತಾದರೂ, ಬಳಿಕ ಅದನ್ನು ಡಿಲೀಟ್ ಮಾಡಲಾಗಿದೆ. ಆದರೆ, ಅಷ್ಟು ಹೊತ್ತಿಗಾಗಲೇ ಗೃಹಲಕ್ಷ್ಮೀ ಯೋಜನೆ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತವಾಗಿರುವುದಾಗಿ ಸುದ್ದಿ ಹರಡಿತ್ತು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟೀಕರಣ ಏನು

ಗೃಹಲಕ್ಷ್ಮಿ ಯೋಜನೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಅದನ್ನು ಸ್ಥಗಿತಗೊಳಿಸುವುದಿಲ್ಲ. ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಕೂಡ ಸ್ಥಗಿತವಾಗುವುದಿಲ್ಲ. ಅದು ನಿರಂತರವಾಗಿ ಮುಂದುವರಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹರಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಪ್ರಕರಣದಲ್ಲಿ ಭಾಗಿಯಾದವರಿಗೆ ನೋಟಿಸ್ ಜಾರಿಗೊಳಿಸುತ್ತೇವೆ. ಈ ಕುರಿತು ಈಗಾಗಲೇ ಇಲಾಖೆಯ ಕಾರ್ಯದರ್ಶಿ ಮತ್ತು ನಿರ್ದೇಶಕರ ಜತೆಗೆ ಮಾತುಕತೆ ನಡೆಸಿದ್ದೆನೆ. ಸಂಬಂಧಿಸಿದವರ ಮೇಲೆ ಕ್ರಮ ತೆಗೆದುಕೊಳ್ಳು ಸೂಚಿಸಿದ್ದೇನೆ ಎಂದು ಹೇಳಿದರು.

63 ಲಕ್ಷ ಮಹಿಳೆಯರ ಖಾತೆಗೆ ಹಣ ಜಮೆ

ಗೃಹಲಕ್ಷ್ಮಿ ಯೋಜನೆಯಲ್ಲಿ 63 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿದೆ. ರಾಜ್ಯದಲ್ಲಿ 1.28 ಕೋಟಿ ಫಲಾನುಭವಿಗಳಿದ್ದಾರೆ. ಈ ಪೈಕಿ 1.12 ಕೋಟಿ ಫಲಾನುಭವಿಗಳು ಹೆಸರು ನೋಂದಾಯಿಸಿದ್ದಾರೆ. ಉಳಿದವರ ಹೆಸರು ನೋಂದಣಿ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಮುಂದಿನ 4-5 ದಿನಗಳಲ್ಲಿ ಉಳಿದವರ ಖಾತೆಗೂ ಹಣ ವರ್ಗಾವಣೆಯ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

Whats_app_banner