ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಜೂನ್ ಮೊದಲ ವಾರದ ಮಳೆಗೆ ಬಿದ್ದ ಮರ, ವಿದ್ಯುತ್ ಕಂಬ ತೆರವು ವಿಳಂಬ, ಬಿಬಿಎಂಪಿ ವಿರುದ್ಧ ಜನಾಕ್ರೋಶ

ಬೆಂಗಳೂರಲ್ಲಿ ಜೂನ್ ಮೊದಲ ವಾರದ ಮಳೆಗೆ ಬಿದ್ದ ಮರ, ವಿದ್ಯುತ್ ಕಂಬ ತೆರವು ವಿಳಂಬ, ಬಿಬಿಎಂಪಿ ವಿರುದ್ಧ ಜನಾಕ್ರೋಶ

ಬೆಂಗಳೂರಿನಲ್ಲಿ ಜೂನ್‌ ಮೊದಲ ವಾರ ಸುರಿದ ಭಾರಿ ಮಳೆಗೆ ಧರೆಗುರುಳಿದ ನೂರಾರು ಮರಗಳು, ವಿದ್ಯುತ್‌ ಕಂಬಗಳನ್ನು ತೆರವುಗೊಳಿಸದ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರಲ್ಲಿ ಜೂನ್ ಮೊದಲ ವಾರದ ಮಳೆಗೆ ಬಿದ್ದ ಮರ, ವಿದ್ಯುತ್ ಕಂಬ ತೆರವು ವಿಳಂಬ, ಬಿಬಿಎಂಪಿ ವಿರುದ್ಧ ಜನಾಕ್ರೋಶ (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಜೂನ್ ಮೊದಲ ವಾರದ ಮಳೆಗೆ ಬಿದ್ದ ಮರ, ವಿದ್ಯುತ್ ಕಂಬ ತೆರವು ವಿಳಂಬ, ಬಿಬಿಎಂಪಿ ವಿರುದ್ಧ ಜನಾಕ್ರೋಶ (ಸಾಂಕೇತಿಕ ಚಿತ್ರ)

ಬೆಂಗಳೂರು: ಆರು ತಿಂಗಳ ನಂತರ ಜೂನ್‌ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಗೆ ಬೆಂಗಳೂರಿನಲ್ಲಿ ನೂರಾರು ಮರಗಳು ಮತ್ತು ವಿದ್ಯುತ್‌ ಕಂಬಗಳು ಧರೆಗುರಳಿ ಬಿದ್ದಿದ್ದು, ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಮರಗಳು ಉರುಳಿ ಬಿದ್ದು ಅನೇಕ ಖಾಸಗಿ ವಾಹನಗಳು ಜಖಂಗೊಂಡಿದ್ದು, ಗಂಟೆಗಳ ಕಾಲ ವಿದ್ಯುತ್‌ ಅಡಚಣೆ ಉಂಟಾಗಿದೆ.

ಪ್ರಕೃತಿ ಉಂಟು ಮಾಡಿರುವ ನಷ್ಟಕ್ಕಿಂತ ಮರಗಳು ಉರುಳಿ ಬಿದ್ದಿದ್ದರಿಂದಲೇ ಹೆಚ್ಚು ತೊಂದರೆ ಅನುಭವಿಸುವಂತಾಗಿದೆ. ಉರುಳಿ ಬಿದ್ದ ಮರಗಳನ್ನು ತಕ್ಷಣವೇ ತೆರವುಗೊಳಿಸದ ಕಾರಣಕ್ಕೆ ರೋಗರುಜಿನಗಳು ಕಾಡತೊಡಗಿವೆ. ಈ ಹಸಿರಿನಿಂದ ಸೊಳ್ಳೆಗಳ ಉತ್ಪಾದನೆ ಹೆಚ್ಚಳವಾಗಿದ್ದು ಕ್ರಿಮಿಕೀಟಗಳ ಕಾಟವೂ ಹೆಚ್ಚಾಗಿದೆ. ಉರುಳಿಬಿದ್ದ ಮರಗಳು, ಕೊಂಬೆರೆಂಬೆಗಳು, ಹಸಿ ಮತ್ತು ಒಣ ಕಸವನ್ನು ತೆರವುಗೊಳಿಸದಿದ್ದರಿಂದ ಆಯಾ ಪ್ರದೇಶಗಳ ಸಾರ್ವಜನಿಕರು ತೊಂದರೆಗೀಡಾಗಿದ್ದಾರೆ. ವಿಶೇಷವಾಗಿ ವಯೋವೃದ್ಧರು ಮತ್ತು ಮಕ್ಕಳು ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ.

ಪಶ್ಚಿಮ, ದಕ್ಷಿಣ ಬೆಂಗಳೂರಿನಲ್ಲಿ ಸೊಳ್ಳೆ, ಕ್ರಿಮಿಕೀಟಗಳ ಕಾಟ

ವಿಶೇಷವಾಗಿ ಬೆಂಗಳೂರಿನ ದಕ್ಷಿಣ ಮತ್ತು ಪಶ್ಚಿಮ ಭಾಗದ ನಾಗರೀಕರು ಹೆಚ್ಚು ತೊಂದರೆಗೀಡಾಗಿದ್ದಾರೆ. ಜೆಪಿ ನಗರ, ಜಯನಗರ, ಮಾವಳ್ಳಿ ಬನಶಂಕರಿ ಮೊದಲಾದ ಬಡಾವಣೆಗಳ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಉರುಳಿಬಿದ್ದ ಮರಗಳನ್ನು ತೆರವುಗೊಳಿಸಿದ ಕಾರಣಕ್ಕೆ ಸೊಳ್ಳೆಗಳ ಉತ್ಪಾದನೆ ಹೆಚ್ಚುತ್ತಿದೆ ಎಂದೂ ಆಪಾದಿಸುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ಉರುಳಿಬಿದ್ದ ಬೃಹತ್‌ ಮರಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿ ಪಾದಾಚಾರಿ ರಸ್ತೆಗಳಲ್ಲಿ ಹಾಕಿದ್ದಾರೆ. ಇದರ ಸಣ್ಣಪುಟ್ಟ ರೆಂಬೆಗಳನ್ನು ಅಲ್ಲಿಯೇ ಬಿಡಲಾಗಿದೆ. ಮಳೆ ನಿಂತು ಒಂದು ವಾರವಾದರೂ ಈ ಅವಶೇಷಗಳನ್ನು ತೆರವುಗೊಳಿಸಿಲ್ಲ ಎಂದು ಸ್ಥಳೀಯರು ಆಪಾದಿಸುತ್ತಾರೆ.

ಇದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಿದೆ, ಇಲಿ ಹೆಗ್ಗಣ ಹಾವುಗಳ ಕಾಟ ಹೆಚ್ಚಾಗಿದೆ. ಆದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಹೇಳುತ್ತಾರೆ. ಪಾಲಿಕೆ ನೌಕರರ ಮೇಲೆ ಒತ್ತಡ ಹೇರಿದರೆ ವಾಹನ, ಹೆಚ್ಚಿನ ಕಾರ್ಮಿಕರ ಅವಶ್ಯಕೆತ ಇದೆ ಎಂದು ಮೊದಲಾದ ಕಾರಣಗಳನ್ನು ಮುಂದೊಡ್ಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದೂ ತಿಳಿಸುತ್ತಿದ್ದಾರೆ.

ಬನಶಂಕರಿ, ಜಯನಗರ ಜೆಪಿ ನಗರ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ಅನೇಕ ನೌಕರರು ಈ ರಸ್ತೆಗಳಲ್ಲಿ ಮರದ ಕೊಂಬೆರೆಂಬೆಗಳು ಹಾಗೆಯೇ ಬಿದ್ದಿವೆ. ಕೆಲವು ಕಡೆ ರಸ್ತೆಗಳಲ್ಲಿ ಬಿದ್ದಿದ್ದರೆ ಇನ್ನೂ ಕೆಲವು ಕಡೆ ಪಾದಾಚಾರಿ ರಸ್ತೆಗಳಲ್ಲಿ ಬಿಟ್ಟಿದ್ದಾರೆ. ಸಣ್ಣಪುಟ್ಟ ರೆಂಬೆಗಳು ಎಲೆಗಳೆಲ್ಲಾ ರಸ್ತೆಗೆ ಬಿದ್ದಿದ್ದು, ವಾಹನಗಳು ಜಾರುತ್ತಿವೆ ಎನ್ನುತ್ತಾರೆ.

ಈ ರಸ್ತೆಗಳಲ್ಲಿ ವಾಯುವಿಹಾರ ಮಾಡಲೂ ಸಾಧ್ಯವಾಗುತ್ತಿಲ್ಲ. ಅಲ್ಲಲ್ಲಿಫುಟ್‌ ಪಾತ್‌ ಗಳ ಮೇಲೆ ಕೊಂಬೆರೆಂಬೆಗಳನ್ನು ತಂದು ಹಾಕಲಾಗಿದೆ. ಹಸಿ ಕಸವಾಗಿರುವುದರಿಂದ ಕೊಳೆತು ನಾರುವ ಸ್ಥಿತಿ ಉಂಟಾಗುತ್ತಿದೆ. ಆದ್ದರಿಂದ ಬಿಬಿಎಂಪಿ ತೆರವುಗೊಳಿಸಬೇಕು ಎಂದು ಆಗ್ರಹಪಡಿಸುತ್ತಾರೆ.

ಒಂದೆರಡು ದಿನದಲ್ಲಿ ಬಿದ್ದ ಮರಗಳ ತೆರವು ಪೂರ್ಣ- ಅಧಿಕಾರಿಗಳ ಭರವಸೆ

ಸಾರ್ವಜನಿಕರಿಂದ ದೂರುಗಳು ಬಂದಿರುವುದು ನಿಜ. ಕೆಲವು ಕಡೆ ಇನ್ನೂ ತೆರವುಗೊಳಿಸುವ ಕಾರ್ಯ ಆಗಬೇಕಿದೆ. ಒಂದೆರಡು ದಿನಗಳಲ್ಲಿ ತೆರವುಗೊಳಿಸುವುದಾಗಿ ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚು. ಅಂತಹ ಪ್ರದೇಶಗಳಲ್ಲಿ ತೆರವುಗೊಳಿಸುವುದು ಕಷ್ಟಸಾಧ್ಯ. ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಕೆಲಸ ಮಾಡುವುದು ಕಷ್ಟ. ಆದರೂ ಕೆಲವೇ ದಿನಗಳಲ್ಲಿ ಎಲ್ಲವನ್ನೂ ಸ್ವಚ್ಚಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಮತ್ತೊಂದು ಸುತ್ತಿನ ಮಳೆ ಆರಂಭವಾಗುವ ಮುನ್ನ ಬಿಬಿಎಂಪಿ ಎಚ್ಚೆತ್ತುಕೊಂಡು ನಗರದ ಸೌಂದರ್ಯವನ್ನು ಕಾಪಾಡುತ್ತದೆ ಎಂದು ಬೆಂಗಳುರಿನ ನಾಗರಿಕರ ಆಶಯವಾಗಿದೆ.

(ವರದಿ- ಎಚ್.ಮಾರುತಿ, ಬೆಂಗಳೂರು)