ಬೆಂಗಳೂರು ಸಂಚಾರ ದಟ್ಟಣೆ; ಮಳೆಯಿಂದಾಗಿ ಹೊರ ವರ್ತುಲ ರಸ್ತೆ, ಸಿಲ್ಕ್ ಬೋರ್ಡ್‌ನಲ್ಲಿ ಆಮೆಗತಿಯ ಸಂಚಾರ, ಟ್ರಾಫಿಕ್ ಬಗ್ಗೆ ಸವಾರರ ಅಸಮಾಧಾನ
ಬೆಂಗಳೂರಿನ ವಿವಿಧೆಡೆ ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ವಿಶೇಷವಾಗಿ ಮಳೆಯಿಂದಾಗಿ ಹೊರ ವರ್ತುಲ ರಸ್ತೆ, ಸಿಲ್ಕ್ ಬೋರ್ಡ್‌ನಲ್ಲಿ ಆಮೆಗತಿಯ ಸಂಚಾರ ಕಂಡು ಬಂದು ಬೆಂಗಳೂರು ಸಂಚಾರ ದಟ್ಟಣೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಧ್ವನಿಸಿತ್ತು. ಟ್ರಾಫಿಕ್ ಬಗ್ಗೆ ಸವಾರರ ಅಸಮಾಧಾನ ವ್ಯಕ್ತಪಡಿಸಿದ್ದರು.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ (ಜೂನ್ 14) ಸಂಜೆ ಸುರಿದ ಧಾರಾಕಾರ ಮಳೆಗೆ ಹೊರ ವರ್ತುಲ ರಸ್ತೆ ಉದ್ದಕ್ಕೂ ಸಂಚಾರ ಅಸ್ತವ್ಯಸ್ತವಾಗಿತ್ತು. ಮಹದೇವಪುರ, ಬಾಗ್ಮನೆ ಟೆಕ್ ಪಾರ್ಕ್ ಮತ್ತು ಆರ್‌ಎಂಝೆಡ್ ಇಕೋ ವರ್ಲ್ಡ್ ಮುಂತಾದ ಪ್ರದೇಶದಲ್ಲಿ ನೀರು ರಸ್ತೆಯಲ್ಲಿ ಹರಿದು ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಬೆನ್ನು ಬೆನ್ನಿಗೆ ಸಾಲು ವಾಹನಗಳು ಇದ್ದ ಕಾರಣ ಸಂಚಾರ ದಟ್ಟಣೆ ತೀವ್ರವಾಗಿತ್ತು. ಅನೇಕರಿಗೆ 18 ಕಿ.ಮೀ. ಅಂತರ ಕ್ರಮಿಸುವುದಕ್ಕೆ 2 ಗಂಟೆಗೂ ಅಧಿಕ ಸಮಯ ಬೇಕಾಯಿತು. ಸಿಲ್ಕ್ ಬೋರ್ಡ್‌ನ ಟ್ರಾಫಿಕ್‌ನಲ್ಲಿ ಸಿಲುಕಿದವರು 3 ಕಿ.ಮೀ. ಸಂಚಾರಕ್ಕೆ 45 ನಿಮಿಷ ಬೇಕಾಯಿತು ಎಂದು ಸೋಷಿಯಲ್ ಮೀಡಿಯಾದಲ್ಲಿ ಹತಾಶೆ ವ್ಯಕ್ತಪಡಿಸಿರುವುದು ಕಂಡುಬಂತು.
ಹೊರವರ್ತುಲ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯ ಕಾರಣ ಸಂಚಾರ ದಟ್ಟಣೆ ತೀವ್ರವಾಗಿತ್ತು. ಸಂಚಾರ ವೇಗ ಇಲ್ಲಿ ಗಂಟೆಗೆ 4.8 ಕಿ.ಮೀ. ಅಷ್ಟೇ ಇತ್ತು ಎಂಬ ಅಪ್ಡೇಟ್ ಅನ್ನು ಸಿಟಿಜೆನ್ಸ್ ಮೂವ್‌ಮೆಂಟ್ ಈಸ್ಟ್ ಬೆಂಗಳೂರು ನೀಡಿದೆ.
ಬಾಗ್ಮನೆಟೆಕ್ ಪಾರ್ಕ್‌ನಿಂದ ಹೋಗುವ 3.2 ಕಿ.ಮೀ. ದಾರಿಯಲ್ಲಿ ಟ್ರಾಫಿಕ್ ದಟ್ಟಣೆಯನ್ನು ತೋರಿಸುವ ಗೂಗಲ್ ಮ್ಯಾಪ್‌ನ ಚಿತ್ರವನ್ನು ದ್ವಿತೀಂದ್ರ ನಾಥ್ ಸಾಹೂ ಶೇರ್ ಮಾಡಿದ್ದಾರೆ.
ಹೊರ ವರ್ತುಲ ರಸ್ತೆಯಲ್ಲಿ 18 ಕಿ.ಮೀ. ಸಂಚಾರಕ್ಕೆ 2 ಗಂಟೆ 36 ನಿಮಿಷ!
ಬೆಂಗಳೂರಿನಲ್ಲಿ ಜೋರು ಮಳೆ ಸುರಿಯುತ್ತಿರಬೇಕಾದರೆ, ಗೂಗಲ್ ಮ್ಯಾಪ್ ನೋಡುತ್ತ ಒಳರಸ್ತೆಗಳಲ್ಲಿ ಸಂಚರಿಸಬಾರದು ಎಂಬ ಸಲಹೆ ನೀಡಿದ ಟಿಜೆನ್ಸ್ ಮೂವ್‌ಮೆಂಟ್ ಈಸ್ಟ್ ಬೆಂಗಳೂರು, ಹೊರ ವರ್ತುಲ ರಸ್ತೆಯಲ್ಲಿ 18 ಕಿ.ಮೀ. ಸಂಚಾರಕ್ಕೆ 2 ಗಂಟೆ 36 ನಿಮಿಷ ತೆಗೆದುಕೊಂಡ ವಿಚಾರವನ್ನು ಶೇರ್ ಮಾಡಿದೆ.
ಗೂಗಲ್ ಮ್ಯಾಪ್ ಫಾಲೋ ಮಾಡಿದರೆ, ಸಂಕಷ್ಟ ಹೆಚ್ಚು ಎಂಬುದನ್ನು ಅದು ವಿವರಿಸಿದೆ. ಗೂಗಲ್ ಮ್ಯಾಪ್ ಆಣತಿಯಂತೆ, ದೊಡ್ಡನೆಕುಂದಿಯಿಂದ ಹೊರಟು ಹೊರವರ್ತುಲ ರಸ್ತೆಗೆ ಹೋದಾಗ ಅಲ್ಲಿಂದ ಅದು ಪಾಣತ್ತೂರು ರಸ್ತೆ ತೋರಿಸಿತು. ಅಲ್ಲಿ ಹೋಗುವಾಗ ಪಾಣತ್ತೂರು ಕ್ರಾಸ್‌ನಲ್ಲಿ ನ್ಯೂ ಹಾರಿಜಾನ್ ಸ್ಕೂಲ್ ಜಂಕ್ಷನ್‌ಗೆ ತಿರುಗುವಲ್ಲಿ 50 ನಿಮಿಷ ಟ್ರಾಫಿಕ್‌ನಲ್ಲಿ ನಿಲ್ಲಬೇಕಾಯಿತು. ಹಾಗೂ ಹೀಗೂ ಮತ್ತೆ ಹೊರವರ್ತುಲ ರಸ್ತೆ ಕಡೆಗೆ ಹೋದಾಗ, ಗೇರ್ ಸ್ಕೂಲ್ ಸಮೀಪ ಮತ್ತೆ ಟ್ರಾಫಿಕ್. ಹೊರವರ್ತುಲ ರಸ್ತೆಗೆ ತಲುಪಲು 30 ನಿಮಿಷ ಬೇಕಾಯಿತು. ಅಲ್ಲಿಂದ ಮತ್ತೆ ಒಂದು ಗಂಟೆ ಅವಧಿಯಲ್ಲಿ 10 ಕಿ.ಮೀ. ಸಂಚರಿಸಿ ಸರ್ಜಾಪುರ ರಸ್ತೆಗೆ ಬಂದದ್ದಾಯಿತು ಎಂದು ಪೋಸ್ಟ್ ವಿವರಿಸಿದೆ.
ಬೆಂಗಳೂರಿನ ಇಕೋ ವರ್ಲ್ಡ್ ಸಮೀಪ ಟ್ರಾಫಿಕ್‌ನಲ್ಲಿದ್ದೀರಾ ಯಾರಾದರೂ, ನನಗೆ ಇಲ್ಲಿ 200 ಮೀಟರ್ ಮುಂದೆ ಚಲಿಸಲು 75 ನಿಮಿಷ ಬೇಕಾಯಿತು ಎಂದು ಶಿಲ್ಪಾ ಗೌಡ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ನಗರದ ಹಲವೆಡೆ ನಿನ್ನೆ ಹಗುರದಿಂದ ಸಾಧಾರಣ ಮಳೆಯಾಗಿದೆ ಆದರೆ ಅಡೆತಡೆಗಳನ್ನು ಉಂಟುಮಾಡಿದೆ. ಶಾಂತಿನಗರ, ಪ್ಯಾಂಟ್ರಿ ರಸ್ತೆ, ಶಿವಾಜಿ ನಗರ, ಟಾಸ್ಕರ್ ಟೌನ್, ಬಾಣಸವಾಡಿ, ಬೌರಿಂಗ್ ಆಸ್ಪತ್ರೆ ರಸ್ತೆ, ಗೊಟ್ಟಿಗೆರೆ, ಜಯನಗರ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ, ರಾಜಾಜಿನಗರ, ಸುಂಕದಕಟ್ಟೆ, ತಾವರೆಕೆರೆ, ಕೊಟ್ಟಿಗೆ ಪಾಳ್ಯ, ಕಾಮಾಕ್ಷಿ ಪಾಳ್ಯ, ವಿಲ್ಸನ್ ಗಾರ್ಡನ್, ಬಸವನಗುಡಿ, ಬಸವನಗುಡಿಯಲ್ಲಿ ಮಳೆ ಸುರಿದಿದೆ. ಬಾಗ್, ವಿಜಯನಗರ, ಹೊರ ವರ್ತುಲ ರಸ್ತೆ, ಮತ್ತು ಮಹದೇವಪುರ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದು ಸಂಚಾರ ಅಸ್ತವ್ಯಸ್ತವಾಗಿತ್ತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.