Bengaluru News: ಬೆಂಗಳೂರಿಂದ ತಿರುಮಲಕ್ಕೆ ಹೆಲಿಕಾಪ್ಟರ್ ಸೇವೆ ಶುರು; ಹಾರಾಟ ಸಮಯ, ಶುಲ್ಕ ಮತ್ತು ಇತರೆ ವಿವರ ಇಲ್ಲಿದೆ
Bengaluru News: ಬೆಂಗಳೂರು ಮತ್ತು ತಿರುಪತಿ ನಡುವೆ ಹೆಲಿಕಾಪ್ಟರ್ ಹಾರಾಟ ಶುರುವಾಗಿದೆ. ಫ್ಲೈಬ್ಲೇಡ್ ಇಂಡಿಯಾ ಕಂಪನಿ ಇದನ್ನು ಶುರುಮಾಡಿದೆ. ಟಿಕೆಟ್ ದರ, ಸಮಯ ಮತ್ತು ಇತರೆ ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಮತ್ತು ಆಂಧ್ರಪ್ರದೇಶದಲ್ಲಿರುವ ಹಿಂದುಗಳ ಧಾರ್ಮಿಕ ಶ್ರದ್ಧಾಕೇಂದ್ರ ತಿರುಮಲ ತಿರುಪತಿ (Tirumala Tirupati) ನಡುವೆ ಖಾಸಗಿ ಹೆಲಿಕಾಪ್ಟರ್ ಸೇವೆ ಶುರುವಾಗಿದೆ. ತಿರುಪತಿ ಯಾತ್ರಾರ್ಥಿಗಳಿಗಾಗಿ ಫ್ಲೈಬ್ಲೇಡ್ ಇಂಡಿಯಾ (FlyBlade India) ಎಂಬ ಕಂಪನಿ ಇದನ್ನು ಶುರುಮಾಡಿರುವಂಥದ್ದು.
ಕರ್ನಾಟಕದ ರಾಜಧಾನಿಯಿಂದ ಸರಿಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಆಂಧ್ರಪ್ರದೇಶದ ತಿರುಮಲ ತಿರುಪತಿ ಒಂದು ಜನಪ್ರಿಯ ಆಧ್ಯಾತ್ಮಿಕ ನಗರ. ಇಲ್ಲಿಗೆ ಪ್ರತಿ ತಿಂಗಳು ಲಕ್ಷಾಂತರ ಯಾತ್ರಿಕರು ಭೇಟಿ ನೀಡುತ್ತಾರೆ.
ಎಲ್ಲಿಂದ ಹಾರಲಿದೆ ಕಾಪ್ಟರ್ - ಎಷ್ಟು ಗಂಟೆಗೆ
ಫ್ಲೈಬ್ಲೇಡ್ ಇಂಡಿಯಾದ ಹೆಲಿಕಾಪ್ಟರ್ ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್‌ನಿಂದ ತಿರುಮಲ ತಿರುಪತಿಗೆ ಹಾರಾಟ ನಡೆಸಲಿದೆ.
ಈ ಹಾರಾಟ ಬೆಳಗ್ಗೆ 9.30ಕ್ಕೆ ನಿಗದಿಯಾಗಿದ್ದು, ಅದೇ ದಿನ ಸಂಜೆ 4 ಗಂಟೆಗೆ ತಿರುಮಲ ತಿರುಪತಿಯುಂದ ಹೊರಟು ರಾತ್ರಿಯಾಗುವ ಮೊದಲು ಬೆಂಗಳೂರು ತಲುಪಲಿದೆ.
ತಿರುಪತಿ ಬುಕ್ಕಿಂಗ್ ಹೇಗೆ
ಬೆಂಗಳೂರಿನಿಂದ ತಿರುಪತಿಗೆ ಹೆಲಿಕಾಪ್ಟರ್ ಬುಕ್ ಮಾಡುವುದು ಹೇಗೆ ಎಂಬ ಪ್ರಶ್ನೆ ಸಹಜ. ಫ್ಲೈಬ್ಲೇಡ್ ಇಂಡಿಯಾದ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದು. ಒಂದು ಕಾಪ್ಟರ್‌ನಲ್ಲಿ 5 ಪ್ರಯಾಣಿಕರು ಪ್ರಯಾಣಿಸಬಹುದು. ಗುಂಪಾಗಿ ಬುಕ್ ಮಾಡಬಹುದು. ಅಥವಾ ಬಿಡಿ ಬಿಡಿಯಾಗಿ ಕೂಡ ಬುಕ್ ಮಾಡಬಹುದು.
ಟಿಕೆಟ್ ದರ ಅಂದಾಜು 3.5 ಲಕ್ಷ ರೂಪಾಯಿ. ಇದು ಜಿಎಸ್‌ಟಿ ಹೊರತಾದ ದರ ಎಂದು ಹಿಂದುಸ್ತಾನ್ ಟೈಮ್ಸ್ ಕನ್ನಡ (HT ಕನ್ನಡ)ದ ಸೋದರ ತಾಣ ದ ಮಿಂಟ್ ವರದಿ ಮಾಡಿದೆ.
ತಿರುಪತಿಯಲ್ಲಿದೆ ಪ್ರಾದೇಶಿಕ ವಿಮಾನ ನಿಲ್ಧಾಣ
ದೇಶದಲ್ಲಿ ಅತಿ ಹೆಚ್ಚು ಯಾತ್ರಿಕರು ಸಂದರ್ಶಿಸುವ ಹಿಂದು ಧಾರ್ಮಿಕ ಕ್ಷೇತ್ರ ತಿರುಮಲ ತಿರುಪತಿ. ದೇಶದ ಎಲ್ಲೆಡೆಯಿಂದ ಬರುವ ಯಾತ್ರಿಕರಿಗೆ ಅನುಕೂಲವಾಗುವಂತೆ ದೇಗುಲ ನಗರಿ ತಿರುಮಲ ತಿರುಪತಿಯಲ್ಲಿ ಪ್ರಾದೇಶಿಕ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ.
ಬೆಂಗಳೂರಲ್ಲಿ ಫ್ಲೈಬ್ಲೇಡ್ ಇಂಡಿಯಾ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಫ್ಲೈಬ್ಲೇಡ್ ಇಂಡಿಯಾ ಇಂಡಿಯಾ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಪ್ಟರ್ ಸೇವೆಯನ್ನು ಪ್ರಾರಂಭಿಸಿತು. ನಗರದಿಂದ ವಿಮಾನ ನಿಲ್ದಾಣಕ್ಕೆ ಎರಡು ಗಂಟೆಗಳ ಪ್ರಯಾಣದ ಸಮಯವನ್ನು ತ್ವರಿತ ಅಂದರೆ 15 ನಿಮಿಷಗಳ ಸವಾರಿಗಾಗಿ ಇಳಿಸಲು ಈ ಕಾಪ್ಟರ್ ಸೇವೆ ಪ್ರಾರಂಭಿಸಲಾಗಿದೆ. ಇದು ಬೆಂಗಳೂರಿನಿಂದ ಕರ್ನಾಟಕದ ಕೂರ್ಗ್ ಮತ್ತು ಕಬಿನಿ ಪ್ರದೇಶಗಳಿಗೂ ಕಾಪ್ಟರ್ ಸೇವೆಯನ್ನು ಒದಗಿಸುತ್ತದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸಿಟಿ ಸೆಂಟರ್ ನಡುವೆ ಸಂಪರ್ಕದ ಹಾರಾಟ ಸೇವೆಗೆ ಪ್ರತಿವ್ಯಕ್ತಿಗೆ 4,500 ರೂಪಾಯಿ, ಕೂರ್ಗ್, ಕಬಿನಿಗೆ ಪ್ರತಿ ವ್ಯಕ್ತಿಗೆ ಟಿಕೆಟ್ ದರ 20,000 ರೂಪಾಯಿ ಎಂದು ಕಂಪನಿ ಹೇಳಿರುವುದಾಗಿ ವರದಿ ತಿಳಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ಫ್ಲೈಬ್ಲೇಡ್ ಇಂಡಿಯಾ ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ (ಜಿಟಿಡಿಸಿ) ಕೈಜೋಡಿಸಿತು. ಜಿಟಿಡಿಸಿ ಸೇವೆಗಳು ಮೂಲತಃ ಜಾಯ್ ರೈಡ್‌ಗಳಾಗಿದ್ದರೆ, ಬ್ಲೇಡ್ ಇಂಡಿಯಾ ಪ್ರವಾಸಿಗರಿಗೆ ವಿಮಾನ ನಿಲ್ದಾಣದಿಂದ ಅವರ ಗಮ್ಯಸ್ಥಾನದ ಸೇವೆಗಳನ್ನು ಒದಗಿಸುತ್ತಿದೆ.