Bengaluru News: ಬೆಂಗಳೂರಲ್ಲಿ 10 ಅಡಿ ಆಳದ ನೀರಿನ ಸಂಪಿಗೆ ಬಿದ್ದ ಎರಡೂವರೆ ವರ್ಷದ ಮಗು; ಜೀವ ಉಳಿಸಿದ ಟ್ರಾಫಿಕ್ ಪಿಎಸ್‌ಐ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರಲ್ಲಿ 10 ಅಡಿ ಆಳದ ನೀರಿನ ಸಂಪಿಗೆ ಬಿದ್ದ ಎರಡೂವರೆ ವರ್ಷದ ಮಗು; ಜೀವ ಉಳಿಸಿದ ಟ್ರಾಫಿಕ್ ಪಿಎಸ್‌ಐ

Bengaluru News: ಬೆಂಗಳೂರಲ್ಲಿ 10 ಅಡಿ ಆಳದ ನೀರಿನ ಸಂಪಿಗೆ ಬಿದ್ದ ಎರಡೂವರೆ ವರ್ಷದ ಮಗು; ಜೀವ ಉಳಿಸಿದ ಟ್ರಾಫಿಕ್ ಪಿಎಸ್‌ಐ

ಬೆಂಗಳೂರಿನಲ್ಲಿ 10 ಅಡಿ ನೀರಿನ ಸಂಪಿಗೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದ ಎರಡೂವರೆ ವರ್ಷದ ಕಂದಮ್ಮನನ್ನು ಟ್ರಾಫಿಕ್ ಪಿಎಸ್‌ಐ ಎ ಆರ್ ನಾಗಾರಾಜ್‌ ರಕ್ಷಿಸಿದ್ದಾರೆ. ಅವರ ಈ ನಡೆ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಏನಿದು ಘಟನೆ ಇಲ್ಲಿದೆ ವಿವರ.

ಬೆಂಗಳೂರು ಟ್ರಾಫಿಕ್ ಪಿಎಸ್‌ಐ ಎ ಆರ್ ನಾಗರಾಜ್‌ (ಎಡ ಚಿತ್ರ); ರಕ್ಷಿಸಲ್ಪಟ್ಟ ಎರಡೂವರೆ ವರ್ಷದ ಮಗು (ಬಲ ಚಿತ್ರ)
ಬೆಂಗಳೂರು ಟ್ರಾಫಿಕ್ ಪಿಎಸ್‌ಐ ಎ ಆರ್ ನಾಗರಾಜ್‌ (ಎಡ ಚಿತ್ರ); ರಕ್ಷಿಸಲ್ಪಟ್ಟ ಎರಡೂವರೆ ವರ್ಷದ ಮಗು (ಬಲ ಚಿತ್ರ) (PC- BTP )

ಬೆಂಗಳೂರು: ಹತ್ತು ಅಡಿ ಆಳದ ನೀರಿನ ಸಂಪ್‌ಗೆ ಬಿದ್ದು ಪ್ರಾಣಾಪಾಯ ಎದುರಿಸಿದ್ದ ಎರಡೂವರೆ ವರ್ಷದ ಮಗುವನ್ನು ಬ್ಯಾಟರಾಯನಪುರ ಸಂಚಾರ ಠಾಣೆಯ ಪಿಎಸ್‌ಐ ಎ.ಆರ್.ನಾಗರಾಜ್‌ ರಕ್ಷಿಸಿದ್ದಾರೆ. ಅವರ ಈ ನಡೆ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.

ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿ ಬುಧವಾರ (ಮಾರ್ಚ್‌ 6) ಮಧ್ಯಾಹ್ನ ನಂತರ 3.30 ರ ಹೊತ್ತಿಗೆ ಈ ಘಟನೆ ನಡೆದಿದೆ. ಸದ್ಯ ಮಗು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸ್ ಎಕ್ಸ್ ಖಾತೆಯಲ್ಲೂ ಈ ವಿಚಾರ ಟ್ವೀಟ್ ಆಗಿದ್ದು, ನಾಗರಾಜ್ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ. “ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯ ಪಿ.ಎಸ್.ಐ ನಾಗರಾಜ್ ರವರು ಬ್ಯಾಡರಹಳ್ಳಿ ಸಮೀಪದ 10 ಅಡಿ ಆಳದ ನೀರಿನ ಟ್ಯಾಂಕ್‌ ಗೆ ಬಿದ್ದ ಎರಡುವರೆ ವರ್ಷದ ಬಾಲಕನನ್ನು ತಕ್ಷಣವೇ ರಕ್ಷಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದು, ತಮ್ಮ ಕರ್ತವ್ಯ ಪ್ರಜ್ಞೆ ಮೆರೆದು ಅತ್ಯುತ್ತಮ ಪೊಲೀಸ್‌ ಪಡೆಗೆ ಉತ್ತಮ ಆದರ್ಶಪ್ರಾಯವಾಗಿದ್ದಾರೆ. ಧನ್ಯವಾದಗಳು, ಪಿಎಸ್ಐ ನಾಗರಾಜ್! ನಮ್ಮ ನಗರವನ್ನು ಸುರಕ್ಷಿತವಾಗಿಡುವಲ್ಲಿನ ನಿಮ್ಮ ಈ ಅಚಲ ಬದ್ಧತೆಗಾಗಿ!” ಎಂದು ಬೆಂಗಳೂರು ಸಂಚಾರ ಪೊಲೀಸ್ ಮೆಚ್ಚುಗೆ ಸೂಚಿಸಿದೆ.

ಏನಿದು ಘಟನೆ, ನಾಗರಾಜ್ ಏನು ಮಾಡಿದ್ರು…

ಬೆಂಗಳೂರು ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಎ ಆರ್ ನಾಗರಾಜ್‌ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಸಂಜೆ ಪಾಳಿಯಲ್ಲಿದ್ದ ಕಾರಣ ಮಧ್ಯಾಹ್ನ ನಂತರ 3.30ರ ಹೊತ್ತಿಗೆ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಪೊಲೀಸ್ ಠಾಣೆಗೆ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಅದೇ ಸಂದರ್ಭದಲ್ಲಿ ಬ್ಯಾಡರಹಳ್ಳಿಯ ಬಿಇಎಲ್‌ ಲೇಔಟ್‌ನ ಮನೆಯೊಂದರ ಬಳಿ ಹಲವು ಮಹಿಳೆಯರು ಗುಂಪುಗೂಡಿದ್ದು, “ಮಗು ಸಂಪ್ ಒಳಗೆ ಬಿದ್ದಿದೆ, ಯಾರಾದರೂ ಕಾಪಾಡಿ ಕಾಪಾಡಿ' ಎಂದು ಕೂಗುತ್ತಿದ್ದರು. ಇದನ್ನು ಗಮನಿಸಿದ ನಾಗರಾಜ್‌ ಕೂಡಲೇ, ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ, ಮಹಿಳೆಯರು ಗುಂಪುಗೂಡಿದ್ದ ಕಡೆಗೆ ಹೋಗಿದ್ದರು.

ಅಲ್ಲಿ ತೆರಳಿ ನೋಡಿದಾಗ, ಅವರಿಗೆ 10 ಅಡಿ ಆಳದ ಸಂಪ್‌ಗೆ ಮಗುವೊಂದು ಬಿದ್ದು ನೀರಿನಲ್ಲಿ ಮುಳುಗಿ ಒದ್ದಾಡುತ್ತಿರುವುದು ಕಂಡುಬಂದಿದೆ. ಹೆಚ್ಚೇನೂ ಯೋಚಿಸದೆ ಸಂಪ್‌ನೊಳಗೆ ಇಳಿದು ಆ ಮಗುವನ್ನುರಕ್ಷಿಸಿ ಮೇಲಕ್ಕೆ ತಂದು, ಸಮೀಪ ಆಸ್ಪತ್ರೆಗೆ ದಾಖಲಿಸಿದ್ದರು. ಸಕಾಲದಲ್ಲಿ ನೀರಿನಿಂದ ಮೇಲೆ ತೆಗೆದು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ ಹಿನ್ನೆಲೆಯಲ್ಲಿ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಪಿಎಸ್‌ಐ ನಾಗರಾಜು ಅವರ ಧೈರ್ಯ, ಸಮಯ ಪ್ರಜ್ಞೆ ಹಾಗೂ ಕಾರ್ಯಕ್ಕೆ ಸ್ಥಳೀಯರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner