ಕರ್ನಾಟಕದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆ; ವಾಹನ ಮಾಲೀಕರಲ್ಲಿ ಗೊಂದಲ, ಗಡುವು ವಿಸ್ತರಣೆ ಸುಳಿವು
ಕರ್ನಾಟಕದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವು ಸಮೀಪಿಸುತ್ತಿದೆ. ಇನ್ನು 4 ದಿನಗಳಿಗೆ ಮುಗಿಯುವ ಗಡುವು ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದೆ ಸರ್ಕಾರ. ಈ ನಡುವೆ, ವಾಹನ ಮಾಲೀಕರಲ್ಲಿ ಗೊಂದಲ ಹೆಚ್ಚಾಗಿದೆ.
ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಲು ಇಂದು (ಫೆ.13) ಬಿಟ್ಟು ಕೇವಲ 4 ದಿನಗಳು ಉಳಿದಿರುವಾಗ, 10 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿದೆ. ರ
ಕರ್ನಾಟಕದಲ್ಲಿ ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ಒಟ್ಟು 2 ಕೋಟಿ ವಾಹನಗಳಿವೆ ಎಂದು ಸಾರಿಗೆ ಇಲಾಖೆ ದತ್ತಾಂಶ ಹೇಳಿದೆ. ಅನೇಕ ವಾಹನ ಮಾಲೀಕರಿಗೆ ಫೆಬ್ರವರಿ 17 ರ ಮೊದಲು ಎಚ್‌ಎಸ್‌ಆರ್‌ಪಿ ಪಡೆಯಬೇಕು ಎನ್ನುವ ವಿಚಾರ ತಿಳಿದಿಲ್ಲ.
ರಾಜ್ಯ ಸರ್ಕಾರವು 2023ರ ನವೆಂಬರ್ 17 ರ ಮೊದಲು ಎಚ್‌ಎಸ್‌ಆರ್‌ಪಿ ಅಳವಡಿಸಬೇಕು ಎಂಬ ಸೂಚನೆಯನ್ನು ಆಗಸ್ಟ್‌ನಲ್ಲಿ ನೀಡಿತ್ತು. ನಂತರ ಅನುಸರಣೆಗಾಗಿ ಗಡುವನ್ನು ಮೂರು ತಿಂಗಳವರೆಗೆ ಅಂದರೆ, ಫೆಬ್ರವರಿ 17 ರವರೆಗೆ ವಿಸ್ತರಿಸಿತು. ಈ ಗಡುವು ಮುಗಿಯಲು ಇನ್ನು 4 ದಿನ ಇದೆ.
ಈ ಗಡುವು ಮುಗಿದ ಬಳಿಕ ಸಾರಿಗೆ ಇಲಾಖೆಯು ಎಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳ ಮಾಲೀಕರಿಗೆ 1,000 ರೂಪಾಯಿ ಮತ್ತು ಪುನರಾವರ್ತಿತ ಅಪರಾಧಕ್ಕೆ 2,000 ರೂಪಾಯಿ ದಂಡ ವಿಧಿಸುವುದಾಗಿ ಘೋಷಿಸಿದೆ.
ಗಡುವು ಸಮೀಪಿಸುತ್ತಿದ್ದಂತೆ, ಹಳೆಯ ವಾಹನ ಮಾಲೀಕರು ತಮ್ಮ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಲು ತರಾತುರಿ ತೋರುತ್ತಿದ್ದಾರೆ. ಆದರೆ, ಇದು ಗೊಂದಲ ಮತ್ತು ತಾಂತ್ರಿಕವಾಗಿ ಹಲವು ಸವಾಲುಗಳನ್ನು ಸೃಷ್ಟಿಸಿದೆ.
ಗಡುವು ವಿಸ್ತರಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಮತ್ತೊಮ್ಮೆ ಗಡುವನ್ನು ವಿಸ್ತರಿಸುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ ಎಂದು ಸಾರಿಗೆ ಇಲಾಖೆಯ ಮೂಲಗಳು ಹೇಳಿವೆ.
ಶೋರೂಮ್‌ಗಳಿಗೆ ದಿನಕ್ಕೆ 100ಕ್ಕೂ ಹೆಚ್ಚು ಕರೆಗಳು
ಎಚ್‌ಎಸ್‌ಆರ್‌ಪಿಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಆದರೆ, ಈ ಬಗ್ಗೆ ಅರಿವಿಲ್ಲದ ಮಾಲೀಕರು, ಶೋರೂಮ್‌ಗಳಿಗೆ ಫೋನ್ ಕರೆ ಮಾಡುತ್ತಿದ್ದಾರೆ. ದಿನಕ್ಕೆ 100ಕ್ಕೂ ಹೆಚ್ಚು ಫೋನ್ ಕರೆಗಳು ಬರುತ್ತಿವೆ ಎಂದು ಶೋರೂಂ ಪ್ರತಿನಿಧಿಗಳು ಹೇಳುತ್ತಾರೆ.
ನಿಶ್ಚಿತ ವೆಬ್‌ಸೈಟ್ ಮೂಲಕ ಶೋರೂಂಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ, ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ದಿನಾಂಕ ಸಮಯದ ಸ್ಲಾಟ್ ಪಡೆದು ಅದೇ ಸಮಯಕ್ಕೆ ಅಲ್ಲಿ ಹೋಗಬೇಕು. ಸದ್ಯ ಎಲ್ಲರೂ ಪ್ರಯತ್ನ ಮಾಡುತ್ತಿರುವ ಕಾರಣ, ಫೆ.17ರ ಒಳಗೆ ಬೇಡಿಕೆ ಈಡೇರಿಸುವುದು ಕಷ್ಟ ಎಂದು ಶೋರೂಂ ಪ್ರತಿನಿಧಿಗಳು ಹೇಳುತ್ತಾರೆ.
ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆ; ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸುಳಿವು
ಕರ್ನಾಟಕ ಸಾರಿಗೆ ಇಲಾಖೆಯು ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಲು ಫೆಬ್ರವರಿ 17 ರ ಗಡುವನ್ನು ವಿಸ್ತರಿಸುವ ಸಾಧ್ಯತೆಯಿದೆ. ಗಡುವು ದಿನಾಂಕ ಸಮೀಪಿಸುತ್ತಿದ್ದಂತೆ ನೋಂದಣಿಗಳ ಹೆಚ್ಚಳದಿಂದಾಗಿ ಹಲವು ತಾಂತ್ರಿಕ ಸವಾಲುಗಳು ಎದುರಾಗಿವೆ. ಹೀಗಾಗಿ, ಗಡುವು ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿರುವುದಾಗಿ ಏಷಿಯಾನೆಟ್ ನ್ಯೂಸಬಲ್ ವರದಿ ಮಾಡಿದೆ.
ಗಡುವು ಹತ್ತಿರವಾಗುತ್ತಿದ್ದಂತೆ, ಕೊನೆಯ ನಿಮಿಷದ ಉಲ್ಬಣದ ಸಮಯದಲ್ಲಿ ಅಗತ್ಯ ದಾಖಲಾತಿಯನ್ನು ಅಪ್‌ಲೋಡ್ ಮಾಡಲು ಲಿಂಕ್ ಮಾಡಲಾದ ಸಂಭಾವ್ಯ ತೊಂದರೆಗಳ ಬಗ್ಗೆ ಕಳವಳಗಳು ಹೆಚ್ಚಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಟೋ ಟ್ಯಾಕ್ಸಿ ಮತ್ತು ಲಾರಿ ಅಸೋಸಿಯೇಷನ್‌ನ ಸದಸ್ಯರು ಸೇರಿದಂತೆ ಹಲವಾರು ಪಾಲುದಾರರೊಂದಿಗೆ ಕೂಲಂಕಷವಾಗಿ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಎಚ್‌ಎಸ್‌ಆರ್‌ಪಿ ಅಳವಡಿಕೆಯಲ್ಲಿ ವಂಚನೆ
ಎಚ್‌ಎಸ್‌ಆರ್‌ಪಿ ಅಳವಡಿಕೆಯಿಂದ ವಾಹನ ವಂಚನೆ, ನಕಲಿ ಪರವಾನಗಿ ಫಲಕಗಳ ಬಳಕೆ ಮತ್ತು ಅಕ್ರಮ ಕಾರ್ಯಾಚರಣೆಗಳು ಕಡಿಮೆಯಾಗುತ್ತವೆ.
2023ರ ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯು 2019ರ ಏಪ್ರಿಲ್ 1 ರ ಮೊದಲು ನೋಂದಾಯಿಸಲಾದ ಎಲ್ಲ ವಾಹನಗಳನ್ನು ಹೈ-ಸೆಕ್ಯುರಿಟಿ ನೋಂದಣಿ ಪ್ಲೇಟ್‌ಗಳೊಂದಿಗೆ ಸರಿಪಡಿಸಬೇಕು ಎಂದು ಕಡ್ಡಾಯಗೊಳಿಸಿದೆ. ಈ ವಾಹನಗಳು 2023ರ ನವೆಂಬರ್ 17 ರೊಳಗೆ ಎಚ್‌ಎಸ್‌ಆರ್‌ಪಿಗಳನ್ನು ಹೊಂದಿರಬೇಕು ಎಂದು ಆಗಸ್ಟ್‌ನಲ್ಲಿನ ಅಧಿಸೂಚನೆಯು ಕಡ್ಡಾಯಗೊಳಿಸಿದೆ. ಏತನ್ಮಧ್ಯೆ, ಸಾರಿಗೆ ಇಲಾಖೆ ಗಡುವನ್ನು 2024ರ ಫೆಬ್ರವರಿ 17ರ ತನಕ ವಿಸ್ತರಿಸಿದೆ.
(This copy first appeared in Hindustan Times Kannada website. To read more like this please logon to kannada.hindustantime.com)