ಸಿಇಒ ಸುಚನಾ ಸೇಠ್ ಪುತ್ರನ ಸಾವು ಸಂಭವಿಸಿದ್ದು ಹೇಗೆ; ಪೋಸ್ಟ್‌ಮಾರ್ಟಂ ವರದಿಯ ವಿವರ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಸಿಇಒ ಸುಚನಾ ಸೇಠ್ ಪುತ್ರನ ಸಾವು ಸಂಭವಿಸಿದ್ದು ಹೇಗೆ; ಪೋಸ್ಟ್‌ಮಾರ್ಟಂ ವರದಿಯ ವಿವರ ಹೀಗಿದೆ

ಸಿಇಒ ಸುಚನಾ ಸೇಠ್ ಪುತ್ರನ ಸಾವು ಸಂಭವಿಸಿದ್ದು ಹೇಗೆ; ಪೋಸ್ಟ್‌ಮಾರ್ಟಂ ವರದಿಯ ವಿವರ ಹೀಗಿದೆ

ಗೋವಾದಲ್ಲಿ 4 ವರ್ಷದ ಮಗನನ್ನು ಹತ್ಯೆ ಮಾಡಿದ ಬೆಂಗಳೂರು ಸ್ಟಾರ್ಟಪ್ ಸಿಇಒ ಸುಚನಾ ಸೇಠ್‌ ಪೊಲೀಸ್ ವಿಚಾರಣೆ ವೇಳೆ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಸೇಠ್ ಪುತ್ರನ ಮರಣ ಸಂಭವಿಸಿದ್ದು ಹೇಗೆ ಎಂಬುದನ್ನು ಪೋಸ್ಟ್‌ ಮಾರ್ಟಂ ವರದಿ ಬಹಿರಂಗಪಡಿಸಿದೆ. ಇಲ್ಲಿದೆ ಆ ವಿವರ.

ಮಗನೊಂದಿಗೆ ಸುಚನಾ ಸೇಠ್ (ಹಳೆಯ ಚಿತ್ರ)
ಮಗನೊಂದಿಗೆ ಸುಚನಾ ಸೇಠ್ (ಹಳೆಯ ಚಿತ್ರ)

ಬೆಂಗಳೂರು: ಎಐ ಸ್ಟಾರ್ಟ್ಅಪ್ ಕಂಪನಿ ಸಿಇಒ ಸುಚನಾ ಸೇಠ್ (CEO Suchana Seth) ಅವರ 4 ವರ್ಷದ ಪುತ್ರ ಚಿನ್ಮಯ್‌ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಕುಮಾರ್ ನಾಯಕ್ ತಿಳಿಸಿದ್ದಾರೆ.

" ಮಗುವನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಅಥವಾ ನಾವು ಈ ಕ್ರಿಯೆಯನ್ನು ಉಸಿರುಗಟ್ಟಿಸುವಿಕೆ ಎಂದು ಕರೆಯುತ್ತೇವೆ. ಬಟ್ಟೆ ಅಥವಾ ದಿಂಬನ್ನು ಬಳಸಿರುವ ಸಾಧ್ಯತೆ ಇದೆ. ಮಗುವನ್ನು ಕೈಗಳಿಂದ ಕತ್ತು ಹಿಸುಕಿ ಕೊಲೆ ಮಾಡಿದಂತೆ ಕಾಣುತ್ತಿಲ್ಲ. ದಿಂಬು ಅಥವಾ ಇತರ ವಸ್ತುಗಳನ್ನು ಬಳಸಲಾಗಿದೆ ಎಂದು ತೋರುತ್ತದೆ. ಗಂಭೀರ ಉಸಿರುಗಟ್ಟುವಿಕೆಯಿಂದಾಗಿ ಸಾವು ಸಂಭವಿಸಿದೆ ಎಂದು ಚಿತ್ರದುರ್ಗದ ಹಿರಿಯೂರು ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕುಮಾರ್ ನಾಯಕ್ ಸುದ್ದಿಗಾರರಿಗೆ ತಿಳಿಸಿದರು.

ಮಗುವಿನ ದೇಹದಲ್ಲಿ ಯಾವುದೇ ರಕ್ತದ ಕಲೆಗಳು, ಗಾಯಗಳು ಇರಲಿಲ್ಲ. ಅಥವಾ ಸಾಯುವ ಸಂದರ್ಭದಲ್ಲಿ ಮಗು ಹೋರಾಟ ನಡೆಸಿದ ಸೂಚನೆ ಕೂಡ ಇಲ್ಲ. ಮಗು ನಿಧನವಾಗಿ 36 ಗಂಟೆಗಿಂತ ಹೆಚ್ಚು ಸಮಯವಾಗಿದೆ. ಆದಾಗ್ಯೂ, ಸಾವಿನ ನಿಖರ ಸಮಯ ತಿಳಿಸಲು ಸಾಧ್ಯವಿಲ್ಲ ಎಂದು ಡಾ.ನಾಯಕ್ ವಿವರಿಸಿದರು.

ಮಗ ಮೃತಪಟ್ಟ ಸುದ್ದಿ ತಿಳಿದ ಕೂಡಲೇ ಸುಚನಾ ಅವರ ಪತಿ ಕೇರಳ ಮೂಲದ ವೆಂಕಟರಮಣ ಇಂಡೋನೇಷಿಯಾದಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದಾರೆ. ಹಿರಿಯೂ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮಗುವಿನ ಶವಪರೀಕ್ಷೆ ಮುಗಿಸಿದ ಪೊಲೀಸರು, ಪಾರ್ಥಿವ ಶರೀರವನ್ನು ವೆಂಕಟರಮಣ ಅವರಿಗೆ ಒಪ್ಪಿಸಿದರು. ಮಗುವಿನ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನ ಹರಿಶ್ಚಂದ್ರಘಾಟ್‌ನಲ್ಲಿ ನೆರವೇರಿಸಲಾಗಿದೆ.

ಸುಚನಾ ಸೇಠ್ ಮಗುವನ್ನು ಕೊಲೆಮಾಡಿದ್ದೇಕೆ: ಗೋವಾ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಸುಚನಾ ಸೇಠ್‌ ಹೇಳಿರುವುದು ಇಷ್ಟು - ನನಗೆ ಮಗನ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಪತಿಯ ಜತೆಗೆ ಮಗ ಮಾತನಾಡುವುದು ಇಷ್ಟವಿರಲಿಲ್ಲ. ಹೀಗಾಗಿ ಆತನನ್ನು ಪ್ರಜ್ಞೆ ತಪ್ಪಿಸಲು ದಿಂಬು ಒತ್ತಿದ್ದೆ. ಆತ ಮೃತಪಟ್ಟದ್ದು ನೋಡಿ, ನಾನೂ ಸಾಯೋಣ ಎಂದು ಕೈ ಕುಯ್ದುಕೊಂಡೆ. ಆದರೆ, ಬಳಿಕ ಮನಸ್ಸು ಬದಲಾಯಿಸಿಕೊಂಡು ಬೆಂಗಳೂರಿಗೆ ಹೊರಟೆ. ಅಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಬಯಸಿದ್ದೆ.

ಗೋವಾದಲ್ಲಿ ತನಿಖೆಯಲ್ಲಿ ಭಾಗಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ವಿಚಾರ ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

"ಕೊಲೆಗೆ ಆಯುಧ ಬಳಸಿಲ್ಲ. ಆಕೆ ಕತ್ತರಿಯಿಂದ ಮಣಿಕಟ್ಟು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಆರೋಪಿಸಲಾಗಿದೆ. ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ.ಇದನ್ನು ಪರಿಶೀಲಿಸಲು ಡಿಎನ್ಎ ಪರೀಕ್ಷೆ ನಡೆಸಲಾಗುವುದು" ಎಂದು ಅಧಿಕಾರಿ ಹೇಳಿರುವುದಾಗಿ ವರದಿ ವಿವರಿಸಿದೆ.

ಸುಚನಾ ಸೇಠ್ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಸೇಠ್ ಅವರ ಪತಿ ವೆಂಕಟ್ ರಾಮನ್ ಕೇರಳದವರು. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಈ ಜೋಡಿ 2010 ರಲ್ಲಿ ವಿವಾಹವಾಗಿದೆ. 2019ರಲ್ಲಿ ಮಗ ಚಿನ್ಮಯ್‌ ಜನಿಸಿದ. 2020 ರಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Whats_app_banner