ಕನ್ನಡ ಸುದ್ದಿ  /  ಕರ್ನಾಟಕ  /  ದರ್ಶನ್ ತೂಗುದೀಪ ಕೇಸ್‌; ರೇಣುಕಾ ಸ್ವಾಮಿ ಪತ್ತೆಯಿಂದ ಹಿಡಿದು ಹತ್ಯೆಯ ತನಕ ಏನೇನಾಯಿತು, ಸನ್ನಿವೇಶ ಮರುಸೃಷ್ಟಿಗೆ ಪೊಲೀಸರಿಂದ ಸ್ಥಳ ಮಹಜರು

ದರ್ಶನ್ ತೂಗುದೀಪ ಕೇಸ್‌; ರೇಣುಕಾ ಸ್ವಾಮಿ ಪತ್ತೆಯಿಂದ ಹಿಡಿದು ಹತ್ಯೆಯ ತನಕ ಏನೇನಾಯಿತು, ಸನ್ನಿವೇಶ ಮರುಸೃಷ್ಟಿಗೆ ಪೊಲೀಸರಿಂದ ಸ್ಥಳ ಮಹಜರು

ದರ್ಶನ್ ತೂಗುದೀಪ ಕೇಸ್‌ ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲ. ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನಲಾದ ರೇಣುಕಾ ಸ್ವಾಮಿ ಪತ್ತೆಯಿಂದ ಹಿಡಿದು ಹತ್ಯೆಯ ತನಕ ಏನೇನಾಯಿತು, ಸನ್ನಿವೇಶ ಮರುಸೃಷ್ಟಿಗೆ ಪೊಲೀಸರಿಂದ ಸ್ಥಳ ಮಹಜರು ನಡೆದಿದೆ. ಮೂಲಗಳ ಮಾಹಿತಿಯನ್ನಾಧರಿಸಿದ ವಿವರ ಇಲ್ಲಿದೆ.

ಪವಿತ್ರಾ ಗೌಡಗೆ ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಡಿಮೆ ಬಾ ಎಂದಿದ್ದ ರೇಣುಕಾಸ್ವಾಮಿ!
ಪವಿತ್ರಾ ಗೌಡಗೆ ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಡಿಮೆ ಬಾ ಎಂದಿದ್ದ ರೇಣುಕಾಸ್ವಾಮಿ!

ಬೆಂಗಳೂರು: ನಟ ದರ್ಶನ್ ತೂಗುದೀಪ ಅವರ ಗೆಳತಿ ಪವಿತ್ರ ಗೌಡ ಅವರಿಗೆ ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯ ಹುಡುಕಾಟ ಮತ್ತು ಕೊಲೆ ಪ್ರಕರಣದ ಸಂಚು ರೂಪುಗೊಂಡದ್ದು ಹೇಗೆ? - ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ಪೊಲೀಸರು, ತನಿಖೆಯ ಜತೆಜತೆಗೆ ಆರೋಪಿಗಳನ್ನೂ ಕರೆದೊಯ್ದು ಪ್ರತಿಯೊಂದು ಸನ್ನಿವೇಶದ ಮರುಸೃಷ್ಟಿಗಾಗಿ ಸ್ಥಳಮಹಜರು ಮಾಡುತ್ತಿದ್ದಾರೆ. ಇದು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ಸ್ಪಷ್ಟ ಚಿತ್ರಣವನ್ನು ಕಟ್ಟಿಕೊಡಬಲ್ಲದು ಎಂಬ ಸ್ಪಷ್ಟ ನಿಲುವಿನೊಂದಿಗೆ ಪೊಲೀಸರು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ.

ಈ ರಿಯಲ್ ಲೈಫ್ ಸಿನಿಮಾದ ಕಥೆ ಶುರುವಾಗುವುದು 2024ರ ಜೂನ್ 10 ರಂದು. ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ಆಗಮಿಸಿದ ಮೂವರು ತಾವು 33 ವರ್ಷದ ಫಾರ್ಮಸಿ ಉದ್ಯೋಗಿಯೊಬ್ಬರನ್ನು ಹತ್ಯೆ ಮಾಡಿದ್ದೇವೆ. ಅವರ ಹೆಸರು ರೇಣುಕಾಸ್ವಾಮಿ. ಚಿತ್ರದುರ್ಗದವರು. ಶವವನ್ನು ಕಾಮಾಕ್ಷಿಪಾಳ್ಯ ಮೋರಿಗೆ ಎಸೆದಿದ್ದೇವೆ. ಹಣಕಾಸಿನ ವಿಷಯದಲ್ಲಿ ತರ್ಕ ಏರ್ಪಟ್ಟು ಅವರನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿದರು.

ದಿಢೀರ್ ಆಗಿ ಠಾಣೆಗೆ ಬಂದು ಮೂವರು ಶರಣಾಗತರಾಗಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ಕ್ಷಣ ಪೊಲೀಸರು ಒಂದರೆ ಕ್ಷಣ ವಿಚಲಿತರಾಗಿದ್ದರು. ಜೂನ್ 9 ರಂದು ಕಾಮಾಕ್ಷಿಪಾಳ್ಯದ ಮೋರಿ ಬಳಿ ಸಿಕ್ಕ ಹೆಣದ ಗುರುತು ಪತ್ತೆಯಾಗಿದ್ದು, ಅದೇ ಕೊಲೆ ಕೇಸ್‌ನಲ್ಲಿ ಈ ಆರೋಪಿಗಳು ಬಂದಿರುವುದು ಎಂದು ತಿಳಿದ ಕೂಡಲೇ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದರು. ಆರಂಭದಲ್ಲಿ ಅಸಹಜ ಸಾವು ಎಂದು ದಾಖಲಿಸಲಾಗಿದ್ದು ಪ್ರಕರಣ, ಕೊಲೆ ಪ್ರಕರಣವಾಗಿ ಬದಲಾಯಿತು.

ಟ್ರೆಂಡಿಂಗ್​ ಸುದ್ದಿ

ಪ್ರತ್ಯೇಕ ಪ್ರತ್ಯೇಕ ವಿಚಾರಣೆ ವೇಳೆ, ಮೂವರು ಮೂರು ರೀತಿಯ ಹೇಳಿಕೆ ನೀಡಿದ್ದರಿಂದ ಕೊಲೆ ಪ್ರಕರಣದಲ್ಲಿ ಇವರು ನೇರ ಭಾಗಿಯಾಗಿಲ್ಲ ಎಂಬುದು ಪೊಲೀಸರಿಗೆ ಮನವರಿಕೆಯಾಗುತ್ತದೆ. ಇನ್ನಷ್ಟು ವಿಚಾರಣೆ ನಡೆಸಿದಾಗ ನಟ ದರ್ಶನ್ ತೂಗುದೀಪ ಆಪ್ತ ವಿನಯ್ ಹೆಸರು ಬೆಳಕಿಗೆ ಬರುತ್ತದೆ. ಅವರನ್ನು ಕರೆಯಿಸಿಕೊಂಡು ವಿಚಾರಣೆ ಶುರುಮಾಡಿದ ಪೊಲೀಸರಿಗೆ ಒಂದೊಂದೇ ವಿಚಾರ ಸ್ಪಷ್ಟವಾಗುತ್ತ ಹೋಯಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣ; ಬೆಳೆಯುತ್ತ ಸಾಗಿತು ಆರೋಪಿಗಳ ಪಟ್ಟಿ

ತನಿಖೆ ವಿಸ್ತರಣೆಗೊಂಡಂತೆಲ್ಲ ಅದು ದರ್ಶನ್‌ ತೂಗುದೀಪ ಅವರ ಗೆಳತಿ ಪವಿತ್ರಾ ಗೌಡ ಅವರನ್ನೇ ಕೇಂದ್ರಿತವಾಗಿ ಸಾಗಿತ್ತು. ಪವಿತ್ರಾ ಗೌಡ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 'ಅಶ್ಲೀಲ ಸಂದೇಶ' ಕಳುಹಿಸಿದ್ದಕ್ಕಾಗಿ ರೇಣುಕಾಸ್ವಾಮಿ ಕೊಲೆ ಮಾಡಿದ್ದು ಎಂಬ ಅಂಶ ಬಹಿರಂಗವಾಗುತ್ತದೆ. ಪವಿತ್ರಾ ಗೌಡ ಅವರು ದರ್ಶನ್ ಅವರ “ಗೆಳತಿ'ಯಾದರೆ, ರೇಣುಕಾಸ್ವಾಮಿ ‘ಕಟ್ಟಾ ಅಭಿಮಾನಿ’ ಎಂಬ ಅಂಶ ಪೊಲೀಸರ ಗಮನಸೆಳೆಯುತ್ತದೆ. ಪವಿತ್ರಾ ಗೌಡ ಅವರಿಗಾಗಿ ದರ್ಶನ್ ಮತ್ತು ತಂಡ ರೇಣುಕಾಸ್ವಾಮಿ ಹತ್ಯೆ ನಡೆಸಿದ್ದು ಎಂಬ ಅನುಮಾನ ದಟ್ಟವಾಗುತ್ತದೆ. ಇದಕ್ಕೆ ಸಾಕ್ಷ್ಯಗಳು ಸಿಕ್ಕುತ್ತ ಹೋಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದಲ್ಲಿ ಈಗ ಪವಿತ್ರ ಮೊದಲ ಆರೋಪಿಯಾದರೆ, ದರ್ಶನ್ ಎರಡನೇ ಆರೋಪಿ. ಪವನ್ ಮೂರನೇ ಆರೋಪಿ. ಉಳಿದವರೆಲ್ಲ ನಂತರದ ಆರೋಪಿಗಳಾಗಿ ಆರೋಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಈ ನಡುವೆ, ಆರೋಪಿಗಳ ಪೈಕಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದ ದರ್ಶನ್ ಅಭಿಮಾನಿಗಳ ಸಂಘದ ಚಿತ್ರದುರ್ಗ ಘಟಕದ ಅಧ್ಯಕ್ಷ ರಾಘವೇಂದ್ರ, ರೇಣುಕಾಸ್ವಾಮಿ ಹತ್ಯೆ ಬಳಿಕ ಆತನ ಚಿನ್ನಾಭರಣಗಳನ್ನು ಕಳಚಿ ಅದನ್ನು ತನ್ನ ಪತ್ನಿಗೆ ನೀಡಿದ್ದ.

ಇದನ್ನೆಲ್ಲ ವಶಪಡಿಸಲು ಮತ್ತು ಸನ್ನಿವೇಶ ಮರುಸೃಷ್ಟಿ ಮಾಡಲು ಪೊಲೀಸರ ತಂಡ ಭಾನುವಾರ (ಜೂನ್ 16) ಚಿತ್ರದುರ್ಗ ತಲುಪಿತ್ತು. ಅಲ್ಲಿ ರಾಘವೇಂದ್ರ, ಜಗದೀಶ್‌ (ಆಟೋ ಚಾಲಕ), ಅನುಕುಮಾರ್, ರವಿ (ಕ್ಯಾಬ್‌ ಚಾಲಕ) ಅವರ ಮನೆಗಳ ಶೋಧ ನಡೆಸಿತ್ತು. ಆರೋಪಿಗಳಿಗೆ ಸೇರಿದ ಎಲ್ಲ ವಸ್ತುಗಳನ್ನು, ಸಾಕ್ಷ್ಯಗಳನ್ನು ಕಲೆಹಾಕಲು ಪ್ರಯತ್ನಿಸಿದರು. ಇವರನ್ನೆಲ್ಲ ದರ್ಶನ್‌ ಜೊತೆಗೆ ಫೋಟೋ, ಆಟೋಗ್ರಾಫ್ ಕೊಡಿಸುವ ನೆಪದಲ್ಲಿ ಕರೆದೊಯ್ಯಲಾಗಿತ್ತು ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಏನು ನಡೆಯಿತು

ಬೆಂಗಳೂರಿಗೆ ಜೂನ್ 8 ರಂದು ತಲುಪಿದ ಕೂಡಲೇ ಅಲ್ಲಿ ರಾಜರಾಜೇಶ್ವರಿ ನಗರದ ವೆಹಿಕಲ್ ಶೆಡ್‌ಗೆ ಎಲ್ಲರನ್ನೂ ಕರೆದುಕೊಂಡು ಹೋದರು. ಕ್ಯಾಬ್ ಚಾಲಕ ರವಿಯ ಸಹಚರ ಮೋಹನ್ ಪ್ರಕಾರ, ಅಲ್ಲಿ ಸುಮಾರು 30 ಜನರು ರೇಣುಕಾಸ್ವಾಮಿಯನ್ನು ಥಳಿಸಲು ಕಾಯುತ್ತಿದ್ದರು. ಆದರೆ, ಸಣಕಲು ಶರೀರದ ರೇಣುಕಾಸ್ವಾಮಿಯನ್ನು ನೋಡಿ ಕೆಲವರು ಹೊರಟು ಹೋದರು. ಚಿತ್ರದುರ್ಗದಿಂದ ಹೋದ ಅನು, ರವಿ ಮತ್ತು ರಾಜು ಹೊರಗೆ ಕಾಯುತ್ತಿದ್ದರೆ ರಾಘವೇಂದ್ರ ಮತ್ತು ರೇಣುಕಾಸ್ವಾಮಿ ಮಾತ್ರ ಶೆಡ್‌ನೊಳಗೆ ಹೋದರು ಎಂದು ಮೋಹನ್ ಭಾನುವಾರ ಮಾಧ್ಯಮಗಳಿಗೆ ತಿಳಿಸಿದ್ದು ಕಂಡುಬಂತು.

ಅವರು ಒಳಗೆ ಹೋದ ಕೂಡಲೇ ದರ್ಶನ್ ಮತ್ತು ಪವಿತ್ರಾ ಗೌಡ ಸ್ಥಳಕ್ಕೆ ಬಂದಿದ್ದರು. ಪವಿತ್ರಾ ಗೌಡ ಮೊದಲು ರೇಣುಕಾಸ್ವಾಮಿಗೆ ಚಪ್ಪಲಿ ತೆಗೆದು ಬಾರಿಸಿದರು. ನಂತರ ಇತರರು ಹಲ್ಲೆ ನಡೆಸಿದರು. ಸುಮಾರು ಒಂದು ಗಂಟೆ ಬಳಿಕ ಹೊರಗೆ ಬಂದ ರಾಘವೇಂದ್ರ, ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ. ದರ್ಶನ್ ಪರವಾಗಿ ಶರಣಾಗ್ತೀರಾ ಎಂಬ ಮಾತು ಪ್ರಸ್ತಾಪಿಸಿದರು. ಇಲ್ಲ ಎಂದ ಬಳಿಕ ಗಿರಿನಗರದ ಮೂವರನ್ನು ಕರೆಯಿಸಿ ತಲಾ 5 ಲಕ್ಷ ರೂಪಾಯಿಗೆ ಶರಣಾಗತಿ ಡೀಲ್ ಕುದುರಿಸಿಕೊಂಡಿದ್ದರು. ಇದನ್ನು ದರ್ಶನ್ ಆಪ್ತ ವಿನಯ್ ಮಾಡಿದ್ದ ಎಂಬ ಆರೋಪ ಇದ್ದು, ಪೊಲೀಸರು ಕೂಲಂಕಷ ತನಿಖೆ ಮುಂದುವರಿಸಿದ್ದಾರೆ.