ಓಲಾ, ಉಬರ್ ಚಾಲಕರು ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಹಣ ಸಂಪಾದನೆ ಮಾಡ್ತಾರೆ? ಶಿಸ್ತಿನಿಂದ ದುಡಿದರೆ ಕೈತುಂಬಾ ದುಡ್ಡು
ಬೆಂಗಳೂರಿನಲ್ಲಿ ಓಲಾ, ಉಬರ್, ನಮ್ಮ ಯಾತ್ರಿ ರಿಕ್ಷಾ, ಕಾರುಗಳ ಚಾಲಕರು ಪ್ರತಿದಿನ 1ರಿಂದ 3 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾರೆ. ಕಷ್ಟಪಟ್ಟು ದುಡಿದರೆ ತಿಂಗಳಿಗೆ 50 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು.

ಬೆಂಗಳೂರಿನಲ್ಲಿ ಓಲಾ, ಉಬರ್, ನಮ್ಮ ಯಾತ್ರಿ ರಿಕ್ಷಾ, ಕಾರುಗಳಲ್ಲಿ ಸಂಚರಿಸುವ ಸಮಯದಲ್ಲಿ ಕೆಲವರ ಬಳಿ "ದಿನಕ್ಕೆ ಎಷ್ಟು ಹಣ ಸಂಪಾದನೆಯಾಗುತ್ತದೆ" ಎಂಬ ಪ್ರಶ್ನೆ ಕೇಳಿದಾಗ ವೈವಿಧ್ಯಮಯ ಉತ್ತರ ದೊರಕಿದೆ. ಬಹುತೇಕರು "ದಿನಕ್ಕೆ ಕನಿಷ್ಠ 1 ಸಾವಿರ ದುಡಿಯಬಹುದು" ಎಂದಿದ್ದಾರೆ. ಕೆಲವರು "ಕೆಲವು ದಿನದಲ್ಲಿ ದಿನಕ್ಕೆ 2ರಿಂದ 3 ಸಾವಿರ ರೂಪಾಯಿ ದುಡಿಯುತ್ತಿರುವುದಾಗಿ" ತಿಳಿಸಿದ್ದಾರೆ. "ನಾನು ಹೆಚ್ಚಾಗಿ ಹತ್ತಿರದ ಪ್ರಯಾಣ ಇರುವ ಶಾರ್ಟ್ ರೈಡ್ ಆಸೆಪ್ಟ್ ಮಾಡುವುದಿಲ್ಲ. ಕಡಿಮೆಯೆಂದರೂ ಇನ್ನೂರು ಮುನ್ನೂರು ರೂಪಾಯಿ ಬಾಡಿಗೆ ದೊರಕುವ ರಿಕ್ವೆಸ್ಟ್ ಮಾತ್ರ ಆಸೆಪ್ಟ್ ಮಾಡುವೆ. ದಿನದಲ್ಲಿ ಹೇಗಾದರೂ ಮಾಡಿ 1500 ರೂಪಾಯಿ ಆಗಲೇಬೇಕು ಎಂಬ ಟಾರ್ಗೆಟ್ ಇಟ್ಟುಕೊಂಡಿದ್ದೇನೆ" ಎಂದು ಮಹೇಶ ಎಂಬ ಚಾಲಕ ಹೇಳಿದ್ದಾರೆ. ಅವರು ಓಲಾ ಮತ್ತು ಉಬರ್ ಅಪ್ಲಿಕೇಷನ್ ಹೊಂದಿದ್ದಾರೆ. "ಅವರೇಜ್ ಒಂದು ಸಾವಿರ ರೂಪಾಯಿ ದುಡಿಯುತ್ತೇನೆ. ಕೆಲವೊಮ್ಮೆ ಯಾವ ರಸ್ತೆಯಲ್ಲಿ ಹೋಗುತ್ತೇವೆ ಎನ್ನುವುದೂ ಸಂಪಾದನೆ ಮೇಲೆ ಪರಿಣಾಮ ಬೀರುತ್ತದೆ. ಗೊತ್ತಾಗದೆ ಹೆಚ್ಚು ಟ್ರಾಫಿಕ್ ಇರುವ ರಸ್ತೆಯಲ್ಲಿ ಸಿಕ್ಕಿಬಿದ್ದರೆ ಕಷ್ಟ" ಎಂದು ಶರವನ್ ಎಂಬ ಇನ್ನೊಬ್ಬ ಟ್ಯಾಕ್ಸಿ ಚಾಲಕ ತನ್ನ ಅನುಭವ ಹೇಳಿದ್ದಾರೆ. "ಓಲಾ, ಉಬರ್ ಅಂತ ಅಲ್ಲ ಸರ್, ಶಿಸ್ತಿನಿಂದ ಕ್ಯಾಮೆ ಮಾಡಿದರೆ ದಿನಕ್ಕೆ ಒಂದೆರಡು ಸಾವಿರ ರೂಪಾಯಿ ದುಡಿಯಬಹುದು" ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಓಲಾ, ಉಬರ್ ಚಾಲಕರು ದಿನಕ್ಕೆ, ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತಾರೆ ಎನ್ನುವ ಕುರಿತು ಆನ್‌ಲೈನ್‌ನಲ್ಲಿಯೂ ಸಾಕಷ್ಟು ಚರ್ಚೆಯಾಗಿದೆ. ಇತ್ತೀಚೆಗೆ ರೆಡ್ಡಿಟ್‌ನಲ್ಲಿ ವ್ಯಕ್ತಿಯೊಬ್ಬರು ತನ್ನ ಅನುಭವ ಬರೆದಿದ್ದರು. "ಬೆಂಗಳೂರಲ್ಲಿ ಕ್ಯಾಬ್‌ನಲ್ಲಿ ಬರುವಾಗ ಚಾಲಕನಲ್ಲಿ ದಿನಕ್ಕೆ ಸಂಪಾದನೆ ಎಷ್ಟೆಂದು ಕೇಳಿದ್ದೆ. ದಿನದಲ್ಲಿ 3-4 ಸಾವಿರ ರೂಪಾಯಿ ಸಂಪಾದನೆ ಆಗುತ್ತದೆ ಎಂದು ಆತ ಹೇಳಿದಾಗ ಆಶ್ಚರ್ಯವಾಯಿತು. ತಿಂಗಳಲ್ಲಿ 25 ದಿನ ದುಡಿದೂ ಆತ ತಿಂಗಳಿಗೆ 75 ಸಾವಿರ ರೂಪಾಯಿ ಗಳಿಸಿದಂತೆ ಆಯ್ತು. ಪೆಟ್ರೋಲ್ ಮತ್ತು ಇತರೆ ವೆಚ್ಚ ಕಳೆದರೂ ಸಾಕಷ್ಟು ಹಣ ಉಳಿತಾಯವಾಗುತ್ತದೆ ಎಂದು ಆ ಚಾಲಕ ಹೇಳಿದ್ದ. ಆತ ತನ್ನ ಮಕ್ಕಳನ್ನು ಒಳ್ಳೆಯ ಶಾಲೆಯಲ್ಲಿ ಓದಿಸುವ ಕುರಿತು ಖುಷಿಯಿಂದ ಹೇಳಿದ್ದ. ಹಿಂದೆ ಆತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ ಇದ್ದನಂತೆ. ಅಲ್ಲಿ ಕೆಲಸ ಕಳೆದುಕೊಂಡ ಬಳಿಕ ಚಾಲಕನಾಗಿ ದುಡಿಯುತ್ತಿದ್ದಾನೆ" ಎಂದು ರೆಡ್ಡಿಟ್‌ನಲ್ಲಿ ಆತ ಬರೆದಿದ್ದಾನೆ.
ಕೋರಾದಲ್ಲಿ ನಡೆದ ಚರ್ಚೆಗಳ ಪ್ರಕಾರ ಓಲಾ ಚಾಲಕರು ಪ್ರತಿದಿನ 2-4 ಸಾವಿರ ರೂಪಾಯಿ ದುಡಿಯುತ್ತಾರೆ. ಕೆಲವರು ತಿಂಗಳಿಗೆ 25 ಸಾವಿರ ರೂಪಾಯಿಯಿಂದ 40 ಸಾವಿರ ರೂಪಾಯ ದುಡಿಯುತ್ತಾರೆ. ಇನ್ನು ಕೆಲವರು ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚು ದುಡಿಯುತ್ತಾರೆ. "ಕೆಲವೊಮ್ಮೆ ಪೀಕ್ ಸಮಯ, ಕೆಲಸ ಮಾಡುವ ಸ್ಥಳ ಇತ್ಯಾದಿಗಳು ಗಳಿಕೆ ಮೇಲೆ ಪರಿಣಾಮ ಬೀರುತ್ತದೆ. ಒಂದು ರೈಡ್ ಕಂಪ್ಲೀಟ್ ಮಾಡಿದ ತಕ್ಷಣ ಕೆಲವರಿಗೆ ಇನ್ನೊಂದು ರೈಡ್ ರೆಡಿ ಇರುತ್ತದೆ. ಕೆಲವೊಮ್ಮೆ ಒಂದೊಂದು ರೈಡ್ ಪಡೆಯಲು ಸಾಹಸ ಮಾಡಬೇಕಾಗುತ್ತದೆ" ಎಂದು ಕೋರಾದಲ್ಲಿ ಒಬ್ಬರು ಬರೆದಿದ್ದಾರೆ.
ಆಂಬಿಷನ್‌ಬಾಕ್ಸ್.ಕಾಂನಲ್ಲಿರುವ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಚಾಲಕರ ವೇತನ 1.5 ಲಕ್ಷ ರೂಪಾಯಿಯಿಂದ 7.5 ಲಕ್ಷ ರೂಪಾಯಿ ಇರುತ್ತದೆ. ಇದು ಭಾರತದ ಚಾಲಕರ ಸರಾಸರಿ ವೇತನಕ್ಕಿಂತ ಶೇಕಡ 9ರಷ್ಟು ಹೆಚ್ಚು. ಬೆಂಗಳೂರಿನಲ್ಲಿ ಉಬರ್‌ಚಾಲಕನ ವೇತನ ತಿಂಗಳಿಗೆ 1.2 ಲಕ್ಷ ರೂಪಾಯಿಯಿಂದ 8 ಲಕ್ಷ ರೂಪಾಯಿವರೆಗೆ ಇರುತ್ತದೆ. ರಾಪಿಡ್ ಚಾಲಕನ ವೇತನ 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೆ ಇರುತ್ತದೆ ಎಂದು ಆಂಬಿಷನ್‌ಬಾಕ್ಸ್ ವರದಿಯಲ್ಲಿ ತಿಳಿಸಲಾಗಿದೆ.
"ಬೆಂಗಳೂರಿನಲ್ಲಿ ಕಷ್ಟಪಟ್ಟು ದುಡಿದರೆ ಸಂಪಾದನೆಗೆ ನಾನಾ ಮಾರ್ಗ ಇವೆ. ದಿನಕ್ಕೆ ಒಂದೆರಡು ಸಾವಿರ ರೂಪಾಯಿ ಗಳಿಕೆ ಮಾಡುತ್ತಾರೆ ಅನ್ನೋದು ನಿಜ. ಆದರೆ, ರಿಕ್ಷಾ ಚಾಲಕರ ಜೀವನ ಅಂದುಕೊಂಡಷ್ಟು ಸುಲಭವಲ್ಲ. ಬೆಳಗ್ಗಿನಿಂದ ಸಂಜೆ ತನಕ, ರಾತ್ರಿ ತನಕ ಈ ಸೀಟ್‌ನಲ್ಲಿ ಕುಳಿತುಕೊಂಡು ಟ್ರಾಫಿಕ್, ಮಾಲಿನ್ಯದಲ್ಲಿ ಸುತ್ತಾಡಬೇಕು. ಸಮಯಕ್ಕೆ ಸರಿಯಾಗಿ ಊಟ ತಿಂಡಿಯೂ ಇಲ್ಲ. ಮನೆಗೆ ಹೋಗಿ ಊಟ ಮಾಡಿ ಮಲಗೋದು, ಮರುದಿನ ಎದ್ದು ಹೋಗೋದು, ಅಷ್ಟೇ ಬದುಕು. ದುಡಿದರೆ ಮಾತ್ರ ನಮ್ಮ ಜೀವನದ ಬಂಡಿ ಹೋಗೋದು" ಎಂದು ರಿಕ್ಷಾ ಚಾಲಕ ಮುತ್ತು ಎಂಬವರು ಹೇಳಿದ್ದಾರೆ. "ಓಲಾ, ಉಬರ್, ಫುಡ್ ಡೆಲಿವರಿ, ತರಕಾರಿ ಡೆಲಿವರಿ ಹೀಗೆ ಬೆಂಗಳೂರಲ್ಲಿ ಈಗ ದುಡಿಯಲು ಸಾಕಷ್ಟು ಅವಕಾಶ ಇದೆ. ಕಷ್ಟಪಟ್ಟು ದುಡಿಯ ಬೇಕು. ಕೆಟ್ಟ ಅಭ್ಯಾಸ ಇರಬಾರದು. ಹಾಗಾದರೆ ಮಾತ್ರ ಇಲ್ಲಿ ಬದುಕಬಹುದು" ಎಂದು ಅವರು ಹೇಳಿದ್ದಾರೆ.
