HSRP in Karnataka: ಕರ್ನಾಟಕದಲ್ಲಿ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಪಡೆಯೋದು ಹೇಗೆ ಎಂಬ ಪೂರ್ಣ ವಿವರ ಇಲ್ಲಿದೆ
ಕರ್ನಾಟಕದಲ್ಲಿ 2019ರ ಏಪ್ರಿಲ್‌ಗಿಂತ ಮೊದಲು ನೋಂದಣಿ ಮಾಡಿಸಿಕೊಂಡ ಎಲ್ಲ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅಳವಡಿಸುವ ಕೆಲಸ ನವೆಂಬರ್ 17 ರ ಮೊದಲು ಪೂರ್ಣಗೊಳಿಸಲು ಸರ್ಕಾರ ಸೂಚಿಸಿದೆ. ಆನ್‌ಲೈನ್ ಪೋರ್ಟಲ್ ಮೂಲಕ ಈ ಕೆಲಸ ಮಾಡಲು ಅವಕಾಶ ಮಾಡಿದ್ದು, ಇದರ ವಿವರ ಇಲ್ಲಿದೆ.
ಎಲ್ಲ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (high – security registration plates HSRP) ಅಳವಡಿಸಲು ನವೆಂಬರ್ 17 ಕೊನೇ ದಿನ ಎಂದು ಕರ್ನಾಟಕ ಸಾರಿಗೆ ಇಲಾಖೆ (Transport Department of Karnataka) ಈಗಾಗಲೇ ಘೋಷಿಸಿದೆ. ಇದು ರಾಜ್ಯದಲ್ಲಿ 2019ರ ಏಪ್ರಿಲ್‌ಗಿಂತ ಮೊದಲು ನೋಂದಣಿ ಮಾಡಿಸಿಕೊಂಡ ವಾಹನಗಳಿಗೆ ಅನ್ವಯ.
ಈಗಾಗಲೇ ಹಲವರು ತಮ್ಮ ವಾಹನಗಳಿಗೆ ಹೈ- ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅಳವಡಿಸಿಕೊಂಡಿದ್ದಾರೆ. ಇನ್ನುಳಿದವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಾರಿಗೆ ಇಲಾಖೆ ಮಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್‌ಎಸ್‌ಆರ್‌ಪಿ ಎಂದರೇನು, ಕರ್ನಾಟಕದಲ್ಲಿ ಹೆಚ್‌ಎಸ್‌ಆರ್‌ಪಿ ಪಡೆಯುವುದು ಹೇಗೆ ಎಂಬಿತ್ಯಾದಿ ವಿವರ ಒದಗಿಸುವ ಪ್ರಯತ್ನ ಇದು.
ಏನಿದು ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ಸ್ (ಹೆಚ್‌ಎಸ್‌ಆರ್‌ಪಿ)
ಹೆಚ್‌ಎಸ್‌ಆರ್‌ಪಿ ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದ್ದು, ಅಲ್ಯೂಮಿನಿಯಂ ಲೋಹದಲ್ಲಿ ತಯಾರಿಸಿದ ನಂಬರ್ ಪ್ಲೇಟ್. ಬಳಕೆಯಿಲ್ಲದ ಎರಡು ಲಾಕ್‌ಗಳನ್ನು ಹೊಂದಿದೆ. ಮುಂಭಾಗದ ಮತ್ತು ಹಿಂಭಾಗದ ನಂಬರ್ ಪ್ಲೇಟ್‌ನ ಎಡಬದಿಯ ಮೇಲ್ತುದಿಯಲ್ಲಿ ಕ್ರೋಮಿಯಂ ಹಾಲೋಗ್ರಾಂ ಇದ್ದು, ಅದರಲ್ಲಿ ಆಶೋಕಚಕ್ರದ ಚಿತ್ರವಿದೆ. ಇದು 20 ಎಂಎಂX 20 ಎಂಎಂ ಗಾತ್ರದಲ್ಲಿ ಹಾಟ್ ಸ್ಟಾಂಪಿಂಗ್ ಮೂಲಕ ಲಗತ್ತಿಸಲಾಗುತ್ತದೆ. ನಕಲಿ ನಂಬರ್ ಪ್ಲೇಟ್ ಅಳವಡಿಸುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಕರ್ನಾಟಕದಲ್ಲಿ ಹೆಚ್‌ಎಸ್‌ಆರ್‌ಪಿಗಳನ್ನು ಪಡೆಯುವುದು ಹೇಗೆ
ಕರ್ನಾಟಕದಲ್ಲಿ ಹೆಚ್‌ಎಸ್‌ಆರ್‌ಪಿ ಅಥವಾ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ಸ್ ಅನ್ನು ಪಡೆಯಲು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಬೇಕು. ಅಲ್ಲಿ ಬುಕ್ ಹೆಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಾಹನದ ಉತ್ಪಾದಕ ಕಂಪನಿಯನ್ನು ಆಯ್ಕೆ ಮಾಡಿ. ಬಳಿಕ ಅಲ್ಲಿ ಬೇಸಿಕ್ ವೆಹಿಕಲ್ ಡಿಟೇಲ್ಸ್ ಕೇಳಿರುವುದನ್ನು ಭರ್ತಿ ಮಾಡಬೇಕು. ಅದಾದ ಬಳಿಕ ಡೀಲರ್ ಲೊಕೇಶನ್ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೆಲೆಕ್ಟ್ ಮಾಡಿಕೊಳ್ಳಬೇಕು. ಹೆಚ್‌ಎಸ್‌ಆರ್‌ಪಿಯನ್ನು ಫಿಕ್ಸ್ ಮಾಡುವುದಕ್ಕಾಗಿ ಡೀಲರ್ ಲೊಕೇಶನ್ ಸೆಲೆಕ್ಟ್ ಮಾಡಬೇಕಾಗಿರುವಂಥದ್ದು. ಹೆಚ್‌ಎಸ್‌ಆರ್‌ಪಿಗೆ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು. ನಗದು ಪಾವತಿ ಮಾಡಬೇಕಾದ್ದಿಲ್ಲ.
ಇಷ್ಟು ಮಾಡಿದ ಬಳಿಕ ವಾಹನದ ಮಾಲೀಕರ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಮಾಲೀಕರು ತಮ್ಮ ಸಮಯಾವಕಾಶ ನೋಡಿಕೊಂಡು ನಂಬರ್ ಪ್ಲೇಟ್ ಅನ್ನು ವಾಹನಕ್ಕೆ ಜೋಡಿಸಲು ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು. ಬಳಿಕ ವಾಹನ ಮಾಲೀಕರು ನಿಗದಿ ಮಾಡಿಕೊಂಡು ಅಂಗೀಕೃತವಾದ ದಿನಾಂಕ ಮತ್ತು ಸಮಯಕ್ಕೆ ಅವರ ವಾಹನ ಉತ್ಪಾದಕರು/ ಡೀಲರ್ ಬಳಿ ಹೋಗಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ವಾಹನಕ್ಕೆ ಅಳವಡಿಸಬಹುದು. ಕೆಲವು ಡೀಲರ್‌ಗಳು ವಾಹನ ಮಾಲೀಕರ ಮನೆಬಾಗಿಲಿಗೆ ಈ ಸೇವೆಯನ್ನು ಒದಗಿಸಬಹುದು.
ಕರ್ನಾಟಕ ಹೈಕೋರ್ಟ್‌ನಲ್ಲಿ ಸೆ.19ರಂದು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪ್ರಕರಣ ವಿಚಾರಣೆ
ಕರ್ನಾಟಕ ಸರ್ಕಾರ ಆಗಸ್ಟ್ 17ರಂದು ಪ್ರಕಟಿಸಿದ ಅಧಿಸೂಚನೆ ಪ್ರಶ್ನಿಸಿ, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP Number Plate) ಉತ್ಪಾದಕರ ಸಂಘ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಸೆಪ್ಟೆಂಬರ್ 19ಕ್ಕೆ ನಿಗದಿಪಡಿಸಿದೆ. ಕರ್ನಾಟಕ ಸರ್ಕಾರದ ಅಧಿಸೂಚನೆಯಿಂದ ಪ್ರಭಾವಿ ಕಂಪನಿಗಳಿಗೆ ಮಾತ್ರ ಅನುಕೂಲವೆಂದು ಆರೋಪಿಸಿ, ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಗೆ ತಡೆ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.