Bengaluru News: ಆನೆ ಕಾರ್ಯಪಡೆ ಗುಂಪು ಹೆಚ್ಚಳ; ರೇಡಿಯೋ ಕಾಲರ್ ಅಳವಡಿಕೆಗೆ ಆದೇಶ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಆನೆ ಕಾರ್ಯಪಡೆ ಗುಂಪು ಹೆಚ್ಚಳ; ರೇಡಿಯೋ ಕಾಲರ್ ಅಳವಡಿಕೆಗೆ ಆದೇಶ

Bengaluru News: ಆನೆ ಕಾರ್ಯಪಡೆ ಗುಂಪು ಹೆಚ್ಚಳ; ರೇಡಿಯೋ ಕಾಲರ್ ಅಳವಡಿಕೆಗೆ ಆದೇಶ

Elephant Attack: ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಕಾಡಂಚಿನಲ್ಲಿರುವ ಜನರಿಗೆ ಈ ಸಂಬಂಧ ಹೆಚ್ಚಿನ ಜಾಗೃತಿ ಮೂಡಿಸಲು ಮತ್ತು ಮುನ್ನೆಚ್ಚರಿಕಾ ಕ್ರಮ ವಹಿಸಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆನೆ ದಾಳಿಯಿಂದ ಜೀವಹಾನಿ ಆಗದಂತೆ ಕ್ರಮ ವಹಿಸಲು ಈಶ್ವರ ಖಂಡ್ರೆ ಸೂಚನೆ.

ಆನೆ ಕಾರ್ಯಪಡೆ ಗುಂಪು ಹೆಚ್ಚಳ; ರೇಡಿಯೋ ಕಾಲರ್ ಅಳವಡಿಕೆಗೆ ಆದೇಶ
ಆನೆ ಕಾರ್ಯಪಡೆ ಗುಂಪು ಹೆಚ್ಚಳ; ರೇಡಿಯೋ ಕಾಲರ್ ಅಳವಡಿಕೆಗೆ ಆದೇಶ

ಬೆಂಗಳೂರು: ಆಗಸ್ಟ್ 13ರಿಂದ ಇಲ್ಲಿಯವರೆಗೆ ಕಾಡಾನೆಗಳ ದಾಳಿಯಿಂದ ಐವರು ಮೃತಪಟ್ಟಿರುವ ಬಗ್ಗೆ ತೀವ್ರ ಆಘಾತ ಮತ್ತು ಶೋಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಕಾಡಂಚಿನಲ್ಲಿರುವ ಜನರಿಗೆ ಈ ಸಂಬಂಧ ಹೆಚ್ಚಿನ ಜಾಗೃತಿ ಮೂಡಿಸಲು ಮತ್ತು ಮುನ್ನೆಚ್ಚರಿಕಾ ಕ್ರಮ ವಹಿಸಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿಂದು ಸಭೆ ನಡೆಸಿದ ಸಚಿವರು, ಮಾನವ – ವನ್ಯಮೃಗಗಳ ಸಂಘರ್ಷ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಅಮೂಲ್ಯವಾದ ಮಾನವ ಪ್ರಾಣ ಹಾನಿಯೂ ಆಗಬಾರದು, ಅದೇ ವೇಳೆ ವನ್ಯ ಮೃಗಗಳ ಕೂಡ ಅಕ್ರಮ ವಿದ್ಯುತ್ ಬೇಲಿ ಸ್ಪರ್ಶದಿಂದ ಹಾಗೂ ಬೇಲಿಯಲ್ಲಿ ಹಾಕುವ ಉರುಳಿಗೆ ಸಿಲುಕಿ ಸಾವಿಗೀಡಾಗಬಾರದು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಿತ ಅರಣ್ಯ ಅಧಿಕಾರಿಗಳಿಗೆ ನಿರ್ದೇಶಿಸಲು, ಸೂಚಿಸಿದರು.

ಜನವಸತಿಗಳ ಬಳಿ, ರೈತರ ತೋಟ, ಗದ್ದೆಗಳ ಬಳಿ ಆನೆಗಳು ಕಾಣಿಸಿಕೊಂಡಾಗ ತ್ವರಿತವಾಗಿ ಆನೆಗಳನ್ನು ಕಾಡಿಗೆ ಮರಳಿಸಲು ಮತ್ತು ಸುತ್ತಮುತ್ತಲ ಜನರಿಗೆ ವಾಟ್ಸ್ ಅಪ್, ಎಸ್.ಎಂ.ಎಸ್. ಮತ್ತು ಸಾರ್ವಜನಿಕ ಪ್ರಚಾರ ವಿಧಾನಗಳ ಮೂಲಕ ಮಾಹಿತಿ ನೀಡಿ, ಜೀವಹಾನಿ ತಗ್ಗಿಸುವಂತೆ ಸಚಿವರು ನಿರ್ದೇಶಿಸಿದರು.

ಆನೆ ಕಾರ್ಯಪಡೆಯಲ್ಲಿನ ಗುಂಪು ಹೆಚ್ಚಳ

ಆನೆಗಳ ಹಾವಳಿ ಹೆಚ್ಚಾಗಿರುವ ಚಾಮರಾಜನಗರ, ಮತ್ತು ಕೊಡಗು ಭಾಗದಲ್ಲಿ ಕಾಡಾನೆಗಳನ್ನು ತಕ್ಷಣವೇ ಕಾಡಿಗೆ ಓಡಿಸಲು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಆನೆ ಕ್ಷಿಪ್ರ ಕಾರ್ಯಪಡೆಗಳಲ್ಲಿನ ಗುಂಪುಗಳನ್ನು ಹೆಚ್ಚಿಸುವಂತೆ ಇದೇ ಸಂದರ್ಭದಲ್ಲಿ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.

ರೇಡಿಯೋ ಕಾಲರ್

ಎಲ್ಲ ಆನೆಗಳೂ ನಾಡಿಗೆ ಬರುವುದಿಲ್ಲ. ಕೆಲವು ಆನೆಗಳು ಮಾತ್ರ ಪದೇ ಪದೇ ನಾಡಿಗೆ ದಾಳಿ ಇಟ್ಟು ಹಾನಿ ಮಾಡುತ್ತವೆ, ಇಂತಹ ಆನೆಗಳನ್ನು ಗುರುತಿಸಿ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು. ಪ್ರಸ್ತುತ ರಾಜ್ಯದಲ್ಲಿ ಇಂತಹ 14 ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಇದರಿಂದ ಆನೆಗಳ ಚಲನವಲನದ ಬಗ್ಗೆ ಸಂಪೂರ್ಣ ಮಾಹಿತಿ ಲಭಿಸುತ್ತದೆ. ಅರಣ್ಯ ಇಲಾಖೆಯಲ್ಲಿ ಪ್ರಸ್ತುತ ಇನ್ನೂ 30 ರೇಡಿಯೋ ಕಾಲರ್ ಲಭ್ಯವಿದ್ದು, ಪುಂಡಾನೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡುವ ಮೊದಲು ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಹಿಂದೆ ವಿಶ್ವ ವನ್ಯಜೀವಿ ನಿಧಿಗಾಗಿ ಕಾಯಲಾಗುತ್ತಿತ್ತು, ಈಗ ಇಲಾಖೆಯೇ ರೇಡಿಯೋ ಕಾಲರ್ ಖರೀದಿ ಮಾಡುತ್ತಿದೆ. ಪ್ರತಿ ರೇಡಿಯೋ ಕಾಲರ್ ಗೆ ಸುಮಾರು 7 ಲಕ್ಷ ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರೈಲ್ವೆ ಬ್ಯಾರಿಕೇಡ್

ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಉತ್ತಮ ವಿಧಾನವಾಗಿದೆ. ಆನೆಗಳು ಹೆಚ್ಚಾಗಿ ನಾಡಿನತ್ತ ಬರುವ ಪ್ರದೇಶಗಳನ್ನು ಗುರುತಿಸಿ ಬ್ಯಾರಿಕೇಡ್ ಹಾಕುವ ಕಾರ್ಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

Whats_app_banner