Vande Bharat Express: ಕರ್ನಾಟಕದಲ್ಲೀಗ 8 ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌; ಈ ಊರುಗಳಲ್ಲೂ ಇದೆ ಬೇಡಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Vande Bharat Express: ಕರ್ನಾಟಕದಲ್ಲೀಗ 8 ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌; ಈ ಊರುಗಳಲ್ಲೂ ಇದೆ ಬೇಡಿಕೆ

Vande Bharat Express: ಕರ್ನಾಟಕದಲ್ಲೀಗ 8 ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌; ಈ ಊರುಗಳಲ್ಲೂ ಇದೆ ಬೇಡಿಕೆ

ಕರ್ನಾಟಕದಲ್ಲೀಗ 8 ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸಂಚರಿಸುತ್ತಿವೆ. ಈ ಪೈಕಿ ಒಂದು ಮಾರ್ಗದಲ್ಲಿ ತಾತ್ಕಾಲಿಕ ಸಂಚಾರ ನಡೆಸುತ್ತಿದೆ. ಇದಲ್ಲದೇ ಇನ್ನಷ್ಟು ಊರುಗಳಲ್ಲಿಯೂ ವಂದೇ ಭಾರತ್ ರೈಲು ಸಂಚಾರಕ್ಕೆ ಬೇಡಿಕೆ ಇದೆ. ಅವುಗಳ ವಿವರ ಇಲ್ಲಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ (ಸಾಂಕೇತಿಕ ಚಿತ್ರ)
ವಂದೇ ಭಾರತ್‌ ಎಕ್ಸ್‌ಪ್ರೆಸ್‌ (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಬೇಡಿಕೆ ಹೆಚ್ಚಾಗತೊಡಗಿದೆ. ಬೆಂಗಳೂರು - ಕಲಬುರಗಿ ನಡುವೆ ವಂದೇ ಬಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ಪ್ರಸ್ತುತ ಕರ್ನಾಟಕದಲ್ಲಿ 8 ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚರಿಸುತ್ತಿವೆ. ಈ ರೈಲುಗಳು ಮೈಸೂರು- ಚೆನ್ನೈ, ಬೆಂಗಳೂರು - ಧಾರವಾಡ, ಬೆಳಗಾವಿ, ಯಶವಂತ ಪುರ - ಕಾಚೆಗುಡ, ಮಂಗಳೂರು- ತಿರುವನಂತಪುರ, ಬೆಂಗಳೂರು- ಕಲಬುರಗಿ, ಬೆಂಗಳೂರು - ಚೆನ್ನೈ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ.

ಈ ರೈಲುಗಳು ಸಾಮಾನ್ಯ ರೈಲುಗಳಿಗಿಂತ ಬೇಗ ಗಮ್ಯಸ್ಥಾನ ತಲುಪುತ್ತವೆ. ಹೀಗಾಗಿ ಈ ರೈಲುಗಳ ಪ್ರಯಾಣಕ್ಕೆ ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆ ಇದೆ. ಈ ರೈಲುಗಳೆಲ್ಲವೂ ಭರ್ತಿಯಾಗುತ್ತಿದ್ದು, ಇನ್ನಷ್ಟು ರೈಲುಗಳ ಸಂಚಾರಕ್ಕೆ ಬೇಡಿಕೆ ಬರತೊಡಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಕರ್ನಾಟಕದ 8 ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗಳಿವು

1) ಮೈಸೂರು - ಎಂಜಿಆರ್‌ ಚೆನ್ನೈ ಸೆಂಟ್ರಲ್; ರೈಲು ಸಂಖ್ಯೆ 20607/ 20608 ಮೊದಲ ಪ್ರಯಾಣ ಶುರುವಾಗಿದ್ದು 2022ರ ನವೆಂಬರ್ 11ರಂದು.

2) ಕೆಎಸ್‌ಆರ್ ಬೆಂಗಳೂರು - ಧಾರವಾಡ; ರೈಲು ಸಂಖ್ಯೆ 20661/20662 ಮೊದಲ ಪ್ರಯಾಣ ಶುರುವಾಗಿದ್ದು 2023ರ ಜೂನ್ 27ರಂದು

3) ಯಶವಂತಪುರ - ಕಾಚೆಗುಡ; ರೈಲು ಸಂಖ್ಯೆ 20703/20704 ಮೊದಲ ಪ್ರಯಾಣ ಶುರುವಾಗಿದ್ದು 2023ರ ಸೆಪ್ಟೆಂಬರ್ 24

4) ಮಂಗಳೂರು ಸೆಂಟ್ರಲ್‌ - ತಿರುವನಂತಪುರ (ಆಲಪ್ಪುಳ ಮಾರ್ಗ); ರೈಲು ಸಂಖ್ಯೆ - 20631/20632, ಮೊದಲ ಪ್ರಯಾಣ ಶುರುವಾಗಿದ್ದು 2023ರ ಸೆಪ್ಟೆಂಬರ್ 24

5) ಬೆಂಗಳೂರು ಕಂಟೋನ್ಮೆಂಟ್‌ - ಕೊಯಮತ್ತೂರು; ರೈಲು ಸಂಖ್ಯೆ 20642/20641, ಮೊದಲ ಪ್ರಯಾಣ ಶುರುವಾಗಿದ್ದು 2023ರ ಡಿಸೆಂಬರ್ 30

6) ಮಂಗಳೂರು ಸೆಂಟ್ರಲ್ - ಮಡ್ಗಾಂವ್‌; ರೈಲು ಸಂಖ್ಯೆ 20646/20645, ಮೊದಲ ಪ್ರಯಾಣ ಶುರುವಾಗಿದ್ದು 2023ರ ಡಿಸೆಂಬರ್ 30

7) ಕಲಬುರಗಿ (ಗುಲ್ಬರ್ಗ)- ಎಸ್‌ಎಂವಿಟಿ ಬೆಂಗಳೂರು- ರೈಲು ಸಂಖ್ಯೆ 22231/22232, ಮೊದಲ ಪ್ರಯಾಣ ಶುರುವಾಗಿದ್ದು 2024ರ ಮಾರ್ಚ್ 12

8) ಎಸ್‌ಎಂವಿಟಿ ಬೆಂಗಳೂರು- ಎಂಜಿಆರ್ ಚೆನ್ನೈ ಸೆಂಟ್ರಲ್ ; ರೈಲು ಸಂಖ್ಯೆ 20663/20664, ಮೊದಲ ಪ್ರಯಾಣ ಶುರುವಾಗಿದ್ದು 2024ರ ಮಾರ್ಚ್ 12 (ಏಪ್ರಿಲ್ 4ರ ತನಕ ತಾತ್ಕಾಲಿಕ ಸೇವೆ)

ಕರ್ನಾಟಕದ ಈ ಊರುಗಳಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಬೇಡಿಕೆ

ಭಾರತೀಯ ರೈಲ್ವೆ ಪರಿಚಯಿಸಿರುವ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ ಈಗಾಗಲೇ ಜನಮೆಚ್ಚುಗೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ ಸದ್ಯ 8 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಇನ್ನಷ್ಟು ರೈಲು ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೇವೆ ಒದಗಿಸುವುದಕ್ಕೆ ಜನ ಬೇಡಿಕೆ ಇರಿಸತೊಡಗಿದ್ದಾರೆ. ಅವುಗಳ ವಿವರ ಹೀಗಿದೆ.

1) ಬೆಂಗಳೂರು- ಮಂಗಳೂರು

2) ಬೆಂಗಳೂರು -ಬೆಳಗಾವಿ ( ಧಾರವಾಡ ರೈಲು ವಿಸ್ತರಣೆಗೆ ಒಪ್ಪಿಗೆ ಸಿಕ್ಕಿದೆ)

3) ಬೀದರ್-ಹುಬ್ಬಳ್ಳಿ

4) ಬೆಂಗಳೂರು-ಹೊಸಪೇಟೆ

5) ಬೆಂಗಳೂರು-ತಿರುಪತಿ

6) ಬೆಂಗಳೂರು-ಮಧುರೈ

7) ಬೆಂಗಳೂರು-ಪುದುಚೇರಿ

8) ಬೆಂಗಳೂರು-ಶಿವಮೊಗ್ಗ

ಸದ್ಯ ಇಷ್ಟು ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಬೇಡಿಕೆ ಬಂದಿದೆ. ಇದಲ್ಲದೇ ವಿಜಯಪುರ ಸೇರಿ ಇನ್ನೂ ಕೆಲವು ಮಾರ್ಗಗಳಲ್ಲಿ ವಂದೇ ಭಾರತ್ ಓಡಿಸುವಂತೆ ಬೇಡಿಕೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿದ್ದಾಗಿ ವರದಿಗಳು ಹೇಳಿವೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner