Bengaluru News: ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ರೈಲಿಂಗ್ಸ್ ಅಳವಡಿಕೆ; ಹಳಿಗಳ ಮೇಲೆ ಪ್ರಯಾಣಿಕರು ಧುಮುಕದಂತೆ ಮುನ್ನೆಚ್ಚರಿಕೆ
Bengaluru News: ಪ್ರಯಾಣಿಕರ ಹಿತದೃಷ್ಟಿಯಿಂದ, ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚರಿಕೆ ವಹಿಸಲು ಬೆಂಗಳೂರು ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಮೊದಲ ಬಾರಿಗೆ ರೈಲಿಂಗ್ಸ್ ಅಳವಡಿಸಲಾಗಿದೆ.
Bengaluru News: 2023ರ ವರ್ಷಾಂತ್ಯದಲ್ಲಿ ಮೆಟ್ರೋ ಹಳಿಯ ಮೇಲೆ ಧುಮುಕಿ ಕೇರಳ ಮೂಲದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ. ಮತ್ತೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ಹಳಿಗಳ ಮೇಲೆ ಬಿದ್ದ ಮೊಬೈಲ್ ಎತ್ತಿಕೊಳ್ಳಲು ಧುಮುಕಿದ್ದರು. ಈ ಎರಡೂ ಘಟನೆಗಳಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದಲ್ಲದೆ ಆತಂಕವೂ ಮನೆ ಮಾಡಿತ್ತು.
ರೈಲಿಂಗ್ಸ್ ಅಳವಡಿಕೆ
ಈ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹ್ಯಾಂಡ್ ಸ್ಟೀಲ್ ರೈಲಿಂಗ್ಸ್ ಅಳವಡಿಕೆಗೆ ಒತ್ತಾಯ ಹೆಚ್ಚಾಗಿತ್ತು. ಆಗ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ನಿಗಮವು (ಬಿಎಂಆರ್‌ಸಿಎಲ್) ರೈಲಿಂಗ್ಸ್ ಅಳವಡಿಸಲು ನಿರ್ಧರಿಸಿತ್ತು. ಪ್ರಯಾಣಿಕರು ಹಳಿಗಳ ಮೇಲೆ ಧುಮುಕದಂತೆ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಮೊದಲ ಬಾರಿಗೆ ಸುರಕ್ಷತಾ ಕ್ರಮವಾಗಿ ಫೆ.1ರಂದು ರೈಲಿಂಗ್ಸ್‌ಗಳನ್ನು ಅಳವಡಿಸಲಾಗಿದೆ. ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು. ಆದ್ದರಿಂದ ರೈಲಿಂಗ್ಸ್‌ಗಳನ್ನು ಅಳವಡಿಸುವ ಕಾರ್ಯ ಇಲ್ಲಿಂದಲೇ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತಾ ಸ್ಟೀಲ್ ರೈಲಿಂಗ್ಸ್ ಅಳವಡಿಸುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ರೈಲಿಂಗ್ಸನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಯಾವುದೇ ಸಂದರ್ಭದಲ್ಲಿಯೂ ಪ್ರಯಾಣಿಕರು ವಿದ್ಯುದೀಕರಣಗೊಂಡ ಹಳಿಗಳ ಮೇಲೆ ಧುಮುಕುಲು ಅವಕಾಶ ಇರುವುದಿಲ್ಲ. ಆದರೆ ರೈಲಿನ ಬಾಗಿಲು ತೆರೆಯುವ ಸ್ಥಳದಲ್ಲಿ ರೈಲಿಂಗ್ಸ್ ಇರುವುದಿಲ್ಲ. ಪ್ರಯಾಣಿಕರ ಸುರಕ್ಷತೆಗೆ ನಮ್ಮ ಮೆಟ್ರೋ ಮೊದಲ ಆದ್ಯತೆ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಪಿಎಸ್‌ಡಿ ಬಾಗಿಲುಗಳ ಅಳವಡಿಕೆಗೆ ಚಾಲನೆ
ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್ (ಪಿಎಸ್ ಡಿ ) ಅಳವಡಿಸಲು ಟೆಂಡರ್ ನೀಡಲಾಗಿದೆ. ಹಳದಿ ಮಾರ್ಗ ಮತ್ತು ನೀಲಿ ಮಾರ್ಗದ 2ನೇ ಹಂತದ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ನೀಲಿ ಮಾರ್ಗ ಹಂತ 2 ಬಿ ನಲ್ಲಿ ಕೆಆರ್ ಪುರ ಮತ್ತು ವಿಮಾನ ನಿಲ್ದಾಣ ಮಾರ್ಗದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಒಪ್ಪಂದದ ಪ್ರಕಾರ 13 ಕೆಳ ನಿಲ್ದಾಣ ಮತ್ತು 37 ಎತ್ತರಿಸಿದ ನಿಲ್ದಾಣಗಳಲ್ಲಿ ಪಿಎಸ್ ಡಿ ಬಾಗಿಲುಗಳನ್ನು ಅಳವಡಿಸಲಾಗುತ್ತಿದೆ.
ಈ ಹಿಂದೆ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್ (ಪಿಎಸ್‌ಡಿ) ಅಳವಡಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿತ್ತು. ಎಲೆಕ್ಟ್ರಾನಿಕ್ಸ್ ಸಿಟಿಯ ಕೋನಪ್ಪನ ಅಗ್ರಹಾರದ ನಿಲ್ದಾಣದಲ್ಲಿ ಪಿಎಸ್‌ಡಿ ಬಾಗಿಲನ್ನು ಪರಿಚಯಿಸಲಾಗುತ್ತಿದೆ. ಪಿಎಸ್‌ಡಿ ತಂತ್ರಜ್ಞಾನ ಹೊಂದಿರುವ ಮೊದಲ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೋನಪ್ಪನ ಅಗ್ರಹಾರ ಪಾತ್ರವಾಗಲಿದೆ. ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವುದು ಮತ್ತು ಅವರು ಹಳಿಗಳ ಮೇಲೆ ಪ್ರವೇಶಿಸುವುದನ್ನು ತಡೆಗಟ್ಟಲು ಇಂತಹ ಕ್ರಮಗಳು ಅನಿವಾರ್ಯವಾಗಿವೆ. ಮೇಲಾಗಿ ಮೆಟ್ರೋ ಕಾರ್ಯಾಚರಣೆಗೆ ಅಡಚಣೆ ಎದುರಾಗುವುದನ್ನು ತಪ್ಪಿಸಲು ಇಂತಹ ಕ್ರಮ ಬೇಕಿತ್ತು ಎಂದು ಮೆಟ್ರೋ ಪ್ರಯಾಣಿಕರು ಅಭಿಪ್ರಾಯಪಡುತ್ತಾರೆ.
ಏನಿದು ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಸಿಸ್ಟಮ್?
ಪಿಎಸ್‌ಡಿ ಬಾಗಿಲುಗಳ ಅಳವಡಿಕೆಯಿಂದ ಪ್ರಯಾಣಿಕರು ಟ್ರಾಕ್‌ಗಳ ಮೇಲೆ ನೆಗೆಯುವುದನ್ನು ತಪ್ಪಿಸಲು, ಪ್ಲಾಟ್ ಫಾರ್ಮ್ ತುದಿಗೆ ಅಂಟಿಕೊಂಡಂತೆ ನಿಲ್ಲುವುದನ್ನು ನಿಯಂತ್ರಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ದೆಹಲಿ ಮತ್ತು ಚೆನ್ನೈ ಮೆಟ್ರೋ ನಿಲ್ದಾಣಗಳಲ್ಲಿ ಇಂತಹ ಪಿಎಸ್‌ಡಿ ಬಾಗಿಲುಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ಪ್ರಯಾಣಿಕರು ಪ್ಲಾಟ್ ಫಾರ್ಮ್ ತುದಿಗೆ ಬರದಂತೆ ಟ್ರಾಕ್ ಗಳ ಮೇಲೆ ನೆಗೆಯದಂತೆ ಮತ್ತು ಸರತಿ ಸಾಲಿನಲ್ಲಿ ನಿಲ್ಲುವ ಹಾಗೆ ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೂ ಪಿಎಸ್‌ಡಿ ಬಾಗಿಲುಗಳು ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.