ಕೆಂಪೇಗೌಡ ಏರ್ಪೋರ್ಟ್ ಮೇಲೆ ಹೆಚ್ಚುತ್ತಿರುವ ಒತ್ತಡ; ಎಚ್ಎಎಲ್ ವಿಮಾನ ನಿಲ್ದಾಣ ಪುನಾರಂಭಿಸಲು ಸಕಾಲ ಎಂದ ಉದ್ಯಮಿಗಳು
Bengaluru Airport: ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚುತ್ತಿದೆ. ಬೆಂಗಳೂರಿಗೆ ಮೂರನೇ ನಿಲ್ದಾಣ ಮರೀಚಿಕೆಯಂತಿದೆ. ಹೀಗಿರುವಾಗ ಎಚ್ಎಎಲ್ ವಿಮಾನ ನಿಲ್ದಾಣ ಪುನಾರಂಭಿಸಲು ಕೂಗು ಕೇಳಿ ಬರುತ್ತಿದೆ.
ಬಹುಮುಖೀಯವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಸಂಪೂರ್ಣ ವಾಣಿಜ್ಯ ಉದ್ದೇಶದ ಎರಡು ವಿಮಾನ ನಿಲ್ದಾಣಗಳ ಅವಶ್ಯಕತೆ ಇದೆ. ಈ ಉದ್ಯಾನ ನಗರಿಯಲ್ಲಿ ಕೈಗಾರಿಕೆ ಮತ್ತು ಜನಸಂಖ್ಯೆ ಬೆಳೆಯುತ್ತಿರುವ ವೇಗವನ್ನು ನೋಡಿದರೆ ಹಳೆಯ ಎಚ್.ಎ.ಎಲ್ ವಿಮಾನ ನಿಲ್ದಾಣವನ್ನು ಆರಂಭಿಸಿದ ನಂತರ ಮೂರನೇ ವಿಮಾನ ನಿಲ್ದಾಣ ಕುರಿತು ಚಿಂತನೆ ನಡೆಸಲೇ ಬೇಕಾಗುತ್ತದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಹೇಳಿದ್ದಾರೆ. ಅವರ ಮಾತಿನ ಅರ್ಥ ಬೆಂಗಳೂರಿಗೆ ಮೂರು ವಿಮಾನ ನಿಲ್ದಾಣಗಳ ಅವಶ್ಯಕತೆ ಇರುವುದನ್ನು ತೋರಿಸುತ್ತದೆ.
ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜನಸಂದಣಿ ಇರುವ ಭಾರತದ ಮೂರನೇ ವಿಮಾನ ನಿಲ್ದಾಣವಾಗಿದೆ. 2032-33ರ ವೇಳೆಗೆ 90 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುವ ಮೂಲಕ ಈ ವಿಮಾನ ನಿಲ್ದಾಣದ ಮಿತಿ ದಾಟುತ್ತದೆ. ಕೋವಿಡ್ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ನಂತರ 2022ರಲ್ಲಿ 31.9 ಮಿಲಿಯನ್ ಪ್ರಯಾಣಿಕರು ಮತ್ತು 2023ರಲ್ಲಿ ಈಗಾಗಲೇ 40 ಮಿಲಿಯನ್ ಪ್ರಯಾಣಿಕರು ಹಾರಾಟ ನಡೆಸಿದ್ದಾರೆ.
ಬಿಐಎಎಲ್ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 150 ಕಿಮೀ ವ್ಯಾಪ್ತಿಯಲ್ಲಿ 25 ವರ್ಷಗಳ ಕಾಲ ಮತ್ತೊಂದು ವಿಮಾನ ನಿಲ್ದಾಣವನ್ನು ಆರಂಭಿಸುವಂತಿಲ್ಲ. ಬಿಐಎಎಲ್ 2008 ರಿಂದ ಆರಂಭವಾಗಿದೆ. ಆದರೆ ಕಾರ್ಗೋ ಉದ್ದೇಶದ ವಿಮಾನ ಹಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲವಾದ್ದರಿಂದ ಎಚ್ ಎ ಎಲ್ ವಿಮಾನ ನಿಲ್ದಾಣವನ್ನು ಪುನಾರಂಭಿಸಬಹುದಾಗಿದೆ. ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ ಬೆಂಗಳೂರು ಮತ್ತು ಮೈಸೂರು ನಡುವೆ
ಮತ್ತೊಂದು ವಿಮಾನ ನಿಲ್ದಾಣವನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದೆ. ಬಿಐಎಎಲ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಭವಿಷ್ಯದಲ್ಲಿ ಕಾರ್ಗೋ (ಸರಕು ಸಾಗಾಣೆ) ಮತ್ತು ಕೈಗಾರಿಕೆಗಳು ಹೆಚ್ಚುತ್ತಿದ್ದು ಮತ್ತೊಂದು ವಿಮಾನ ನಿಲ್ದಾಣದ ಅವಶ್ಯಕತೆಯನ್ನು ಈ ಸಂಸ್ಥೆ ಪ್ರತಿಪಾದಿಸಿದೆ. ಬೆಂಗಳೂರು ದಕ್ಷಿಣ ಭಾಗದ ರಾಮನಗರ, ಚನ್ನಪಟ್ಟಣ, ಬಿಡದಿ ಮತ್ತು ಮೈಸೂರು ರಸ್ತೆಯುದ್ದಕ್ಕೂ ಬೆಳವಣಿಗೆ ಹೆಚ್ಚುತ್ತಿದೆ. ಇದರ ಸಮೀಪದಲ್ಲಿಯೇ. ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ವೈಟ್ ಫೀಲ್ಡ್ ಇರುವುದು ವಿಮಾನ ನಿಲ್ದಾಣದ ಬೇಡಿಕೆಗೆ ಪೂರಕವಾಗಿದೆ.
ಕಾರ್ಗೋ ವಿಮಾನ ಸಂಚಾರಕ್ಕೆ ಅಡ್ಡಿ ಇಲ್ಲ:
ಆರ್ಥಿಕ ಲಾಭದ ದೃಷ್ಟಿಯಿಂದ ಕಾರ್ಗೋ ವಿಮಾನ ಸಂಚಾರವೂ ಅತಿ ಮುಖ್ಯ. ಮೆಂಫಸಿಸ್, ಬಾನ್, ಅಂಖೋರೇಜ್ ಮೊದಲಾದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಿಂತ ಕಾರ್ಗೋ ವಿಮಾನಗಳ ಸಂಚಾರವೇ ಹೆಚ್ಚು. ಭವಿಷ್ಯದಲ್ಲಿ ಬೆಳವಣಿಗೆ ಹೆಚ್ಚುತ್ತಾ ಹೋಗುತ್ತದೆ. ಹಾಸನ ಮತ್ತು ಮೈಸೂರಿನಲ್ಲಿ ಆಹಾರ ಸಂಸ್ಕರಣೆ, ಎಲೆಕ್ಟ್ರಾನಿಕ್ಸ್, ಪ್ರಿಸಿಷನ್, ಪುಷ್ಪಕೃಷಿಗೆ ವಿಫುಲ ಅವಕಾಶಗಳಿವೆ. ಬೆಂಗಳೂರಿನ ಸುತ್ತ ಕೈಗಾರಿಕಾ ವಲಯಗಳು ಬೆಳೆಯುತ್ತಲೇ ಇವೆ. ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಾಗಿ ಸರ್ಕಾರಗಳು ಹೇಳುತ್ತಲೇ ಬರುತ್ತಿವೆಯಾದರೂ ಸಾದ್ಯವಾಗಿಲ್ಲ. ಮೈಸೂರು ಹಾಸನ ಸೇರಿದಂತೆ ಯಾವುದೇ ಪ್ರದೇಶಗಳಿಗೆ ಉತ್ತಮ ಸಂಪರ್ಕ ಕಲ್ಪಿಸದಿದ್ದರೆ ಉದ್ಯಮಿಗಳು ಬೆಂಗಳೂರನ್ನು ಬಿಟ್ಟು ಆಚೆ ಹೋಗುವ ಚಿಂತನೆಯನ್ನೇ ಮಾಡುವುದಿಲ್ಲ. ಬೆಂಗಳೂರಿಗೆ ಪರ್ಯಾಯವಾಗಿ ಮೈಸೂರು ಬೆಳೆಯುತ್ತಿದೆ. ಬೆಂಗಳೂರಿನಿಂದ ಮೈಸೂರನ್ನು 90 ನಿಮಿಷಗಳಲ್ಲಿ ತಲುಪಬಹುದಾಗಿದೆ. ಆದರೆ ಬೆಂಗಳೂರಿನಿಂದ ದೇವನಹಳ್ಳಿ ತಲುಪಲು ಬೇಕಾಗುವ ಸಮಯವನ್ನು ಊಹಿಸಿಕೊಳ್ಳಲು ಭಯವಾಗುತ್ತದೆ.
ಎಚ್.ಎ.ಎಲ್. ಏಕೆ ಅನಿವಾರ್ಯ?
ಬೆಂಗಳೂರಿನಿಂದ ವಿವಿಧ ನಗರಗಳಿಗೆ ರೈಲು ಅಥವಾ ರಸ್ತೆ ಸಂಪರ್ಕ ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ. ಉದಾಹರಣೆಗೆ ಬೆಂಗಳೂರಿನಿಂದ ಮುಂಬೈಗೆ ಹೈ ಸ್ಪೀಡ್ ರೈಲು ಸಂಚಾರ ಮರೀಚಿಕೆಯಾಗಿದೆ. ಏರ್ಪೋರ್ಟ್ ಕಾರಿಡಾರ್ ಗಳಿಲ್ಲ. ಮಂಗಳೂರು ಅಥವಾ ಕೊಚ್ಚಿಯನ್ನು ರಸ್ತೆ ಮೂಲಕ ತಲುಪಲು ಘಟ್ಟಗಳನ್ನು ಹಾದುಹೋಗಬೇಕಾಗಿದೆ. ಹೈದರಾಬಾದ್, ಚೆನ್ನೈ ಹೊರತುಪಡಿಸಿದರೆ ಬೇರೆ ಯಾವುದೇ ನಗರಕ್ಕೆ ಹೈಸ್ಪೀಡ್ ರೈಲು ಸಂಚಾರ ಇಲ್ಲ. ಆದ್ದರಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚುತ್ತಿದೆ.
ಈ ಎಲ್ಲ ಕಾರಣಗಳಿಗಾಗಿ ಎಚ್ ಎಎಲ್ ವಿಮಾನ ನಿಲ್ದಾಣವನ್ನು ಆರಂಭಿಸಲು ಒತ್ತಡ ಹೆಚ್ಚುತ್ತಿದೆ. ಚೆನ್ನೈಗೆ ತೆರಳಲು ಎಚ್ಎಎಲ್ ನಿಲ್ದಾಣಕ್ಕಿಂತ ಸುಲಭ ಮಾರ್ಗ ಯಾವುದು ಎಂದು ಪ್ರಶ್ನಿಸುತ್ತಾರೆ. ಪ್ರತ್ಯೇಕ ವಿಮಾನ ನಿಲ್ದಾಣವಾಗಿ ಅಲ್ಲವಾದರೂ ಕೆಐಎಗೆ ಪೂರಕ ವಿಮಾನ ನಿಲ್ದಾಣವಾಗಿ ಎಚ್ಎಎಲ್ ಕಾರ್ಯಾರಂಭ ಮಾಡಲು ಇದು ಸಕಾಲವಾಗಿದೆ. ಇದರಿಂದ ಸಮಯ ಮತ್ತು ಇಂಧನದ ಉಳಿತಾಯವಾಗುತ್ತದೆ. ಭವಿಷ್ಯದಲ್ಲಿ ಎಚ್ಎಎಲ್ ವಿಮಾನ ನಿಲ್ದಾಣ ಆರಂಭವಾಗಲೂಬಹುದು. ಬೆಂಗಳೂರು ದಕ್ಷಿಣ ಭಾಗಕ್ಕೆ ಸಮೀಪವಾಗಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಲೂಬಹುದು.