ಯೋಗಿ ಅರವಿಂದರಿಲ್ಲದೆ ಬೇಂದ್ರೆಯಿಲ್ಲ: ಸಾಹಿತಿ ಡಾ ಜಿಬಿ ಹರೀಶ ಅಭಿಪ್ರಾಯ, ಅಭಾಸಾಪ ನಾಕುತಂತಿ ಷಷ್ಟಿಪೂರ್ತಿ ಕಾರ್ಯಕ್ರಮಗಳ ಉದ್ಘಾಟನೆ
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರ ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ‘ನಾಕುತಂತಿ' ಕವನ ಸಂಕಲನದ ಷಷ್ಟಿಪೂರ್ತಿ ನಿಮಿತ್ತ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಿತು. ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಮತ್ತು ಸಂಸ್ಕೃತಿ ವಿದ್ವಾಂಸ ಡಾ ಜಿಬಿ ಹರೀಶ್ ಮಾತನಾಡಿದರು.

ಬೆಂಗಳೂರು: 'ಯೋಗಿ ಅರವಿಂದರೆಂಬ ತೈಲ, ಅಧ್ಯಾತ್ಮವೆಂಬ ಬೆಳಕಿನಿಂದ ದ.ರಾ. ಬೇಂದ್ರೆಯವರು ತಮ್ಮ ಕಾವ್ಯವನ್ನು ಬೆಳಗಿಸಿಕೊಂಡರು. ಅರವಿಂದರನ್ನು ಭೇಟಿಯಾದ ನಂತರ ಬೇಂದ್ರೆಯವರ ಜೀವನ ಹಾಗೂ ಕಾವ್ಯವು ಹೊಸ ದಿಕ್ಕಿನತ್ತ ಹೊರಳಿತು' ಎಂದು ಕವಿ, ಸಾಹಿತಿ ಡಾ ಜಿ.ಬಿ. ಹರೀಶ ಹೇಳಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರ ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ‘ನಾಕುತಂತಿ' ಕವನ ಸಂಕಲನದ ಷಷ್ಟಿಪೂರ್ತಿ ನಿಮಿತ್ತ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೇಂದ್ರೆ ಕವಿತೆಗಳಿಗೆ ಅಪಾರವಾದ ಟೀಕೆ, ಬೆರಗು ಹಾಗೂ ದೇಶಾವರಿ ಮೆಚ್ಚುಗೆ ಸಿಕ್ಕಿದೆ. ಆದರೆ ಅವಕ್ಕೆ ಸಿಗಬೇಕಿದ್ದಷ್ಟು ವಿಮರ್ಶೆ, ಪ್ರೋತ್ಸಾಹ, ವ್ಯಾಖ್ಯಾನ ಸಿಕ್ಕಿಲ್ಲ. ನಮಗೆ ಯಾರಾದರೂ ಹೆಚ್ಚು ತಿಳಿದಷ್ಟೂ ಸಲಿಗೆ ಬೆಳೆಯುವಂತೆ ಬಹುಶಃ ಬೇಂದ್ರೆಯವರ ಸಂದರ್ಭದಲ್ಲೂ ಆಗಿರಬಹುದು. ಆರಂಭದ ಹಂತದಲ್ಲಿ ಬೇಂದ್ರೆಯವರು ಖಲೀಲ್ ಗಿಬ್ರಾನ್, ಟ್ಯಾಗೋರ್, ಕನ್ನಡದ ಪಂಪ ಅವರಂಥವರನ್ನು ಓದಿಕೊಂಡು ತಮ್ಮದೇ ರೀತಿಯಲ್ಲಿ ಕಾವ್ಯ ರಚಿಸುತ್ತಿದ್ದರು. ಆದರೆ ಶಂಕರೇಗೌಡರು ಬೇಂದ್ರೆಯವರನ್ನು ಪಾಂಡಿಚೇರಿಗೆ ಕರೆದುಕೊಂಡು ಹೋಗಿ ಅರವಿಂದರು ಹಾಗೂ ಶ್ರೀಮಾತೆಯವರ ದರ್ಶನ ಮಾಡಿಸಿದರು. ಅಲ್ಲಿಂದ ಬೇಂದ್ರೆಯವರ ಕಾವ್ಯದ ದಿಕ್ಕೇ ಬದಲಾಯಿತು. ಅರವಿಂದರನ್ನು ಭೇಟಿಯಾದ ನಂತರ ಅವರ ಜೀವನ ಹಾಗೂ ಕಾವ್ಯದಲ್ಲಿ ಜ್ಞಾನದ ಗಂಗಾವತರಣವಾಯಿತು.
‘ಅರಳು ಮರಳು' ಕವನ ಸಂಕಲನದಿಂದ ಆರಂಭವಾಗಿ ಅವರ ಕಾವ್ಯಗಳಲ್ಲಿ ಅರವಿಂದರಿಂದ ದೊರೆತ ಜ್ಞಾನದ ಛಾಪು ಕಾಣಿಸುತ್ತದೆ ಎಂದು ಹೇಳಿದರು.
ಬಹುಶಃ ಬೇಂದ್ರೆಯವರು ತಮ್ಮ ಮಕ್ಕಳು ನಿಧನರಾದಾಗ ಪಟ್ಟಿರುವುದಕ್ಕಿಂತ ಹೆಚ್ಚು ವೇದನೆಯನ್ನು ಅರವಿಂದರು ದೇಹ ತ್ಯಜಿಸಿದಾಗ ಪಟ್ಟಿದ್ದಾರೆನ್ನಿಸುತ್ತದೆ. ಮಕ್ಕಳು ನಿಧನರಾದಾಗ ಸಣ್ಣಸಣ್ಣ ಕವಿತೆಗಳನ್ನು ಬರೆದ ಬೇಂದ್ರೆಯವರು, ಅರವಿಂದರ ದೇಹತ್ಯಾಗದ ನಂತರ ಬೃಹತ್ ಕವಿತೆಯನ್ನೇ ಬರೆದರು. ಅರವಿಂದರಿಲ್ಲದೆ ಬೇಂದ್ರೆಯಿಲ್ಲ. ಅರವಿಂದರೆನ್ನುವ ತೈಲ, ಅಧ್ಯಾತ್ಮವೆಂಬ ಬೆಳಕಿನಿಂದ ತಮ್ಮ ಕಾವ್ಯವನ್ನು ಬೇಂದ್ರೆ ಬೆಳಗಿಸಿಕೊಂಡರು. ಬೇಂದ್ರೆಯವರನ್ನು ಈ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕೇ ಹೊರತು, ಕನ್ನಡ ಸಾಹಿತ್ಯದಲ್ಲಿ ಎಂಎ ಮಾಡಿದಾಕ್ಷಣ ಅವರು ತಿಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಪಾಶ್ಚಿಮಾತ್ಯ ಮನಃಶಾಸ್ತ್ರದ ಹಿಂದೆ ಭಾರತದವರು ಓಡುತ್ತಿರುವುದಕ್ಕೆ ಬೇಂದ್ರೆಯವರಿಗೆ ಬೇಸರವಿತ್ತು. ಅದನ್ನೇ 'ನಾಕುತಂತಿ' ಕವನ ಸಂಕಲನದ ‘ಹೆಟರ-ಡೋಕ್ಸೀʼ ಕವನದಲ್ಲಿ ಬರೆದರು. ಫ್ರಾಯ್ಡ್, ಆಡ್ಲರ್, ಯೂಂಗ್ ಮುಂತಾದವರನ್ನು ಹೆಸರಿಸಿ ಟೀಕೆ ಮಾಡಿದರು. ಸಾಮಾನ್ಯವಾಗಿ ಲೇಖಕರು ಆರೋಡಕ್ಸಿಯನ್ನು ಟೀಕಿಸಿದರೆ, ಬೇಂದ್ರೆಯವರು ಹೆಟರೋಡಾಕ್ಸಿಯನ್ನು ಟೀಕಿಸಿದರು ಎಂದು ನೆನಪಿಸಿಕೊಂಡರು.
ಇಡೀ ಭೂಮಂಡಲದಲ್ಲಿ ನಡೆದ ಕಾವ್ಯದ ಚರಿತ್ರೆ ಬೇಂದ್ರೆಯವರ ಕಾವ್ಯದಲ್ಲಿ ಅಡಕವಾಗಿದೆ. ಜಗತ್ತಿನ ಹಳೇ ಕಾವ್ಯದ ತುತ್ತು ಅವರ ಬರೆಹದಲ್ಲಿದೆ. ಹೊಸ ಕಾವ್ಯದ ಹುಟ್ಟಿಗೆ ಬೇಂದ್ರೆಯವರೇ ಋಷಿ. ಮುಂದಿನ ಪೀಳಿಗೆಯು ಅವರನ್ನು ಉಳಿಸಿಕೊಳ್ಳುತ್ತದೆ. ಈ ಶತಮಾನದವರು ಓದಲು ಬೇಂದ್ರೆ ಸಾಹಿತ್ಯ ಕಾದಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ ಮಹೇಶ ಜೋಶಿ ಅವರು ಮಾತನಾಡಿ, ನಾನು ಶಾಲೆಯಲ್ಲಿದ್ದಾಗ ಮೊದಲಬಾರಿ ಬೇಂದ್ರೆಯವರು ನಮ್ಮ ಶಾಲೆಗೆ ಬಂದಿದ್ದರು. ನೀವು ಪ್ರತಿದಿನವೂ ಓದುವ ಕಾವ್ಯವನ್ನು ಬರೆದ ಕವಿ ಇವರೆ ಎಂದು ಶಿಕ್ಷಕರು ಹೇಳಿದರು. ಅದರ ಅರ್ಥವನ್ನು ನೇರವಾಗಿಯೇ ಬೇಂದ್ರೆಯವರಿಂದ ಕೇಳಿದ ಭಾಗ್ಯ ನಮ್ಮದಾಯಿತು.
ನಾಕುತಂತಿ ಕವನಸಂಕಲನವನ್ನು ಇಡೀ ಈ ಕುಟುಂಬವನ್ನು ಹೋಲಿಸಿ ಬರೆದಿದ್ದಾರೆ ಎಂದೂ ಅರ್ಥೈಸಿಕೊಳ್ಳಬಹುದು, ಅಧ್ಯಾತ್ಮದ ದೃಷ್ಟಿಯಲ್ಲಿಯೂ ನೋಡಬಹುದು. ಯಾವ ದಿಕ್ಕಿನಿಂದ, ದೃಷ್ಟಿಯಿಂದ ನೋಡಿದರೂ ಅನೇಕ ಅರ್ಥಗಳು ಹೊಳೆಯುತ್ತವೆ. ಶಿಶುನಾಳ ಷರೀಫರ ತತ್ತ್ವಪದಗಳು ಹಾಗೂ ಬೇಂದ್ರೆಯವರ ಕಾವ್ಯದಲ್ಲಿ ಸಮಾನತೆಯಿದೆ. ಅವುಗಳು ಅರ್ಥವಾಗಬೇಕೆಂದರೆ ಭಾರತದ ಪುರಾಣ, ಇತಿಹಾಸಗಳ, ಅಧ್ಯಾತ್ಮದ ಅರಿವಿರಬೇಕು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಸುಗಮ ಸಂಗೀತ ಗಾಯಕಿ ರಮ್ಯಾ ವಸಿಷ್ಠ ಅವರ ಮಂದ್ರ ಕಲ್ಚರಲ್ ಫೌಂಡೇಷನ್ ವತಿಯಿಂದ ಬೇಂದ್ರೆ ಕವನ ಗಾಯನ ನಡೆಯಿತು. ಖ್ಯಾತ ಹಾಸ್ಯ ಸಾಹಿತಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಎಂ.ಎಸ್. ನರಸಿಂಹಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಗ್ರವಾಗಿ ಓದಬೇಕು
ಜ್ಞಾನಪೀಠ ಪ್ರಶಸ್ತಿ ಪಡೆದ ನಾಕುತಂತಿ ಕವನಸಂಕಲನದಲ್ಲಿ ಒಟ್ಟು 44 ಕವಿತೆಗಳಿವೆ. ಆದರೆ ಅದರಲ್ಲಿರುವ ‘ನಾಕುತಂತಿʼ ಎಂಬ ಹೆಸರಿನ ಕವಿತೆಯೊಂದನ್ನು ಬಿಟ್ಟರೆ ಉಳಿದ 43 ಕವಿತೆಗಳನ್ನು ಓದಿದವರು ಬೆರಳೆಣಿಕೆಯಷ್ಟು ಮಾತ್ರ ಸಿಗಬಹುದು. ಯಾವುದನ್ನೂ ಅಖಂಡವಾಗಿಯೇ ನೋಡಬೇಕು ಎನ್ನುವುದು ಬೇಂದ್ರೆಯವರ ದೃಷ್ಟಿಯೂ ಆಗಿತ್ತು. ಹಾಗಾಗಿ ನಾಕುತಂತಿ ಕವನ ಸಂಕಲನವನ್ನೂ ಅಖಂಡವಾಗಿಯೇ ನೋಡಿದರೆ ಮಾತ್ರವೇ ಅರ್ಥವಾಗಬಲ್ಲದು. ದೇವುಡು, ಗೋವಿಂದ ಪೈ ಮುಂತಾದವರ ಕುರಿತು ವ್ಯಕ್ತಿ ಚಿತ್ರಣ,, ಶ್ರಾವಣದ ಕವಿತೆಗಳ ಜತೆಗೆ ಭಜನೆ ಪದ್ಯಗಳೂ ನಾಕುತಂತಿಯಲ್ಲಿವೆ. ನಾದೋಪಾಸಕರು, ಮಾತೃ ಉಪಾಸನೆ ಮಾಡುವಂಥವರು ಮಾತ್ರ ಈ ರೀತಿ ಬರೆಯಬಲ್ಲರು ಎಂದು ಡಾ ಜಿ.ಬಿ. ಹರೀಶ ಹೇಳಿದರು.
