ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯ ನೀರು ನಿರ್ವಹಣೆಗೆ ಜಪಾನ್ ತಂತ್ರಜ್ಞಾನ ಅಳವಡಿಕೆಗೆ ಒಲವು
ಕನ್ನಡ ಸುದ್ದಿ  /  ಕರ್ನಾಟಕ  /  ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯ ನೀರು ನಿರ್ವಹಣೆಗೆ ಜಪಾನ್ ತಂತ್ರಜ್ಞಾನ ಅಳವಡಿಕೆಗೆ ಒಲವು

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯ ನೀರು ನಿರ್ವಹಣೆಗೆ ಜಪಾನ್ ತಂತ್ರಜ್ಞಾನ ಅಳವಡಿಕೆಗೆ ಒಲವು

ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯ ನೀರು ನಿರ್ವಹಣೆಗೆ ಜಪಾನ್ ತಂತ್ರಜ್ಞಾನ ಅಳವಡಿಕೆ ಕುರಿತು ಒಲವು ವ್ಯಕ್ತವಾಗಿದೆ. ಜಲಮಾಲಿನ್ಯ ನಿಯಂತ್ರಿಸಿ ಪರಿಸರ ಸ್ನೇಹಿ ಕೈಗಾರಿಕಾ ಪ್ರದೇಶವಾಗಿ ರೂಪಿಸುವ ಗುರಿಯನ್ನೂ ಇಟ್ಟುಕೊಂಡಿರುವುದಾಗಿ ಮೂಲಗಳು ತಿಳಿಸಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯ ನೀರು ನಿರ್ವಹಣೆಗೆ ಜಪಾನ್ ತಂತ್ರಜ್ಞಾನ ಅಳವಡಿಕೆ ವಿಚಾರ ಚರ್ಚೆಯ ನೋಟ.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯ ನೀರು ನಿರ್ವಹಣೆಗೆ ಜಪಾನ್ ತಂತ್ರಜ್ಞಾನ ಅಳವಡಿಕೆ ವಿಚಾರ ಚರ್ಚೆಯ ನೋಟ. (BWSSB/PIA)

ಬೆಂಗಳೂರು: ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾದ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಉತ್ಪತ್ತಿಯಾಗುತ್ತಿರುವ ರಾಸಾಯನಿಕ ತ್ಯಾಜ್ಯ ನೀರನ್ನು ಸಂಸ್ಕರಿಸಲು ಜಪಾನ್ ಅನುಸರಿಸುತ್ತಿರುವ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದೆ. ಈ ಮೂಲಕ ಪೀಣ್ಯ ಕೈಗಾರಿಕಾ ಪ್ರದೇಶವನ್ನು ವಿಶ್ವದ ಪ್ರಮುಖ ಪರಿಸರ ಸ್ನೇಹೀ ಕೈಗಾರಿಕಾ ಪ್ರದೇಶವನ್ನಾಗಿ ರೂಪಿಸಲು ಜಲಮಂಡಳಿ ಮುಂದಾಗಿದೆ.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಜಲ ಮಂಡಳಿ ಆಹ್ವಾನದ ಮೇರೆಗೆ ಜಪಾನ್‌ ಮೂಲದ ತಂತ್ರಜ್ಞಾನ ಸಂಸ್ಥೆಯ ಪ್ರತಿನಿಧಿಯೊಬ್ಬರು ಭೇಟಿ ನೀಡಿ ಜಪಾನ್ ತಂತ್ರಜ್ಞಾನವನ್ನು ಅಳವಡಿಸುವ ಸಂಬಂಧ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಲ ಮಂಡಳಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯ ನೀರು ಉತ್ಪಾದನೆ ಮತ್ತು ಆ ನೀರಿನ ನಿರ್ವಹಣೆ ಹೇಗೆ ಎಂಬುದರ ಕುರಿತು ಮಾಹಿತಿಯನ್ನು ಪಡೆದುಕೊಂಡರು.

ರಾಸಾಯನಿಕ ತ್ಯಾಜ್ಯ ನೀರು ನಿರ್ವಹಣೆ

ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಇಲ್ಲಿ ಕೈಗಾರಿಕೆಗಳು ಬೃಹತ್ ಪ್ರಮಾಣದಲ್ಲಿ ರಾಸಾಯನಿಕ ತ್ಯಾಜ್ಯ ನೀರನ್ನು ಉತ್ಪತ್ತಿ ಮಾಡುತ್ತವೆ. ಕೆಲವು ಕೈಗಾರಿಕೆಗಳು ತಮ್ಮದೇ ಆದ ಇ.ಟಿ.ಪಿಯನ್ನು ಹೊಂದಿದ್ದು ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುತ್ತಿವೆ.

ಆದರೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ತಮ್ಮದೇ ಆದ ಸಂಸ್ಕರಣಾ ವ್ಯವಸ್ಥೆಯನ್ನು ಹೊಂದುವುದು ಅಸಾಧ್ಯ. ಇಂತಹ ಸಣ್ಣ ಪ್ರಮಾಣದ ಕೈಗಾರಿಕೆಗಳು ಅನ್ಯ ಮಾರ್ಗಗಳ ಮೂಲಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುತ್ತಿವೆ. ಸ್ವಂತ ಇ.ಟಿ.ಪಿ ವ್ಯವಸ್ಥೆ ರೂಪಿಸಿಕೊಳ್ಳುವುದು ಆರ್ಥಿಕವಾಗಿ ಸಾಧ್ಯವಾಗುವುದಿಲ್ಲ.

ಅಲ್ಲದೇ, ನೀರಿಗಾಗಿ ಹೆಚ್ಚಿನ ಹಣವನ್ನು ಭರಿಸುವ ಮೂಲಕ ಉದ್ದಿಮೆಗಳು ತಮ್ಮ ಲಾಭದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಭೂಮಿಗೆ ಸೇರುವ ಕಲುಷಿತ ನೀರು ಸಂಸ್ಕರಣೆಗೆ ಒಳಗಾಗದ ಕಾರಣ ಜಲಮೂಲ ಮತ್ತು ಅಂತರ್ಜಲವೂ ಕಲುಷಿತವಾಗುತ್ತಿವೆ. ಈ ಸಮಸ್ಯೆಗೆ ಪರಿಹಾರವಾಗಿ ಅತ್ಯಾಧುನಿಕ ಜಪಾನ್ ತಂತ್ರಜ್ಞಾನ ಮೊಬೈಲ್‌ ಇಟಿಪಿ ಅಳವಡಿಸುವ ವಿಚಾರವನ್ನು ಬೆಂಗಳೂರು ಜಲಮಂಡಳಿ ಪರಿಶೀಲಿಸುತ್ತಿದೆ.

ಈ ಮೊಬೈಲ್‌ ಇ.ಟಿ.ಪಿ ಕೈಗಾರಿಕೆಗಳ ಬಾಗಿಲಿನಲ್ಲೇ ರಾಸಾಯನಿಕ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ, ನಂತರ ಸಂಸ್ಕರಿಸಿದ ನೀರನ್ನ ಮರುಬಳಕೆಗೆ ಕೈಗಾರಿಕೆಗಳಿಗೆ ಮರಳಿಸಲಿದೆ. ಇದರಿಂದ ಕೈಗಾರಿಕೆಗಳಿಗೆ ನೀರಿನ ವೆಚ್ಚದಲ್ಲಿ ಉಳಿತಾಯವಾಗುತ್ತದೆ. ಈ ಮುಲಕ ಉತ್ಪಾದನಾ ವೆಚ್ಚವೂ ಕಡಿಮೆಯಾಗಲಿದ್ದು ಗ್ರಾಹಕರಿಗೆ ಲಾಭವನ್ನು ವರ್ಗಾಯಿಸಬಹುದು ಎಂದು ಭಾವಿಸಲಾಗಿದೆ.

ಏಪ್ರಿಲ್ 23 ರಂದು ತಂತ್ರಜ್ಞಾನದ ಪ್ರದರ್ಶನ

ಈ ತಂತ್ರಜ್ಞಾನದ ಪ್ರದರ್ಶನವನ್ನು ಏಪ್ರಿಲ್‌ 23 ರಂದು ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ಕೈಗಾರಿಕೆಗಳ ಬಾಗಿಲಿಗೆ ತೆರಳಲಿರುವ ಮೊಬೈಲ್‌ ಇ.ಟಿ.ಪಿಯಿಂದಾಗುವ ಅನುಕೂಲಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಇಂತಹ ಕ್ರಮಗಳನ್ನು ಅಳವಡಿಸುವ ಮೂಲಕ ಜಲಮಾಲಿನ್ಯವನ್ನು ತಡೆಗಟ್ಟಿ ವಿಶ್ವದ ಪ್ರಮುಖ ಪರಿಸರ ಸ್ನೇಹಿ ಕೈಗಾರಿಕಾ ಪ್ರದೇಶ ಮಾಡುವ ಗುರಿ ಇದೆ ಎಂದೂ ಅಧ್ಯಕ್ಷರು ಹೇಳಿದ್ದಾರೆ. ಈ ಸಂಧರ್ಭದಲ್ಲಿ ಪೀಣ್ಯ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಆರೀಫ್‌ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

(ವರದಿ- ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner