ಕನ್ನಡ ಸುದ್ದಿ  /  Karnataka  /  Bengaluru News Jds Leader S Son Dies In Car Accident Which Rammed To A Divider And Other Crime News Karnataka Mrt

Bengaluru Crime: ಡಿವೈಡರ್ ಗೆ ಕಾರು ಡಿಕ್ಕಿ, ಜೆಡಿಎಸ್ ಮುಖಂಡನ ಪುತ್ರ ಸಾವು; ಏಕಾಏಕಿ ಕಾರಿನ ಡೋರ್ ತಗುಲಿ ಬೈಕ್‌ ಸವಾರ ಸಾವು

ರಾಮನಗರ ಹೊರವಲಯದಲ್ಲಿ ಡಿವೈಡರ್ ಗೆ ಕಾರು ಡಿಕ್ಕಿ, ಜೆಡಿಎಸ್ ಮುಖಂಡನ ಪುತ್ರ ಸಾವು ಸಂಭವಿಸಿದೆ. ಬೆಂಗಳೂರಿನ ತಿಲಕ್‌ನಗರದಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಏಕಾಏಕಿ ಕಾರಿನ ಡೋರ್ ಓಪನ್, ಆ ಡೋರ್‌ ತಗುಲಿ ಬೈಕ್‌ ಸವಾರ ಮೃತಪಟ್ಟ ಘಟನೆ ನಡೆದಿದೆ. (ವರದಿ -ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ
ಬೆಂಗಳೂರು ಅಪರಾಧ ಸುದ್ದಿ

ಬೆಂಗಳೂರು: ರಾಮನಗರದ ಹೊರವಲಯದ ನೇಟಸ್ ಶಾಲೆಯ ಸಮೀಪ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ರಸ್ತೆ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ ಅಭಿಷೇಕ್ ಡಿ. ಗೌಡ ಎಂಬುವರು ಮೃತಪಟ್ಟಿದ್ದಾರೆ.

ಮಂಡ್ಯದ ಜೆಡಿಎಸ್ ಮುಖಂಡ ದಾಸೇಗೌಡ ಅವರ ಪುತ್ರ ಎಂದು ತಿಳಿದು ಬಂದಿದೆ. ಅಭಿಷೇಕ್ ಡಿ ಗೌಡ ಇವರ ವಯಸ್ಸು 29 ವರ್ಷ. ಇವರು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ನಿವಾಸಿ. ಸಂಜೆ ಸುಮಾರು 4 ಗಂಟೆಗೆ ಮಂಡ್ಯದಿಂದ ಬೆಂಗಳೂರಿಗೆ ಬರುತ್ತಿದ್ದರು. ಇವರು ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದು, ನಿಯಂತ್ರಣ ಕಳೆದುಕೊಂಡು ನೇಟಸ್ ಶಾಲೆಯ ಹತ್ತಿರ ಮೇಲ್ಸೇತುವೆ ಬಳಿ ರಸ್ತೆ ಡಿವೈಡರ್ ಮೇಲೆ ಹತ್ತಿಸಿದ್ದಾರೆ. ಈ ರಭಸಕ್ಕೆ ಕಾರು ಡಿವೈಡರ್ ಗೆ ದಾಟಿ ಮೇಲ್ಸೇತುವೆ ಕೆಳಕ್ಕೆ ಬಿದ್ದು ಪಲ್ಟಿಯಾಗಿದೆ.

ತೀವ್ರವಾಗಿ ಗಾಯಗೊಂಡ ಅಭಿಷೇಕ್ ಅವರನ್ನು ಸ್ಥಳೀಯರು ರಾಮನಗರದ ರಾಮಕೃಷ್ಣ ಆಸ್ಪತ್ರೆಗೆ ಕೂಡಲೇ ದಾಖಲು ಮಾಡಿದ್ದಾರೆ. ಆದರೆ, ದೇಹದ ವಿವಿಧ ಭಾಗಗಳಿಗೆ ಹೆಚ್ಚಿನ ಪೆಟ್ಟು ಬಿದ್ದಿದ್ದರಿಂದ ಅವರು ಜೀವ ಉಳಿಸಲಾಗಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಮನಗರ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.

ಏಕಾಏಕಿ ಕಾರಿನ ಡೋರ್ ಓಪನ್, ಡೋರ್ ತಗುಲಿ ಬೈಕ್‌ ಸವಾರ ಸಾವು

ರಸ್ತೆ ಬದಿಯಲ್ಲಿ ನಿಲುಗಡೆ ಮಾಡಲಾಗಿದ್ದ ಕಾರಿನ ಡೋರ್‌ ಅನ್ನು ಏಕಾಏಕಿ ತೆಗೆದ ಪರಿಣಾಮ, ಡೋರಿಗೆ ಬೈಕ್‌ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 50 ವರ್ಷದ ಮೃತಪಟ್ಟ ದುರ್ದೈವಿ. ಇವರು ನಿಮ್ಹಾನ್ಸ್‌ ಉದ್ಯೋಗಿ ಎಂದು ಗೊತ್ತಾಗಿದೆ.

ತಿಲಕ್‌ನಗರ ಮುಖ್ಯರಸ್ತೆಯ ನಿಮ್ಹಾನ್ಸ್‌ ಆಸ್ಪತ್ರೆಯ ಸಮೀಪ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ರಾತ್ರಿ 8 ಗಂಟೆಯ ಸುಮಾರಿಗೆ ವೆಂಕಟೇಶ್‌ ಅವರು, ಈ ರಸ್ತೆಯಲ್ಲಿ ಬೈಕ್‌ ನಲ್ಲಿ ತೆರಳುತ್ತಿದ್ದರು. ಕಾರಿನಲ್ಲಿದ್ದವರು ಏಕಾಏಕಿಯಾಗಿ ಕಾರಿನ ಬಾಗಿಲು ತೆಗೆದಿದ್ದರಿಂದ ಬೈಕ್‌ ಸವಾರರಿಗೆ ತಗುಲಿ ಅವರು ಕೆಳಕ್ಕೆ ಬಿದ್ದಿದ್ದಾರೆ. ಇವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ

ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮೈಕೋ ಲೇಔಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒನ್ ವೇಯಲ್ಲಿ ಕಾರು ಡ್ರೈವಿಂಗ್, ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ ಚಾಲಕನ ಬಂಧನ

ಏಕಮುಖ ರಸ್ತೆಯಲ್ಲಿ ಕಾರು ಚಲಾಯಿಸಿ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದ ಕಾರು ಚಾಲಕನನ್ನು ಬೆಂಗಳೂರಿನ ಮಹದೇವಪುರ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೈಟ್‌ಫೀಲ್ಡ್‌ ಬಳಿಯ ಜಂಕ್ಷನ್‌ನಲ್ಲಿ ಒನ್ ವೇ ರಸ್ತೆಯಲ್ಲಿ ಆರೋಪಿ ಸುನೀಲ್ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಅದೇ ಮಾರ್ಗದಲ್ಲಿ ಎದುರು ಬಂದ ಬೈಕ್ ಸವಾರ ನಿಯಮ ಉಲ್ಲಂಘನೆಯನ್ನು ಪ್ರಶ್ನಿಸಿದ್ದಾರೆ.

ಇದರಿಂದ ಕೋಪಗೊಂಡ ಆರೋಪಿ ಸುನೀಲ್ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೊ ದೃಶ್ಯಾವಳಿಯನ್ನು ಆಧರಿಸಿ, ಕಾರು ಚಾಲಕ ಸುನೀಲ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ -ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point